ETV Bharat / state

ಬೆಳಗಾವಿಯಲ್ಲಿ ಮಳೆ ಅವಾಂತರ: ಆಸ್ಪತ್ರೆ ಒಳಗಿದ್ದ ರೋಗಿಗಳ ಪರದಾಟ

author img

By

Published : Jul 24, 2021, 6:02 PM IST

Updated : Jul 24, 2021, 7:02 PM IST

Heavy rain in Belgaum
ಬೆಳಗಾವಿಯಲ್ಲಿ ಮಳೆಯ ಅವಾಂತರ

ಕಳೆದೊಂದು ವಾರದಿಂದ ಬೆಳಗಾವಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಂದು ಮಳೆಯ ನೀರು ಆಸ್ಪತ್ರೆಗೆ ನುಗ್ಗಿತ್ತು. ಪರಿಣಾಮ ಇದರಿಂದ ರೋಗಿಗಳು ಪರದಾಟ ನಡೆಸಿದರು.

ಬೆಳಗಾವಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ನೀರು ಗೋಕಾಕ್​ ನಾಕಾ ಬಳಿ ಇರುವ ನಿಮ್ರಾ ಆಸ್ಪತ್ರೆಗೆ ನುಗ್ಗಿತ್ತು. ಇದರಿಂದ ಆಸ್ಪತ್ರೆ ಒಳಗಿದ್ದ ರೋಗಿಗಳು ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಗಲ್ಲಿಗೆ ನುಗ್ಗಿದ ನದಿ ನೀರು:

ಗೋಕಾಕ್​​ ನಗರ ನದಿಪಾತ್ರದಲ್ಲಿದ್ದು, ಇಲ್ಲಿರುವ ಮಟನ್ ಮಾರ್ಕೆಟ್, ಉಪ್ಪಾರ ಗಲ್ಲಿ, ಕುಂಬಾರ ಗಲ್ಲಿ, ಹಳೇ ತಹಶೀಲ್ದಾರ್ ಕಚೇರಿ ಹಾಗೂ ಕಿಲ್ಲಾ ಪ್ರದೇಶಗಳು ಜಲಾವೃತಗೊಂಡಿವೆ.

ಆಸ್ಪತ್ರೆ ಒಳಗೆ ಹರಿದ ಮಳೆನೀರು:

ನಿಮ್ರಾ ಆಸ್ಪತ್ರೆ ರೋಗಿಗಳ ಪರದಾಟ

ನಿರಂತರ ಮಳೆಯಾದ ಪರಿಣಾಮ ಗೋಕಾಕ್​ ನಾಕಾ ಬಳಿ ಇರುವ ನಿಮ್ರಾ ಆಸ್ಪತ್ರೆಗೆ ಮಳೆ ನೀರು ನುಗ್ಗಿದೆ. ಪರಿಣಾಮ ಆಸ್ಪತ್ರೆಯಲ್ಲಿದ್ದರು. ಏಕಾಏಕಿ ಆಸ್ಪತ್ರೆಯೊಳಗೆ ನೀರು ನುಗ್ಗಿದ ಪರಿಣಾಮ ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಗಳು ಪರದಾಡಿದರು. ತಕ್ಷಣವೇ ಸ್ಥಳೀಯರ ಸಹಕಾರದಿಂದ ಆಸ್ಪತ್ರೆಯಲ್ಲಿದ್ದ 16 ರೋಗಿಗಳನ್ನು ಆಸ್ಪತ್ರೆಯಿಂದ ಹೊರತರಲಾಯಿತು. ನಂತರ ಬೇರೆಡೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿಯಲ್ಲಿ ಮಳೆಯ ಅವಾಂತರ

ಸೇತುವೆ ಮುಳುಗಡೆ:

ಘಟಪ್ರಭಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾರಣ ಲೋಳಸೂರ ಬಳಿಯ ಘಟಪ್ರಭ-ಗೋಕಾಕ್​ ಸಂಪರ್ಕಿಸುವ ಸೇತುವೆ ಸಂಪೂರ್ಣ ಮುಳುಗಡೆ ಆಗಿದ್ದು, ಸಂಚಾರವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.

