ETV Bharat / state

ಲಸಿಕೆ ಕಣ್ಣಾಮುಚ್ಚಾಲೆಗೆ ರಾಜ್ಯ ಸುಸ್ತು.. ಜನರಿಂದ ಹಿಡಿಶಾಪ ಹಾಕಿಸಿಕೊಂಡರೂ ಕೇಂದ್ರದ ವಿರುದ್ಧ ದನಿಯೆತ್ತದ ರಾಜ್ಯ ನಾಯಕರು!

author img

By

Published : May 13, 2021, 3:56 PM IST

Updated : May 13, 2021, 4:04 PM IST

ಕೋವಿಡ್​ ವ್ಯಾಕ್ಸಿನ್​ ವಿಚಾರ ಸದ್ಯ ದೇಶಾದ್ಯಂತ ಸದ್ದು ಮಾಡ್ತಿದೆ. ಎಲ್ಲೆಡೆ ವ್ಯಾಕ್ಸಿನ್​, ವೈದ್ಯಕೀಯ ಆಮ್ಲಜನಕದ ಕೊರತೆ ಎದ್ದು ಕಾಣುತ್ತಿದ್ದು, ಹಲವು ಅವಾಂತರಗಳಿಗೆ ಕಾರಣವಾಗ್ತಿದೆ. ಕರ್ನಾಟಕದಲ್ಲೂ ಪರಿಸ್ಥಿತಿ ಹದಗೆಟ್ಟಿದೆ. ಎಲ್ಲೆಡೆ ವ್ಯಾಕ್ಸಿನ್​ ಕೊರತೆಯ ಬೋರ್ಡ್​ಗಳು ಕಾಣುತ್ತಿರುವುದರಿಂದ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದೆಲ್ಲ ರಾಜ್ಯ ಸರ್ಕಾರಕ್ಕೆ ಗೊತ್ತಿದ್ದರೂ ಸಹ ಕೇಂದ್ರದ ವಿರುದ್ಧ ಆಡಳಿತ ಪಕ್ಷದ ನಾಯಕರು ದನಿ ಎತ್ತುತ್ತಿಲ್ಲ.

vaccine news
ವ್ಯಾಕ್ಸಿನ್​ ಸುದ್ದಿ

ಬೆಂಗಳೂರು: ಕೋವಿಡ್ ಲಸಿಕೆ, ರೆಮ್ ಡಿಸಿವಿರ್ ಔಷಧ, ಆಮ್ಲಜನಕ ಪೂರೈಕೆ ಸೇರಿದಂತೆ ಕೋವಿಡ್ ನಿರ್ವಹಣೆಯ ಎಲ್ಲ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಸಮರ್ಪಕ ಸಹಕಾರ ಸಿಗದೆ ರಾಜ್ಯ ಜನರ ಮುಂದೆ ಮಂಡಿಯೂರುವಂತೆ ಮಾಡಿದೆ. ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುವಂತೆ ಮಾಡಿದೆ. ಗಟ್ಟಿ ದನಿಯಲ್ಲಿ ಕೇಂದ್ರವನ್ನು ಕೇಳದ ಅಸಹಾಯಕ ಸ್ಥಿತಿಯಲ್ಲಿರುವ ರಾಜ್ಯ ನಾಯಕರಿಗೆ ಪ್ರತಿಪಕ್ಷ ನಾಯಕರು ಛೀಮಾರಿ ಹಾಕುತ್ತಿದ್ದರೂ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ.

