ETV Bharat / state

ತುಮಕೂರಲ್ಲಿ ಬಾಣಂತಿ, ಅವಳಿ ಮಕ್ಕಳ ಸಾವು ಪ್ರಕರಣ: ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು-HDK

author img

By

Published : Nov 3, 2022, 9:46 PM IST

ಪ್ರಸವ ವೇದನೆಯಿಂದ ಬಳಲುತ್ತಿದ್ದ ಮಹಿಳೆ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಜನಿಸಿದ ಅವಳಿ ಮಕ್ಕಳು ಕೂಡ ಸಾವನ್ನಪ್ಪಿದ್ದು, ಈ ಬಗ್ಗೆ ಕುಮಾರಸ್ವಾಮಿ ಟ್ವೀಟ್ ಮಾಡಿ, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

hdk
hdk

ಬೆಂಗಳೂರು: ಕೇವಲ ರಾಜಕೀಯ, ಚುನಾವಣೆ, ಪ್ರಚಾರದಲ್ಲಿ ಮುಳುಗೇಳುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಕರಾಳ ಮುಖದ ಬಗ್ಗೆ (ಮಂಡ್ಯದ ಘಟನೆ) ಸ್ವಲ್ಪ ಹೊತ್ತಿನ ಹಿಂದೆ ನಾನು ಟ್ವೀಟ್ ಮಾಡಿದ್ದೆ. ಆದರೆ, ಅದಕ್ಕಿಂತ ಭಯಾನಕ ಹಾಗೂ ಕರುಳು ಹಿಂಡುವ, ಇಡೀ ಕರ್ನಾಟಕವೇ ತಲೆ ತಗ್ಗಿಸುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆರೋಗ್ಯ ಇಲಾಖೆ ಅದೆಷ್ಟು ಹಾಳಾಗಿ ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ದುರಂತ ಸಾಕ್ಷಿ ಇನ್ನೊಂದಿಲ್ಲ. ಈ ಹದಗೆಟ್ಟ ಆರೋಗ್ಯ ವ್ಯವಸ್ಥೆ ತುಮಕೂರಿನಲ್ಲಿ ಅನಾಥ ಬಾಣಂತಿಯ ಜೊತೆಗೆ ಹುಟ್ಟಿದೊಡನೆ ಎರಡು ಹಸುಗೂಸುಗಳನ್ನು ಬಲಿ ತೆಗೆದುಕೊಂಡಿದೆ. ಅಭಿವೃದ್ಧಿ, ಆವಿಷ್ಕಾರ ಎಂದೆಲ್ಲ ಬೀಗುವ ಈ ಸರ್ಕಾರ ನಾಚಿಕೆಯಿಂದ ತಲೆ ತಗ್ಗಿಸಬೇಕಿದೆ ಎಂದು ಟೀಕಿಸಿದ್ದಾರೆ.

ಪ್ರಸವ ವೇದನೆಯಿಂದ ಬಳಲುತ್ತಿದ್ದ ತುಮಕೂರಿನ ಭಾರತೀನಗರದ ಶ್ರೀಮತಿ ಕಸ್ತೂರಿ (30) ಎಂಬ ಮಹಿಳೆಯನ್ನು ಗುರುವಾರ ತಡರಾತ್ರಿ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಕರ್ತವ್ಯದಲ್ಲಿದ್ದ ವೈದ್ಯೆ, ಆ ಗರ್ಭಿಣಿಗೆ ಹೆರಿಗೆ ಮಾಡಿಸದೆ ತಾಯಿ ಕಾರ್ಡ್ ಮಾಡಿಸಿಲ್ಲ ಎನ್ನುವ ನೆಪ ಹೇಳಿ ನಿರ್ದಯವಾಗಿ ವಾಪಸ್ ಕಳಿಸಿದ್ದಾರೆ.

