ETV Bharat / state

ರಾಜ್ಯಸಭೆ ಚುನಾವಣೆ: ಮೂರು ಪಕ್ಷಗಳಿಗೂ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ಸವಾಲು!

author img

By

Published : Jun 2, 2022, 10:58 PM IST

ಸಂಖ್ಯಾಬಲ ಇಲ್ಲದಿದ್ದರೂ ಕಾಂಗ್ರೆಸ್ ಎರಡನೇ ಹಾಗೂ ಜೆಡಿಎಸ್​​​​ನ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಬಿಜೆಪಿಗೂ ' ಆಪರೇಷನ್ ಎಂಎಲ್‍ಎ ಭೂತ' ಕಾಡುತ್ತಿದೆ. ಬೇರೆ ಶಾಸಕರನ್ನು ಸೆಳೆಯುವ ನೆಪದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ನಮ್ಮ ಪಕ್ಷದವರನ್ನೇ ಹೈಜಾಕ್ ಮಾಡಬಹುದೆಂಬ ಕಾರಣಕ್ಕಾಗಿ ಮತದಾನದ ಮೂರು ದಿನ ಮುನ್ನವೇ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸರ್ಕಸ್ ನಡೆಸುತ್ತಿದೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್
ಕಾಂಗ್ರೆಸ್, ಬಿಜೆಪಿ, ಜೆಡಿಎಸ್

ಬೆಂಗಳೂರು: ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಮೂರು ಪಕ್ಷಗಳಿಗೂ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ಸವಾಲಾಗಿದ್ದು, ಅಡ್ಡಮತದಾನದ ಆತಂಕ ಎದುರಾಗಿದೆ.

ಹೀಗಾಗಿ ರಾಜಸ್ಥಾನದ ಮಾದರಿಯಲ್ಲಿ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ಸ್ ಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ತಮ್ಮ ಶಾಸಕರನ್ನು ಮತದಾನ ನಡೆಯುವ ಮೂರು ದಿನಗಳ ಮುನ್ನ ಬಿಜೆಪಿ ರೆಸಾರ್ಟ್ಸ್ ಗೆ ಸ್ಥಳಾಂತರಿಸಲು ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದೆ ರಾಜ್ಯಸಭೆ ಚುನಾವಣೆ ವೇಳೆ ಕೆಲ ಶಾಸಕರು ಅಡ್ಡಮತದಾನ ಮಾಡಿರುವ ನಿದರ್ಶನಗಳಿರುವುದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ, ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ರೆಸಾರ್ಟ್ಸ್ ಗೆ ಕರೆದೊಯ್ಯಲಿದೆ. ನಗರದ ಹೊರವಲಯದಲ್ಲಿರುವ ಪ್ರಮುಖ ರೆಸಾರ್ಟ್‌ ವೊಂದನ್ನು ಈಗಾಗಲೇ ಕಾಯ್ದಿರಿಸಿದ್ದು, ಜೂನ್ 8 ರಂದು ಎಲ್ಲಾ ಶಾಸಕರು ಸ್ಥಳಾಂತರವಾಗುವ ಸಾಧ್ಯತೆ ಇದೆ.

ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸರ್ಕಸ್.. ಸಂಖ್ಯಾಬಲ ಇಲ್ಲದಿದ್ದರೂ ಕಾಂಗ್ರೆಸ್ ಎರಡನೇ ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಬಿಜೆಪಿಗೂ ' ಆಪರೇಷನ್ ಎಂಎಲ್‍ಎ ಭೂತ' ಕಾಡುತ್ತಿದೆ. ಬೇರೆ ಶಾಸಕರನ್ನು ಸೆಳೆಯುವ ನೆಪದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ನಮ್ಮ ಪಕ್ಷದವರನ್ನೇ ಹೈಜಾಕ್ ಮಾಡಬಹುದೆಂಬ ಕಾರಣಕ್ಕಾಗಿ ಮತದಾನದ ಮೂರು ದಿನ ಮುನ್ನವೇ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸರ್ಕಸ್ ನಡೆಸುತ್ತಿದೆ.

