ETV Bharat / state

ನಾಳೆ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ: ಕಂಠೀರವ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ

author img

By

Published : May 19, 2023, 11:58 AM IST

ಸಿಎಂ, ಡಿಸಿಎಂ ಹಾಗು ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಬೆಂಗಳೂರಿನ ಕಂಠೀರವ ಮೈದಾನದಲ್ಲಿ ನಾಳೆ ನಡೆಯಲಿದ್ದು ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗುತ್ತಿದೆ.

police
ಪೊಲೀಸ್​ ಪಡೆ

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಾಳೆ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದು, ಕಾರ್ಯಕ್ರಮಕ್ಕೆ ನಗರದ ಕಂಠೀರವ ಕ್ರೀಡಾಂಗಣ ಸಜ್ಜಾಗಿದೆ. ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಮೈಸೂರು, ಮಂಡ್ಯ, ರಾಮನಗರ, ಉತ್ತರ ಕರ್ನಾಟಕ ಹಾಗೂ ಕೋಲಾರದಿಂದ ಸಾವಿರಾರು ಮಂದಿ ಬೆಂಬಲಿಗರು, ಕಾರ್ಯಕರ್ತರು ಆಗಮಿಸುವ ನಿರೀಕ್ಷೆಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಸ್ಟೇಡಿಯಂನ ಅಷ್ಟ ದಿಕ್ಕುಗಳಲ್ಲಿ ಭಾರಿ ಭದ್ರತೆ ಕೈಗೊಂಡಿದ್ದಾರೆ. ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸಿದ್ದತೆ ಪರಿಶೀಲನೆ ನಡೆಸಿದ್ದಾರೆ.

ಭದ್ರತಾ ಕ್ರಮಗಳ ವಿವರ: ಸ್ಟೇಡಿಯಂನ ಎರಡು ಗೇಟ್​ಗಳಲ್ಲಿ ವಿವಿಐಪಿ ವಾಹನಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು ಪ್ರತ್ಯೇಕವಾಗಿ ಒಳ ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ. ನಗರ ಪೊಲೀಸ್ ಆಯುಕ್ತರು, ಸಂಚಾರ ವಿಭಾಗದ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರಲ್ಲದೇ 8 ಮಂದಿ ಡಿಸಿಪಿಗಳು ಭದ್ರತೆಗೆ ನಿಯೋಜನೆಗೊಂಡಿದ್ದಾರೆ‌.

ಪ್ರಮಾಣವಚನ ಕಾರ್ಯಕ್ರಮವನ್ನು ತನ್ನ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿಸಿ ಕಹಳೆ ಮೊಳಗಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು ಭಾರಿ ಪ್ರಮಾಣದಲ್ಲಿ ಜನಸ್ತೋಮ ಸೇರುವ ನಿರೀಕ್ಷೆ ಇದೆ‌. ಆದ್ದರಿಂದ 1,500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಹತ್ತು ಮಂದಿ ಎಸಿಪಿ, 28 ಮಂದಿ ಇನ್ಸ್ಪೆಕ್ಟರ್ಸ್ ನೇತೃತ್ವದಲ್ಲಿ ಭದ್ರತೆ ಇರಲಿದೆ. ಎಂಟು ಗೇಟ್​ಗಳಲ್ಲಿ ಓರ್ವ ಎಸಿಪಿ ರ್ಯಾಂಕ್ ಅಧಿಕಾರಿಗಳು ಭದ್ರತೆಯ ನೇತೃತ್ವ ವಹಿಸಲಿದ್ದು, 500 ಮಂದಿ ಸಂಚಾರಿ ಪೊಲೀಸರು ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ನಿರ್ವಹಿಸಲಿದ್ದಾರೆ.

ಸಂಭಾವ್ಯ ಮಾರ್ಗ ಬದಲಾವಣೆ: ಹಲಸೂರು, ಎಂಜಿ ರೋಡ್, ರಿಚ್‌ಮಂಡ್​ನಿಂದ ಕಾರ್ಪೊರೇಷನ್ ಮೂಲಕ ಬರುವ ವಾಹನಗಳು- ಹಲಸೂರು ಲೇಕ್ ಮೂಲಕ ಶಿವಾಜಿನಗರ - ವಿಧಾನಸೌಧದಿಂದ ಮೆಜೆಸ್ಟಿಕ್​ಗೆ ಹೋಗಲು ಅವಕಾಶ ಕಲ್ಪಿಸಬಹುದು. ಸಿಟಿ ಮಾರ್ಕೆಟ್ ಭಾಗದಿಂದ ಬರುವ ವಾಹನಗಳು ರಿಚ್ಮಂಡ್ ರಸ್ತೆಯಿಂದ ಲಾಲ್ ಬಾಗ್ ರೋಡ್ ಮೂಲಕ ಸಾಗಲು ಅವಕಾಶ ನೀಡುವ ಸಾಧ್ಯತೆಯಿದೆ‌. ಮೆಜೆಸ್ಟಿಕ್ ಮಾರ್ಗದಿಂದ ಕಾರ್ಪೊರೇಷನ್ ಕಡೆ ಬರುವ ವಾಹನಗಳು ವಿಧಾನಸೌಧ ಮೂಲಕ ತಿಮ್ಮಯ್ಯ ರೋಡ್, ಇನ್ಫ್ಯಾಂಟ್ರಿ ರೋಡ್ ಮೂಲಕ ಸಂಚರಿಸಲು ಸೂಚಿಸಬಹುದು.

ಪ್ರಮಾಣವಚನ ಸಮಾರಂಭಕ್ಕೆ ಕಾಂಗ್ರೆಸ್ ಸಮಾನಮನಸ್ಕ ಪಕ್ಷಗಳ ನಾಯಕರನ್ನು ನಿನ್ನೆಯೇ ಆಹ್ವಾನಿಸಿದೆ. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಆಗಮಿಸಲಿದ್ದಾರೆ. ಹೇಮಂತ್ ಸೋರೆನ್, ಸೀತಾರಾಮ್ ಯೆಚೂರಿ, ಉದ್ಧವ್ ಠಾಕ್ರೆ, ಶರದ್ ಪವಾರ್, ಮತ್ತು ಫಾರೂಕ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಸಮಾನ ಮನಸ್ಕ ವಿರೋಧ ಪಕ್ಷಗಳು ಮತ್ತು ಅವರ ನಾಯಕರಿಗೂ ಆಹ್ವಾನ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಘಟಾನುಘಟಿ ನಾಯಕರಿಗೆ ಆಹ್ವಾನಿಸಿದ ಕಾಂಗ್ರೆಸ್​...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.