ETV Bharat / state

ಮನೆಯಿಂದ ಮತದಾನ ಮಾಡಿದ ವಯೋವೃದ್ಧರು, ವಿಶೇಷ ಚೇತನರು: ಶೇ. 97 ರಷ್ಟು ವೋಟಿಂಗ್​

author img

By

Published : May 8, 2023, 10:08 PM IST

80 ವರ್ಷಕ್ಕಿಂತ ಮೇಲ್ಪಟ್ಟವರು ಶೇ. 94.85 ರಷ್ಟು ಮತ್ತು ವಿಶೇಷ ಚೇತನರಿಂದ ಶೇ.97.57 ರಷ್ಟು ಜನರು ಮನೆಯಿಂದಲೇ ಮತದಾನ ಮಾಡಿದ್ದಾರೆ.

voting-from-home-in-state-assembly-election
ಮನೆಯಿಂದ ಮತದಾನ ಮಾಡಿದವರೆಷ್ಟು ಜನ ಗೊತ್ತಾ? ಇಲ್ಲಿದೆ ಅಂಕಿ ಅಂಶ

ಬೆಂಗಳೂರು: ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮತ್ತು ಶೇ. 40ಕ್ಕಿಂತ ಹೆಚ್ಚು ವೈಕಲ್ಯ ಹೊಂದಿದ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡ 99,529 ಮತದಾರರ ಪೈಕಿ 94,931 ಮತದಾರರು ಮತದಾನ ಮಾಡಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟವರು 80,250 ನೋಂದಾಯಿಸಿಕೊಂಡಿದ್ದು, ಈ ಪೈಕಿ 76,120 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು ಶೇ.94.85 ರಷ್ಟು ಮತದಾನವಾಗಿದೆ.

ಇನ್ನು 19,279 ವಿಕಲಚೇತನ ಮತದಾರರು ನೋಂದಾಯಿಸಿಕೊಂಡಿದ್ದು, 18,811 ಮತದಾರರು ಮತ ಚಲಾಯಿಸಿದ್ದಾರೆ. ಶೇ.97.57 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು, ಸೇವಾ ಮತದಾರರು 15,328 ಮಂದಿ ನೋಂದಾಯಿಸಿಕೊಂಡಿದ್ದು, 10,066 ಮತದಾರರು ಮತದಾನ ಮಾಡಿದ್ದಾರೆ. ಒಟ್ಟು ಶೇ.65.67 ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದೆ.

ಮನೆಯಿಂದಲೇ ಮತದಾನ ಮಾಡಿದ ಬೆಳಗಾವಿ ಜಿಲ್ಲೆ 8636 ಮತದಾರರು: ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ 80 ವರ್ಷ ಮೇಲ್ಪಟ್ಟ 6975 ಹಿರಿಯ ನಾಗರಿಕರು ಮತ್ತು 1661 ವಿಶೇಷ ಚೇತನರು ಸೇರಿದಂತೆ ಒಟ್ಟು 8636 ಜನ ಮತದಾರರು ತಮ್ಮ ಮನೆಯಿಂದಲೇ ಮತ ಚಲಾಯಿಸುವ ಮೂಲಕ ದಾಖಲೆ ಬರೆದಿದ್ದಾರೆ. ಜಿಲ್ಲೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ 7362 ಮತದಾರರು ಹಾಗೂ 1708 ವಿಶೇಷ ಚೇತನರು ಸೇರಿದಂತೆ ಒಟ್ಟು 9070 ಜನ ಮನೆಯಿಂದಲೇ ಮತ ಚಲಾಯಿಸಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು.

ಮತದಾನ ಮಾಡಿ ಪ್ರೇರಣೆಯಾದ 103 ವರ್ಷದ ವೃದ್ಧ: ಏ. 29ರಿಂದ ಪ್ರಾರಂಭವಾದ ಮತದಾನ ಮೇ 2ರವರೆಗೆ ಆಯಾ ಮತಕ್ಷೇತ್ರದಲ್ಲಿ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ ಪೆಟ್ಟಿಗೆ, ಬ್ಯಾಲೆಟ್ ಪೇಪರ್ ಸಹಿತ ನೋಂದಾಯಿತ ಮತದಾರರ ಮನೆಗೆ ತೆರಳಿ ಮತದಾನ ಮಾಡಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ 103 ವರ್ಷ 4 ತಿಂಗಳ ವಯೋವೃದ್ಧ ಮಹದೇವ ಮಹಾಲಿಂಗ ಮಾಳಿ ಸೇರಿದಂತೆ ಕೆಲ ಶತಾಯುಷಿಗಳು ಸಹ ಮನೆಯಿಂದಲೇ ಮತದಾನ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

ಮಹದೇವ ಮಾಳಿ ಅವರ ಮತದಾನ ಪ್ರಜ್ಞೆಗೆ ಮೆಚ್ಚಿ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದರು. ಒಟ್ಟಾರೆ ಚುನಾವಣಾ ಆಯೋಗ ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಹಿರಿಯ ನಾಗರಿಕರು ಮತ್ತು‌ ವಿಶೇಷಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದಲೇ ಮತದಾನ ಮಾಡಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಇದನ್ನೂ ಓದಿ:ವಿಧಾನಸಭಾ ಚುನಾವಣೆಗೆ ಬೆಂಗಳೂರು ಪೊಲೀಸರ ಸಕಲ ಸಿದ್ಧತೆ: ನಿರ್ಭೀತ ಮತದಾನಕ್ಕೆ ವೇದಿಕೆ ಸಿದ್ಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.