ETV Bharat / state

ಸುವರ್ಣಸೌಧದ ಹಾಲ್‌ನಲ್ಲಿ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್​ಗೆ ರಾಯರೆಡ್ಡಿ ಮನವಿ

author img

By ETV Bharat Karnataka Team

Published : Dec 11, 2023, 4:05 PM IST

Updated : Dec 11, 2023, 4:17 PM IST

Etv Bharatbasvaraj-rayareddi-letter-to-speaker-to-install-portraits-of-10-dignitaries-in-suvarna-vidhana-soudha
ಸುವರ್ಣಸೌಧದ ಹಾಲ್‌ನಲ್ಲಿ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್​ಗೆ ರಾಯರೆಡ್ಡಿ ಮನವಿ

ಅಸೆಂಬ್ಲಿ ಹಾಲ್‌ನಲ್ಲಿ ಸಾವರ್ಕರ್ ಫೋಟೋ ಹಾಕಿರೋದು ನನಗೂ ಇಷ್ಟ ಇಲ್ಲ. ಈಗ ತೆಗೆಯಿರಿ ಅಂದರೆ ವಿವಾದ ಆಗುತ್ತದೆ, ಅದಕ್ಕೆ ಸುಮ್ಮನಿದ್ದೇನೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ

ಬೆಳಗಾವಿ: ಸಾವರ್ಕರ್ ಫೋಟೋ ತೆರವಿನ ಕೂಗಿನ‌ ಮಧ್ಯೆ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸುವರ್ಣಸೌಧ ಸಭಾಭವನದಲ್ಲಿ ಗಣ್ಯರ ಭಾವಚಿತ್ರ ಸರಿಪಡಿಸುವ ಹಾಗೂ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್ ಯು ಟಿ ಖಾದರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಬಗ್ಗೆ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಸಭಾಭವನದಲ್ಲಿ ಬಸವೇಶ್ವರರ ಭಾವ ಚಿತ್ರವನ್ನು ಹಾಕಲಾಗಿದೆ. ಹಾಲಿ ಇರುವ ಭಾವ ಚಿತ್ರದ ಬದಲಾಗಿ ಮೂಲ ಕಿರೀಟ ಧರಿಸಿರುವ ಬಸವೇಶ್ವರರ ಭಾವ ಚಿತ್ರವನ್ನು ಅಳವಡಿಸುವಂತೆ ಕೋರಿದ್ದೇನೆ. ಮಹಾತ್ಮ ಗಾಂಧಿಯವರ ಫೋಟೋವನ್ನು ಕೆಳಗಡೆ ಹಾಕಲಾಗಿದ್ದು, ಭಾರತದ ಪಿತಾಮಹ ಎಂದು ಹೆಸರು ಪಡೆದಿರುವ ಇವರ ಫೋಟೋವನ್ನು ಬದಲಾವಣೆ ಮಾಡಿ ಶ್ರೀ ಬಸವೇಶ್ವರರ ಭಾವ ಚಿತ್ರದ ಪಕ್ಕದಲ್ಲಿಯೇ ಹಾಕಬೇಕು ಎಂದು ಕೋರಿದ್ದೇನೆ ಎಂದರು.

ಸುಭಾಷ್ ಚಂದ್ರಬೋಸ್ ಅವರು ದೋತಿ ಮತ್ತು ಶರ್ಟು ಧರಿಸಿರುವ ಫೋಟೋ ಹಾಕಲಾಗಿದೆ. ಇದು ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಿದೆ. ಅವರ ಭಾವ ಚಿತ್ರವನ್ನು ಬದಲಾಯಿಸಿ ಅವರು ಸೇನಾ ಸಮವಸ್ತ್ರದಲ್ಲಿ ಇರುವ ಭಾವಚಿತ್ರ ಅಳವಡಿಸಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಅವರ ನಿಜ ರೂಪದಲ್ಲಿರುವುದಿಲ್ಲ. ಆದ್ದರಿಂದ ಅವರ ಭಾವ ಚಿತ್ರವನ್ನು ಬದಲಾಯಿಸಿ ಸಂವಿಧಾನದ ಪುಸ್ತಕ ಹಿಡಿದಿರುವ ಭಾವ ಚಿತ್ರವನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.

ಭಾರತದ ಪ್ರಥಮ ರಾಷ್ಟ್ರಪತಿಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ್ ಭಾವಚಿತ್ರವನ್ನು ಸುವರ್ಣ ವಿಧಾನಸೌಧ ಬೆಳಗಾವಿ ಸಭಾ ಭವನದಲ್ಲಿ ಹಾಕಬೇಕು. ಪಂಡಿತ ಜವಹರಲಾಲ್ ನೆಹರು ಇವರು ಕೂಡ ಭಾರತ ಸಂವಿಧಾನ ರಚನಾ ಸಭೆಯ ಸದಸ್ಯರು ಮತ್ತು ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿ ಸುಮಾರು 17 ವರ್ಷಗಳ ಕಾಲ ಭಾರತದ ಆಡಳಿತವನ್ನು ನಡೆಸಿದವರು. ಇವರ ಭಾವಚಿತ್ರವನ್ನು ಸಭಾ ಭವನದಲ್ಲಿ ಹಾಕಬೇಕು ಎಂದು ಕೋರಲಾಗಿದೆ ಎಂದು ತಿಳಿಸಿದರು.

