ETV Bharat / state

ಸಿಲಿಕಾನ್ ಸಿಟಿಯಲ್ಲಿ ಸಾವಿರ ಉದ್ಯಾನಗಳು: ನಿರ್ವಹಣೆಗೆ ಕೋಟಿ ಕೋಟಿ ಹಣ ಖರ್ಚು

author img

By

Published : Feb 2, 2023, 11:03 PM IST

ಭಾರತದ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1193 ಉದ್ಯಾನಗಳಿವೆ. ಇದರ ನಿರ್ವಹಣೆಗೆ ಎಷ್ಟು ಹಣ ಖರ್ಚಾಗುತ್ತಿದೆ ಗೊತ್ತೇ?

Lalbagh Park in Bangalore
ಬೆಂಗಳೂರಿನ ಲಾಲಾಬಾಗ್ ಉದ್ಯಾನ

ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ಉದ್ಯಾನನಗರಿ ಎಂಬ ಹೆಸರಿನಿಂದಲೂ ಖ್ಯಾತಿ ಪಡೆದಿದೆ. ಮಹಾನಗರದ ಮೂಲೆ ಮೂಲೆಯಲ್ಲಿಯೂ ಉದ್ಯಾನವನಗಳು ಅಸ್ತಿತ್ವದಲ್ಲಿರುವುದರಿಂದ ಈ ಹೆಸರು ಬರಲು ಪ್ರಮುಖ ಕಾರಣವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1193 ಉದ್ಯಾನಗಳಿವೆ. ಪಾಲಿಕೆ 5 ವರ್ಷದಲ್ಲಿ 78 ಉದ್ಯಾನವನಗಳನ್ನು ಹೊಸದಾಗಿ ನಿರ್ಮಿಸಿ, ರಾಜಧಾನಿಯ ಜನತೆಗೆ ಹಸಿರಿನ ಹೊದಿಕೆಯ ಉಡುಗೊರೆ ನೀಡಿದೆ. ಆದರೆ ಈ ಉದ್ಯಾನವನಗಳ ನಿರ್ವಹಣೆಗೆ ಕೋಟಿ ಕೋಟಿ ಹಣ ವ್ಯಯಿಸಬೇಕಾಗಿದೆ.

ಎಲ್ಲ ವಾರ್ಡ್‌ಗಳಲ್ಲೂ ಉದ್ಯಾನವನ: ಬೆಂಗಳೂರು ಅಂದಾಕ್ಷಣ ನೆನಪಿಗೆ ಬರುವುದು ಲಾಲ್ ಬಾಗ್, ಕಬ್ಬನ್ ಪಾರ್ಕ್. ಹೊರಜಿಲ್ಲೆ, ಹೊರರಾಜ್ಯ ಅಷ್ಟೇ ಏಕೆ? ಹೊರ ದೇಶದಿಂದ ಬಂದ ಪ್ರವಾಸಿಗರು ಸಹ ಈ ಉದ್ಯಾನವನಗಳಿಗೆ ಭೇಟಿ ನೀಡದೇ ಇರಲಾರರು. ಬೆಂಗಳೂರಿನ ಲ್ಯಾಂಡ್ ಮಾರ್ಕ್ ರೀತಿಯಲ್ಲಿವೆ ಈ ಉದ್ಯಾನವನಗಳು. ಇವು ದೊಡ್ಡ ಉದ್ಯಾನವನಗಳಾಗಿದ್ದರೂ ನಗರದ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿಯೂ ಉದ್ಯಾನವನಗಳು ಅಸ್ತಿತ್ವದಲ್ಲಿವೆ.

ಮಹಾನಗರದ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದರೂ ಅಲ್ಲಿ ಪಾರ್ಕ್ ಇರುವುದನ್ನು ನೋಡಬಹುದಾಗಿದೆ. ಮಹಾನಗರಿಯ ಆಕ್ಸಿಜನ್ ರೀತಿ ಪಾರ್ಕ್‌ಗಳಿವೆ. ಸಾವಿರ ಸಂಖ್ಯೆ ಮೀರಿದ ಪಾರ್ಕ್ ಗಳು ಬೆಂಗಳೂರಿಗರಿಗೆ ಮುಂಜಾನೆಯ ವಾಯುವಿಹಾರ, ಸಂಜೆಯ ವಿಶ್ರಾಂತಿಯ ತಾಣಗಳಾಗಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಾರ್ಕ್ ಗಳಿದ್ದರೂ ಕೂಡ ಬಿಬಿಎಂಪಿ ವ್ಯಾಪ್ತಿ ಅಭಿವೃದ್ಧಿಗೊಂಡಿರುವ ಯಾವುದೇ ಉದ್ಯಾನವನಗಳು ಒತ್ತುವರಿಯಾಗಿಲ್ಲ ಎನ್ನುವುದು ನೆಮ್ಮದಿಯ ವಿಷಯ.

