ETV Bharat / state

ಕೈ ತಪ್ಪಿದ ಸಚಿವ ಸ್ಥಾನ: ಡಿಕೆಶಿ​ ನಿವಾಸಕ್ಕೆ ಟಿ.ಬಿ.ಜಯಚಂದ್ರ ಭೇಟಿ; ಮನವೊಲಿಕೆ ಕಸರತ್ತು

author img

By

Published : May 28, 2023, 4:28 PM IST

ಕಾಂಗ್ರೆಸ್‌ ಪಕ್ಷದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿರಿಯ ಮುಖಂಡರ ಮನವೊಲಿಕೆ ಕಸರತ್ತು ನಡೆಯುತ್ತಿದೆ.

ಮಾಜಿ ಸಚಿವ ಟಿ.ಬಿ ಜಯಚಂದ್ರ ಜೊತೆ ಮಾತುಕತೆ
ಮಾಜಿ ಸಚಿವ ಟಿ.ಬಿ ಜಯಚಂದ್ರ ಜೊತೆ ಮಾತುಕತೆ

ಬೆಂಗಳೂರು : ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದರು. ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಆಗಮಿಸಿದ ಅವರು ಕೆಲ ಕಾಲ ಚರ್ಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕರಾದ ಅಶೋಕ್ ಪಟ್ಟಣ, ಸಿ.ಎಸ್.ನಾಡಗೌಡ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಅವರೂ ಸಹ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಶೋಕ್ ಪಟ್ಟಣ ಮತ್ತಿತರ ನಾಯಕರು ಡಿಸಿಎಂ ಬಳಿ ಜಯಚಂದ್ರರನ್ನು ಕರೆತಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಮಾಹಿತಿ ಇದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಜಯಚಂದ್ರ ಅವರಿಗೆ ಮೊದಲು ಸ್ಪೀಕರ್ ಹುದ್ದೆ ನಿಭಾಯಿಸುವಂತೆ ಆಹ್ವಾನ ನೀಡಲಾಗಿತ್ತು. ಆದರೆ ಅದನ್ನು ನಿರಾಕರಿಸಿದ್ದ ಅವರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಈ ಕಾರಣಕ್ಕಾಗಿಯೇ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂಬ ಮಾಹಿತಿ ದೊರೆತಿದೆ.

ಡಿ.ಕೆ.ಶಿವಕುಮಾರ್​ ಭೇಟಿ ಸಂದರ್ಭ ಜಯಚಂದ್ರ, ಮೊದಲ ಹಂತದಲ್ಲಿ ಅವಕಾಶ ಕೈ ತಪ್ಪಿದೆ. ನಾನು ಸಹ ಹಿಂದೆ ಸಿದ್ದರಾಮಯ್ಯ ಸಂಪುಟ ಸೇರಲು ಕೆಲ ತಿಂಗಳು ಕಾದಿದ್ದೆ ಎಂದು ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ. ಇದಕ್ಕೆ ಡಿಕೆಶಿ, ನೀವು ತಾಳ್ಮೆಯಿಂದ ಇರಿ, ಅವಕಾಶ ಸಿಗಲಿದೆ. ಎಲ್ಲವೂ ಇಲ್ಲಿಗೇ ಮುಗಿದು ಹೋಗಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ನಿಮಗೆ ಉತ್ತಮ ಜವಾಬ್ದಾರಿ ನೀಡಲಿದೆ ಎಂದು ಮನವೊಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಮೂವರು ಕೆಪಿಸಿಸಿ ಕಾರ್ಯಾಧ್ಯಕ್ಷರು ಸಚಿವರಾಗಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ತಮಗೆ ಅವಕಾಶ ಒದಗಿಸಿಕೊಡುತ್ತೇವೆ. ಒಂದಿಷ್ಟು ದಿನ ನೀವು ತಾಳ್ಮೆ ವಹಿಸಿದರೆ ಅವಕಾಶ ಹುಡುಕಿಬರಲಿದೆ. ಹೈಕಮಾಂಡ್ ನಾಯಕರ ಗಮನಕ್ಕೆ ತಂದೇ ಎಲ್ಲ ಕೆಲಸ ಆಗಿದೆ. ಇದರಿಂದ ಈ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾದರೂ ಪ್ರಯೋಜನ ಇಲ್ಲ ಎಂದು ಡಿಕೆಶಿ, ಜಯಚಂದ್ರ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಡಿಕೆಶಿ ಪ್ರತಿಕ್ರಿಯೆ : ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವುದಾಗಿ ಜನರಿಗೆ ಮಾತು ನೀಡಿದ್ದೇವೆ. ಅರ್ಹರನ್ನು ಪಾರದರ್ಶಕವಾಗಿ ನೇಮಕ ಮಾಡಿ, ನಿರುದ್ಯೋಗ ಸಮಸ್ಯೆ ಬಗೆಹರಿಸುವುದು ನಮ್ಮ ಸರ್ಕಾರದ ಆದ್ಯತೆ. ಸರ್ಕಾರದ ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಪಾರದರ್ಶಕ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುವುದು. ಹೀಗಾಗಿ ಇದು ಒಂದೆರಡು ದಿನಗಳಲ್ಲಿ ಆಗುವುದಿಲ್ಲ, ಇದಕ್ಕೆ ಸಮಯ ಬೇಕು ಎಂದಿದ್ದಾರೆ.

