ETV Bharat / state

ಸಚಿವರಾಗಿ ಬೆಳಗಾವಿಗೆ ಬಂದಿಳಿದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್​; ಬೆಂಬಲಿಗರಿಂದ ಅದ್ಧೂರಿ ಸ್ವಾಗತ

author img

By

Published : May 28, 2023, 2:58 PM IST

ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸತೀಶ್​ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಗೆ ಆಗಮಿಸಿದರು.

ನೂತನ ಸಚಿವರು ಆಗಮನ
ನೂತನ ಸಚಿವರು ಆಗಮನ

ಬೆಳಗಾವಿ: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇಂದು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸತೀಶ್​ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್​ ಅವರನ್ನು ಬೆಂಬಲಿಗರು ಅದ್ದೂರಿಯಾಗಿ ಬರಮಾಡಿಕೊಂಡರು. ಯಮಕನಮರಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರಗಳಿಂದ ಆಗಮಿಸಿದ್ದ ನೂರಾರು ಬೆಂಬಲಿಗರು ನೂತನ ಸಚಿವರಿಗೆ ಪುಷ್ಪವೃಷ್ಟಿಗೈದು ಸ್ವಾಗತಿಸಿದರು. ಸವದತ್ತಿ ಶಾಸಕ ವಿಶ್ವಾಸ ವೈದ್ಯ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿ ಹಲವರಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್​ ಜಾರಕಿಹೊಳಿ, ಜಿಲ್ಲೆಯ ಹಲವು ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ಬಾರಿ ಗೆದ್ದವರು ಕನಿಷ್ಠ ಎರಡು ಅಥವಾ ಮೂರು ಬಾರಿ ಗೆದ್ದವರೇ ಆಗಿದ್ದಾರೆ. ಬೆಳಗಾವಿ ಜಿಲ್ಲೆ ಮತ್ತು ಬೇರೆ ಕಡೆಯೂ ಕೆಲವರಿಗೆ ಸಚಿವ ಸ್ಥಾನ ಕೊಡಲು ಸಾಧ್ಯವಾಗಲಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನ ಎಲ್ಲೆಡೆ ಇದೆ ಅಥವಾ ಇಲ್ಲ ಎಂದು ಹೇಳಲು ಆಗುವುದಿಲ್ಲ.

ಯಾರಿಗೆ ಸಚಿವ ಸ್ಥಾನ ಸಿಕ್ಕಿಲ್ಲವೋ ಅವರೆಲ್ಲ ಆರೋಪ ಮಾಡುತ್ತಿದ್ದಾರೆ ಅಷ್ಟೇ. ಅದು ಸ್ವಾಭಾವಿಕ ಮತ್ತು ಸಹಜ. ಅಂತವರಿಗೆ ಬೇರೆ ಬೇರೆ ಹುದ್ದೆ ಕೊಡುತ್ತೇವೆ. ಖಾತೆ ಹಂಚಿಕೆ ಈಗಾಗಲೇ ಫೈನಲ್ ಆಗಿದೆ, ಬಿಡುಗಡೆ ಆಗಿರುವ ಪಟ್ಟಿಯೇ ಅಂತಿಮ. ರಾಜ್ಯಪಾಲರಿಂದ ಅಂತಿಮ ಮುದ್ರೆ ಸಿಗಬೇಕಿದೆ ಎಂದು ತಿಳಿಸಿದರು.

ಬಿಜೆಪಿ ಯೋಜನೆಗಳನ್ನು ಮುಂದುವರಿಸುತ್ತೀರಾ? ಎಂಬ ಪ್ರಶ್ನೆಗೆ, ಅವಶ್ಯಕ, ಜನಪರವಾಗಿದ್ದರೆ ಮುಂದುವರಿಸುತ್ತೇವೆ. ಅನವಶ್ಯಕ ಯೋಜನೆಗಳಿದ್ದರೆ ಅವುಗಳನ್ನು ಬಂದ್ ಮಾಡುತ್ತೇವೆ. ಬಜರಂಗದಳ ಬ್ಯಾನ್ ಮಾಡುವ ಬಗ್ಗೆ, ಬ್ಯಾನ್ ಮಾಡಲು ತರಾತುರಿ ಏನಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಬ್ಯಾನ್ ಮಾಡುತ್ತೇವೆ ಎಂದು ನಾವು ಎಲ್ಲಿಯೂ ಹೇಳಿಲ್ಲ ಎಂದರು.