ಹೌದು, ಕೇಂದ್ರ ಹಾಗು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗಲಿದೆ, ರಾಜ್ಯಕ್ಕೆ ಎಲ್ಲ ರೀತಿಯಲ್ಲೂ ಲಾಭವಾಗಲಿದೆ ಎನ್ನುವ ರಾಜ್ಯ ಬಿಜೆಪಿ ನಾಯಕರು ಇದೀಗ ತಮ್ಮದೇ ಸರ್ಕಾರ ಕೇಂದ್ರದಲ್ಲಿದ್ದರೂ ಕೇಂದ್ರಕ್ಕೆ ಯಾವುದೇ ರೀತಿಯ ಒತ್ತಡ ಹೇರುವ, ಒತ್ತಾಯಿಸುವ ಸ್ಥಿತಿಯಲ್ಲಿಲ್ಲ. ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದರೂ ಕೇಂದ್ರದಿಂದ ನೆರವು ಪಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗಟ್ಟಿ ದನಿ ಇಲ್ಲದ ನಾಯಕರಿಂದಾಗಿ ಕೇಂದ್ರದ ಮೇಲೆ ಆರೋಪವನ್ನೂ ಮಾಡದೆ, ರಾಜ್ಯದಲ್ಲಿ ಕೊರೊನಾ ನಿರ್ವಹಣೆಯನ್ನು ಸರಿಯಾಗಿ ಮಾಡಲಾಗದೆ ಅತಂತ್ರ ಸ್ಥಿತಿಗೆ ರಾಜ್ಯದ ಜನತೆಯನ್ನ ನೂಕಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

state bjp leaders silent on vaccine issue
ಕೇಂದ್ರದ ವಿರುದ್ಧ ದನಿಯೆತ್ತದ ರಾಜ್ಯ ನಾಯಕರು

ಲಸಿಕೆ ಅವಾಂತರ:

ಜನವರಿ 16 ರಂದು ದೇಶವ್ಯಾಪಿ ಲಸಿಕೆ ಅಭಿಯಾನ ಆರಂಭವಾಯಿತು. ಅಂದೇ ರಾಜ್ಯದಲ್ಲಿಯೂ ಮೊದಲ ಹಂತದ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಕ್ಕಿತ್ತು. ಮೊದಲ ಹಂತವಾಗಿ ಹಿರಿಯ ನಾಯಕರಿಕರಿಗೆ ಲಸಿಕೆ ನೀಡಲು ಚಾಲನೆ ನೀಡಲಾಯಿತು. 60 ವರ್ಷದ ನಂತರದವರಿಗೆ ಲಸಿಕೆ ನೀಡಲು ಆರಂಭಿಸಿದ ನಂತರ 45 ವರ್ಷದ ಎಲ್ಲರಿಗೂ ಲಸಿಕೆ ನೀಡುವ ಎರಡನೇ ಹಂತದ ಅಭಿಯಾನ ಶುರುವಾಯಿತು. ಇದೀಗ ಮೇ 1 ರಂದು 18-44 ವಯೋಮಾನದ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಯಿತು. ಆದರೆ ಲಸಿಕೆ ಕೊರತೆ ಕಾರಣಕ್ಕೆ ಮೇ 10 ರಂದು ರಾಜ್ಯದಲ್ಲಿ ಲಸಿಕೆ ನೀಡಿಕೆ ಆರಂಭಿಸಿ ಕೇವಲ ಮೂರೇ ದಿನಗಳಲ್ಲಿ 18-44 ವಯೋಮಾನದವರಿಗೆ ಲಸಿಕೆ ನೀಡಿಕೆಯನ್ನು ಸ್ಥಗಿತಗೊಳಿಸಿ ಆದೇಶಿಸಲಾಗಿದೆ.

