ETV Bharat / state

ಉತ್ತರ ಕರ್ನಾಟಕ ಕುರಿತ 3 ದಿನಗಳ ಚರ್ಚೆಯನ್ನು ಸರ್ಕಾರ ಮಣ್ಣುಪಾಲು ಮಾಡಿದೆ: ಆರ್​.ಅಶೋಕ್​

author img

By ETV Bharat Karnataka Team

Published : Dec 15, 2023, 7:46 PM IST

Updated : Dec 15, 2023, 8:30 PM IST

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ, ಬರಗಾಲದ ಬಗ್ಗೆ ಚರ್ಚಿಸಲು ಮೂರು ದಿನಗಳ ಕಾಲ ಕೊಟ್ಟ ಅವಕಾಶವನ್ನು ರಾಜ್ಯ ಸರ್ಕಾರ ಮಣ್ಣುಪಾಲು ಮಾಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

leader-of-opposition-r-ashok-outrage-against-the-state-government
ಆರ್​.ಅಶೋಕ್​

ಉತ್ತರ ಕರ್ನಾಟಕ ಕುರಿತ 3 ದಿನಗಳ ಚರ್ಚೆಯನ್ನು ಸರ್ಕಾರ ಮಣ್ಣುಪಾಲು ಮಾಡಿದೆ: ಆರ್​.ಅಶೋಕ್​

ಬೆಳಗಾವಿ: ಉತ್ತರ ಕರ್ನಾಟಕ, ಬರಗಾಲದ ಬಗ್ಗೆ ಚರ್ಚಿಸಲು ಮೂರು ದಿನ ಅವಕಾಶ ಕೊಟ್ಟಿದ್ದೆವು. ಆದರೆ ಸಿದ್ದರಾಮಯ್ಯ ಸರ್ಕಾರ ಈ ಮೂರು ದಿನಗಳ ಚರ್ಚೆಯನ್ನು ಮಣ್ಣು ಪಾಲು ಮಾಡಿದೆ. ಉತ್ತರ ಕರ್ನಾಟಕದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್​ ಕಿಡಿ ಕಾರಿದ್ದಾರೆ.

ಅಧಿವೇಶನ ಮುಗಿದ ಬಳಿಕ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಹಿಂದುಳಿದ ಪ್ರದೇಶಗಳನ್ನು ಗುರುತಿಸಲು ಒಂದು ಉನ್ನತ ಮಟ್ಟದ ಸಮಿತಿ ಮಾಡುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೇನು ಹಣ ಬರೋದಿಲ್ಲ. 2 ಲಕ್ಷ ರೂ.ವರೆಗೆ ರೈತರ ಸಾಲ ಮನ್ನಾ, ಬರ ಪರಿಹಾರ ಎಕರೆಗೆ 25 ಸಾವಿರ ರೂ.ನೀಡುವಂತೆ ಆಗ್ರಹಿಸಿದ್ದೆವು. ಆದರೆ ಈ ಬಗ್ಗೆ ಏನೂ ಮಾಡಲಿಲ್ಲ" ಎಂದು ವಾಗ್ದಾಳಿ ನಡೆಸಿದರು.

"ಇಂದು ಉತ್ತರ ಕರ್ನಾಟಕದ ಬಗ್ಗೆ ಉತ್ತರಿಸುವಾಗ ಒಂದು ಗಂಟೆ ಕಾಲ ಸಿಎಂ ಸಿದ್ದರಾಮಯ್ಯ ಅವರು, ಮೈಸೂರಿನಲ್ಲಿ ಕೆಆರ್​ಎಸ್ ಇದೆ, ಬೆಂಗಳೂರಿನಲ್ಲಿ ವಿಧಾನಸೌಧ ಇದೆ, ದಾವಣಗೆರೆಯಲ್ಲಿ ನದಿ ಇದೆ ಎಂದು ಹೇಳಿದರೇ ಹೊರತು, ಕೃಷ್ಣಗೆ ಎಷ್ಟು ಹಣ, ಮಹಾದಾಯಿಗೆ‌ ಎಷ್ಟು ಹಣ ಕೊಡುತ್ತೇವೆ ಎಂಬುದು ಅವರ ಬಾಯಿಂದ ಬರಲೇ ಇಲ್ಲ" ಎಂದು ಗುಡುಗಿದರು.

