ವಿಧಾನಸಭೆಯಲ್ಲಿ ಪಿಎಸ್​​ಐ ಹಗರಣದ ಸದ್ದು : ಉಭಯ ಸದಸ್ಯರ ನಡುವೆ ಮಾತಿನ ಚಕಮಕಿ

author img

By

Published : Sep 15, 2022, 7:44 PM IST

uproar-in-assembly-session-over-psi-recruitment-case

ಪಿಎಸ್​​ಐ ಹಗರಣ ಸಾಮಾನ್ಯ ವಿಷಯವಲ್ಲ. 545 ಹುದ್ದೆಗಳಿಗೆ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಅನೇಕರು ನೇಮಕಾತಿ ಹೊಂದಿದ್ದರು. ಆದರೆ ಏಕಾಏಕಿ ಹಗರಣ ನಡೆದಿದೆ ಎಂಬ ಒಂದೇ ಕಾರಣಕ್ಕೆ ಇಡೀ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಲಾಗಿದೆ. ಹೀಗಾಗಿ ಚರ್ಚೆಗೆ ಅವಕಾಶ ಕೊಡಿ ಎಂದು ಸ್ಪೀಕರ್ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ಬೆಂಗಳೂರು: ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಪಿಎಸ್​​ಐ ನೇಮಕಾತಿ ಹಗರಣ ನಿಲುವಳಿ ಸೂಚನೆ ಮೇಲೆ (ನಿಯಮ 60 ಅಡಿ) ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ ಪರಿಣಾಮ ಗದ್ದಲ, ಮಾತಿನ ಚಕಮಕಿ ನಡೆದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.

ಶೂನ್ಯ ವೇಳೆ ಮುಗಿದ ನಂತರ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಇದೊಂದು ಅತ್ಯಂತ ಗಂಭೀರವಾದ ವಿಷಯ. ಹಿರಿಯ ಪೊಲೀಸ್ ಅಧಿಕಾರಿಗಳೇ ಹಗರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದಾರೆ. ಅನೇಕರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಹೀಗಾಗಿ ನಿಯಮ 60ರಡಿ ಚರ್ಚೆಗೆ ಅವಕಾಶ ಕೊಡಬೇಕೆಂದು ನಿಲುವಳಿ ಸೂಚನೆ ಮಂಡಿಸಿದರು.

ಪಿಎಸ್​​ಐ ಹಗರಣ ಸಾಮಾನ್ಯ ವಿಷಯವಲ್ಲ. 545 ಹುದ್ದೆಗಳಿಗೆ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಅನೇಕರು ನೇಮಕಾತಿ ಹೊಂದಿದ್ದರು. ಆದರೆ ಏಕಾಏಕಿ ಹಗರಣ ನಡೆದಿದೆ ಎಂಬ ಒಂದೇ ಕಾರಣಕ್ಕೆ ಇಡೀ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಲಾಗಿದೆ. ಹೀಗಾಗಿ ಚರ್ಚೆಗೆ ಅವಕಾಶ ಕೊಡಿ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.

ಈ ಹಿಂದೆ ಬೇರೆ ಬೇರೆ ಪ್ರಕರಣಗಳಿಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿರುವ ನಿದರ್ಶನಗಳಿವೆ. ಐಎಎಸ್ ಅಧಿಕಾರಿ ಡಿ.ಕೆ.ರವಿ, ಡಿವೈಎಸ್​​ಪಿ ಗಣಪತಿ ಸೇರಿದಂತೆ ಅನೇಕ ಪ್ರಕರಣಗಳನ್ನು ಸದನದಲ್ಲಿ ಚರ್ಚೆ ಮಾಡಲಾಗಿದೆ. ತನಿಖೆ ನಡೆಯುತ್ತಿದೆ ಎಂಬ ಒಂದೇ ಕಾರಣಕ್ಕೆ ಚರ್ಚೆಗೆ ಅವಕಾಶ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ. ಮಧುಸ್ವಾಮಿ, ಕೆಲವು ನಿಯಮಗಳನ್ನು ಓದಿ, ತನಿಖೆ ನಡೆಯುತ್ತಿರುವ ಈ ಹಂತದಲ್ಲಿ ಸದನದಲ್ಲಿ ಚರ್ಚೆಗೆ ಕೊಡುವುದು ಸಮಂಜಸವಲ್ಲ. ನಿಯಮ 60ರಡಿ ಚರ್ಚೆ ಮಾಡಬೇಕಾದರೆ ಕೆಲವು ನೀತಿ ನಿಯಮಗಳಿರುತ್ತವೆ. ಪಟ್ಟು ಹಿಡಿಯುವುದು ಸದನಕ್ಕೆ ಶೋಭೆ ತರುವುದಿಲ್ಲ ಎಂದರು.

