ETV Bharat / state

ಇಂದು ಕಿತ್ತೂರು ರಾಣಿ ಚೆನ್ನಮ್ಮನ ಜನ್ಮದಿನ; ಸರ್ಕಾರದಿಂದ ಜಯಂತಿ ಆಚರಿಸಲು ಆಗ್ರಹ

author img

By ETV Bharat Karnataka Team

Published : Nov 14, 2023, 10:18 AM IST

Updated : Nov 14, 2023, 10:31 AM IST

ಅನೇಕ ಮಹಾಪುರುಷರು, ಮಹಾತ್ಮರ ಜಯಂತಿಗಳನ್ನು ಸರ್ಕಾರದಿಂದ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ. ಅದೇ ಮಾದರಿಯಲ್ಲಿ ನ.14 ಚೆನ್ನಮ್ಮನ ಜನ್ಮದಿನ ಎಂದು ಅಧಿಕೃತವಾಗಿ ಘೋಷಿಸಿ, ಪ್ರತಿವರ್ಷವೂ ಜಯಂತಿ ಸರ್ಕಾರ ಆಚರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು -ಯ‌.ರು. ಪಾಟೀಲ, ಹಿರಿಯ ಸಾಹಿತಿ, ಸಂಶೋಧಕ.

ನವೆಂಬರ್​ 14 ಚನ್ನಮ್ಮನ ಜನ್ಮದಿನ
ನವೆಂಬರ್​ 14 ಚನ್ನಮ್ಮನ ಜನ್ಮದಿನ

ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆಚರಿಸಲು ಆಗ್ರಹ

ಬೆಳಗಾವಿ : ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಮೊಟ್ಟ ಮೊದಲ ಸೋಲಿನ‌ ರುಚಿ ತೋರಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಜಯಂತಿ‌ ಆಚರಣೆಗೆ ಸರ್ಕಾರಗಳು ನಿರ್ಲಕ್ಷ್ಯ ವಹಿಸಿರುವುದು ಮತ್ತು ಚೆನ್ನಮ್ಮನ ಜ‌ನ್ಮದಿ‌ನಾಂಕ ಗೊಂದಲಕ್ಕೆ ಇತಿಶ್ರೀ ಹಾಡದಿರುವುದು ಈ ಭಾಗದ ಸಾಹಿತಿಗಳು, ಸ್ವಾಮೀಜಿಗಳು ಹಾಗೂ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆ ಕುರಿತ ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ‌.

1778 ನವೆಂಬರ್​ 14 ಕನ್ನಡ ನಾಡಿನಲ್ಲಿ ಕೆಚ್ಚೆದೆಯ ಕಿತ್ತೂರು ರಾಣಿ ಚೆನ್ನಮ್ಮ ಜನಿಸಿದ ದಿನ. ಚೆನ್ನಮ್ಮನ ಜನ್ಮ ದಿನಾಂಕದ ಬಗ್ಗೆ ಹತ್ತಾರು ಸಾಹಿತಿಗಳು, ಸಂಶೋಧಕರು ಸರ್ಕಾರಕ್ಕೆ ಸೂಕ್ತ ದಾಖಲೆ, ಮಾಹಿತಿ ಒದಗಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕೃತ ದಿನಾಂಕ ಘೋಷಿಸಿ, ಚೆನ್ನಮ್ಮಾಜಿ ಜಯಂತಿ ಸರ್ಕಾರದಿಂದಲೇ ಆಚರಿಸಲು ಯಾವುದೇ ಸರ್ಕಾರ ಮುಂದಾಗಿಲ್ಲ.

ಸಾಹಿತಿ ಯ.ರು. ಪಾಟೀಲ ಏನಂತಾರೆ..? : ಯಾವುದೇ ಮಹಾತ್ಮರನ್ನು ನೆನಪಿಸಿಕೊಳ್ಳುವುದು ಜನ್ಮದಿನ ಮತ್ತು ಅವರ ಶೌರ್ಯದ ದಿನದಂದು. ಹಾಗಾಗಿ, ಕಿತ್ತೂರು ಎಂಬ ಚಿಕ್ಕ ಸಂಸ್ಥಾನವು ಬ್ರಿಟಿಷರಂತ ದೊಡ್ಡ ಸಂಸ್ಥಾನದ ವಿರುದ್ಧ ಹೋರಾಡುವ ಮೂಲಕ ತಮ್ಮ ತಾಕತ್ತು ತೋರಿಸಿಕೊಟ್ಟಿದ್ದ ರಾಣಿ ಚೆನ್ನಮ್ಮನ ಜನ್ಮ ದಿನಾಂಕದ ಬಗ್ಗೆ ಗೊಂದಲ ಮೂಡಿರುವುದು ನಿಜಕ್ಕೂ ವಿಷಾದನೀಯ ಸಂಗತಿ ಎಂದು ಹಿರಿಯ ಸಾಹಿತಿ, ಸಂಶೋಧಕ ಯ.ರು‌. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.

