ETV Bharat / state

ಸಭಾಪತಿ ಸ್ಥಾನದ ಮೇಲೆ ನಾವೂ ಕಣ್ಣು ಹಾಕಿದವರೇ, ಆದರೆ ಯೋಗ ಬೇಕಲ್ಲ: ಆಯನೂರು ಮಂಜುನಾಥ್

author img

By

Published : Dec 21, 2022, 3:14 PM IST

ನಾವೂ ಈ ಜಾಗದಲ್ಲಿ ಒಂದು ಕ್ಷಣವಾದರೂ ಕೂರಬೇಕು ಎಂದು ಕಣ್ಣು ಹಾಕಿದ್ದವರೇ.. ಆದರೆ ನಮಗೆ ಯೋಗ ಲಭಿಸಲಿಲ್ಲ ಎಂದು ವಿಧಾನ ಪರಿಷತ್​ ಹಿರಿಯ ಸದಸ್ಯ ಆಯನೂರು ಮಂಜುನಾಥ್​ ಹೇಳಿದರು.

ಸಭಾಪತಿ ಸ್ಥಾನದ ಮೇಲೆ ನಾವೂ ಕಣ್ಣು ಹಾಕಿದವರೇ, ಆದರೆ ಯೋಗ ಬೇಕಲ್ಲ: ಆಯನೂರು ಮಂಜುನಾಥ್
ayanur-manjunath-speech-in-council

ಬೆಳಗಾವಿ: ನಾವೂ ಸಭಾಪತಿ ಸ್ಥಾನದ ಮೇಲೆ ಕಣ್ಣು ಹಾಕಿದ್ದವರೇ.. ಆದರೆ, ಸೋಲಿಲ್ಲದೆ ಜನರ ಮನಸ್ಸು ಗೆದ್ದು ಬಂದ ನೀವು ಸಭಾಪತಿ ಸ್ಥಾನಕ್ಕೆ ಅರ್ಹ ಎಂದು ಹಿರಿಯ ಸದಸ್ಯ ಆಯನೂರು ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಅರ್ಹತೆಯಿದ್ದರೆ ಇದ್ದರೆ ಸಾಲದು, ಯೋಗವೂ ಇರಬೇಕು ಎಂದು ತಮಗೆ ಅವಕಾಶ ಸಿಗದಿರುವುದಕ್ಕೆ ವ್ಯಾಖ್ಯಾನವನ್ನೂ ಮಾಡಿದರು.

ವಿಧಾನ ಪರಿಷತ್ ಕಲಾಪದಲ್ಲಿ ನೂತನ ಸಭಾಪತಿ ಆಯ್ಕೆ ಪ್ರಕ್ರಿಯೆ ನಂತರ ಮಾತನಾಡಿದ ಅವರು, ನಾವೂ ಈ ಜಾಗದಲ್ಲಿ ಒಂದು ಕ್ಷಣವಾದರೂ ಕೂರಬೇಕು ಎಂದು ಕಣ್ಣುಹಾಕಿದ್ದವರೇ. ಆದರೆ ನಮಗೆ ಯೋಗ ಲಭಿಸಲಿಲ್ಲ. ಮಲ್ಕಾಪುರೆಗೆ ಮಾತ್ರ ಸ್ವಲ್ಪ ಮಟ್ಟಿನ ಅವಕಾಶ ಸಿಕ್ಕಿತು. ಆ ಸ್ಥಾನ ಗಳಿಸಬೇಕು ಎನ್ನುವ ಆಂತರಿಕ ಹಂಬಲ ಎಲ್ಲರಲ್ಲಿಯೂ ಇರಲಿದೆ. ವಿಧಾನಸಭೆ ಸದಸ್ಯರಿಗೆ ಹೇಗೆ ಸಚಿವ, ಸಿಎಂ ಆಗಬೇಕು ಎಂದು ಅಪೇಕ್ಷೆ ಇರುತ್ತದೆಯೋ ಹಾಗೆಯೇ ಪರಿಷತ್ ಸದಸ್ಯರಿಗೂ ಸಭಾಪತಿ ಸ್ಥಾನದ ಮೇಲೆ ಇರಲಿದೆ. ಇಂತಹ ಇಚ್ಛೆ ಇಲ್ಲದಿದ್ದರೆ ಅವನು ಬರಡು ರಾಜಕಾರಣಿಯಾಗಿರುತ್ತಾನೆ ಎಂದರು.