ಬಿಜೆಪಿ ಸದಸ್ಯರ ಆಕ್ಷೇಪ: ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಚರ್ಚೆ ನಡೆದರೆ ಕೆಲವರು ಸಿಟ್ಟಿಗೇಳಬಹುದೆಂಬ ಆತಂಕದಿಂದ ಸರ್ಕಾರ ಪಲಾಯನ ಮಾಡುತ್ತಿದೆ ಎಂದು ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಕೂಡ ಆಕ್ಷೇಪಿಸಿ ಹಗರಣವನ್ನು ಹೊರತಂದಿದ್ದೇ ನಮ್ಮ ಸರ್ಕಾರ. ನೀವು ಎಲ್ಲವನ್ನು ಮುಚ್ಚಿ ಹಾಕಿದ್ದೀರಿ, ಇದರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಈ ಹಂತದಲ್ಲಿ ಸದನದಲ್ಲಿ ಕೋಲಾಹಲ, ಗದ್ದಲ, ಆರೋಪ-ಪ್ರತ್ಯಾರೋಪಗಳು ನಡೆದು, ಸದನದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ. ಮಾತು ಮುಂದುವರೆಸಿದ ಸಿದ್ದರಾಮಯ್ಯ ಕೆಲವು ನಿಯಮಗಳನ್ನು ಮತ್ತೆ ಉಲ್ಲಂಘಿಸಿ ಚರ್ಚೆಗೆ ಅವಕಾಶ ಕೊಡಲೇಬೇಕು ಎಂದು ಪಟ್ಟು ಹಿಡಿದರು. ಅನೇಕ ಮಾಧ್ಯಮಗಳು ಸರಣಿ ವರದಿ ಮಾಡಿವೆ. ಕುಂಟು ನೆಪ ಇಟ್ಟುಕೊಂಡು ಪಲಾಯನ ಮಾಡಬೇಡಿ. ಮೊದಲು ಚರ್ಚೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ತನಿಖೆ ವೇಳೆ ಚರ್ಚೆ ಸೂಕ್ತವೇ?: ಆಗ ಮಾಧುಸ್ವಾಮಿ, ನಿಯಮ 60ರಡಿ ಚರ್ಚೆ ಮಾಡಬೇಕಾದರೆ ಇತ್ತೀಚಿನ ಘಟನೆಯಾಗಿರಬೇಕು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕರು ಬಂಧನಕ್ಕೊಳಪಟ್ಟಿದ್ದಾರೆ. ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿವೆ. ಸಿಐಡಿ ತನಿಖೆ ನಡೆಸುತ್ತಿರುವಾಗ ಚರ್ಚೆಗೆ ಅವಕಾಶ ಕೊಡುವುದು ಸೂಕ್ತವೇ ಎಂದು ಸ್ಪೀಕರ್ ಅವರನ್ನು ಪ್ರಶ್ನಿಸಿದರು.

ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ಎಡಿಜಿಪಿ ದರ್ಜೆಯ ಅಧಿಕಾರಿಗಳನ್ನು ಬಂಧಿಸಿ ಜೈಲಿಗೆ ಹಾಕಿದೆ. ಸಿಐಡಿ ತನಿಖಾ ತಂಡಕ್ಕೆ ಮುಕ್ತವಾಗಿ ತನಿಖೆ ನಡೆಸಲು ಬಿಟ್ಟಿದ್ದೇವೆ. ಈ ಹಗರಣ ಹೊರಬಂದಿರುವುದು ನಮ್ಮ ಸರ್ಕಾರದಿಂದಾಗಿ ಇದರಲ್ಲಿ ಇವರೇನು ಶಹಭಾಷ್‍ಗಿರಿ ಪಡೆಯುವುದು ಎಂದು ತಿರುಗೇಟು ನೀಡಿದರು.

