ETV Bharat / state

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಮ್ಯೂನಲ್ ಕಾಯ್ದೆಯಡಿ ಕೇಸ್ ಹಾಕಿಲ್ಲ: ಗೃಹ ಸಚಿವ ಪರಮೇಶ್ವರ್

author img

By ETV Bharat Karnataka Team

Published : Dec 14, 2023, 6:49 PM IST

ಗೃಹ ಸಚಿವ ಡಾ.ಜಿ ಪರಮೇಶ್ವರ್
ಗೃಹ ಸಚಿವ ಡಾ.ಜಿ ಪರಮೇಶ್ವರ್

ನಾವು ಚಕ್ರವರ್ತಿ ಸೂಲಿಬೆಲೆ ಅವರ ಪ್ರಚೋದನಾಕಾರಿ ಭಾಷಣದ ಬಗ್ಗೆ ನಿಗವಹಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು : ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಮ್ಯುನಲ್ ಕಾಯ್ದೆಯಡಿ ಯಾವುದೇ ಪ್ರಕರಣ ದಾಖಲು ಮಾಡಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಮ್ಯುನಲ್ ಆ್ಯಕ್ಟ್​​ ಮೇಲೆ ಯಾವುದೇ ಕೇಸ್ ಹಾಕಿಲ್ಲ, ಹಾಕಬೇಕು ಎಂದು ನೀವು ಹೇಳಿದರೆ ನಾಳೆನೇ ಹಾಕುತ್ತೇವೆ ಎಂದು ಬಿಜೆಪಿ ಸದಸ್ಯರ ಕಾಲೆಳೆಯುತ್ತಾ, ನಾವು ಚಕ್ರವರ್ತಿ ಸೂಲಿಬೆಲೆ ಪ್ರಚೋದನಾಕಾರಿ ಭಾಷಣ ನಿಗಾವಹಿಸುತ್ತೇವೆ. ಸಮಾಜಕ್ಕೆ ತಪ್ಪು ಸಂದೇಶ ಹೋಗುವುದಿದ್ದರೆ ಆಗ ಕ್ರಮ ವಹಿಸಲಿದ್ದೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವ ಆರೋಪ ಸರಿಯಲ್ಲ. ಕಳೆದ 6 ತಿಂಗಳಿನಲ್ಲಿ ಕೋಮು ಸಂಘರ್ಷ​ ಆಗಿಲ್ಲ, ಸಣ್ಣಪುಟ್ಟದಾಗಿ ಎರಡು ಘಟನೆ ಮಾತ್ರ ಆಗಿದೆ. ಹಿಂದೆ ನಿಮ್ಮ ಸರ್ಕಾರ ಇದ್ದಾಗ ಎಷ್ಟು ಆಗಿದೆ ಎಂದು ನನಗೆ ಗೊತ್ತಿದೆ. ಕೊಲೆಯಾದ 24 ಗಂಟೆಯಲ್ಲಿ ಆರೋಪಿಗಳ ಬಂಧಿಸಿದ್ದೇವೆ. ಹೀಗಿರುವಾಗಿ ಎಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಚಿವರು ಕಾಂಗ್ರೆಸ್ ಸರ್ಕಾರವನ್ನು ಸಮರ್ಥಿಸಿಕೊಂಡರು.

2011-13ರವರೆಗೆ ಬಿಜೆಪಿಯ ಆರ್. ಅಶೋಕ್ ಗೃಹ ಸಚಿವರಾಗಿದ್ದರು. ಅವರ ಕಾಲದಲ್ಲಿ 4121 ಕೊಲೆಯಾಗಿವೆ, 1639 ರೇಪ್, 239 ಪೋಕ್ಸೋ ಕೇಸ್ ಆಗಿದೆ. 2019ರಿಂದ 2021ರವರೆಗೆ ಬಿಜೆಪಿಯ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಅವರ ಅವದಿಯಲ್ಲಿ 2254 ಕೊಲೆ,915 ರೇಪ್ ಆಗಿತ್ತು. 2021-23ರವರೆಗೆ ಬಿಜೆಪಿಯ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದರು ಅವರ ಕಾಲದಲ್ಲಿ 2417 ಕೊಲೆ,949 ರೇಪ್ ಪ್ರಕರಣ ದಾಖಲಾಗಿದೆ.

