ETV Bharat / state

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಸಂತ್ರಸ್ತೆ ಮದುವೆಯಾಗುವುದಾಗಿ ಭರವಸೆ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್

author img

By ETV Bharat Karnataka Team

Published : Nov 21, 2023, 10:47 PM IST

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ, ಸಂತ್ರಸ್ತೆಯನ್ನು ಮುದುವೆಯಾಗುವುದಾಗಿ ಭರವಸೆ ನೀಡಿರುವುದರಿಂದ ಹೈಕೋರ್ಟ್​ ಪ್ರಕರಣ ರದ್ದು ಪಡಿಸಿದೆ.

ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿದ್ದ ಆರೋಪಿ ಮದುವೆಯಾಗುವುದಾಗಿ ಭರವಸೆ
ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿದ್ದ ಆರೋಪಿ ಮದುವೆಯಾಗುವುದಾಗಿ ಭರವಸೆ

ಬೆಂಗಳೂರು: ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿದ್ದ ಆರೋಪಿ ಸಂತ್ರಸ್ತೆಯನ್ನೇ ಮದುವೆಯಾಗುವುದಾಗಿ ಭರವಸೆ ನೀಡಿದ ಮತ್ತು ಮದುವೆಗೆ ಸಂತ್ರಸ್ತೆ ಒಪ್ಪಿದ ಕಾರಣ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ. ತನ್ನ ವಿರುದ್ದದ ಪ್ರಕರಣ ರದ್ದುಪಡಿಸುವಂತೆ ಕೋರಿ ಚಿಕ್ಕಬಳ್ಳಾಪುರದ ಆರೋಪಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರ ಪೀಠ ಈ ಆದೇಶ ಮಾಡಿದೆ.