"ಇಂದು ಸಿಎಂ ಘೋಷಿಸಿರುವ ಕಾರ್ಯಕ್ರಮಗಳಿಗೆ ಯಾವುದೇ ರೀತಿ ಆರ್ಥಿಕ ಬೆಂಬಲ ಇಲ್ಲ‌‌. ಈ ಅಧಿವೇಶನದ ಮೇಲೆ ನಮಗೆ ಭರವಸೆ ಇತ್ತು. ಈ ಬಾರಿ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ‌ಅವಕಾಶ ಮಾಡಿಕೊಡಬೇಕು ಎಂದಿದ್ದೆವು. ಅದರಂತೆ 3 ದಿನ ಅವಕಾಶ ಮಾಡಿಕೊಟ್ಟೆವು. ಆದರೆ ಸಿಎಂ ‌ಈ ಭಾಗದ ಜನರ ಮೂಗಿಗೆ ತುಪ್ಪ‌ ಸವರಿದ್ದಾರೆ. ಹಿಂದುಳಿದ ಪ್ರದೇಶಗಳಿಗೆ ಸಮಿತಿ ಮಾಡುತ್ತೇವೆ ಎಂದಿದ್ದಾರೆ. ಅದರಿಂದ ಹಣ ಬರಲ್ಲ. ನೀರಾವರಿಗೆ ಬರೀ 16 ಸಾವಿರ ಕೊಟ್ಟಿದ್ದಾರೆ. ಯಡಿಯೂರಪ್ಪ‌ ಅವರು‌ 25 ಸಾವಿರ ಕೋಟಿ ಕೊಟ್ಟಿದ್ದರು‌. ಇನ್ನು ಎಸ್​ಸಿ, ಎಸ್​ಟಿ ಅವರ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದೆ. ಒಂದು ರೀತಿಯ ಎಡಬಿಡಂಗಿ ಸರ್ಕಾರ ಇದಾಗಿದ್ದು, ಸ್ಪೀಕರ್ ಅವರ ಸಹಾಯ ಪಡೆದುಕೊಂಡು ಪಲಾಯನ ಮಾಡಿದ್ದಾರೆ. ಅಜೆಂಡಾದಲ್ಲಿ ಇದ್ದರೂ ಜಮೀರ್​ ಅಹ್ಮದ್ ಅವರ ಪ್ರಕರಣ ಬಗ್ಗೆ ಚರ್ಚಿಸಲು ಅವಕಾಶ ನೀಡಲಿಲ್ಲ" ಎಂದರು.

"ಅಧಿವೇಶನ ನಡೆಯುವ ವೇಳೆಯೇ ಬೆಳಗಾವಿಯಲ್ಲಿ ಪರಿಶಿಷ್ಟ ಮಹಿಳೆಯನ್ನು ವಿವಸ್ತ್ರಗೊಳಿಸಲಾಗಿದೆ. ಇವರಿಗೆ ‌ಆ ಬಗ್ಗೆ ಜ್ಞಾನವೇ ಇಲ್ಲ. ದುರ್ಯೋಧನ, ದುಶ್ಯಾಸನರು ಕೂಡ ಈ ರೀತಿ ಮಾಡಿಲ್ಲ ಎಂದು ಹೈಕೋರ್ಟ್ ಹೇಳಿದೆ‌. ಮಾನ‌ ಮರ್ಯಾದೆ ಇದ್ದರೆ ಸಿಎಂ ವಿಶೇಷ‌ ತನಿಖೆಗೆ ಆದೇಶ ಮಾಡಬೇಕಿತ್ತು. ಇನ್ನು ಈ ಬಗ್ಗೆ ಚರ್ಚಿಸದೇ ಹೆದರಿ ಅಧಿವೇಶನದಿಂದ ಪಲಾಯನ ಮಾಡಿದ್ದಾರೆ. ಇಂತಹ ಹೇಡಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದಲ್ಲಿ ಇರಲು ಯೋಗ್ಯತೆ ಇಲ್ಲ" ಎಂದು ಕಿಡಿ ಕಾರಿದರು.

"ಧಮ್ಮು, ತಾಕತ್ ಇದ್ರೆ ವಿಧಾನಸಭೆಯಲ್ಲಿರುವ ಸಾವರ್ಕರ್ ಫೋಟೋ ತೆಗೆಯಲಿ ನೋಡೋಣ. ಕಾಂಗ್ರೆಸ್​ನವರಿಗೆ ಟಿಪ್ಪು ಜಯಂತಿ, ಮುಲ್ಲಾಗಳಿಗೆ 10 ಸಾವಿರ ಕೋಟಿ ಶಾದಿ ಭಾಗ್ಯ ಕೊಡುತ್ತಾರೆ. ಹಿಂದುಗಳನ್ನು ಎರಡನೇ ದರ್ಜೆ ನೋಡುತ್ತಿದ್ದಾರೆ‌. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗುತ್ತಿವೆ‌. ಈ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಸುತ್ತೇವೆ" ಎಂದು ಆರ್.ಅಶೋಕ್​ ಎಚ್ಚರಿಸಿದರು.