ಬಿಜೆಪಿ ನಾಯಕರು ಹಾಗು ಕೆಲ ಶಾಸಕರು ವಿದ್ಯುತ್ ಬಿಲ್ ಹಾಗೂ ಬಸ್ ಟಿಕೆಟ್ ಹಣ ಪಾವತಿಸಬೇಡಿ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಅವರು ಜನರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮೊದಲು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕಲಿ. 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಸೇರಿ ಬಿಜೆಪಿಯು ಅನೇಕ ಭರವಸೆಗಳನ್ನು ಪ್ರಣಾಳಿಕೆ ನೀಡಿತ್ತು. ಆದರೆ ಅವರಿಂದ ಆ ಕಾರ್ಯಗಳನ್ನು ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ ನಾವು ಬಸವಣ್ಣ ಹಾಗೂ ಕುವೆಂಪು ಅವರ ನಾಡಿನವರು. ಪಕ್ಷ ಕೊಟ್ಟ ಮಾತಿಗೆ ಬದ್ಧವಾಗಿದ್ದು, ನುಡಿದಂತೆ ನಡೆಯುತ್ತೇವೆ. ನಮ್ಮ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

ಪ್ರವೀಣ್​ ನೆಟ್ಟಾರು ಪತ್ನಿಗೆ ಉದ್ಯೋಗ ವಿಚಾರ : ಪುತ್ತೂರಿನಲ್ಲಿ ಹತ್ಯೆಗೀಡಾದ ಬಿಜೆಪಿ ಮುಖಂಡ ಪ್ರವೀಣ್​ ನೆಟ್ಟಾರು ಅವರ ಪತ್ನಿಗೆ ಉದ್ಯೋಗ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಬಿಜೆಪಿಯವರು ಏನಾದರೂ ಮಾತನಾಡಲಿ. ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಈ ವಿಚಾರವಾಗಿ ತೀರ್ಮಾನ ಮಾಡಿದ್ದಾರೆ. ಬಿಜೆಪಿಯವರು ಆತುರದಿಂದ ರಾಜಕೀಯ ಮಾಡಲು ಬಯಸಿದರೆ ನಾವು ಸಮಾಜದ ಶಾಂತಿ, ಸೌಹಾರ್ದತೆ ಹಾಗೂ ಅಭಿವೃದ್ಧಿ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಸಚಿವರಾಗಿ ಬೆಳಗಾವಿಗೆ ಬಂದಿಳಿದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್​; ಬೆಂಬಲಿಗರಿಂದ ಅದ್ಧೂರಿ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.