ಅತ್ಯಾಚಾರ ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದರು. ಸಂತ್ರಸ್ತೆ ಲೈಂಗಿಕ ಸಂಭೋಗಕ್ಕೆ ಗುರಿಯಾಗಿದ್ದಾಳೆ ಎಂಬುದಾಗಿ ವೈದ್ಯಕೀಯ ದಾಖಲೆಗಳು ಬಹಿರಂಗಪಡಿಸುತ್ತವೆ. ಇದೀಗ ವಿಚಾರಣೆಗೆ ಹಾಜರಾಗಿರುವ ಸಂತ್ರಸ್ತೆ, ಆರೋಪಿಯನ್ನು ಮದುವೆಯಾಗುವುದಾಗಿ ದೃಢೀಕರಿಸಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ ಆರೋಪಿ ಸಹ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಅಲ್ಲದೇ, ವಿಚಾರಣಾ ನ್ಯಾಯಾಲಯದ ವಿಚಾರಣೆ ವೇಳೆ ಪ್ರಕರಣದ ಸಾಕ್ಷಿಯಾಗಿರುವ ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ನುಡಿದ್ದಾರೆ. ಪ್ರಾಸಿಕ್ಯೂಷನ್‌ನ್ನು ಬೆಂಬಲಿಸುವ ಯಾವೊಂದು ಸಾಕ್ಷ್ಯವನ್ನೂ ಪಾಟಿ ಸವಾಲಿನಲ್ಲಿ ಸಂತ್ರಸ್ತೆ ದಾಖಲಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರೋಪಿ ವಿರುದ್ಧದ ಕ್ರಿಮಿನಲ್‌ ವಿಚಾರಣಾ ಪ್ರಕ್ರಿಯೆ ಮುಂದುವರಿದರೆ, ಆತ ಸೆರೆಮನೆ ವಾಸದಲ್ಲಿ ಮುಂದುವರಿಯಲಿದ್ದು, ಹೆಚ್ಚಿನ ಸಂಕಟ ಅನುಭವಿಸುತ್ತಾನೆ. ಜೊತೆಗೆ, ಸಂತ್ರಸ್ತೆಗೆ ನ್ಯಾಯ ಸಿಗುವುದಕ್ಕಿಂತ ಹೆಚ್ಚಿನ ದುಃಖ ಒದಗುತ್ತದೆ. ನ್ಯಾಯದಾನದೊಂದಿಗೆ ಪ್ರಕರಣ ಅಂತ್ಯವಾಗುವುದಿಲ್ಲ. ಬದಲಿಗೆ ಕಾನೂನಿನ ಪ್ರಕ್ರಿಯೆ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಆರೋಪಿ ಮೇಲಿನ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು? ಅರ್ಜಿದಾರ ಆರೋಪಿಯು ಪ್ರಕರಣದ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದ ವೇಳೆ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಈ ಕುರಿತು 2021ರಲ್ಲಿ ಆತನ ವಿರುದ್ಧ ಚಿಂತಾಮಣಿ ಟೌನ್‌ ಠಾಣಾ ಪೊಲೀಸರು ದೂರು ದಾಖಲಿಸಿದ್ದರು. ಪ್ರಕರಣವು ಚಿಕ್ಕಬಳ್ಳಾಪುರದ ಪೋಕ್ಸೋ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಆ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಸಂತ್ರಸ್ಥೆಯಿಂದ ಪ್ರಮಾಣ ಪತ್ರ: ಇತ್ತೀಚೆಗೆ ಅರ್ಜಿ ವಿಚಾರಣೆಗೆ ಬಂದ ಸಂದರ್ಭದಲ್ಲಿ ಸಂತ್ರಸ್ತೆಯು ತನ್ನ ತಂದೆಯೊಂದಿಗೆ ಹಾಜರಾಗಿ ಪ್ರಮಾಣ ಪತ್ರ ಸಲ್ಲಿಸಿದರು. ಪ್ರಕರಣದಲ್ಲಿ ತಾನೇ ದೂರುದಾರೆಯಾಗಿದ್ದೇನೆ. ಪ್ರಕರಣದ ಎಲ್ಲಾ ವಾಸ್ತವಾಂಶಗಳು ನನಗೆ ತಿಳಿದಿದೆ. ಸದ್ಯ ನಾನು ವಯಸ್ಕಳಾಗಿದ್ದೇನೆ. ನಾನು ಅರ್ಜಿದಾರರೊಂದಿಗೆ ಪ್ರಣಯದ (ರೊಮಾಂಟಿಕ್‌) ಸಂಬಂಧದಲ್ಲಿದ್ದೇನೆ. ಆತನನ್ನು ವಿವಾಹವಾಗಲು ಹಾಗೂ ಸಂತೋಷದಿಂದ ದಾಂಪತ್ಯ ಜೀವನ ನಡೆಸಲು ಇಚ್ಛಿಸಿದ್ದೇನೆ. ನನ್ನ ವಿವಾಹವಾಗಲು ಅರ್ಜಿದಾರನೂ ಒಪ್ಪಿದ್ದಾನೆ. ಹಾಗಾಗಿ, ಅರ್ಜಿದಾರನ ವಿರುದ್ಧ ವಿಚಾರಣಾ ನ್ಯಾಯಾಲಯದ ಮುಂದಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ನನ್ನದೇನು ಆಕ್ಷೇಪಣೆ ಇಲ್ಲ. ಈ ಹೇಳಿಕೆಯನ್ನು ನಾನು ಸ್ವಂತ ಇಚ್ಛೆಯಿಂದ ದಾಖಲಿಸುತ್ತಿದ್ದೇನೆ. ಈ ಪ್ರಮಾಣ ಪತ್ರ ಸಲ್ಲಿಸಲು ನನ್ನ ಮೇಲೆ ಯಾರೂ ಪ್ರಭಾವ ಬೀರಿಲ್ಲ’ ಎಂದು ಸಂತ್ರಸ್ತೆ ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು.

ಇದೇ ವೇಳೆ, ಪೊಲೀಸರು ಜೈಲಿನಿಂದ ಅರ್ಜಿದಾರ ಆರೋಪಿಯನ್ನು ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ‘ಸಂತ್ರಸ್ತೆಯನ್ನು ವಿವಾಹವಾಗಲು ಇಚ್ಚಿಸಿದ್ದೇನೆ. ನಮ್ಮ ನಡುವಿನ ಲೈಂಗಿಕ ಸಂಭೋಗವು ಸಮ್ಮತಿಯಿಂದಲೇ ನಡೆದಿದೆ’ ಎಂದು ಆತ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದ. ಅದನ್ನು ಪರಿಗಣಿಸಿ ಹೈಕೋರ್ಟ್‌ ಈ ಆದೇಶ ಮಾಡಿದೆ.

ಇದನ್ನೂ ಓದಿ: ದಾನಿಗಳಿಂದ ವೀರ್ಯಾಣು ಪಡೆದು ಮಕ್ಕಳ ಪಡೆಯಲು 13 ದಂಪತಿಗಳಿಗೆ ಅವಕಾಶ ಕಲ್ಪಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.