ಹೆರಿಗೆ ನೋವಿನಿಂದ ನರಳುತ್ತಿದ್ದ ಆ ಮಹಿಳೆ, ತನಗೆ ಹೆರಿಗೆ ಮಾಡಿಸಿ ಎಂದು ಆ ವೈದ್ಯೆಯನ್ನು ಪರಿಪರಿಯಾಗಿ ಅಂಗಲಾಚಿದ್ದಾರೆ. ಆದರೆ, ದರ್ಪದಿಂದ ವರ್ತಿಸಿದ ವೈದ್ಯೆ, ಹೆರಿಗೆ ಮಾಡಿಸದೇ ಮಾನವೀಯತೆಯನ್ನೇ ಮರೆತು ಆಕೆಯನ್ನು ವಾಪಸ್ ಕಳುಹಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಹೆರಿಗೆ ಮಾಡಿಸಿಕೋ ಎಂದು ತಾಕೀತು ಮಾಡಿದ್ದರು ಎಂದು ಹೆಚ್​ಡಿಕೆ ಟ್ವೀಟ್ ಮಾಡಿದ್ದಾರೆ.

ಬೇರೆ ದಾರಿ ಇಲ್ಲದೆ, ಹಣವೂ ಇಲ್ಲದೆ ಹೊಟ್ಟೆ ನೋವಿನಲ್ಲೇ ಮನೆಗೆ ವಾಪಸ್ ಬಂದಿದ್ದ ಆ ಮಹಿಳೆ, ಇಡೀ ರಾತ್ರಿ ನರಳಿನರಳಿ ಬೆಳಗಿನಜಾವ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಅವಳಿ ಮಕ್ಕಳೂ ಕೂಡ ಸಾವನ್ನಪ್ಪಿವೆ. ಆದರೆ 6 ವರ್ಷದ ಇನ್ನೊಂದು ಹೆಣ್ಣು ಮಗು ತಬ್ಬಲಿ ಆಗಿದೆ ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

ಬಾಣಂತಿ ಮತ್ತು ಅವಳಿ ಹಸುಗೂಸುಗಳ ದಾರುಣ ಸಾವಿಗೆ ಆ ವೈದ್ಯೆ ಮತ್ತು ಸರ್ಕಾರವೇ ನೇರ ಹೊಣೆ. ಸ್ವತಃ ವೈದ್ಯರೆಂದು ಹೇಳಿಕೊಳ್ಳುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಉಸ್ತುವಾರಿಯಲ್ಲಿ ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಹಳ್ಳಹಿಡಿದು ಹೋಗಿದೆ ಎನ್ನುವುದಕ್ಕೆ ಈ ಸಾವುಗಳೇ ಸಾಕ್ಷಿ. ಮಾನವೀಯತೆ ಇಲ್ಲದ ವೈದ್ಯೆ ಹಾಗೂ ಸರ್ಕಾರವೇ ಮಾಡಿದ ಕೊಲೆಗಳಿವು ಎಂದು ಹೆಚ್​ಡಿಕೆ ಕಿಡಿಕಾರಿದ್ದಾರೆ.

ಕೂಡಲೇ ಆ ವೈದ್ಯೆಯನ್ನು ಸೇವೆಯಿಂದ ವಜಾ ಮಾಡಬೇಕು. ಕರ್ತವ್ಯಲೋಪ ಎಸಗಿದ ಇತರೆ ಸಿಬ್ಬಂದಿಗೂ ತಕ್ಕಶಾಸ್ತಿ ಮಾಡಬೇಕು. ಜಿಲ್ಲಾಸ್ಪತ್ರೆಯ ಅಧೀಕ್ಷಕರನ್ನೂ ಇದಕ್ಕೆ ಹೊಣೆ ಮಾಡಿ ಮನೆಗೆ ಕಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸರ್ಕಾರಿ ಕೊಲೆಗಳಿಗೆ ಆರೋಗ್ಯ ಸಚಿವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಲೇಬೇಕು, ಇಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ತಬ್ಬಲಿಯಾದ ಮಗುವಿನ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

(ಓದಿ: ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳದ ಆರೋಪ: ರಕ್ತ ಸ್ರಾವದಿಂದ ಬಾಣಂತಿ.. ಹುಟ್ಟಿದ ಅವಳಿ ಮಕ್ಕಳ ಸಾವು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.