ETV Bharat / state

4,244 ಅಂಗನವಾಡಿ ತೆರೆಯಲು ಆಡಳಿತಾತ್ಮಕ ಅನುಮೋದನೆ; ಕಟ್ಟಡ ಗುರುತಿಸಲು ಸೂಚನೆ

author img

By

Published : Dec 23, 2022, 4:40 PM IST

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ತೆರೆಯಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

4244 ಅಂಗನವಾಡಿ ತೆರೆಯಲು ಆಡಳಿತಾತ್ಮಕ ಅನುಮೋದನೆ; ಕಟ್ಟಡ ಗುರುತಿಸಲು ಸೂಚನೆ
administrative-approval-for-opening-4244-anganwadis-to-identify-the-building

ಬೆಂಗಳೂರು : ಕಡಿಮೆ ಆದಾಯದ ಜನಸಂಖ್ಯೆ ಹೆಚ್ಚಾಗಿ ವಾಸಿಸುವ ಭೂಮಿರಹಿತ ಕಾರ್ಮಿಕರನ್ನು ಒಳಗೊಂಡಿರುವ ಗ್ರಾಮಾಂತರ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ 4244 ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಡಿಮೆ ಆದಾಯದ ಜನಸಂಖ್ಯೆ, ವಲಸೆ, ಭೂ ರಹಿತ ಕಾರ್ಮಿಕರನ್ನು ಒಳಗೊಂಡಿರುವ ಗ್ರಾಮಾಂತರ ಪ್ರದೇಶದಲ್ಲಿ 1655, ನಗರ ಪ್ರದೇಶಗಳಲ್ಲಿ 2589 ಸೇರಿದಂತೆ ಒಟ್ಟು 4244 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಹಲವು ಜಿಲ್ಲೆಗಳಿಂದ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು 3538 ಬೇಡಿಕೆಗಳನ್ನು ಸ್ವೀಕರಿಸಲಾಗಿದೆ. ಇವುಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಅಂಗನವಾಡಿ ಕೇಂದ್ರಗಳನ್ನು ತೆರೆಯಬೇಕಾದರೆ ಜಾಗದ ಲಭ್ಯತೆ ಇರಬೇಕು. ಶಾಲಾ ಕಟ್ಟಡ, ಸಮುದಾಯ ಭವನ ಮತ್ತಿತರ ಕಡೆ ತೆರೆಯಲಾಗುತ್ತದೆ ಎಂದು ಹೇಳಿದರು.

ಹೊಸ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಜಿಲ್ಲೆಗಳ ಉಪನಿರ್ದೇಶಕರಿಗೆ ಕಟ್ಟಡಗಳನ್ನು ಗುರುತಿಸಲು ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಜಾಗದ ಲಭ್ಯತೆ ಇಲ್ಲದಿದ್ದರೆ ಶಾಲಾ ಕಟ್ಟಡ, ಸಮುದಾಯ ಭವನ, ಯುವಕ/ಯುವತಿ ಮಂಡಳಿ ಅಥವಾ ಬಾಡಿಗೆ ಕಟ್ಟಡಗಳನ್ನು ಪಡೆಯಲು ಸೂಚಿಸಲಾಗಿದೆ. ಇವುಗಳಲ್ಲಿ ಕಡ್ಡಾಯವಾಗಿ ಮೂಲಭೂತ ಸೌಲಭ್ಯಗಳು ಇರಬೇಕು. ಅಲ್ಲದೆ ಅಂಗನವಾಡಿ ಕೇಂದ್ರಗಳಿಗೆ ಬರುವ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡುತ್ತಿರುವ ಆಹಾರವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಕೆಲವು ನ್ಯಾಯಾಲಯದ ತೀರ್ಪಿನಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದನ್ನು ಖಾಸಗಿಯವರಿಗೆ ಇಲ್ಲವೇ ಎನ್ ಜಿಒಗಳಿಗೆ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ತೆರೆಯಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಅವರು, ಇಂದು ಪ್ರಶ್ನೋತ್ತರ ವೇಳೆ ದೊಡ್ಡಗೌಡರ ಮಹಂತೇಶ ಬಸವಂತರಾಯ ಅವರ ಪ್ರಶ್ನೆಗೆ ಉತ್ತರಿಸಿದರು.

ಕೇಂದ್ರ ಸರ್ಕಾರ ಯಾವ ನಿರ್ದೇಶನ ನೀಡುತ್ತದೆಯೋ ಅದರ ಪ್ರಕಾರ ನಾವು ಅಧಿಕಾರಿಗಳ ನೇಮಕಾತಿ ಹಾಗೂ ಕಚೇರಿಗಳನ್ನು ತೆರೆಯಬೇಕು. ದೇಶದಲ್ಲಿ ಏಕರೂಪ ನೀತಿ ಇರುವುದರಿಂದ ರಾಜ್ಯ ಸರ್ಕಾರ ಇದರಲ್ಲಿ ಮಧ್ಯಪ್ರವೇಶ ಮಾಡಲು ಬರುವುದಿಲ್ಲ ಎಂದು ಹೇಳಿದರು. ಕಿತ್ತೂರು ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮತ್ತು ಹುದ್ದೆಗಳ ಭರ್ತಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಐಸಿಡಿಎಸ್ ಯೋಜನೆಯ 3 ನೇ ಹಂತದ ವಿಸ್ತರಣೆಯಲ್ಲಿ ನಮ್ಮ ರಾಜ್ಯ ಸೇರಿದಂತೆ ಹೊಸ ಶಿಶು ಅಭಿವೃದ್ಧಿ ಯೋಜನೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಒಳಚರಂಡಿ ನಿರ್ಮಿಸಲು ಕ್ರಮ : ಕಲಬುರಗಿ ಜಿಲ್ಲೆ ಚಿಂಚೋಳಿ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಿಸಲು ಸಂಪೂರ್ಣ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಶಾಸಕ ಅವಿನಾಶ್ ಉಮೇಶ್ ಜಾಧವ್ ಅವರ ಪ್ರಶ್ನೆಗೆ ಉತ್ತರಿಸಿದರು. ಚಿಂಚೋಳಿ ಮತ್ತು ಚಂದಾಪುರದಲ್ಲಿ ಒಳಚರಂಡಿ ನಿರ್ಮಿಸಬೇಕೆಂದು ತೀರ್ಮಾನಿಸಲಾಗಿದೆ. ಈಗಾಗಲೇ 50 ಕೋಟಿ ರೂ. ಅನುದಾನದಲ್ಲಿ ಎಫ್ ಎಸ್ ಎಸ್ ಎಂ ಘಟಕ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. 9 ಕೆಎಲ್ ಡಿ ಸಾಮರ್ಥ್ಯ ಎಫ್ ಎಸ್ ಎಸ್ ಎಂ ಘಟಕವನ್ನು 3.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಲು ಟೆಂಡರ್ ಆಹ್ವಾನಿಸುವುದಾಗಿ ಮಾಹಿತಿ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸೂರತ್ಕಲ್ ನಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದರು.
ಅಂದಾಜು 55.10 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 3.56 ಎಕರೆ ಜಮೀನನ್ನು ಮೀಸಲಿಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ 82 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಇದು ವಿಳಂಬವಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ರಾಮನಗರ ಜಿಲ್ಲೆಯ 30 ಮಾದರಿ ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆದ ಟೊಯೊಟಾ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.