ಅಗತ್ಯ ಲಸಿಕೆ ದಾಸ್ತಾನು ಇಲ್ಲದೇ ಇದ್ದರೂ ಲಸಿಕಾ ಅಭಿಯಾನ ಆರಂಭಿಸಿ ಜನರಿಗೆ ಹೆಸರು ನೋಂದಾಯಿಸಲು ಅವಕಾಶ ನೀಡಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಎಸ್ಎಂಎಸ್ ಹಿಡಿದು ಆಸ್ಪತ್ರೆಗಳ ಮುಂದೆ ಬಂದು ಸರದಿ ಸಾಲಿನಲ್ಲಿ ನಿಂತವರು ಇಡೀ ದಿನ ಕಾದರೂ ಲಸಿಕೆ ಸಿಗದೆ ನಿರಾಶರಾಗಿ ಮರಳುವಂತಾಗಿದೆ. ಲಸಿಕಾ ಕೇಂದ್ರಗಳ ಮುಂದೆ ನೋ ಸ್ಟಾಕ್ ಬೋರ್ಡ್ ಜನರನ್ನು ಕೆರಳುವಂತೆ ಮಾಡಿದೆ.

ಈಗಾಗಲೇ ಮೊದಲನೇ ಡೋಸ್ ಪಡೆದುಕೊಂಡಿರುವ ಜನರಿಗೂ ಎರಡನೇ ಡೋಸ್ ಲಸಿಕೆ ಸಿಗದ ಸ್ಥಿತಿ ಎದುರಾಗಿದೆ. ಕೋವ್ಯಾಕ್ಸಿನ್ ಲಸಿಕೆಯಂತೂ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಅಲ್ಪ ಪ್ರಮಾಣದ ಕೋವಿಶೀಲ್ಡ್ ಲಸಿಕೆಯನ್ನು 45 ವರ್ಷದ ನಂತರದವರಿಗೆ ಮೊದಲ ಡೋಸ್ ಆಗಿ ನೀಡಲಾಗುತ್ತಿದೆ. ಎರಡನೇ ಡೋಸ್ ಪಡೆಯುವವರಿಗೆ ಆಧ್ಯತೆ ಮೇಲೆ ಲಸಿಕೆ ನೀಡಲಾಗುತ್ತಿದೆ.

ಮೂರನೇ ಹಂತದ ಲಸಿಕಾ ಅಭಿಯಾನಕ್ಕೆ ಆಯಾ ರಾಜ್ಯಗಳು ಲಸಿಕೆ ಖರೀದಿ ಮಾಡಬೇಕು ಎನ್ನುವ ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರ 1 ಕೋಟಿ ಡೋಸೇಜ್ ಕೋವ್ಯಾಕ್ಸಿನ್ ಮತ್ತು 2 ಕೋಟಿ ಡೋಸೇಜ್ ಕೋವಿಶೀಲ್ಡ್ ಗೆ ಆರ್ಡರ್ ನೀಡಿದೆ. ಆದರೆ ಅದು ಲಭ್ಯವಾಗುವುಕ್ಕೆ ಇನ್ನಷ್ಟು ಸಮಯ ಹಿಡಿಯಲಿದೆ. 45 ವರ್ಷದ ನಂತರದವರಿಗೆ ಲಸಿಕೆ ನೀಡಲು ಅಗತ್ಯ ವ್ಯಾಕ್ಸಿನ್ ಕೊಡಬೇಕಾಗಿರುವುದು ಕೇಂದ್ರದ ಜವಾಬ್ದಾರಿ ಆಗಿದ್ದರೂ ಸರಿಯಾದ ಪ್ರಮಾಣದಲ್ಲಿ ಲಸಿಕೆಯನ್ನು ಸರಬರಾಜು ಮಾಡಿಲ್ಲ, ಪರಿಣಾಮವಾಗಿ ಲಸಿಕೆ ಕೊರತೆ ಸೃಷ್ಟಿಯಾಗಿದೆ. ಎರಡನೇ ಡೋಸ್ ಪಡೆಯಲು ಜನರು ಪರದಾಡುವಂತಾಗಿದೆ.

ಲಸಿಕಾ ಕೇಂದ್ರಗಳ ಮುಂದೆ ಜನರು ಗಲಾಟೆ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನತೆಯ ಸಹನೆಯ ಕಟ್ಟೆ ಒಡೆಯುವ ಹಂತಕ್ಕೆ ತಲುಪುತ್ತಿದೆ.