ರಾಜ್ಯಸಭೆಯಲ್ಲಿ ಒಂದೊಂದು ಸ್ಥಾನವೂ ಬಿಜೆಪಿಗೆ ಮುಖ್ಯವಾಗಿರುವುದರಿಂದ ಹೇಗಾದರೂ ಮಾಡಿ ಕರ್ನಾಟಕದಿಂದ ಮೂರು ಸ್ಥಾನವನ್ನು ಗೆಲ್ಲಲೇಬೇಕೆಂದು ಕಾರ್ಯತಂತ್ರ ರೂಪಿಸಿದೆ. ಸರ್ಕಾರ, ನಾಯಕತ್ವದ ಹಾಗೂ ಸಚಿವ ಸಂಪುಟ ಪುನಾರಚನೆಯಾಗದೇ ಮುನಿಸಿಕೊಂಡಿರುವ ಕೆಲ ಶಾಸಕರು ಮತದಾನದ ವೇಳೆ ಕೈ ಕೊಡಬಹುದೆಂಬ ಭೀತಿಯಿಂದ ಶಾಸಕರ ಮನವೊಲಿಸುವುದಕ್ಕಾಗಿಯೇ ರೆಸಾರ್ಟ್ ಗೆ ಕರೆದೊಯ್ಯುವ ಸಾಧ್ಯತೆ ಇದೆ.

ಆಡಳಿತಾರೂಢ ಬಿಜೆಪಿ ವಿಧಾನಸಭೆಯಲ್ಲಿ 119 ಸದಸ್ಯರನ್ನು ಹೊಂದಿದ್ದು, ಜತೆಗೆ ಪಕ್ಷೇತರ ಶಾಸಕರಾದ ಎನ್.ಮಹೇಶ್ ಮತ್ತು ಹೆಚ್.ನಾಗೇಶ್ ಕೂಡ ಕಮಲಕ್ಕೆ ಬೆಂಬಲ ಸೂಚಿಸಿದ್ದಾರೆ. ಕಣದಲ್ಲಿರುವ ಮೂವರು ಅಭ್ಯರ್ಥಿಗಳಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‍ ಸಿಂಗ್, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಗಲಿಗೆ ಹೊರಿಸಲಾಗಿದೆ.

ಹಿರಿಯ ನಾಯಕರ ಸಲಹೆ.. ಜತೆಗೆ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಕಿಶನ್‍ರೆಡ್ಡಿ ಅವರನ್ನು ನಿನ್ನೆಯಷ್ಟೇ ನೇಮಕ ಮಾಡಲಾಗಿದ್ದು, ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಬೇಕೆಂದು ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಶಾಸಕರ ಮನವೊಲಿಸಲು ಮತ್ತು ಮತದಾನದ ವೇಳೆ ಯಾವ ಅಭ್ಯರ್ಥಿಗೆ ಯಾವೆಲ್ಲಾ ಶಾಸಕರು ತಮ್ಮ ಹಕ್ಕು ಚಲಾಯಿಸಬೇಕು, ಮತದಾನದ ವಿಧಾನ ಹಾಗೂ ಪ್ರಕ್ರಿಯೆಗಳ ಬಗ್ಗೆ ಹಿರಿಯ ನಾಯಕರು ಸಲಹೆ ನೀಡಲಿದ್ದಾರೆ.

ಮೊದಲ ಅಭ್ಯರ್ಥಿಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಯಾವ ಯಾವ ಶಾಸಕರು ಮತ ಚಲಾಯಿಸಬೇಕು, ಎರಡನೇ ಅಭ್ಯರ್ಥಿ ನಟ ಜಗ್ಗೇಶ್‍ಗೆ ಯಾರು ಮತ ನೀಡಬೇಕು ಹಾಗೂ ಮೂರನೇ ಅಭ್ಯರ್ಥಿಯಾಗಿರುವ ಲೆಹರ್‍ಸಿಂಗ್‍ಗೆ ಯಾರು ಮತ ಹಾಕಬೇಕು ಎಂಬುದರ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ಮತದಾನದ ವೇಳೆ ಪ್ರತಿಯೊಬ್ಬ ಶಾಸಕರು ಕಡ್ಡಾಯವಾಗಿ ಏಜೆಂಟರ್​ಗೆ ತೋರಿಸಿಯೇ ಮತ ಚಲಾಯಿಸಬೇಕು. ಒಂದು ವೇಳೆ ಹಾಗೆಯೇ ಹಾಕಿದರೆ ಅದು ಅಸಿಂಧುವಾಗುತ್ತದೆ ಎಂಬುದನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಲಾಗುವುದು.

ಈ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಶಾಸಕರಿಗೆ ತಿಳಿ ಹೇಳುವುದು ಹಾಗೂ ಮುನಿಸಿ, ಅಸಮಾಧಾನ ಏನೇ ಇದ್ದರೂ ಎಲ್ಲವನ್ನು ಮರೆತು ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕೆಂದು ವರಿಷ್ಟರು ಸೂಚನೆ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಓದಿ: ರಾಜ್ಯಸಭೆ ಚುನಾವಣೆ : ಮುಂದುವರಿದ ಕಾಂಗ್ರೆಸ್ - ಜೆಡಿಎಸ್‍ ಮೈತ್ರಿ ಗೊಂದಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.