ನಮ್ಮ ಅವಧಿಯ 6 ತಿಂಗಳಿನಲ್ಲಿ 616 ಕೊಲೆ, 310 ರೇಪ್ ಆಗಿದೆ. ಇದಕ್ಕೆ ಕಾನೂನು ಸುವ್ಯವಸ್ಥೆ ಹೆದಗೆಟ್ಟಿದೆ ಎನ್ನುತ್ತಿದ್ದೀರಿ. ಆದರೆ ನಾವು ಕೋಮುಗಲಭೆ ನಿಯಂತ್ರಣ ಮಾಡಿದ್ದೇವೆ. ನಿಮ್ಮ ಕಾಲದಲ್ಲಿ ಕೋಲಾರ, ಉಪ್ಪಿನಂಗಡಿ ,ನರಗುಂದ, ಶಿವಮೊಗ್ಗದಲ್ಲಿ ಕೋಮುಗಲಭೆಗಳಾಗಿತ್ತು. ರಾಜ್ಯದ ಎಷ್ಟು ಕಡೆ ಹಿಜಾಬ್ ಗಲಾಟೆಯಾಗಿತ್ತು. ನಾವು ಅದನ್ನೆಲ್ಲಾ ನಿಯಂತ್ರಿಸಿ ಶಾಂತಿ ಸುವ್ಯವಸ್ಥಿತವಾಗುವಂತೆ ಮಾಡಿದ್ದೇವೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಮುನಿರಾಜುಗೌಡ, ಶಿವಮೊಗ್ಗ ಗಲಭೆ ಕೋಮು ಗಲಭೆ ಅಲ್ಲವೇ ಸಣ್ಣ ಗಲಭೆ ಎನ್ನುತ್ತಿದ್ದೀರಲ್ಲ ಎಂದರು. ಇದಕ್ಕೆ ಉತ್ತರಿಸಿದ ಪರಮೇಶ್ವರ್ ಈಗಲೂ ಅದು ಸಣ್ಣ ಘಟನೆ ಎಂದೇ ಹೇಳುತ್ತಿದ್ದೇನೆ. ನಮ್ಮ ಹೇಳಿಕೆಗೆ ಈಗಲೂ ನಾನು ಬದ್ದ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಹೊಸ ಅಗ್ನಿಶಾಮಕ ವಾಹನಗಳ ಖರೀದಿಗೆ ಪ್ರಸ್ತಾವನೆ : ಅಗ್ನಿಶಾಮಕ ಘಟಕಗಳಲ್ಲಿನ ಅಗ್ನಿಶಾಮಕ ವಾಹನಗಳು 15 ವರ್ಷ ಪೂರ್ಣವಾಗಿದ್ದು ಆದಷ್ಟು ಬೇಗ ಹೊಸ ವಾಹನ ಖರೀದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಕಳುಹಿಸಿಕೊಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಪ್ರಶ್ನೆಗೆ ಉತ್ತರಿಸಿದ ಅವರು, ವಾಹನ ಬಳಕೆ ಕಾಲಮಿತಿ ಕುರಿತು ಕೇಂದ್ರ ಸರ್ಕಾರ 1988ರಲ್ಲೇ ಕಾಯ್ದೆ ತಂದು 2022ರಲ್ಲಿ ಮತ್ತೊಂದು ಕಾಯ್ದೆ ತರಲಾಗಿದೆ. ಅದರ ಪ್ರಕಾರ ವಾಹನಗಳು 15 ವರ್ಷ ಪೂರ್ಣಗೊಳಿಸಿದಲ್ಲಿ ಅಂತಹ ವಾಹನ ಮತ್ತೆ ಮರು ನೋಂದಣಿ ಮಾಡಬಾರದು ಎಂದು ಆದೇಶಿಸಿದೆ. ಅದರಂತೆ ಈಗಾಗಲೇ ಅಗ್ನಿಶಾಮಕ ಘಟಕಗಳಲ್ಲಿನ 443 ವಾಹನಗಳು ಈಗ ಆಕ್ಯಾಟಗಿರಿಗೆ ಬರಲಿವೆ. ಇದರ ಜೊತೆಗೆ ಇಡೀ ಪೊಲೀಸ್ ಇಲಾಖೆಯಲ್ಲಿ 1782 ವಾಹನಗಳಿಗೆ 15 ವರ್ಷವಾಗಿದೆ. ಅದಕ್ಕೆ ರೀಪ್ಲೇಸ್ ಮಾಡಲು 100 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಅದರಲ್ಲಿ ಹೊಸ ವಾಹನ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಅಗ್ನಿಶಾಮಕದಲ್ಲಿ 443 ವಾಹನ 15 ವರ್ಷವಾಗಿದ್ದರೂ ಹೆಚ್ಚಿನ ಸಂಚಾರ ನಡೆಸದ ಕಾರಣದಿಂದಾಗಿ ಸುಸ್ಥಿತಿಯಲ್ಲಿವೆ.

