ETV Bharat / state

ಎರಡನೇ ಮಗನ‌ ಮದುವೆಗಾಗಿ ಮಾನಸಿಕ ಅಸ್ವಸ್ಥ ಹಿರಿಯ ಮಗನ‌ ಕೊಂದ ತಂದೆ!

author img

By

Published : Jul 19, 2023, 8:51 PM IST

ಮಾನಸಿಕ ಅಸ್ವಸ್ಥ ಮಗನನ್ನು ಕೊಲೆ ಮಾಡಿದ ತಂದೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

father-arrest-for-killed-mentally-ill-son-in-belgavi
ಎರಡನೇ ಮಗನ‌ ಮದುವೆಗಾಗಿ ಮಾನಸಿಕ ಅಸ್ವಸ್ಥ ಹಿರಿಯ ಮಗನ‌ ಕೊಂದ ತಂದೆ!

ಬೆಳಗಾವಿ: ಕಳೆದ ಮೇ 31ರಂದು ಖಾನಾಪುರ ಪಟ್ಟಣದ ಹೊರವಲಯದ ಮಲಪ್ರಭಾ ನದಿ ತೀರದಲ್ಲಿ ಪತ್ತೆಯಾದ ಅಪರಿಚಿತ ಯುವಕನ ಅಸಹಜ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವತಃ ತಂದೆಯೇ ತನ್ನ ಮಾನಸಿಕ ಅಸ್ವಸ್ಥ ಮಗನನ್ನು ಕೊಲೆ ಮಾಡಿರುವ ಸಂಗತಿ ಪೊಲೀಸರ ತನಿಖೆಯಿಂದ ಬಯಲಾಗಿದ್ದು, ಆರೋಪಿ ತಂದೆಯನ್ನು ಪೊಲೀಸರು ಹೆಡೆಮುರಿ‌ ಕಟ್ಟಿದ್ದಾರೆ.

ಅಪರಿಚಿತ ಶವದ ಮರಣೋತ್ತರ ತನಿಖೆ ನಡೆಸಿದ್ದ ಪೊಲೀಸರಿಗೆ ಮೃತ ವ್ಯಕ್ತಿ ವಿಷ ಸೇವಿಸಿರುವುದು ಮತ್ತು ಆತನ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವ ಸಂಗತಿ ತಿಳಿದು ಬಂದಿತ್ತು. ಹಾಗಾಗಿ ಪೊಲೀಸರು ಈ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಪ್ರಕರಣ ದಾಖಲಾಗಿ ಕೆಲದಿನಗಳ ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಆತ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದ ನಿವಾಸಿ ನಿಖಿಲ್ ರಾಜಕುಮಾರ ಮಗದುಮ್ಮ (24) ಎಂಬುದು ದೃಢವಾಗಿತ್ತು.‌ ನಿಖಿಲ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಜುಲೈ 7ರಂದು ಆತನ ಚಿಕ್ಕಪ್ಪ ಸಂತೋಷ್ ಮಗದುಮ್ಮ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಅವರು ತಮ್ಮ ಅಣ್ಣ ರಾಜಕುಮಾರ್​ ಶಂಕರ ಮಗದುಮ್ಮ (45) ನಿಖಿಲ್ ಕೊಲೆ ಮಾಡಿರುವುದಾಗಿ ತಿಳಿಸಿ ರಾಜಕುಮಾರ್​ ವಿರುದ್ಧ ದೂರು ಕೂಡ ನೀಡಿದ್ದರು.

ಇದನ್ನೂ ಓದಿ: Bengaluru crime: ಮಂಗಳೂರು ಮೂಲದ ದಂಪತಿ ಭೀಕರ ಹತ್ಯೆ.. ಪುತ್ರನಿಂದಲೇ ಕೃತ್ಯ!

ಬಳಿಕ ರಾಜಕುಮಾರ್​ ಅವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು, ಅವರನ್ನು ವಿಚಾರಣೆ ನಡೆಸಿದಾಗ ತಮ್ಮ ಹಿರಿಯ ಮಗ ನಿಖಿಲ್ ಮಾನಸಿಕ ಅಸ್ವಸ್ಥನಿದ್ದು, ಆತ ಬದುಕಿರುವವರೆಗೆ ಕಿರಿಯ ಮಗ ನಿತೀಶ್‌ನ ಮದುವೆ ಮಾಡಲು ತೊಂದರೆ ಆಗುತ್ತದೆ ಎಂದುಕೊಂಡು ಆತನನ್ನು ಮೇ 30ರಂದು ಬೋರಗಲ್ ಗ್ರಾಮದ ತಮ್ಮ ಮನೆಯಿಂದ ಖಾನಾಪುರ‌ ಪಟ್ಟಣದ ಮಲಪ್ರಭಾ ನದಿಯ ಬಳಿ ಕರೆದುಕೊಂಡು ಹೋಗಿ ವಿಷ ಕುಡಿಸಿ, ಆತನ ತಲೆಯನ್ನು ಗಿಡಕ್ಕೆ ಜೋರಾಗಿ‌ ಡಿಚ್ಚಿ ಹೊಡಿಸಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದರು.

ಇನ್ನು ಯಾರಿಗೂ ಅನುಮಾನ ಬರಬಾರದೆಂದು‌ ನಿಖಿಲ್ ಬೆಳಗಾವಿ ಬಸ್ ನಿಲ್ದಾಣದಲ್ಲಿ‌ ಕಾಣೆಯಾಗಿದ್ದಾನೆ ಎಂದು ಆರೋಪಿ ಹೇಳಿದ್ದ. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಿಖಿಲ್ ಅವರ ಕೊಲೆ ಪ್ರಕರಣವನ್ನು ಭೇದಿಸಿರುವ ಖಾನಾಪುರ ಪೊಲೀಸ್​ ಠಾಣೆಯ ಪಿಐ ಮಂಜುನಾಥ್ ನಾಯ್ಕ್ ಹಾಗೂ ಸಿಬ್ಬಂದಿ ಆರೋಪಿ ರಾಜಕುಮಾರ್​ ಶಂಕರ್ ಮಗದುಮ್ಮ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರ ಆದೇಶದ ಪ್ರಕಾರ ರಾಜಕುಮಾರ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಮಗ ಹುಚ್ಚನಿದ್ದಾನೆಂದು ಈ ರೀತಿ ಕೊಲೆ ಮಾಡಿದ್ದ ಪಾಪಿ ತಂದೆ ಸದ್ಯ ಜೈಲು ಪಾಲಾಗಿದ್ದು, ಕುಟುಂಬಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: 7 ತಿಂಗಳ ಮಗು ಸೇರಿ ಒಂದೇ ಕುಟುಂಬದ ನಾಲ್ವರನ್ನು ಕೊಂದು ಸುಟ್ಟು ಹಾಕಿದ ದುಷ್ಕರ್ಮಿಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.