ETV Bharat / state

ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಹೈಕೋರ್ಟ್ ಮೊರೆ ಹೋದ ಡಿಕೆಶಿ

author img

By

Published : May 26, 2023, 1:25 PM IST

DK Sivakumar moved HC
ಪ್ರಕರಣಗಳ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿ.ಕೆ. ಶಿವಕುಮಾರ್

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್​ ಕಳೆದ ವರ್ಷ ಜನವರಿಯಲ್ಲಿ ಕೋವಿಡ್ ಸಮಯದಲ್ಲೇ ಪಾದಯಾತ್ರೆ ಕೈಗೊಂಡಿತ್ತು.

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಪಾದಯಾತ್ರೆಯಲ್ಲಿ ಕೋವಿಡ್ 19 ನಿಯಮಗಳ ಉಲ್ಲಂಘನೆ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣಗಳ ರದ್ದು ಕೋರಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ 8 ಪ್ರಕರಣಗಳನ್ನು ರದ್ದು ಮಾಡಬೇಕು ಎಂದು ಕೋರಿ​ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಗಳಿಗೆ ಸಂಬಂಧಿಸಿದಂತೆ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸೂಚಿಸಿ ವಿಚಾರಣೆಯನ್ನು ಒಂದು ವಾರ ಮುಂದೂಡಿದೆ.

ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ಹಾಜರಾಗಿ ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸಬೇಕಾಗಿದ್ದು, ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಒಂದು ವಾರ ಮಾತ್ರ ಮುಂದೂಡಲಾಗುವುದು. ಅಷ್ಟರಲ್ಲಿ ಎಲ್ಲ ಆಕ್ಷೇಪಣೆಗಳನ್ನು ಸರಿಪಡಿಸಬೇಕು ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ 2022 ರ ಜನವರಿ 9 ರಿಂದ 10 ದಿನ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ರಾಮನಗರ ತಹಶೀಲ್ದಾರ್ ಸೇರಿದಂತೆ ಸರ್ಕಾರದ ಅಧಿಕಾರಿಗಳು ರಾಮನಗರ ಗ್ರಾಮೀಣ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ದೂರು ಸಲ್ಲಿಸಿದ್ದರು. ಈ ಸಂಬಂಧ ಫೆಬ್ರವರಿ 9ರಂದು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜನ ಪ್ರತಿನಿಧಿಗಳಿಗೆ ಸಂಬಂಧಿಸಿದ್ದ ಪ್ರಕರಣವಾದ್ದರಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಪ್ರಕರಣಗಳನ್ನು ರದ್ದು ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ರಾಮನಗರ ಗ್ರಾಮೀಣ ಠಾಣೆಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯಿದೆಯ 5 (3) ಎ, 143, 149, 290, 336, 141 ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ.ಸುರೇಶ್, ಮಾಜಿ ಸಂಸದ ಹಾಗೂ ಇತ್ತೀಚೆಗೆ ದಿವಂಗತರಾಗಿರುವ ಧ್ರುವನಾರಾಯಣ್, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಅಭಯ್ ಚಂದ್ರ ಜೈನ್, ಶರಣ ಪ್ರಕಾಶ್ ಪಾಟೀಲ್, ಕಿಮ್ಮನೆ ರತ್ನಾಕರ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಪುಟ್ಟರಂಗ ಶೆಟ್ಟಿ, ಎಚ್ ಆಂಜನೇಯ, ಶಾಸಕಿ ಅಂಜಲಿ ನಿಂಬಾಳ್ಕರ್, ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಸಲೀಂ ಅಹ್ಮದ್, ರವಿ ಎಸ್, ಮುಖಂಡರಾದ ಕೆ.ವೈ.ನಂಜೇಗೌಡ, ಬಿ.ಆರ್.ಯಾವಗಲ್, ಕೆ.ರಾಜು, ಡಾ. ರವೀಂದ್ರ, ಕುಸುಮಾ, ಮೊಹಮ್ಮದ್ ನಲಪಾಡ್, ಇಕ್ಬಾಲ್ ಹುಸೇನ್, ಕೆ.ಸಿ.ವೀರೇಗೌಡ, ಬಿ.ಪಿ.ಮಂಜೇಗೌಡ, ಪಾರ್ವತಮ್ಮ ಅವರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ವಿವಿಧ ಪ್ರಕರಣಗಳ ಸಂಬಂಧ ಸಿಟಿ ಸಿವಿಲ್ ಕೋರ್ಟ್​​ನಲ್ಲಿ ಇಂದು ವಿಚಾರಣೆ ನಡೆದಿದೆ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.