ETV Bharat / state

Bengaluru crime: ಮಂಗಳೂರು ಮೂಲದ ದಂಪತಿ ಭೀಕರ ಹತ್ಯೆ.. ಪುತ್ರನಿಂದಲೇ ಕೃತ್ಯ!

author img

By

Published : Jul 18, 2023, 3:40 PM IST

Updated : Jul 18, 2023, 5:53 PM IST

ಮಂಗಳೂರು ಮೂಲದ ದಂಪತಿ ಮಗನಿಂದಲೇ ಹತ್ಯೆಯಾದ ದಾರುಣ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

crime
ಮಂಗಳೂರು ಮೂಲದ ದಂಪತಿ ಭೀಕರ ಹತ್ಯೆ

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಮಾಹಿತಿ

ಬೆಂಗಳೂರು: ಅವರಿಬ್ಬರು ವೃದ್ಧ ದಂಪತಿ. ಪತ್ನಿ ಕೇಂದ್ರ ಸರ್ಕಾರದ ನೌಕರಿ ಮಾಡಿ ನಿವೃತ್ತರಾಗಿದ್ದರು. ಸಂಸಾರದ ಬಂಡಿ ಸಾಗಿಸಲು ವಯಸ್ಸು 61 ಆದರೂ ಪತಿ ಇನ್ನೂ ಕೆಲಸ ಮಾಡುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು. ಅದರಲ್ಲಿ ಓರ್ವ ಉದ್ಯೋಗಸ್ಥನಾಗಿದ್ದರೆ ಇನ್ನೋರ್ವ ಮಗ ಮನೆಯಲ್ಲೇ ಸೋಮಾರಿ ಆಗಿ ಇರುತ್ತಿದ್ದ. ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು ಈ ದಂಪತಿ. ಆದ್ರೆ ಪ್ರೀತಿಯಿಂದ ಬೆಳೆಸಿದ್ದ ಕಿರಿಯ ಮಗ ಅಪ್ಪ- ಅಮ್ಮನ ಪ್ರಾಣವನ್ನೇ ತೆಗೆದಿದ್ದಾನೆ.

ಹೌದು, ಸಿಲಿಕಾನ್​ ಸಿಟಿಯಲ್ಲಿ ಇಂತಹದೊಂದು ಭೀಬತ್ಸ ಘಟನೆ ನಡೆದಿದೆ. ಮಗನಿಂದಲೇ ಪೋಷಕರು ಹತ್ಯೆಯಾದ ದಾರುಣ ಪ್ರಕರಣ ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮಂಗಳೂರು ಮೂಲದ ಭಾಸ್ಕರ್ (61) ಹಾಗೂ ಶಾಂತಾ (60) ಕೊಲೆಯಾದ ದಂಪತಿ. ಪುತ್ರ ಶರತ್​ (21) ತಂದೆ- ತಾಯಿಯನ್ನು ಹತ್ಯೆಗೈದು ಪರಾರಿಯಾಗಿರುವ ಆರೋಪಿ.

ಘಟನೆ ಹಿನ್ನೆಲೆ: ಮಂಗಳೂರು ಮೂಲದ ಭಾಸ್ಕರ್ ಹಾಗೂ ಶಾಂತಾ ದಂಪತಿ 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ನೆಲೆಸಿದ್ದರು. ಶಾಂತಾ ಕೇಂದ್ರ ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಭಾಸ್ಕರ್​ ಅವರು ಕ್ಯಾಂಟೀನ್​ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಸಜಿತ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕಿರಿಯ ಮಗ ಶರತ್ ಪೋಷಕರಿದ್ದ ಮನೆಯಲ್ಲಿಯೇ ಮೊದಲ ಮಹಡಿಯಲ್ಲಿ ಪ್ರತ್ಯೇಕ ರೂಂನಲ್ಲಿ ವಾಸವಿದ್ದ.‌

ಸೋಮವಾರ ಸಂಜೆ ಪೋಷಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಶರತ್, ಕಬ್ಬಿಣದ ರಾಡ್​ನಿಂದ ತಂದೆ ತಾಯಿಯ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಕೃತ್ಯದ ಬಳಿಕ ಮನೆ ಬಾಗಿಲು ಲಾಕ್ ಮಾಡಿ ಶರತ್ ನಾಪತ್ತೆಯಾಗಿದ್ದಾನೆ. ಬೆಳಗ್ಗೆ ಹಿರಿಯ ಮಗ ಸಜಿತ್ ಕರೆ ಮಾಡಿದಾಗ ಪೋಷಕರು ಸ್ವೀಕರಿಸಿಲ್ಲ. ಪಕ್ಕದ ಮನೆಯವರ ನೆರವಿನಿಂದ ಪರಿಶೀಲಿಸಿದಾಗ ದಂಪತಿಯ ಕೊಲೆಯಾಗಿರುವುದು ಗೊತ್ತಾಗಿದೆ.

"ಸೋಮವಾರ ರಾತ್ರಿ 8 ರಿಂದ 9.30ರ ನಡುವೆ ಈ ಕೃತ್ಯ ನಡೆದಿದೆ. ಬಲವಾದ ಆಯುಧದಿಂದ ಹೊಡೆದು ದಂಪತಿಯನ್ನು ಕೊಲೆಗೈಯ್ಯಲಾಗಿದೆ. ಆರೋಪಿ ಶರತ್ ನಾಪತ್ತೆಯಾಗಿದ್ದಾನೆ. ಶರತ್ ವರ್ತನೆ ವಿಚಿತ್ರವಾಗಿರುತ್ತಿತ್ತು ಎಂದು ಅಕ್ಕಪಕ್ಕದವರು ಮಾಹಿತಿ ನೀಡಿದ್ದಾರೆ. ಸದ್ಯ ಘಟನಾಸ್ಥಳದಲ್ಲಿ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು" ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru Crime: ಕೋಳಿ ಅಂಗಡಿ ದುರ್ವಾಸನೆ ವಿಚಾರಕ್ಕೆ ಜಗಳ: ಪತ್ನಿ ಎದುರೇ ಟೆಲಿಕಾಂ ನಿವೃತ್ತ ನೌಕರನ‌ ಕಗ್ಗೊಲೆ..!

Last Updated : Jul 18, 2023, 5:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.