ETV Bharat / state

ವಿಧಾನಸಭಾ ಚುನಾವಣೆಗೆ ಬೆಂಗಳೂರು ಪೊಲೀಸರ ಸಕಲ ಸಿದ್ಧತೆ: ನಿರ್ಭೀತ ಮತದಾನಕ್ಕೆ ವೇದಿಕೆ ಸಿದ್ಧ

author img

By

Published : May 8, 2023, 5:38 PM IST

ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಸುಗಮವಾಗಿ ಮತದಾನ ಪ್ರಕ್ರಿಯೆ ನಡೆಯುವಂತೆ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

bengaluru-police-made-all-preparations-for-the-assembly-elections
ವಿಧಾನಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ಪೊಲೀಸರ ಸಕಲ ಸಿದ್ಧತೆ

ಬೆಂಗಳೂರು: ವಿಧಾನಸಭಾ ಚುನಾವಣೆಯಂದು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ವಿಭಾಗಗಳ 28 ಕ್ಷೇತ್ರಗಳಲ್ಲಿ ಸುಗಮವಾಗಿ ಮತದಾನ ಪ್ರಕ್ರಿಯೆ ನಡೆಯುವಂತೆ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಸಿ. ಹೆಚ್. ಪ್ರತಾಪ್ ರೆಡ್ಡಿ, ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 24 ಜನ ಡಿಸಿಪಿಗಳು, 67 ಎಸಿಪಿ, 248 ಇನ್ಸ್ಪೆಕ್ಟರ್​ಗಳು, 881 ಪಿಎಸ್ಐ, 1020 ಎಎಸ್ಐ, 9971 ಕಾನ್ಸ್‌ಟೇಬಲ್ಸ್, 2565 ಜನ ಗೃಹ ರಕ್ಷಕದಳದ ಸಿಬ್ಬಂದಿ, ಕೇಂದ್ರೀಯ ಭದ್ರತಾ ಪಡೆ ಸಿಬ್ಬಂದಿ ಭದ್ರತೆಗಾಗಿ ನಿಯೋಜನೆಯಾಗಲಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 28 ಕ್ಷೇತ್ರಗಳಲ್ಲಿ 2509 ಮತಗಟ್ಟೆ ಕೇಂದ್ರಗಳಿದ್ದು, 6009 ಸಾಮಾನ್ಯ ಹಾಗೂ 1907 ಸೂಕ್ಷ್ಮ ಮತಗಟ್ಟೆಗಳ ಸಹಿತ 7916 ಮತಗಟ್ಟೆಗಳಿವೆ.

ಗೂಂಡಾ ಕಾಯ್ದೆಯಡಿ 28 ಮಂದಿಯ ಬಂಧನ‌: ನಗರದ 8 ವಿಭಾಗಗಳ ವ್ಯಾಪ್ತಿಯಲ್ಲಿ 123 ಚೆಕ್ ಪೋಸ್ಟ್ ಗಳನ್ನು ಅಳವಡಿಸಲಾಗಿದೆ. 131 ಪ್ರೈಯಿಂಗ್ ಸ್ಕ್ಯಾಡ್​ಗಳು ಈಗಾಗಲೇ ಕಾರ್ಯಾಚರಣೆಯಲ್ಲಿವೆ. 8.05.2023 ರಿಂದ 10.05.2023ರ ಮಧ್ಯ ರಾತ್ರಿಯವರೆಗೆ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಬರುವ ರೌಡಿಪಟ್ಟಿಯಲ್ಲಿರುವ ಕ್ರಿಮಿನಲ್ ಹಿನ್ನೆಲೆಯುಳ್ಳ 7493 ಜನರಿಂದ ಭದ್ರತಾ ಕಾಯ್ದೆ ಅಡಿಯಲ್ಲಿ ಶಾಂತಿಭಂಗವುಂಟು ಮಾಡದಂತೆ ಮುಚ್ಚಳಿಕೆ ಪಡೆಯಲಾಗಿದೆ.

ಇನ್ನು 28 ಜನರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. 460 ಕಡೆಗಳಲ್ಲಿ ಸಶಸ್ತ್ರ ತುಕಡಿಗಳೊಂದಿಗೆ ಪೊಲೀಸ್ ಪಥ ಸಂಚಲನ ನಡೆಸಲಾಗಿದೆ. 7761 ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಜಮಾ ಮಾಡಲಾಗಿದೆ. ವಾರಂಟ್ ಜಾರಿಗೆ ವಿಶೇಷ ಕಾರ್ಯಾಚರಣೆ ಕೈಗೊಂಡು 4819 ವಾರಂಟ್​ಗಳನ್ನು ಜಾರಿಗೊಳಿಸಲಾಗಿದೆ.

ಅರವತ್ನಾಲ್ಕು ಕೋಟಿ ಮೌಲ್ಯದ ಸಂಪತ್ತು ವಶಕ್ಕೆ: ಬೆಂಗಳೂರು ನಗರ ಪೊಲೀಸರು ಒಟ್ಟು 10,93,97,005/- ನಗದು ಹಣ, 28.5 ಕೆಜಿಯಷ್ಟು ಬಂಗಾರದ ವಡವೆಗಳು, 140 ಕೆ ಜಿ ಬೆಳ್ಳಿಯ ಆಭರಣ ಹಾಗೂ ರೂ.9,72,87,071/- ಮೌಲ್ಯದ ಉಚಿತ ಉಡುಗೊರೆಗಳು ಹಾಗೂ 29,51,54,780/- ಮೌಲ್ಯದ ಮಾದಕ ಪದಾರ್ಥ ಸೇರಿದಂತೆ ಒಟ್ಟು 64 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೇ 10 ರಂದು ಮತದಾನ, 13ಕ್ಕೆ ಫಲಿತಾಂಶ.. ಮೇ 10 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ರಾಜ್ಯದ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನ ನಡೆದು 2 ದಿನಗಳ ಬಳಿಕ ಅಂದ್ರೆ ಮೇ 13 ರಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಹೊರಬೀಳಲಿದೆ. ಈ ಬಾರಿಯ ಚುನಾವಣೆಯ ಎಲ್ಲಾ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್​ ಮತ್ತು ಜಾತ್ಯತೀತ ಜನತಾ ದಳ (ಜೆಡಿಎಸ್​), ಆಪ್​ ಸೇರಿದಂತೆ ಇನ್ನಿತರ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳ ಹಲವು ಕಸರತ್ತು ನಡೆಸಿದ್ದಾರೆ. ಅಂತಿಮವಾಗಿ ಮತದಾರ ಪ್ರಭುಗಳು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಮೇ 13ರ ವರೆಗೆ ಕಾದು ನೋಡಬೇಕಿದೆ.

ಇದನ್ನೂ ಓದಿ:ವಿಧಾನಸಭಾ ಚುನಾವಣೆ: ಭದ್ರತೆಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.