ETV Bharat / state

Vande Bharat: ವಂದೇ ಭಾರತ್ ರೈಲಿನಲ್ಲೂ ಬೆಳಗಾವಿಗೆ ಅನ್ಯಾಯ.. ಜನರಲ್ಲಿ ಅಸಮಾಧಾನ

author img

By

Published : Jun 27, 2023, 3:42 PM IST

Updated : Jun 27, 2023, 9:21 PM IST

belagavi
ಬೆಳಗಾವಿ

ಅಂದು ಬೊಮ್ಮಾಯಿ ಸರ್ಕಾರ ವಂದೇ ಭಾರತ್​ ರೈಲನ್ನು ಬೆಳಗಾವಿ ವರೆಗೆ ವಿಸ್ತರಿಸುವುದಾಗಿ ಹೇಳಿತ್ತು.

ಬೆಳಗಾವಿ: ಇಂದಿನಿಂದ ಬೆಂಗಳೂರು- ಹುಬ್ಬಳ್ಳಿ- ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ. ಆದರೆ ಬೆಳಗಾವಿವರೆಗೂ ವಂದೇ ಭಾರತ್ ರೈಲು ಓಡದೇ ಇರುವುದು ಇಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

3 ತಿಂಗಳ ಹಿಂದೆಯಷ್ಟೇ ಬೆಳಗಾವಿಯಲ್ಲಿದ್ದ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯನ್ನು ಬೊಮ್ಮಾಯಿ ಸರ್ಕಾರ ಹಾವೇರಿಗೆ ಸ್ಥಳಾಂತರ ಮಾಡಿದೆ. ಉಡಾನ್ ಯೋಜನೆಯಡಿ ಅನೇಕ ವಿಮಾನ ಸೇವೆಗಳು ರದ್ದಾಗಿವೆ. ಅಲ್ಲದೇ ಹಲವಾರು ಯೋಜನೆಗಳು ಕೂಡ ಬೆಳಗಾವಿ ಕೈ ತಪ್ಪಿದೆ. ಈಗ ಮತ್ತೆ ವಂದೇ ಭಾರತ್ ವಿಚಾರದಲ್ಲೂ ಬೆಳಗಾವಿಗೆ ಅನ್ಯಾಯ ಆಗಿದೆ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.

ವಂದೇ ಭಾರತ್ ರೈಲನ್ನು ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಧಾರವಾಡದವರೆಗೆ ಸಂಚಾರ ಕೈಗೊಳ್ಳುವ ಯೋಜನೆಯನ್ನು 2 ವರ್ಷದ ಹಿಂದೆಯೇ ರೂಪಿಸಲಾಗಿತ್ತು. ಆದರೆ ಉತ್ತರ ಕರ್ನಾಟಕದ ಪ್ರಮುಖ ನಗರ, ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯವರೆಗೂ ಸಂಚಾರ ನಡೆಸುವಂತೆ ಬೆಳಗಾವಿಯ ಸಾರ್ವಜನಿಕರು ಒತ್ತಾಯಿಸಿದ್ದರು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿಯ ಸ್ವರೂಪವನ್ನೂ ಪಡೆದಿತ್ತು. ಜನರ ಒತ್ತಾಯಕ್ಕೆ ಮಣಿದಿದ್ದ ಅಂದಿನ ಬೊಮ್ಮಾಯಿ ಸರ್ಕಾರ ವಂದೇ ಭಾರತ್ ರೈಲನ್ನು ಬೆಳಗಾವಿಗೂ ವಿಸ್ತರಿಸುವುದಾಗಿ ತಿಳಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಬೆಳಗಾವಿಗೆ ಬಂದಾಗ ಭರವಸೆ ಕೂಡ ನೀಡಿದ್ದರು.

ಆದರೆ ನೈಋತ್ಯ ರೈಲ್ವೇ ಇತ್ತೀಚೆಗೆ ಹೊರಡಿಸಿದ್ದ ಪ್ರಕಟಣೆಯಲ್ಲಿ ವಂದೇ ಭಾರತ್ ರೈಲು ಸಂಚಾರ ಮಾರ್ಗದಲ್ಲಿ ಬೆಳಗಾವಿಯ ಹೆಸರೇ ಇಲ್ಲ. ಧಾರವಾಡವರೆಗೆ ಮಾತ್ರ ಈ ರೈಲು ಓಡಲಿದೆ. ರೈಲು ಪ್ರತಿದಿನ ಬೆಳಗ್ಗೆ 5.45ಕ್ಕೆ ಬೆಂಗಳೂರಿನಿಂದ ಹೊರಟು ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಮಧ್ಯಾಹ್ನ 12.40ಕ್ಕೆ ಧಾರವಾಡ ತಲುಪಲಿದೆ. ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಹೊರಟು ರಾತ್ರಿ 8.10ಕ್ಕೆ ವಾಪಸ್ ಬೆಂಗಳೂರಿಗೆ ತಲುಪಲಿದೆ ಎಂದು ನೈಋತ್ಯ ರೈಲ್ವೇ ವೇಳಾಪಟ್ಟಿಯಲ್ಲಿ ತಿಳಿಸಿದೆ.

