ETV Bharat / state

ಕಾಡು ಪ್ರಾಣಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ₹15 ಲಕ್ಷ ಪರಿಹಾರ: ಸಚಿವ ಅಶೋಕ್

author img

By

Published : Dec 27, 2022, 3:49 PM IST

ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟವರಿಗೆ ತುರ್ತಾಗಿ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವ ಆರ್​.ಅಶೋಕ್​ ವಿಧಾಸಭೆಯಲ್ಲಿ ತಿಳಿಸಿದರು.

Assembly Question hour
ವಿಧಾನಸಭೆ ಪ್ರಶ್ನೋತ್ತರ ವೇಳೆ

ಬೆಳಗಾವಿ/ಬೆಂಗಳೂರು: ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ರೂಪಾಯಿ ಪರಿಹಾರವನ್ನು ತುರ್ತಾಗಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಗೆ ಮಾಹಿತಿ ನೀಡಿದರು. ಪ್ರಶ್ನೋತ್ತರ ವೇಳೆ ಸದಸ್ಯ ಅಶ್ವಿನ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಕೂಡಲೇ 5 ಲಕ್ಷ ರೂ. ಪರಿಹಾರ ನೀಡಿ ಮರಣೋತ್ತರ ಪರೀಕ್ಷೆ ಹಾಗೂ ಎಫ್​ಎಸ್​ಎಲ್ ವರದಿ ಬಂದ ತಕ್ಷಣ ಉಳಿದ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಕಾಡು ಪ್ರಾಣಿಗಳು ಹಾಗೂ ಮಾನವನ ನಡುವಿನ ಸಂಘರ್ಷ ಕಡಿಮೆ ಮಾಡಲು ಕಾಡಂಚಿನ ಪ್ರದೇಶಗಳಲ್ಲಿ ಆನೆ, ಚಿರತೆ ಮತ್ತಿತರ ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗದಂತೆ ತಂತಿ ಬೇಲಿ, ಹಳ್ಳ ತೋಡುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಟೀ ನರಸೀಪುರ ಬಳಿ ಕಾಡು ಪ್ರಾಣಿಗಳ ದಾಳಿಯಿಂದ ನಾಲ್ವರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಈಗಾಗಲೇ ಪರಿಹಾರ ಕಲ್ಪಿಸಲಾಗಿದೆ. ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ ಕೊಡುವ ಆದೇಶಕ್ಕಿಂತ ಮುನ್ನ, ಎಷ್ಟು ಅವಧಿಯವರಿಗೆ ನೀಡಬೇಕು ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದರು.

ಲಾರಿಗಳ ಸಂಚಾರಕ್ಕೆ ಅನುವು: ಗ್ರಾಮಾಂತರ ಪ್ರದೇಶಗಳ ರಸ್ತೆ ಸಾಮರ್ಥ್ಯಕ್ಕೆ ಅನುಗುಣವಾಗಿ ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಜೆಡಿಎಸ್ ಸದಸ್ಯ ಬಂಡೆಪ್ಪ ಕಾಶಂಪೂರ್ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದರು. ರಸ್ತೆಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕವಿರುವ ಲಾರಿಗಳ ಸಂಚಾರದಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ.

ಅದರಲ್ಲೂ ಸಿಮೆಂಟ್, ಮರಳು ತುಂಬಿದ ಲಾರಿಗಳನ್ನು ರಸ್ತೆಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಚರಿಸಲು ಅವಕಾಶ ಮಾಡಿಕೊಡುವುದು ಅಗತ್ಯ. ಸಾರಿಗೆ ಇಲಾಖೆ ಜೊತೆ ಚರ್ಚಿಸಿ ಅತಿ ಹೆಚ್ಚು ಸಾಮರ್ಥ್ಯದ ಲಾರಿಗಳನ್ನು ಕಡಿಮೆ ಸಾಮರ್ಥ್ಯದ ರಸ್ತೆಗಳಲ್ಲಿ ಸಂಚರಿಸದಂತೆ ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ರಸ್ತೆಗಳನ್ನು ಅಗೆದು ಪೈಪ್​ಲೇನ್‌ಗಳನ್ನು ಅಳವಡಿಸುವಾಗಲೂ ವಾಹನಗಳ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು.

ಜಲಮಿಷನ್ ಯೋಜನೆಯಡಿ ಪೈಪ್​ಲೇನ್ ಅಳವಡಿಸಲು ಅಗೆದ ರಸ್ತೆಗಳನ್ನು ಕೂಡಲೇ ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡುವ ಷರತ್ತನ್ನು ವಿಧಿಸಲಾಗಿದೆ ಎಂದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲ 108 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗುವುದು. ಈಗಾಗಲೇ 88 ಹಳ್ಳಿಗಳಿಗೆ ನಲ್ಲಿಗಳ ಮೂಲಕ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. 21 ಹಳ್ಳಿಗಳಲ್ಲಿ ಈಗಾಗಲೇ ನಲ್ಲಿ ನೀರು ಕಲ್ಪಿಸುವ ಟೆಂಡರ್ ಪೂರ್ಣಗೊಳಿಸಲಾಗಿದೆ. ಇದರಿಂದ 28,662 ಮನೆಗಳಿಗೆ ನಲ್ಲಿ ನೀರಿನ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸದನ ಎಷ್ಟು ದಿನ ನಡೆಯುತ್ತೆ ಅನ್ನೋ ಕಾಮನ್ ಸೆನ್ಸ್ ಇಲ್ಲವೇ: ಅಧಿಕಾರಿಗಳ ವಿರುದ್ಧ ಸಭಾಪತಿ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.