ಚನ್ನಬಸವಣ್ಣನವರ ಜಯಂತಿ ದಿನವೇ ಚೆನ್ನಮ್ಮ ಜನನ : ದೀಪಾವಳಿ ಹಬ್ಬದ ದಿನ ಅವಿರಳಜ್ಞಾನಿ ಉಳುವಿಯ ಶ್ರೀ ಚನ್ನಬಸವೇಶ್ವರರು ಜನಿಸಿದ್ದಾರೆ. ಇನ್ನು ರಾಣಿ ಚೆನ್ನಮ್ಮ ಕೂಡ ಅದೇ ದಿನ ಜನಿಸಿದ್ದಾರೆ. ಚೆನ್ನಮ್ಮನ ತಂದೆ ಧೂಳಪ್ಪಗೌಡ ದೇಸಾಯಿ ಅವರು ಚೆನ್ನಬಸವಣ್ಣನವರ ಪರಮ ಭಕ್ತರಾಗಿದ್ದ ಹಿನ್ನೆಲೆಯಲ್ಲಿ ತಮ್ಮ ಮಗಳಿಗೆ ಚನ್ನಬಸವಣ್ಣನವರ ಹೆಸರಿನ ಮೊದಲ ಎರಡು ಅಕ್ಷರಗಳನ್ನು ಸೇರಿಸಿ ಚೆನ್ನಮ್ಮ ಎಂದು ಹೆಸರಿಟ್ಟಿದ್ದರು ಎಂದು ಯ.ರು. ಪಾಟೀಲರು ವಿವರಿಸಿದರು. ಅಲ್ಲದೆ, ಕಿತ್ತೂರಿನ‌ ಅರಮನೆಯ ದೇವರ ಕೋಣೆಯ ಜಗಲಿ ಮೇಲೆ ಕಲ್ಮಠ ರಾಜಗುರುಗಳು ಅನೇಕ ವರ್ಷಗಳಿಂದ ನ.14ರಂದೇ ಚೆನ್ನಮ್ಮನ‌ ಜಯಂತಿ ಆಚರಿಸಿಕೊಂಡು ಬಂದಿದ್ದಾರೆ. ಚೆನ್ನಮ್ಮನ ತವರೂರು ಕಾಕತಿಯಲ್ಲೂ ಕೂಡ ಇಂದೇ ಜಯಂತಿ ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.

ದಿನಾಂಕ‌ ಗೊಂದಲ ಯಾಕೆ..? : 1824 ಅಕ್ಟೋಬರ್ 23 ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ದಿಗ್ವಿಜಯ ಸಾಧಿಸಿದ ದಿನ‌. ಹಾಗಾಗಿ, ಪ್ರತಿವರ್ಷವೂ ಅ.23ರಂದು‌ ವಿಜಯೋತ್ಸವ ಆಚರಿಸಲಾಗುತ್ತದೆ. ಆ ಸವಿ ನೆನಪಿಗೋಸ್ಕರ ಮೂರು ದಿನ‌ ಕಿತ್ತೂರು ಉತ್ಸವ ಕೂಡ ಆಯೋಜಿಸಲಾಗುತ್ತಿದೆ. ಆದರೆ ಇದೇ ಚೆನ್ನಮ್ಮನ ಜಯಂತಿ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಗೂಗಲ್ ನಲ್ಲೂ ಕೂಡ ಜನ್ಮ ದಿನಾಂಕ ಅ.23, 1778 ಎಂದು ದಾಖಲಾಗಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸರ್ಕಾರ ಮತ್ತು ವಿಶ್ವವಿದ್ಯಾಲಯಗಳಿಗೂ ಪತ್ರ ಬರೆದಿದ್ದೇನೆ. ಕಳೆದ ಏಳೆಂಟು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಯ.ರು. ಪಾಟೀಲ ಅವರ ಬೇಸರವಾಗಿದೆ.

ರಾಜಗುರು ಸ್ವಾಮೀಜಿ ಹೇಳಿದ್ದೇನು..? : ಅಕ್ಟೋಬರ್ 23 ಬ್ರಿಟಿಷರ ವಿರುದ್ಧ ಕಿತ್ತೂರು ಗೆದ್ದು ಹೊಸ ಇತಿಹಾಸ ನಿರ್ಮಿಸಿದ ದಿನ. ನ‌.14 ಚೆನ್ನಮ್ಮಾಜಿ ಜನ್ಮದಿನ. ಈ ದಿನ ಅನೇಕ ವರ್ಷಗಳಿಂದ ಚೆನ್ನಮ್ಮನ ಜಯಂತಿಯನ್ನು ನಾವು ಆಚರಿಸಿಕೊಂಡು ಬಂದಿದ್ದೇವೆ. ಅಲ್ಲದೇ ಕಾಕತಿಯಲ್ಲೂ‌ ಅಲ್ಲಿನ ಹಿರಿಯರು ಆಚರಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡ ಈ ಬಗ್ಗೆ ತಕ್ಷಣವೇ ಕಾರ್ಯೋನ್ಮುಖವಾಗಿ ಕ್ರಮ ಕೈಗೊಳ್ಳಬೇಕು ಎಂದು ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಆಗ್ರಹಿಸಿದ್ದಾರೆ.

ನನಸಾಗದ ವಿಮಾನ ನಿಲ್ದಾಣ ನಾಮಕರಣ ಕನಸು : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮನ ಹೆಸರು ನಾಮಕರಣ ಮಾಡಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅದು ಈವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಅದು ಕೇವಲ ಕನಸಾಗಿಯೇ ಉಳಿದಿದೆ.

ಇದನ್ನೂ ಓದಿ : ಚನ್ನಮ್ಮಾಜಿ ದಿಟ್ಟತನ, ಸ್ವಾಭಿಮಾನ, ಛಲವನ್ನು ಮೈಗೂಡಿಸಿಕೊಳ್ಳಿ: ನಟ ರಮೇಶ್ ಅರವಿಂದ ಕರೆ

Last Updated : Nov 14, 2023, 10:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.