ಕತ್ತೆ ಕಾಯಲು ಬಂದಿದ್ದೇವಾ?: ಈ ವೇಳೆ ಕಾಂಗ್ರೆಸ್​ನ ಹಿರಿಯ ಸದಸ್ಯ ಆರ್.ವಿ. ದೇಶಪಾಂಡೆ ಅವರು ಎದ್ದುನಿಂತು ಮಾತನಾಡಲು ಮುಂದಾದರು. ಇದಕ್ಕೆ ಸಿಡಿಮಿಡಿಗೊಂಡ ಮಾಧುಸ್ವಾಮಿ, ಹಿರಿಯ ಸದಸ್ಯರಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ನಾವೇನು ಇಲ್ಲಿ ಕತ್ತೆ ಕಾಯಲು ಬಂದಿದ್ದೇವಾ?. ಸರ್ಕಾರ ನಡೆಸುವರು ನಾವು, ಕೂಗಾಟ, ಹಾರಾಟ ನಡೆಸಿದರೆ ಸಮಸ್ಯೆ ಬಗೆಹರಿಯುತ್ತದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್‍ ಸದಸ್ಯರಾದ ಎಂ.ಬಿ.ಪಾಟೀಲ್ ಮತ್ತು ಜಮೀರ್ ಅಹಮದ್ ಖಾನ್ ಮಾತನಾಡಲು ಮುಂದಾಗುತ್ತಿದ್ದಂತೆ ಮತ್ತಷ್ಟು ಆಕ್ರೋಶಗೊಂಡ ಮಾಧುಸ್ವಾಮಿ, ನಿಮಗೆ ಸದನದ ನಿಯಮಗಳು ಅರ್ಥವಾಗುತ್ತವೆಯೇ? ಸುಮ್ಮನೆ ಕೂಗಾಡಿದರೆ ಪ್ರಯೋಜನವಿಲ್ಲ. ಜಮೀರ್ ನಿಮಗೆ ವಿಧಾನಸಭೆಯ ಕಾರ್ಯಕಲಾಪಗಳ ನಿಯಮ ತಿಳಿಯುತ್ತದೆಯೇ? ಎಂದು ಕಾಲೆಳೆದರು.

ಎಂ.ಬಿ.ಪಾಟೀಲ್ ವಿರುದ್ಧ ಗುಡುಗಿದ ಮಾಧುಸ್ವಾಮಿ: ನಾನು ನಿಮ್ಮ ಅಧೀನದಲ್ಲಿಲ್ಲ. ಸಭಾಧ್ಯಕ್ಷರು ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಾರೆ. ನೀವು ಮಾತನಾಡುವಾಗ ಬಾಯಿ ಮುಚ್ಚಿಕೊಂಡಿದ್ದೆ. ಈಗ ನೀವೇಕೆ ಮಾತನಾಡುತ್ತಿದ್ದೀರಿ. ಹಿರಿಯ ಸದಸ್ಯರಾಗಿ ನಿಮಗೆ ಇದು ಶೋಭೆ ತರುವುದಿಲ್ಲ ಎಂದು ಗುಡುಗಿದರು. ಈ ಸಂದರ್ಭದಲ್ಲಿ ಮತ್ತೆ ಸದನದಲ್ಲಿ ಗದ್ದಲ ಉಂಟಾಯಿತು. ಇದರ ಮಧ್ಯೆ ಮಾತು ಮುಂದುವರೆಸಿದ ಸಚಿವ ಮಾಧುಸ್ವಾಮಿ ಅವರು, ಇದು ವ್ಯಾಪಕವಾಗಿ ಚರ್ಚೆಯಾಗಬೇಕು, ಯಾರ್ಯಾರು ಭಾಗಿಯಾಗಿದ್ದಾರೋ ಅವರೆಲ್ಲರಿಗೂ ಶಿಕ್ಷೆಯಾಗಬೇಕು. 2006ರಿಂದ ಏನೇನು ಆಗಿದೆಯೋ ಎಲ್ಲವೂ ಬಯಲಾಗಲಿದೆ ಎಂದು ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಇದಕ್ಕೆ ನಾವು ಹೆದರುವುದಿಲ್ಲ. 40 ವರ್ಷದಿಂದ ಈ ಸದನದಲ್ಲಿ ನಾನೂ ಇದ್ದೇನೆ. ರಾಜಕೀಯ ಭಾಷಣ ಮಾಡಲು ನಮಗೂ ಬರುತ್ತದೆ. 2006ರಿಂದ ಹಿಡಿದು ಇಲ್ಲಿಯವರೆಗೆ ಯಾವ ಯಾವ ಇಲಾಖೆಯಲ್ಲಿ ಏನೇನು ಆಗಿದೆಯೋ ಎಲ್ಲವೂ ತನಿಖೆ ನಡೆಸಿ ಅಗತ್ಯವಿದ್ದರೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ನಾವು ಹೆದರುವುದಿಲ್ಲ ಎಂದು ಪ್ರತಿ ಸವಾಲು ಹಾಕಿದರು.

ಅಂತಿಮವಾಗಿ ವಾದ-ವಿವಾದ ಆಲಿಸಿದ ಸಭಾಧ್ಯಕ್ಷರು ನಿಯಮ 60ರ ಬದಲು 69ರಡಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದಾಗ ಬಿಸಿ ಬಿಸಿ ಚರ್ಚೆಗೆ ತೆರೆಬಿತ್ತು.

ಇದನ್ನೂ ಓದಿ: ಪ್ರಶ್ನೋತ್ತರ ಕಲಾಪಕ್ಕೆ ಮೊದಲ ಆದ್ಯತೆ ನೀಡಿ: ಸಚಿವರ ವಿರುದ್ಧ ಸ್ಪೀಕರ್ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.