ETV Bharat / state

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ ಸೇರಿ ಮೂರು ವಿಧೇಯಕ ಮಂಡನೆ

author img

By

Published : Sep 15, 2022, 4:58 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ-2022, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ ಸೇರಿ ಮೂರು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

three-bills-presented-in-assembly-session
ಪಂಚಾಯತ್‍ ರಾಜ್ ತಿದ್ದುಪಡಿ ವಿಧೇಯಕ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ-2022, ಕರ್ನಾಟಕ ಸರಕು ಮತ್ತು ಸೇಬೆಗಳ ತೆರಿಗೆ (ತಿದ್ದುಪಡಿ) ವಿಧೇಯಕ ಸೇರಿ ಮೂರು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಇಂದು ಸರ್ಕಾರ ಮಂಡಿಸಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಧೇಯಕಗಳನ್ನು ಮಂಡಿಸಿದರು.

ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಸರ್ವೋಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಪಾಲಿಸಲು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉಪಬಂಧಿಸಲಾದಂತೆ ಬಿಬಿಎಂಪಿಯಲ್ಲಿ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಶೇ.50ರಷ್ಟು ಮೀರದಂತೆ ಮೀಸಲಾತಿಯನ್ನು ನಿಗದಿಪಡಿಸಲು ವಿಧೇಯಕ ಮಂಡಿಸಲಾಗಿದೆ.

ಬಿಬಿಎಂಪಿ ಅಧಿನಿಯಮ 2020ರ 7ನೇ ಮತ್ತ 8ನೇ ಪ್ರಕರಣಕ್ಕೆ ತಿದ್ದುಪಡಿ ತರಲಾಗಿದೆ. ಇದು ತುರ್ತು ಸ್ವರೂಪವಾಗಿದ್ದರಿಂದ ಅಧಿವೇಶನ ನಡೆಯುವ ಮುನ್ನ ಅದ್ಯಾದೇಶ ಜಾರಿಗೊಳಿಸಲಾಗಿತ್ತು ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

2022ರ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಪ್ರಕರಣ 7ರ ಉಪಪ್ರಕರಣ 2ರಡಿಯಲ್ಲಿ ಪರಾವನಗಿ ಶುಲ್ಕ ಅಥವಾ ಅರ್ಜಿ ಶುಲ್ಕ ಅಥವಾ ಬೇರೆ ಯಾವುದಾದರೂ ಹೆಸರಿನಿಂದ ಕರೆಯಲ್ಪಡುವ ಆಲ್ಕೋಹಾಲ್​ಯುಕ್ತ ಮದ್ಯದ ಪರವಾನಗಿ ನೀಡುವಿಕೆ ಬಗ್ಗೆಯೂ ಇರಲಿದೆ.

2017ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಸರಕುಗಳ ಪೂರೈಕೆಯಲ್ಲಿ ಅಥವಾ ಸೇವೆಗಳ ಪೂರೈಕೆಯೂ ಅಲ್ಲ ಎಂದು ಪರಿಗಣಿಸಲು ವಿಧೇಯಕವನ್ನು ಮಂಡಿಸಲಾಗಿದೆ. ಈ ಅವಧಿಯಲ್ಲಿ ಸಂಗ್ರಹಿಸಲಾದ ಹಾಗೂ ಸಂಗ್ರಹಿಸಬಾರದಾಗಿದ್ದ ತೆರಿಗೆಯನ್ನು ಪಾವತಿಸದಿರಲು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಇನ್ನು, 2022ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‍ ರಾಜ್ ತಿದ್ದುಪಡಿ ವಿಧೇಯಕವು ಗ್ರಾಮೀಣ ಜನಸಂಖ್ಯೆ ಆಧಾರದ ಮೇಲೆ ಜಿಲ್ಲಾ ಪಂಚಾಯತ್ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯನ್ನು ಪರಿಷ್ಕರಿಸಲು ಮತ್ತು ಕಾಲಮಿತಿಯೊಳಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಹೈಕೋರ್ಟ್ ನೀಡಿರುವ ನಿರ್ದೇಶನ ಪಾಲಿಸಲು ಈ ವಿಧೇಯಕವನ್ನು ಮಂಡಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‍ ರಾಜ್ ಅಧಿನಿಯಮ 1993ರ 121 ಮತ್ತು 160ನೇ ಪ್ರಕರಣಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿದೆ. ಈ ವಿಧೇಯಕವನ್ನು ಕೂಡ ಅಧ್ಯಾದೇಶದ ಮೂಲಕ ಜಾರಿಗೊಳಿಸಲಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ 47 ಸಾವಿರ ಶಿಕ್ಷಕರ ಹುದ್ದೆ ಖಾಲಿ, 15 ಸಾವಿರ ಶಿಕ್ಷಕರ ನೇಮಕ: ಸಚಿವ ನಾಗೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.