ಇಂದಿರಾ ಗಾಂಧಿ ಇವರು ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿ ದೇಶದಲ್ಲಿ ಸರ್ವ ಸಮಾನತೆ ತರಲು ಶ್ರಮಿಸಿದವರು. ಇವರು ಸಹ ಬಹಳ ವರ್ಷಗಳ ಕಾಲ ಭಾರತದ ಪ್ರಧಾನ ಮಂತ್ರಿಯಾಗಿ ಆಡಳಿತದಲ್ಲಿ ಒಳ್ಳೆಯ ಹೆಸರು ಮಾಡಿದವರು. ಇವರ ಭಾವಚಿತ್ರವನ್ನು ಸಭಾ ಭವನದಲ್ಲಿ ಹಾಕಬೇಕು. ಅಟಲ್ ಬಿಹಾರಿ ವಾಜಪೇಯಿ ಇವರು ಕೂಡ ಜನಪ್ರಿಯ ಪ್ರಧಾನ ಮಂತ್ರಿಯಾಗಿ ಸರ್ವ ಜನರ ಗೌರವಕ್ಕೆ ಪಾತ್ರರಾದವರು. ಪಕ್ಷಾತೀತ ವಾಗಿ ಕಾರ್ಯನಿರ್ವಹಿಸಿದವರು ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾದ ಅವರ ಭಾವಚಿತ್ರವನ್ನು ಸಭಾಭವನದಲ್ಲಿ ಹಾಕಬೇಕು ಎಂದು ಕೋರಿದರು.

ಎಸ್. ನಿಜಲಿಂಗಪ್ಪ ಕರ್ನಾಟಕ ರಾಜ್ಯದ ಏಕೀಕರಣದ ಪ್ರಥಮ ಮುಖ್ಯಮಂತ್ರಿಯಾಗಿದ್ದವರು, ಉತ್ತಮ ಕಾರ್ಯಗಳೊಂದಿಗೆ ಕಾರ್ಯನಿರ್ವಹಿಸಿದವರು. ಅವರ ಭಾವಚಿತ್ರವನ್ನು ಸಭಾ ಭವನದಲ್ಲಿ ಹಾಕಬೇಕು. ಜೊತೆಗೆ ಕೆಂಗಲ್ ಹನುಮಂತಯ್ಯ ಬೆಂಗಳೂರಿನಲ್ಲಿರುವ ವಿಧಾನ ಸೌಧವನ್ನು ಕಟ್ಟಿಸಿದವರು. ಉತ್ತಮವಾದ ಕಾರ್ಯವೈಖರಿಯಿಂದ ಪ್ರಾಮಾಣಿಕತೆಗೆ ಹೆಸರುವಾಸಿಯಾದರು. ಅವರ ಭಾವಚಿತ್ರವನ್ನು ಸಭಾಭವನದಲ್ಲಿ ಹಾಕಬೇಕು ಎಂದು ಕೋರಿದ್ದೇನೆ ಎಂದರು.

ಸದನ ಸಮಿತಿ ಮಾಡಿ ಜಾರಿಗೆ ತನ್ನಿ: ಈ ವಿಷಯವನ್ನು ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪ ಮಾಡಲು ಕೋರಿದ್ದೆ. ಆದರೆ ಸ್ಪೀಕರ್ ಕಲಾಪದಲ್ಲಿ ಪ್ರಸ್ತಾಪ ಮಾಡುವ ಬದಲಾಗಿ ಪತ್ರ ಬರೆಯಲು ಸಲಹೆ ನೀಡಿದ್ದರು‌. ಹೀಗಾಗಿ ಭಾವ ಚಿತ್ರಗಳನ್ನು ಸರ್ವರೂ ಒಪ್ಪುವಂತೆ ಹಾಕುವ ಅವಶ್ಯಕತೆ ಇದೆ. ಆದ್ದರಿಂದ ಈ ವಿಷಯವನ್ನು Business Advisory Committee ಸಭೆಯಲ್ಲಿ ಮಂಡಿಸಿ, ಚರ್ಚೆ ಮಾಡಿ ಅವಶ್ಯವಿದ್ದಲ್ಲಿ ಒಂದು ಸದನ ಸಮಿತಿ ಮಾಡಿ ಜಾರಿಗೆ ತರಬೇಕು. ಈ ಬಗ್ಗೆ ಕೂಡಲೇ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಕೋರಿದ್ದೇನೆ ಎಂದು ಹೇಳಿದರು.

ಸಾವರ್ಕರ್ ದೇಶಕ್ಕಾಗಿ ಹೋರಾಡಿದವರು: ಸಾವರ್ಕರ್ ಫೋಟೋ ಹಾಕಿರೋದು ನನಗೂ ಇಷ್ಟ ಇಲ್ಲ. ಈಗ ತೆಗೆಯಿರಿ ಅಂದರೆ ವಿವಾದ ಆಗುತ್ತದೆ, ಅದಕ್ಕೆ ಸುಮ್ಮನಿದ್ದೇನೆ. ಸಾವರ್ಕರ್ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದವರು. ಒಬ್ಬ ಮಹಾನ್ ದೇಶ ಭಕ್ತ. ಅಂಡಮಾನ್ ಜೈಲಿನಲ್ಲಿ ಇದ್ದು ಬಂದವರು. ನಾನು ಅವರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಸದನದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಪ್ರಸ್ತಾಪ ಬಂದರೆ ಚರ್ಚಿಸುತ್ತೇವೆ: ಡಿಸಿಎಂ ಡಿಕೆಶಿ

Last Updated :Dec 11, 2023, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.