ETV Bharat / state

ಬೆಳಗಾವಿ ಗ್ರಾಮೀಣ ಪ್ರತ್ಯೇಕ ತಾಲೂಕು, ಮನೆ ಬಾಗಿಲಿಗೆ ಸರ್ಕಾರಿ ಸೇವೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

author img

By

Published : May 7, 2023, 7:50 PM IST

ಮತದಾನಕ್ಕೆ ಎರಡು ದಿನ ಬಾಕಿಯಿರುವಾಗ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನತೆಗೆ ಕಾಂಗ್ರೆಸ್​​ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್​​ ಮತ್ತೊಂದು ಭರವಸೆ ನೀಡಿದ್ದಾರೆ.

lakshmi-hebbalkar-promises-to-make-belgaum-rural-a-separate-taluk
ಬೆಳಗಾವಿ ಗ್ರಾಮೀಣ ಪ್ರತ್ಯೇಕ ತಾಲೂಕು, ಮನೆ ಬಾಗಿಲಿಗೆ ಸರ್ಕಾರಿ ಸೇವೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರವನ್ನು ಪ್ರತ್ಯೇಕ ತಾಲೂಕಾಗಿ ಘೋಷಣೆ ಮಾಡುವ ಮೂಲಕ ಕ್ಷೇತ್ರದ ಜನರಿಗೆ ಮನೆ ಬಾಗಿಲಲ್ಲೇ ಎಲ್ಲ ರೀತಿಯ ಸರ್ಕಾರಿ ಸೇವೆ ದೊರಕುವಂತೆ ಮಾಡಲಾಗುವುದು ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬೆಳಗಾವಿ ತಾಲೂಕು ಬಹಳ ದೊಡ್ಡದಿದೆ. ತಾಲೂಕಿನ ಸರ್ಕಾರಿ ಕಚೇರಿಗಳ ಮೇಲೆ ಒತ್ತಡ ಬಹಳವಿದೆ. ಹಾಗಾಗಿ ಗ್ರಾಮೀಣ ತಾಲೂಕು ರಚನೆಯಾಗವುದು ಅಗತ್ಯ. ಈ ಬಾರಿ ಆಯ್ಕೆಯಾದ ನಂತರ ಮೊದಲ ಆದ್ಯತೆಯಾಗಿ ಗ್ರಾಮೀಣ ತಾಲೂಕು ರಚನೆಗೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ಬಾರಿಯೇ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಆದರೆ ವಿರೋಧ ಪಕ್ಷದ ಶಾಸಕಿಯಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಪ್ರತ್ಯೇಕ ತಾಲೂಕು ರಚನೆ ನನ್ನ ಮೊದಲ ಆದ್ಯತೆಯಾಗಲಿದೆ. ಖಂಡಿತ ಇದು ಸಾಧ್ಯವಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಜನರು ಎಲ್ಲ ಸರ್ಕಾರಿ ಕೆಲಸಗಳಿಗೆ ಬೆಳಗಾವಿ ನಗರಕ್ಕೆ ಹೋಗಬೇಕಿದೆ. ಅಲ್ಲಿಯ ಕಚೇರಿಗಳಲ್ಲಿ ಕೆಲಸದ ಒತ್ತಡದಿಂದಾಗಿ ಸುಲಭವಾಗಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಇದರಿಂದ ಅವರ ಸಮಯ, ಶ್ರಮ, ಹಣ ವ್ಯಯವಾಗುತ್ತಿದೆ. ಹಾಗಾಗಿ ನಮ್ಮ ಕಚೇರಿ ಮೂಲಕ ಈಗಾಗಲೆ ಜನರಿಗೆ ಈ ಕುರಿತು ಸಹಾಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ತಾಲೂಕಾದರೆ ತಹಶಿಲ್ದಾರ ಕಚೇರಿ ಸೇರಿದಂತೆ ಎಲ್ಲ ಕಚೇರಿಗಳೂ ಕ್ಷೇತ್ರಕ್ಕೆ ಬರಲಿವೆ. ಆಗ ಕೆಲಸದ ಒತ್ತಡ ಕಡಿಮೆಯಾಗುವುದರಿಂದ ಕೆಲಸ ಮಾಡಿಸಿಕೊಳ್ಳುವುದು ಸುಲಭವಾಗುತ್ತದೆ. ಅಲ್ಲದೆ ಜನರಿಗೆ ಅಗತ್ಯ ಸಹಾಯ ಮಾಡಲೆಂದೇ ನಮ್ಮ ಕಚೇರಿಯಲ್ಲೂ ಪೂರ್ಣಾವಧಿ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಗ್ರಾಮದಲ್ಲೇ ಸರ್ಕಾರಿ ಸೇವೆ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಕನಿಷ್ಠ 6 ತಿಂಗಳಿಗೊಮ್ಮೆ ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ಅಹವಾಲು ಆಲಿಕೆ ಸಭೆಗಳನ್ನು ಆಯೋಜಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಭರವಸೆ ನೀಡಿದ್ದಾರೆ. ತನ್ಮೂಲಕ ಮನೆ ಬಾಗಿಲಲ್ಲೇ ಸರಕಾರ ಸೇವೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ವರ್ಷ ಪ್ರಾಯೋಗಿಕವಾಗಿ ಇಂತಹ ಸಭೆಗಳನ್ನು ಆಯೋಜಿಸಲಾಗಿತ್ತು. ಅದು ಅತ್ಯಂತ ಯಶಸ್ವಿಯೂ ಆಗಿತ್ತು.

ವಿವಿಧ ಮಾಸಾಶನ, ಪಡಿತರ ಕಾರ್ಡ್, ಬೇರೆ ಬೇರೆ ರೀತಿಯ ಸರಕಾರಿ ಕೆಲಸಗಳನ್ನು ಜನರು ಮನೆ ಬಾಗಿಲಲ್ಲೇ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಿ, ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಸೇವೆ ಒದಗಿಸುವ ಮೂಲಕ ಗ್ರಾಮೀಣ ಜನರು ಸರ್ಕಾರಿ ಕೆಲಸಗಳಿಗಾಗಿ ಕಚೇರಿಗಳಿಗೆ ಸುತ್ತುವುದನ್ನು ತಪ್ಪಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಶೇಕಡಾ 69 ರಷ್ಟು ಮಹಿಳೆಯರಿಂದ ಮುದ್ರಾ ಯೋಜನೆ ಸದ್ಬಳಕೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.