ಲಸಿಕೆ ನೀಡಿಕೆ ಪ್ರಮಾಣ:

ಮಹಾರಾಷ್ಟ್ರ: 1.86 ಕೋಟಿ
ರಾಜಸ್ಥಾನ: 1.45 ಕೋಟಿ
ಗುಜರಾತ್ : 1.44 ಕೋಟಿ
ಉತ್ತರ ಪ್ರದೇಶ: 1.39 ಕೋಟಿ
ಪಶ್ಚಿಮ ಬಂಗಾಳ: 1.21 ಕೋಟಿ
ಕರ್ನಾಟಕ: 1 ಕೋಟಿ

ರೆಮ್ ಡಿಸಿವಿರ್ ಔಷಧ ಕೊರತೆ:
ರಾಜ್ಯದಲ್ಲಿ ಬಯೋಕಾನ್, ಸಿಪ್ಲಾ ಕಂಪನಿ, ಮೈಲಾನ್ ಫಾರ್ಮಾಸೂಟಿಕಲ್ಸ್, ಜ್ಯುಬಿಲೆಂಟ್ ಜೆನೆರಿಕ್ಸ್, ಕಂಪನಿಗಳು ರೆಮ್ ಡಿಸಿವಿರ್ ಔಷಧ ಉತ್ಪಾದನೆ ಮಾಡುತ್ತಿವೆ. ಆದರೂ ರಾಜ್ಯಕ್ಕೆ ರೆಮ್ ಡಿಸಿವಿರ್ ಔಷಧ ಕೊರತೆಯಾಗುತ್ತಿದೆ. ಇಲ್ಲಿ ಔಷಧ ಉತ್ಪಾದನೆಯಾದರೂ ಕೇಂದ್ರದಿಂದಲೇ ರಾಜ್ಯಕ್ಕೆ ನಿಗದಿಯಾದ ಕೋಟಾದ ಅನುಸಾರ ರೆಮ್ ಡಿಸಿವಿರ್ ಔಷಧ ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ಅಂಗೈನಲ್ಲಿ ಔಷಧ ಇದ್ದರೂ ರಾಜ್ಯಕ್ಕೆ ಅದು ದಕ್ಕದಂತಾಗಿದೆ. ಈ ಒಂದು ವಾರಕ್ಕೆ 2,62,346 ವಯಲ್ಸ್ ಅನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಏಪ್ರಿಲ್‌ 21 ರಿಂದ ಇಲ್ಲಿಯವರೆಗೆ ಒಟ್ಟು 5.75 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದೆ. ಮಾಸಿಕ ಉತ್ಪಾದನಾ ಸಾಮರ್ಥ್ಯ 38 ಲಕ್ಷ ವಯಲ್ಸ್ ನಿಂದ 1.05 ಕೋಟಿ ವಯಲ್ಸ್ ಗೆ ಹೆಚ್ಚಿಸಿದ್ದರೂ ರಾಜ್ಯಕ್ಕೆ ಕೋಟಾ ಹೆಚ್ಚಿಸಿಲ್ಲ.