ರಾಜ್ಯದ ಎರಡನೇ ರಾಜಧಾನಿ ಎಂದು ಕರೆಯುವ ಬೆಳಗಾವಿಯು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಜತೆಗೆ ವ್ಯಾಪಾರ, ವ್ಯವಹಾರ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದ ಜನ ಅಷ್ಟೇ ಅಲ್ಲದೇ ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರದ ಲಕ್ಷಾಂತರ ಜನ ಬೆಳಗಾವಿಯನ್ನೇ ಅವಲಂಭಿಸಿದ್ದಾರೆ. ಇನ್ನು, ರಾಜ್ಯದಲ್ಲೇ ಅತಿ ಹೆಚ್ಚು ಫೌಂಡ್ರಿ ಉದ್ಯಮ, 30 ಸಾವಿರಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ಬೆಳಗಾವಿ ಜಿಲ್ಲೆಯಲ್ಲಿದ್ದು, ಲಕ್ಷಾಂತರ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ. ಈ ಎಲ್ಲ ಕಾರಣಗಳಿಂದ ಬೆಳಗಾವಿಯಲ್ಲಿ ಹೊರ ಭಾಗದಿಂದ ಬರುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲದೇ ಬೆಂಗಳೂರಲ್ಲಿ ಬೆಳಗಾವಿ ಜಿಲ್ಲೆಯ ಲಕ್ಷಾಂತರ ಜನರು ನೆಲೆಸಿದ್ದಾರೆ. ಹಾಗಾಗಿ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿಯವರೆಗೂ ವಿಸ್ತರಿಸುವ ಅಗತ್ಯವಿದೆ ಎಂಬುದು ಇಲ್ಲಿನ ಜನರ ಆಗ್ರಹವಾಗಿತ್ತು.

ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಹಿರಿಯ ಕನ್ನಡ ಹೋರಾಟಗಾರ ಆಶೋಕ ಚಂದರಗಿ ಅವರು, ಈ ಮೊದಲು ಕೇಂದ್ರ ಬಿಜೆಪಿ ನಾಯಕರು ಹಾಗೂ‌ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಂದೇ ಭಾರತ್ ರೈಲು ಬೆಳಗಾವಿವರೆಗೂ ವಿಸ್ತರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅದು ಯಾಕೆ ಸಾಧ್ಯವಾಗುತ್ತಿಲ್ಲ ಅನ್ನೋದು ಗೊತ್ತಿಲ್ಲ. ಹುಬ್ಬಳ್ಳಿ-ಧಾರವಾಡದವರಿಗೆ ತಮ್ಮ ಬೇಡಿಕೆ ಈಡೇರಿದರೆ ಸಾಕು. ವಿಮಾನ ಸೇವೆ ಸೇರಿ ಅನೇಕ ವಿಚಾರಗಳಲ್ಲಿ ಬೆಳಗಾವಿಗೆ ಸಿಗುವುದನ್ನು ಕಸಿದುಕೊಂಡು ಹೋಗುವುದು ಅವರಿಗೆ ಸ್ವಭಾವವಾಗಿದೆ. ಅತ್ಯಾಕರ್ಷಕ‌ ವಂದೇ ಭಾರತ್ ರೈಲು ಬೆಳಗಾವಿಗೂ ವಿಸ್ತರಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ರಾಜ್ಯ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ವಂದೇ ಭಾರತ್ ರೈಲು ಬೆಳಗಾವಿವರೆಗೂ ತರಬೇಕೆಂದು ಮೊದಲಿನಿಂದಲೂ ಸಂಬಂಧಪಟ್ಟ ರೈಲ್ವೆ ಸಚಿವರಿಗೆ ಮತ್ತು ರೈಲ್ವೆ ಬೋರ್ಡ್ ಚೇರ್ಮನ್ ಅವರಿಗೆ ಒತ್ತಾಯ ಮಾಡಿದ್ದೇನೆ. ಇಲ್ಲಿ ರೈಲ್ವೆ ಹಳಿ ಡಬ್ಲಿಂಗ್ ಮತ್ತು ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿವರೆಗೂ ವಂದೇ ಭಾರತ್ ರೈಲು ಬರುವುದು ಸ್ವಲ್ಪ ವಿಳಂಬವಾಗಿದೆ. ಈ ಬಗ್ಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರ ಜೊತೆ ಮಾತನಾಡುತ್ತೇನೆ. ಈಗಾಗಲೇ ಪತ್ರ ಕೂಡ ಬರೆದಿದ್ದೇನೆ. ಬೆಳಗಾವಿವರೆಗೂ ಬರೋವರೆಗೂ ನಾನು ಬಿಡುವುದಿಲ್ಲ ಎಂದರು.

ಒಟ್ಟಿನಲ್ಲಿ ತಾಂತ್ರಿಕ ಕಾರಣವೋ, ಈ ಭಾಗದ ನಾಯಕರ ಇಚ್ಛಾಶಕ್ತಿ‌ ಕೊರತೆಯಿಂದಲೋ ವಂದೇ ಭಾರತ್ ರೈಲು ಬೆಳಗಾವಿ ಕೈ ತಪ್ಪಿದ್ದು, ತೀವ್ರ ನಿರಾಸೆಗೊಳಿಸಿದೆ. ಮುಂದೆಯಾದರೂ ಆದಷ್ಟು ಬೇಗನೇ ವಂದೇ ಭಾರತ್ ರೈಲು ಬೆಳಗಾವಿವರೆಗೂ ಬರಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ.

ಇದನ್ನೂ ಓದಿ: ವಂದೇ ಭಾರತ್​ ರೈಲು ಸಂಚಾರ ಆರಂಭ: ಧಾರವಾಡದಿಂದ ಹುಬ್ಬಳ್ಳಿಗೆ ಪ್ರಯಾಣಿಸಿ ಖುಷಿಪಟ್ಟ ಗೆಹ್ಲೋಟ್, ಪ್ರಹ್ಲಾದ್​ ಜೋಶಿ​

Last Updated :Jun 27, 2023, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.