ETV Bharat / state

ಮತದಾರರ ಮಾಹಿತಿ ಕಳವು ಹಗರಣದಲ್ಲಿ ಮೋದಿ ಸರ್ಕಾರವೂ ಭಾಗಿಯಾಗಿದೆ: ಸುರ್ಜೇವಾಲ

author img

By

Published : Nov 25, 2022, 4:17 PM IST

ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬೊಮ್ಮಾಯಿ ಅವರು ಪ್ರಮುಖ ಕಿಂಗ್ ಪಿನ್ ಆಗಿದ್ದು, ಈ ವಿಚಾರವಾಗಿ ಜನರು ಹಾಗೂ ಮಾಧ್ಯಮಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ ಎಂದು ಸುರ್ಜೇವಾಲ ಆರೋಪಿಸಿದರು.

KN_BNG
ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು: ಮತದಾರರ ಮಾಹಿತಿ ಕಳವು ಹಗರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತ್ರವಲ್ಲ ಕೇಂದ್ರದ ನರೇಂದ್ರ ಮೋದಿ ಸರ್ಕಾರವೂ ಭಾಗಿಯಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.

ವರ್ತೂರು ಬಳಿ ಮಾತನಾಡಿದ ಅವರು, ಕೇವಲ ಮತದಾರರ ಮಾಹಿತಿ ಕಳವು ಮಾತ್ರವಲ್ಲ ದೇಶ ಹಾಗೂ ರಾಜ್ಯದ ಹಣ ಲೂಟಿ ಈ ಸರ್ಕಾರ ಮಾಡುತ್ತಿವೆ. ಕೇಂದ್ರ ಸರ್ಕಾರದ ಸಿಟಿಜನ್ ಸರ್ವೀಸಸ್ ಸೆಂಟರ್ ನಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರಿಗೂ ಪಾವತಿಯಾಗಿದೆ. ಇದರಿಂದ ಈ ಹಗರಣದ ಸ್ವರೂಪ ಬೃಹದಾಕಾರವಾಗಿರುವುದು ಸ್ಪಷ್ಟವಾಗಿದೆ. ಜನರ ಹಣ ಲೂಟಿ ಮಾಡಿ, ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದರು.

ಬೊಮ್ಮಾಯಿ ಅವರ ಜತೆಗೆ ರವಿಕುಮಾರ್ ಅವರು ಹಾಗೂ ಅವರ ಆಪ್ತರ ಖಾತೆಗಳಿಗೆ ಕೇಂದ್ರ ಸರ್ಕಾರದ ಸಂಸ್ಥೆಯಿಂದ ಎಷ್ಟು ಕೋಟಿ ಹಣ ವರ್ಗಾವಣೆ ಮಾಡಲಾಗಿದೆ? ಈ ಹಣ ಪಡೆದವರು ಯಾರು ಎಂಬುದು ತನಿಖೆ ಮೂಲಕ ಬಹಿರಂಗವಾಗಬೇಕು. ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬೊಮ್ಮಾಯಿ ಅವರು ಪ್ರಮುಖ ಕಿಂಗ್ ಪಿನ್ ಆಗಿದ್ದು, ಈ ವಿಚಾರವಾಗಿ ಜನರು ಹಾಗೂ ಮಾಧ್ಯಮಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ.

ಕೇಂದ್ರ ಸರ್ಕಾರದ ಸಂಸ್ಥೆಯಿಂದ ಆರೋಪಿ ಹಾಗೂ ಆತನ ಆಪ್ತರ ಖಾತೆಗಳಿಗೆ ಹಣ ವರ್ಗಾವಣೆ ಹೇಗಾಯಿತು? ಇದೆಲ್ಲದರ ಸತ್ಯಾಂಶ ಹೊರಬರಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿಯ ಮ್ಯಾಚ್ ಫಿಕ್ಸಿಂಗ್: ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ತಗಾದೆ ಬಗ್ಗೆ ಕೇಳಿದ ಪ್ರಶ್ನೆಗೆ, ಇದೆಲ್ಲ ಬಿಜೆಪಿಯ ಮ್ಯಾಚ್ ಫಿಕ್ಸಿಂಗ್. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ಈ ವಿಚಾರವಾಗಿ ಫಡ್ನವೀಸ್ ಏನು ಹೇಳಿದ್ದಾರೆ? ಅವರು ಬೆಳಗಾವಿ ಮಾತ್ರವಲ್ಲ, ಕಾರವಾರವನ್ನೂ ಕಬಳಿಸಲು ನೋಡುತ್ತಿದ್ದಾರೆ. ಇದೆಲ್ಲವೂ ಪೂರ್ವನಿಯೋಜಿತ ಷಡ್ಯಂತ್ರ.

ರಾಜ್ಯದ ಒಂದು ಅಡಿ ಜಾಗವನ್ನೂ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ರಾಜ್ಯದಲ್ಲಿರುವ ಮರಾಠಿಗರು ನಮ್ಮ ರಾಜ್ಯದವರೇ. ಅವರ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ನಮ್ಮ ಸರ್ಕಾರಗಳು ಅದನ್ನು ಮಾಡಿಕೊಂಡು ಬರುತ್ತಿವೆ. ಈಗ ರಾಜಕೀಯ ಉದ್ದೇಶಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ಮಧ್ಯೆ ತಮ್ಮನ್ನು ತಾವೇ ಗಂಡಸು ಎಂದು ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದವರು ಹಾಗೂ ಚಿಲುಮೆ ಸಂಸ್ಥೆಯ ಪ್ರಮುಖ ಕಿಂಗ್ ಪಿನ್​ಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಹಲವು ವ್ಯಕ್ತಿಗಳ ಖಾತೆಗೆ ಹಣ ಹಾಕಿಸಿ, ಅವುಗಳನ್ನು ನಗದೀಕರಣ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು.

ಈ ಹಣವನ್ನು ಯಾರು ಯಾವ ಕಾರಣಕ್ಕೆ ಯಾರಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬರಬೇಕು ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಶಾಸಕ ಪುಟ್ಟರಂಗಶೆಟ್ಟಿ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ: ಬಿಜೆಪಿ ಮುಖಂಡ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.