ಬಳ್ಳಾರಿ ನಾಲಾ ಒಳಹರಿವು ಹೆಚ್ಚಳ: ಭತ್ತದ ಬೆಳೆ ಜಲಾವೃತ

ಕಳೆದೊಂದು ವಾರಗಳಿಂದ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ತಾಲೂಕಿನ ಬಳ್ಳಾರಿ ನಾಲಾ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಇಂದ್ರಾಣಿ, ಬಾಸೂಮತಿ ಭತ್ತ ಸೇರಿದಂತೆ ಇತರ ತರಕಾರಿ ಬೆಳೆಗಳು ಜಲವೃತ್ತವಾಗಿವೆ. ಅದರಲ್ಲೂ ಹೆಚ್ಚಾಗಿ ತಾಲೂಕಿನ ಧಾಮನೆ, ಯಳ್ಳೂರು, ವಡಗಾವಿ, ಬಸವನ ಕುಡಚಿ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರೋ ಬೆಳೆಗಳು ನೀರಿನಲ್ಲಿ ಮುಳುಗಡೆ ಆಗುತ್ತಿದ್ದು, ಬೆಳೆಗಳೆಲ್ಲವೂ ಕೊಳೆಯುವ ಆತಂಕ ರೈತರನ್ನು ಕಾಡುತ್ತಿದೆ.

crop damage
ಮಳೆಗೆ ಬೆಳೆ ಹಾನಿ

ಮಲಪ್ರಭಾ ‌ನದಿಯ ಅಬ್ಬರಕ್ಕೆ ವಿದ್ಯುತ್ ಕಂಬಗಳು ಮುಳುಗಡೆ:

ಧಾರಾಕಾರ ಮಳೆಯಿಂದ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನಜೀವನ ‌ಅಸ್ತವ್ಯಸ್ತಗೊಂಡಿದೆ. ಪುಣೆ-ಬೆಂಗಳೂರು ಪಕ್ಕದ ಸರ್ವಿಸ್ ರಸ್ತೆ ಸಂಪೂರ್ಣ ಮುಳುಗಡೆ ಆಗಿದೆ. ಹೀಗಾಗಿ ವಾಹನ ಸವಾರರು ಪರದಾಡುವ ‌ಸ್ಥಿತಿ ನಿರ್ಮಾಣವಾಗಿದೆ. ಟಾಟಾ ಏಸ್ ವಾಹನ ಮುಳುಗಡೆ ಆಗಿರುವ ಸರ್ವಿಸ್ ರಸ್ತೆಯಲ್ಲಿ ಸಿಲುಕಿದೆ. ಸ್ಥಳೀಯರ ಸಹಕಾರದಿಂದ ವಾಹನ ಹೊರ ತರಲಾಯಿತು.

heavy rain
ಮಳೆಯ ಅವಾಂತರ

ಮಲಪ್ರಭಾ ‌ನದಿಯ ಒಳಹರಿವು ಹೆಚ್ಚಳದಿಂದ ಬಹುತೇಕ ವಿದ್ಯುತ್ ಕಂಬಗಳು ಮುಳುಗಡೆಗೊಂಡಿವೆ. ಇದರಿಂದ ಎಂಕೆ ಹುಬ್ಬಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಿನ್ನೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ‌ಕಡಿತದಿಂದ‌ ಜನಜೀವನ ಸಂಪೂರ್ಣ ‌ಅಸ್ತವ್ಯಸ್ತಗೊಂಡಿದೆ. ‌ಇಂದು ಬೆಳಗ್ಗೆಯಿಂದ ಮಳೆ ಪ್ರಮಾಣ ಇಳಿಮುಖಗಿದ್ದರೂ, ಜಿಲ್ಲೆಯ ಎಲ್ಲ ನದಿಗಳ ಒಳಹರಿವು ಮಾತ್ರ ಕಡಿಮೆ ಆಗುತ್ತಿಲ್ಲ. ಇದು ಸ್ಥಳೀಯ ‌ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಓದಿ: ವರುಣಾರ್ಭಟಕ್ಕೆ ಕೆರೆಯಂತಾದ ಶಿವಮೊಗ್ಗ ಕ್ರಿಕೆಟ್ ಸ್ಟೇಡಿಯಂ..!

Last Updated :Jul 24, 2021, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.