ETV Bharat / state

ದಾನಿಗಳಿಂದ ವೀರ್ಯಾಣು ಪಡೆದು ಮಕ್ಕಳ ಪಡೆಯಲು 13 ದಂಪತಿಗಳಿಗೆ ಅವಕಾಶ ಕಲ್ಪಿಸಿದ ಹೈಕೋರ್ಟ್

author img

By ETV Bharat Karnataka Team

Published : Nov 21, 2023, 9:13 PM IST

ದಾನಿಗಳಿಂದ ವೀರ್ಯಾಣು ಪಡೆದು ಮಕ್ಕಳನ್ನು ಪಡೆಯಲು 13 ದಂಪತಿಗಳಿಗೆ ಹೈಕೋರ್ಟ್​ ಅವಕಾಶ ಕಲ್ಪಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ದಾನಿಗಳಿಂದ ವೀರ್ಯಾಣು ಪಡೆದು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಪಡೆಯಲು 13 ದಂಪತಿಗಳಿಗೆ ಹೈಕೋರ್ಟ್ ಅನುವು ಮಾಡಿಕೊಟ್ಟಿದೆ. 2023ರ ಮಾ.14ರಿಂದ ಜಾರಿಗೆ ಬಂದಿರುವ ಸರೋಗೆಸಿ ತಿದ್ದುಪಡಿ ನಿಯಮ 7 ಅನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.

ಅಲ್ಲದೇ, ಹೊಸ ಬಾಡಿಗೆ ತಾಯ್ತನ (ಸರೋಗೆಸಿ)ತಿದ್ದುಪಡಿಯ ಪ್ರಕಾರ, ದಾನಿಗಳ ವೀರ್ಯ ಪಡೆಯಲು ನಿರ್ಬಂಧವಿದೆ. ಆದರೆ, ಅದು ಎಲ್ಲ ಪ್ರಕರಣಗಳನ್ನೂ ಏಕರೂಪವಾಗಿ ಅನ್ವಯಿಸುವುದು ಸರಿಯಲ್ಲ. ಪ್ರತಿಯೊಂದು ಪ್ರಕರಣಗಳನ್ನು ಆಧರಿಸಿ ನಿಯಮಗಳನ್ನು ಸಡಿಲಗೊಳಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.

‘‘ಮಕ್ಕಳನ್ನು ಹೊಂದಬೇಕು ಎನ್ನುವ ದಂಪತಿಗಳ ವೈದ್ಯಕೀಯ ಸ್ಥಿತಿಗತಿ ಆಧರಿಸಿ ನಿಯಮದಲ್ಲಿರುವ ನಿರ್ಬಂಧವನ್ನು ತೆಗೆದುಹಾಕಬೇಕಾಗುತ್ತದೆ ಅಥವಾ ಸಡಿಲಿಸಬೇಕಾಗುತ್ತದೆ. ಅದಕ್ಕೆ 14ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಾಯಿದೆಯಲ್ಲಿ ವೈದ್ಯಕೀಯ ಸ್ಥಿತಿಗತಿ ಬಗ್ಗೆೆ ವ್ಯಾಖ್ಯಾನ ಇಲ್ಲದಿದ್ದರೂ ಸಹ ನಿಯಮ 14ರಲ್ಲಿ ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಳ್ಳಲು ಬಯಸುವ ಮಹಿಳೆಯ ಆರೋಗ್ಯ ಸ್ಥಿತಿಗತಿ ಅಂಶ ಪ್ರಸ್ತಾಪಿಸಲಾಗಿದೆ'' ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ, ನ್ಯಾಯಾಲಯದ ಮುಂದೆ ಹಲವು ಅರ್ಜಿದಾರ ದಂಪತಿಗಳಿದ್ದಾರೆ. ಅವರ ವೈದ್ಯಕೀಯ ಸ್ಥಿತಿಗತಿಗಳನ್ನು ಪರಿಗಣಿಸಿ ಅವರಿಗೆ ಗರ್ಭಾವಸ್ಥೆಯ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ನೀಡಲಾಗುವುದು. ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಹಲವು ಹೈಕೋರ್ಟ್​ಗಳ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ ಕೇರಳ, ದೆಹಲಿ ಸೇರಿದಂತೆ ಹಲವು ಹೈಕೋರ್ಟ್‌ಗಳ ಮುಂದೆ ಬಂದಿವೆ. ದೆಹಲಿ ಕೋರ್ಟ್ ಮೇಲ್ನೋಟಕ್ಕೆ ಹೊಸ ನಿಯಮಗಳು ದಂಪತಿಗಳ ಹಕ್ಕುಗಳನ್ನು ಕಸಿದುಕೊಂಡಿವೆ ಎಂದು ಹೇಳಿದ್ದರೆ, ಕೇರಳ ಹೈಕೋರ್ಟ್ ಈ ತಿದ್ದುಪಡಿಯ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದೆ. ಇದೇ ವಿಚಾರ ಸುಪ್ರೀಂಕೋರ್ಟ್ ಮುಂದೆಯೂ ಬಾಕಿ ಇದೆ. ಅಲ್ಲಿ ಮಧ್ಯಂತರ ಆದೇಶವಾಗಿ ಮಹಿಳೆಯೊಬ್ಬರಿಗೆ ದಾನಿಗಳಿಂದ ವೀರ್ಯಾಣುವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿರುವ ಹೈಕೋರ್ಟ್ ಈ ಸಂಬಂಧದ ಹಲವು ತೀರ್ಪುಗಳನ್ನು ಉಲ್ಲೇಖಿಸಿದೆ.

ಜತೆಗೆ ಅರ್ಜಿದಾರರು ತಿದ್ದುಪಡಿಯನ್ನು ಪ್ರಶ್ನಿಸಿದ್ದಾರೆ. ಆದರೆ, ಹೊಸ ತಿದ್ದುಪಡಿ ವಿಚಾರ ಸುಪ್ರೀಂಕೋರ್ಟ್​ನಲ್ಲಿ ಬಾಕಿ ಇರುವ ಹಿನ್ನೆೆಲೆಯಲ್ಲಿ ನಿಯಮವನ್ನು ಸ್ವಲ್ಪ ಸಡಿಲಿಕೆ ಮಾಡಿ ನ್ಯಾಯಾಲಯದ ಮೊರೆ ಹೋಗಿದ್ದ 13 ದಂಪತಿಗೆ ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ : ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲಾಗುವುದಿಲ್ಲ ಎನ್ನಲಾಗದು : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.