ETV Bharat / state

ಪಿಎಸ್​ಐ ಮರುಪರೀಕ್ಷೆ ಒಂದು ತಿಂಗಳು ಮುಂದೂಡಿಕೆ : ಗೃಹ ಸಚಿವ ಡಾ ಜಿ ಪರಮೇಶ್ವರ್

author img

By ETV Bharat Karnataka Team

Published : Dec 4, 2023, 9:19 PM IST

ಗೃಹ ಸಚಿವ ಡಾ ಜಿ ಪರಮೇಶ್ವರ್
ಗೃಹ ಸಚಿವ ಡಾ ಜಿ ಪರಮೇಶ್ವರ್

ಪಿಎಸ್​ಐ ಮರುಪರೀಕ್ಷೆಯನ್ನು ಜನವರಿ 23ಕ್ಕೆ ನಿಗದಿ ಮಾಡಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.

ಬೆಳಗಾವಿ/ ಬೆಂಗಳೂರು : ಪಿಎಸ್ಐ ಮರುಪರೀಕ್ಷೆಯನ್ನು ಒಂದು ತಿಂಗಳಿಗೆ ಮುಂದೂಡಿಕೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, ಡಿಸೆಂಬರ್ 23ಕ್ಕೆ 545 ಪಿಎಸ್​ಐ ನೇಮಕಾತಿ ಮರುಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿತ್ತು. ಅದನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ. ಜನವರಿ 23ಕ್ಕೆ ದಿನಾಂಕವನ್ನು ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಿಎಸ್​ಐ ನೇಮಕಾತಿ ಮರುಪರೀಕ್ಷೆ ಒಂದು ತಿಂಗಳು ಮುಂದೂಡಿಕೆ ಮಾಡಲಾಗಿದೆ. ಪಿಎಸ್​ಐ ಪರೀಕ್ಷೆ ಮುಂದೂಡಿಕೆಗೆ ಅನೇಕರು ಮನವಿ ಮಾಡಿಕೊಂಡಿದ್ದರು. ಸಮಯಾವಕಾಶ ಬೇಕು ಎಂದು ಪರೀಕ್ಷಾರ್ಥಿಗಳು ಮನವಿ ಮಾಡಿದ್ದರು. ಸದನದಲ್ಲಿ ಯತ್ನಾಳ್ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ರು. ಅನೇಕ ಶಾಸಕರುಗಳು ಪಕ್ಷಾತೀತವಾಗಿ ಬೇಡಿಕೆಯನ್ನ ಇಟ್ಟಿದ್ದರು ಎಂದು ಹೇಳಿದರು.

ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಒಂದು ತಿಂಗಳು ಪರೀಕ್ಷೆಯನ್ನು ಮುಂದೂಡಿಕೆ ಮಾಡಲು ನಿರ್ಧರಿಸಲಾಗಿದೆ. ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. KEA ಕ್ಯಾಲೆಂಡರ್ ನೋಡಿಕೊಂಡು ದಿನಾಂಕ ಪ್ರಕಟ ಮಾಡ್ತೀವಿ. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ತಯಾರಿ ಮಾಡಿಕೊಂಡು ಬರೆಯಲಿದ್ದಾರೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ಪೊಲೀಸ್ ಇಲಾಖೆಯ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ 2021ರ ಅಕ್ಟೋಬರ್ 3ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ವೇಳೆ ಅಕ್ರಮ ಕಂಡುಬಂದಿತ್ತು. ಈ ಕಾರಣಕ್ಕೆ ಪರೀಕ್ಷೆ ರದ್ದಾಗಿತ್ತು. ಈ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‍ಪಾಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು, ಪರೀಕ್ಷಾರ್ಥಿಗಳು, ಅವರ ಕೆಲವು ಪಾಲಕರನ್ನು ಸಹ ಬಂಧಿಸಲಾಗಿತ್ತು.

ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಆಪ್ತರಿಂದ ಚಾಕು ಇರಿತ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಏನೇ ಇದ್ರೂ ನಮ್ಮ‌ ಪೊಲೀಸರು ನೋಡಿಕೊಳ್ತಾರೆ. ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಾರೆ. ನಾನು ಈಗಷ್ಟೇ ಅಧಿವೇಶನ‌ ಮುಗಿಸಿ ಬಂದಿದ್ದೇನೆ, ನೋಡ್ತೀನಿ ಎಂದು ಹೇಳಿದರು.

ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬೆಂಬಲಿಗರಿಂದ ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸೋಮವಾರ ಸಂಜೆ ಜಯನಗರದ ಪೃಥ್ವಿ ಸಿಂಗ್ ಅವರ ಮನೆ ಮುಂದೆ ಚನ್ನರಾಜ ಹಟ್ಟಿಹೊಳಿ ಅವರ ಐದಾರು ಜನ ಬೆಂಬಲಿಗರು ಏಕಾಏಕಿ ಬಂದು ಹೊರಗೆ ಕರೆದೊಯ್ದು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಹಲ್ಲೆಗೊಳಗಾದ ಪೃಥ್ವಿ ಸಿಂಗ್​ ದೂರಿದ್ದಾರೆ.

ಕೂಲಂಕಷ ತನಿಖೆ ನಡೆಯಲಿ ಎಂದ ಸಚಿವೆ ಹೆಬ್ಳಾಳ್ಕರ್​: ಇನ್ನು ತಮ್ಮ ಸಹೋದರನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಈ ಬಗ್ಗೆ ಕೂಲಂಕಷ ತನಿಖೆ ಆಗಲಿ. ಆಗ ಸತ್ಯ ಹೊರಬರುತ್ತದೆ. ನಾವು ಶಾಂತಪ್ರಿಯರು ಎಂದಿದ್ದಾರೆ.

ಇದನ್ನೂ ಓದಿ : ಪಿಎಸ್ಐ ಪರೀಕ್ಷಾ ನೇಮಕಾತಿ‌ ಹಗರಣ; ಈ ತಿಂಗಳೊಳಗೆ ಸರ್ಕಾರಕ್ಕೆ ವರದಿ - ನ್ಯಾ. ಬಿ ವೀರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.