ಬೆಂಗಳೂರಿನಲ್ಲಿ 8 ವಲಯಗಳಿದ್ದು, ಪೂರ್ವ ವಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಉದ್ಯಾನವನಗಳು ಅಸ್ತಿತ್ವದಲ್ಲಿವೆ. ಇದೊಂದು ವಲಯದಲ್ಲಿ 284 ಪಾರ್ಕ್ ಗಳಿವೆ. ಮಹದೇವಪುರ ವಲಯದಲ್ಲಿ ಅತಿ ಕಡಿಮೆ ಉದ್ಯಾನಗಳಿದ್ದು ಇಲ್ಲಿ 45 ಪಾರ್ಕ್ ಗಳಿವೆ. ಕಳೆದ ಐದು ವರ್ಷಗಳಲ್ಲಿ ಹೊಸದಾಗಿ ಸ್ಥಾಪಿಸಿರುವ ಪಾರ್ಕ್ ಗಳನ್ನು ಗಣನೆಗೆ ತೆಗೆದುಕೊಂಡರೆ ರಾಜರಾಜೇಶ್ವರಿ ನಗರ ಮೊದಲ ಸ್ಥಾನದಲ್ಲಿದೆ. ಈ ವಲಯದಲ್ಲಿರುವ 125 ಪಾರ್ಕ್​ಗಳಲ್ಲಿ 36 ಉದ್ಯಾನಗಳನ್ನು ಹೊಸದಾಗಿ ನಿರ್ಮಿಸಲಾಗಿದೆ ಎನ್ನುವುದು ಪಾಲಿಕೆ ನೀಡುತ್ತಿರುವ ಆದ್ಯತೆಗೆ ಕೈಗನ್ನಡಿಯಾಗಿದೆ.

ಬೆಂಗಳೂರು ವಲಯವಾರು ಪಾರ್ಕ್ ಗಳ ವಿವರ:

ಪೂರ್ವ ವಲಯದಲ್ಲಿ 284
ಪಶ್ಚಿಮ ವಲಯದಲ್ಲಿ 217
ದಕ್ಷಿಣ ವಲಯದಲ್ಲಿ 266
ಬೊಮ್ಮನಹಳ್ಳಿ ವಲಯದಲ್ಲಿ 110
ಯಲಹಂಕ ವಲಯದಲ್ಲಿ 96
ಮಹದೇವಪುರ ವಲಯದಲ್ಲಿ 45
ದಾಸರಹಳ್ಳಿ ವಲಯದಲ್ಲಿ 50
ರಾಜರಾಜೇಶ್ವರಿನ ನಗರ ವಲಯದಲ್ಲಿ 125

123.52 ಕೋಟಿ ರೂ ಉದ್ಯಾನವನ ನಿರ್ವಹಣೆಗೆ: 8 ವಲಯಗಳಲ್ಲಿ ಸೇರಿ ಒಟ್ಟು 1193 ಉದ್ಯಾನವನಗಳಿವೆ. ಈ ಎಲ್ಲಾ ಉದ್ಯಾನವನಗಳನ್ನು ತೋಟಗಾರಿಕಾ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 123.52 ಕೋಟಿ ರೂ.ಗಳನ್ನು ಕೇವಲ ನಿರ್ವಹಣೆಗಾಗಿ ವೆಚ್ಚ ಮಾಡಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಕಿಂಗ್ ಪಾತ್ ಗಳ ನಿರ್ಮಾಣ,ಸ್ವಚ್ಛತೆ,ನಿರ್ವಹಣೆ, ಪ್ರತಿ ಪಾರ್ಕ್ ಗೂ ಪ್ರತ್ಯೇಕವಾಗಿ ಅನುದಾನ ಹಂಚಿಕೆ ಮಾಡಲಾಗಿದ್ದು, ಮಂಜೂರಾದ ಅನುದಾನದಲ್ಲಿಯೇ ಪಾರ್ಕ್ ಗಳ ನಿರ್ವಹಣೆ ಮಾಡಲಾಗುತ್ತಿದೆ. ಪಶ್ಚಿಮ ವಲಯದ ಪಾರ್ಕ್ ಗಳ ನಿರ್ವಹಣೆಗೆ ಸಿಂಹಪಾಲು ವಿನಿಯೋಗಿಸಲಾಗಿದೆ. ಒಟ್ಟು 38.46 ಕೋಟಿ ವ್ಯಯಿಸಲಾಗಿದೆ.ದಾಸರಹಳ್ಳಿ ವಲಯದ ಪಾರ್ಕ್ ಗಳ ನಿರ್ವಹಣೆಗೆ ಅತಿ ಕಡಿಮೆ ಹಣ ವ್ಯಯಿಸಲಾಗಿದೆ. ಇಲ್ಲಿ 3.75 ಕೋಟಿ ರೂ.ಗಳನ್ನು ಕಳೆದ ಮೂರು ವರ್ಷಗಳಲ್ಲಿ ಪಾರ್ಕ್ ಗಳ ನಿರ್ವಹಣೆಗೆ ಖರ್ಚು ಮಾಡಲಾಗಿದೆ.

ಇದನ್ನೂ ಓದಿ:ಮತ್ಸೋದ್ಯಮ ಆಧುನೀಕರಣ: ಕರಾವಳಿಯಲ್ಲಿ ಪ್ರಯೋಜನಕ್ಕೆ ಬಾರದ ಲಾಂಗ್ ಲೈನರ್ ಬೋಟ್​ಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.