ಆಮ್ಲಜನಕ ಕೊರತೆ:
ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆಗೆ ಚಾಮರಾಜನಗರ ಘಟನೆಯೇ ನಿದರ್ಶನವಾಗಿದೆ. ಆಮ್ಲಜನಕದ ಸಿಲಿಂಡರ್ ಖಾಲಿಯಾಗಿ 24 ಜೀವಗಳು ಬಲಿಯಾದ ಘಟನೆ ನಡೆದರೂ ಆಮ್ಲಜನಕ ಪೂರೈಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯವನ್ನು ಕಡೆಗಣಿಸಿದೆ. ಪ್ರತಿ ದಿನ 1200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದರೂ ಕೇಂದ್ರ ಸರ್ಕಾರ ಪೂರೈಸಿರುವುದು 120 ಮೆಟ್ರಿಕ್ ಟನ್ ಮಾತ್ರ. ಇದನ್ನು ಆರೋಗ್ಯ ಸಚಿವರೇ ಒಪ್ಪಿಕೊಂಡಿದ್ದು, ಹೆಚ್ಚುವರಿ ಆಮ್ಲಜನಕ ಸದ್ಯದಲ್ಲೇ ನಮಗೆ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆಯೇ ಹೊರತು ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಧೈರ್ಯವನ್ನಾಗಲಿ, ಕೋರ್ಟ್ ಆದೇಶದಂತೆ ನಮಗೆ ನೀಡಬೇಕಾದ ಪ್ರಮಾಣದ ಆಮ್ಲಜನಕ ನೀಡಿ ಎಂದು ಕೇಳುವ ಧೈರ್ಯವಾಗಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ರಾಜ್ಯದ ಯಾವೊಬ್ಬ ಬಿಜೆಪಿ ನಾಯಕನಿಗೂ ಇಲ್ಲವಾಗಿದೆ‌.

ರಾಜ್ಯದಲ್ಲೇ ಉತ್ಪಾದನೆಯಾದರೂ ಸಿಗದ ಪ್ರಾಣವಾಯು:

ಬಳ್ಳಾರಿಯ ಜಿಂದಾಲ್ ನಲ್ಲಿ ಆಮ್ಲಜನಕ ಉತ್ಪಾದನೆ ಉತ್ಪಾದನೆ ಮಾಡಲಾಗುತ್ತಿದೆ. ಜಿಂದಾಲ್ ನಲ್ಲಿ ಕೈಗಾರಿಕಾ ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆದರೂ ರಾಜ್ಯಕ್ಕೆ ಒಡಿಶಾ ಸೇರಿದಂತೆ ಹೊರ ರಾಜ್ಯಗಳಿಂದ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ.

ಆಮ್ಲಜನಕ ಸಾಗಣಿಕೆ ಟ್ಯಾಂಕರ್:
ರಾಜ್ಯದಲ್ಲಿ ಪ್ರಸ್ತುತ 170 ಆಮ್ಲಜನಕ ಟ್ಯಾಂಕರ್ ಗಳಿವೆ, ಅದರಲ್ಲಿ 68 ಟ್ಯಾಂಕರ್ ಗಳು ಬೇರೆ ರಾಜ್ಯಕ್ಕೆ ಪೂರೈಕೆ ಮಾಡುವ ಕಾರ್ಯದಲ್ಲಿವೆ. ಹಾಗಾಗಿ ಇನ್ನಷ್ಟು ಹೆಚ್ಚಿನ ಟ್ಯಾಂಕರ್ ಗಳ ಅಗತ್ಯವಿದೆ.

ಒಟ್ಟಿನಲ್ಲಿ ಕೋವಿಡ್ ಲಸಿಕೆ, ಆಕ್ಸಿಜನ್, ರೆಮ್ ಡಿಸಿವಿರ್ ಔಷಧ ಸೇರಿದಂತೆ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಸೂಕ್ತ ಸಹಕಾರ, ನೆರವು ಸಿಗದೇ ಇದ್ದರೂ ರಾಜ್ಯ ಬಿಜೆಪಿ ನಾಯಕರು ಮಾತ್ರ ಕೇಂದ್ರದ ಕಡೆ ಬೆರಳು ಮಾಡದಂತಾಗಿದ್ದಾರೆ. ದನಿ ಕಳೆದುಕೊಂಡು ದಿಕ್ಕು ಕಾಣದೆ ಜನತೆಯಿಂದ ಟೀಕೆಯನ್ನು ಎದುರಿಸುತ್ತಾ ಕುಳಿತಿದ್ದಾರೆ.

Last Updated : May 13, 2021, 4:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.