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುವ ವಿಚಾರಕ್ಕೆ ಮಾತನಾಡಿದ ಸತೀಶ ಜಾರಕಿಹೊಳಿ, ಮೌಢ್ಯ ನಿಷೇಧ ಕಾಯ್ದೆ ನಾವು ಬರುವ ಮುಂಚೆಯೇ ಇದೆ. ಈಗ ಮತ್ತೆ ಅದನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ ಎಂದರು. ಸಚಿವ ಸ್ಥಾನ ಸಿಗದೆ ಬೇಜಾರಾದ ಶಾಸಕರನ್ನು ವರಿಷ್ಠರು ಕರೆಸಿ ಮಾತನಾಡುತ್ತಾರೆ. ಈಗಾಗಲೇ ಸಂಪುಟ ವಿಸ್ತರಣೆ ಆಗಿದೆ. ಸರ್ಕಾರ ಟೇಕಾಫ್ ಆಗಿಲ್ಲ ಎಂದು ವಿಪಕ್ಷಗಳು ಹೇಳುತ್ತವೆ. ಹೀಗಾಗಿ ಒಂದೇ ಸಾರಿ ಟೇಕಾಫ್ ಆಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ನಮಗೆ ಅವಕಾಶ ಕೊಡಬೇಕು ಎಂದು ಹೇಳಿದರು.

ಇವತ್ತಲ್ಲ ನಾಳೆ ಸತೀಶ್ ಜಾರಕಿಹೊಳಿ ಸಿಎಂ: ಸತೀಶ್​ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್​ ಜಾರಕಿಹೊಳಿ ಡಿಸಿಎಂ ಅಷ್ಟೇ ಅಲ್ಲ, ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಯೂ ಇದೆ. ಅದಕ್ಕೆ ಕಾಲ ಕೂಡಿ ಬರಬೇಕು, ಇವತ್ತಲ್ಲ ನಾಳೆ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ರಾಹುಲ್ ಗಾಂಧಿ ಅವರಿಂದ 10 ಸಾವಿರ ರೂ. ವೇತನ ಹೆಚ್ಚಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನೂತನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮೊದಲನೇಯದಾಗಿ ಅಧಿಕೃತವಾಗಿ ಖಾತೆ ಹಂಚಿಕೆ ಆಗಬೇಕು. ಇಲಾಖಾವಾರು ಅಧಿಕಾರ ತೆಗೆದುಕೊಂಡು ಮೀಟಿಂಗ್ ಮಾಡಬೇಕು. ನಾವೇನು ವಾಗ್ದಾನ ಮಾಡಿದ್ದೇವೋ ಅವುಗಳನ್ನು ಸಂಪೂರ್ಣ ಮಾಡಲು ಪ್ರಯತ್ನಿಸುತ್ತೇವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮೊಟ್ಟೆ ಭ್ರಷ್ಟಾಚಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಮಾಣವಚನ ಸ್ವೀಕರಿಸಿ 24 ಗಂಟೆಯೂ ಆಗಿಲ್ಲ, ಖಾತೆ ಹಂಚಿಕೆ ಇನ್ನೂ ಆಗಿಲ್ಲ. ಖಂಡಿತವಾಗಿ ಜನ ಮೆಚ್ಚುವ ಹಾಗೆ, ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವ ಹಾಗೆ, ನನಗೆ ಕೊಟ್ಟಂತ ಇಲಾಖೆ ನಡೆಸುತ್ತೇನೆ. ಭ್ರಷ್ಟಾಚಾರ ಮುಕ್ತ ಅಧಿಕಾರ ನಾವು ನಡೆಸುತ್ತೇವೆ ಎಂದರು.

ನೂತನ ಸಚಿವರಾಗಿ ಬೆಳಗಾವಿಗೆ ಆಗಮಿಸಿದವರ ಮುಂದಿನ ಯೋಜನೆ ಏನಿದೆ ಎಂದು ಕೇಳಿದಾಗ ಸತೀಶ್​ ಜಾರಕಿಹೊಳಿ ಅವರು, ಯೋಜನೆ ಏನೂ ಹೊಸದೇನಿಲ್ಲ, ಹಳೆಯದ್ದೇ ಇವೆ. ಈಗಾಗಲೇ ಮಂತ್ರಿಯಾಗಿ ಕೆಲಸ ಮಾಡಿದ್ದೀವಿ. ಮೇಡಮ್ (ಹೆಬ್ಬಾಳ್ಕರ್) ಅವರು ಸಹ ಶಾಸಕರಾಗಿದ್ದರು. ಶಾಸಕರು ಮಂತ್ರಿ ಇಬ್ಬರದ್ದೂ ವಿಚಾರ ಒಂದೇ ಇರುತ್ತೆ. ಹಿಂದೆ ಬಹಳಷ್ಟು ಚರ್ಚೆ ಮಾಡಿದ ಕೆಲಸ ಅಪೂರ್ಣ ಆಗಿವೆ. ಅವುಗಳನ್ನು ಪೂರ್ಣ ಮಾಡಲು ಇಬ್ಬರು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: 'ಸಂಸತ್​ ಉದ್ಘಾಟನೆ ರಾಜ್ಯಾಭಿಷೇಕವಲ್ಲ': ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.