ಯೋಗ್ಯತೆಯಿದೆ ಯೋಗವಿಲ್ಲ.. ಹಂಗಾಮಿ ಸಭಾಪತಿಯಾಗಿದ್ದ ರಘುನಾಥ ಮಲ್ಕಾಪುರೆ ಇನ್ನೊಂದು ವರ್ಷ ಸಭಾಪತಿಯಾಗಿ ಇರಬೇಕಿತ್ತು. ಮಲ್ಕಾಪುರೆಗೆ ಅರ್ಧಂಬರ್ಧನಾದರೂ ಯೋಗ ಇತ್ತು. ಹಾಗಾಗಿ ಹಂಗಾಮಿ ಸಭಾಪತಿಯಾಗಿಯಾದ್ದರು. ಆದರೆ, ನಮಗೆ ಅದು ಇಲ್ಲವಲ್ಲ ಎಂದು ಆಯನೂರು ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ನೂತನ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸಿ ನೀವು ಮಲಗಿದವರನ್ನು ಎಬ್ಬಿಸುತ್ತಿದ್ದೀರಿ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಆಯನೂರು, ಈಗ ಎದ್ದರೂ ಪ್ರಯೋಜನವಿಲ್ಲವಲ್ಲ. ನೀವು ಪೀಠದಲ್ಲಿ ಬಂದು ಕುಳಿತಾಗಿದೆ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ಪರಿಷತ್ ಅಸ್ತಿತ್ವ ಪ್ರಶ್ನೆಗೆ ಅಸಮಾಧಾನ.. ಕಳೆದ ಬಾರಿ ಆಕಸ್ಮಿಕ ಘಟನೆಯಾಯಿತು. ಆಗ ಈ ಸದನ ಇರಬೇಕಾ ಎಂದರು. ಒಂದೂವರೆ ಶತಮಾನದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ಆದ ಮಾತ್ರಕ್ಕೆ ಈ ಸದನ ಇರಬೇಕಾ ಎನ್ನುವುದು ಸರಿಯಲ್ಲ. ತಪ್ಪಾಗಿರಬಹುದು, ಆದರೆ ಸರಿಪಡಿಸಿಕೊಂಡು ಹೋಗಬೇಕು ಎಂದು ಪರಿಷತ್ ಅಗತ್ಯತೆ ಪ್ರಶ್ನಿಸಿದ್ದ ನಡೆಯನ್ನು ಟೀಕಿಸಿದರು. ಇಲ್ಲಿಯ ಸದನದ ಸದಸ್ಯರಾಗಿದ್ದವರೂ ಕೆಲವರು ಶಾಸಕರಾಗಿ ವಿಧಾನಸಭೆಗೆ ಹೋಗುತ್ತಾರೆ ನಂತರ ಅಲ್ಲಿ ಅವರೇ ಪರಿಷತ್ ಅಗತ್ಯವೇನು ಎನ್ನುತ್ತಾರೆ. ಮುಖ್ಯಮಂತ್ರಿಗಳು ಆಗುವ ವ್ಯಕ್ತಿಗಳೇ ಇಲ್ಲಿಂದ ಹೋಗಿದ್ದಾರೆ. ಆದರೂ ಕೆಲವರು ಮೇಲ್ಮನೆ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುವುದು ಖಂಡನೀಯ ಎಂದು ಪರಿಷತ್ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಶ್ನೋತ್ತರ ಅವಧಿ ಸಮಯಕ್ಕೆ ಕಡಿವಾಣ ಹಾಕಿ.. ಬೋಜೇಗೌಡರು, ಮರಿತಿಬ್ಬೇಗೌಡರನ್ನು ನಿಯಂತ್ರಿಸಲು ನೀವೇ ಬೇಕು. ಎಲ್ಲರನ್ನೂ ನಿಯಂತ್ರಿಸುವ ಶಕ್ತಿ ನಿಮಗಿದೆ. ರಾಜ್ಯಸಭೆಯಲ್ಲಿ 11 ಗಂಟೆಗೆ ಶುರುವಾಗಿ 12ಕ್ಕೆ ಪ್ರಶ್ನೋತ್ತರ ಮುಕ್ತಾಯವಾಗಲಿದೆ. ಸಚಿವರು ಇನ್ನು ಉತ್ತರ ಕೊಡುತ್ತಲೇ ಇರುತ್ತಾರೆ. ಆದರೂ 12 ಆಗುತ್ತಿದ್ದಂತೆ ಪ್ರಶ್ನೋತ್ತರ ಕಲಾಪ ಮುಕ್ತಾಯ ಎಂದು ರಾಜ್ಯಸಭೆಯಲ್ಲಿ ಪ್ರಕಟಿಸಲಾಗುತ್ತದೆ. ಪ್ರಶ್ನೋತ್ತರದಲ್ಲಿ ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿಯುವುದು, ಪೂರಕ ಪ್ರಶ್ನೆ, ಮಧ್ಯಪ್ರವೇಶಕ್ಕೆ ಕಡಿವಾಣ ಹಾಕಬೇಕು. ಮಂತ್ರಿಗಳೂ ಸುದೀರ್ಘ ಉತ್ತರ ಕೊಡದೆ ಪ್ರಶ್ನೆಗಷ್ಟೇ ನೇರವಾಗಿ ಉತ್ತರಿಸಬೇಕು, ಇಲಾಖೆಯ ವೈಭವವನ್ನು ಹೇಳಬಾರದು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಹಿರಿಯರ ಮನೆಯಲ್ಲಿ ಹೊರಟ್ಟಿ ಗುಣಗಾನ: ಪಕ್ಷಾತೀತವಾಗಿ ಹೊಗಳಿದ ಸದಸ್ಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.