ಹಾಗಾಗಿ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಈ ವಾಹನ ಉತ್ತಮ ಸ್ಥಿತಿಯಲ್ಲಿವೆ. ಈಗ ಬಳಸಿಕೊಳ್ಳಲಿದ್ದೇವೆ. ಅನುಪಯುಕ್ತವಾದಾಗ ನಾವೇ ಅವನ್ನು ತೆಗೆದುಹಾಕಲಿದ್ದೇವೆ ಎಂದು ಮನವಿ ಮಾಡಿದ್ದೇವೆ. ಇನ್ನು ಕೇಂದ್ರಿಂದ ಉತ್ತರ ಬಂದಿಲ್ಲ. ಬಂದ ನಂತರ ಆ ವಾಹನ ಮತ್ತಷ್ಟು ಸಮಯ ಬಳಸಿಕೊಳ್ಳುವ ಕುರಿತು ಕ್ರಮ ವಹಿಸಲಾಗುತ್ತದೆ. ಆದಷ್ಟು ಶೀಘ್ರ ಹೊಸ ವಾಹನ ಖರೀದಿಗೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.

ಹೆಣ್ಣುಭ್ರೂಣ ಪತ್ತೆ ಪ್ರಕರಣ ನಿಯಂತ್ರಣಕ್ಕೆ ಕ್ರಮ : ಹೆಣ್ಣುಭ್ರೂಣ ಪತ್ತೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಗ್ಯ ಇಲಾಖೆ ಹಾಗು ಪೊಲೀಸ್ ಇಲಾಖೆಯ ಜಂಟಿ ಸಹಯೋಗದಲ್ಲಿ ಹೆಣ್ಣುಬ್ರೂಣ ಪತ್ತೆ ಪ್ರಕರಣ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ವೈ.ಎಂ ಸತೀಶ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಹೆಣ್ಣುಭ್ರೂಣ ಪತ್ತೆ ಪ್ರಕರಣವನ್ನು ಈಗಾಗಲೇ ಸಿಐಡಿಗೆ ಕೊಡಲಾಗಿದೆ 14 ಜನರ ಬಂಧನವಾಗಿದೆ. 13 ಜನ ಬೇಲ್ ತಗೊಂಡಿದಾರೆ, ಹಾಸನ ಜಿಲ್ಲೆಯಲ್ಲಿ 7 ಜನರ ಬಂಧನವಾಗಿದೆ. ಇದು ಆತಂಕಕಾರಿಯಾಗಿರುವ ಘಟನೆಯಾಗಿದೆ. ರಾಜ್ಯ ಮಟ್ಟದಲ್ಲಿ ಹೆಣ್ಣಭ್ರೂಣ ಪತ್ತೆ ಪ್ರಕರಣಗಳ ಮೇಲೆ ಕಣ್ಣಿಡಲು ಸಮಿತಿ ಇದೆ. ಜಿಲ್ಲಾ ಮಟ್ಟದಲ್ಲಿ ಇನ್ನು ಸಮಿತಿ ಆಗಿಲ್ಲ. 1000 ಗಂಡಿಗೆ 700 ಹೆಣ್ಣು ಎನ್ನುವ ಅನುಪಾತ ಆತಂಕಕಾರಿಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಜೊತೆಗೂಡಿ ಭ್ರೂಣ ಪತ್ತೆ ನಿಯಂತ್ರಣಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ : ಸಂಸತ್ ಭದ್ರತಾ ಲೋಪ: ಪಿಎಂ‌ ಮೋದಿ, ಅಮಿತ್ ಷಾ ಒಂದು ಮಾತೂ ಆಡಿಲ್ಲ; ಪರಮೇಶ್ವರ್​ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.