10 ದಿನ ಅಧಿವೇಶನ ನಡಿಸಿದ್ದೇ ಕಾಂಗ್ರೆಸ್​ ಸಾಧನೆ: "ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಉತ್ತರ ಕರ್ನಾಟಕ ರೈತರು ಮತ್ತು ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಉತ್ತರ ಕೊಡುವ ಕೆಲಸ ಆಗಬೇಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಮಣ್ಣು ಪಾಲು ಮಾಡಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದರು.

"ಬೆಳಗಾವಿಯಲ್ಲಿ 10 ದಿನ ಅಧಿವೇಶ‌ನ ನಡೆಯಿತು‌. ಅಧಿವೇಶನ ನಡೆಸಿದ್ದೇ ಸರ್ಕಾರದ ಸಾಧನೆ. ಕಬ್ಬು ‌ಬೆಳೆಗಾರರಿಗೆ ಕನಿಷ್ಠ 25 ಸಾವಿರ, ದ್ರಾಕ್ಷಿ ಬೆಳೆಗಾರರಿಗೆ 45 ಸಾವಿರ ರೂ. ನೀಡುತ್ತಾರೆ ಎಂದು ರಾಜ್ಯದ ರೈತರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಸಾಲ ಮನ್ನಾ ಮಾಡುವಂತೆ ಸದನದ ಹೊರಗೆ ಮತ್ತು ಒಳಗೆ‌ ಆಗ್ರಹ ಮಾಡಿದ್ದೆವು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ನಿರ್ಲಕ್ಷ್ಯ ಮಾಡಿದೆ. ‌‌ನಿರೀಕ್ಷೆಗಳನ್ನು ಸುಳ್ಳು ಮಾಡಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಸಿಎಂ ಅವರು ಪದೇ ಪದೇ ಒಂದು ಮಾತು ಹೇಳುತ್ತಾರೆ. ಐದು ವರ್ಷಗಳ‌ ಹಿಂದೆ ಪೂರ್ಣಾವಧಿ ಅಧಿಕಾರ‌ ನಡೆಸಿದ್ದರು. ಆಗ 165 ಕಾರ್ಯಕ್ರಮಗಳ‌ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಎಂದಿದ್ದಾರೆ. ಆದರೆ ಯಾಕೆ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ನಿಮ್ಮನ್ನು ಧಿಕ್ಕರಿಸಿದರು?. ಯಾಕೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿಲ್ಲ? ಮತ್ತು ಆಗ ರಾಜ್ಯದ ಜನ ಯಾಕೆ ನಿಮಗೆ ಶಾಪ ಹಾಕಿದರು? ಎಂಬುದಕ್ಕೆ ಮುಖ್ಯಮಂತ್ರಿಗಳು ಸದನದಲ್ಲಿ ಉತ್ತರ ಕೊಡುವ ಕೆಲಸ ಮಾಡಲಿಲ್ಲ. ಅದನ್ನು ಬಿಟ್ಟು ಸದನದಲ್ಲಿ ಒಂದೂವರೇ ಗಂಟೆ ಕಾಲ ರಾಜ್ಯದ ಇತಿಹಾಸ ಪರಿಚಯಿಸುವ ಕೆಲಸ ಮಾಡಿದರು" ಎಂದು ಗುಡುಗಿದರು.

"ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆಯೂ ಸಿಎಂ ಉತ್ತರಿಸುವ ಧೈರ್ಯ ಮಾಡಲಿಲ್ಲ. ಈ ದುಷ್ಟ, ಭ್ರಷ್ಟ, ದುರಹಂಕಾರಿ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ರಾಜ್ಯದ ಜನರ ಮುಂದೆ ಹೋಗುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ಕೇಂದ್ರದೊಂದಿಗೆ ನೀರಾವರಿ ಯೋಜನೆ, ಬರ ಚರ್ಚೆಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಸಿದ್ಧ: ಸಿಎಂ

Last Updated : Dec 15, 2023, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.