ETV Bharat / state

ಶಾಲೆಗೆ ಹುಸಿ ಬಾಂಬ್ ಬೆದರಿಕೆ.. ತಮಾಷೆಗಾಗಿ ಕೃತ್ಯ ಎಸಗಿರುವುದಾಗಿ ಬಾಯ್ಬಿಟ್ಟ ಬಾಲಕ

author img

By

Published : Jan 7, 2023, 12:28 PM IST

bomb threat
ಶಾಲೆಗೆ ಹುಸಿ ಬಾಂಬ್ ಬೆದರಿಕೆ

ರಾಜಾಜಿನಗರ ಎನ್​ಪಿ ಎಸ್ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ - ತಮಾಷೆಗಾಗಿ ಕೃತ್ಯ ಎಸಗಿರುವುದಾಗಿ ಬಾಯ್ಬಿಟ್ಟ ಅಪ್ರಾಪ್ತ - ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ರಾಜ್ಯ ಬಾಲ ನ್ಯಾಯಮಂಡಳಿ.

ಬೆಂಗಳೂರು: ರಾಜಾಜಿನಗರದಲ್ಲಿರುವ ಎನ್​ಪಿ ಎಸ್ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ಸಂದೇಶ ರವಾನಿಸಿರುವುದು ಶಾಲೆಯ ಅಪ್ರಾಪ್ತ ವಿದ್ಯಾರ್ಥಿ ಎಂಬುದು ಬಯಲಾಗಿದೆ. ಗೂಗಲ್​ನಲ್ಲಿ ಎನ್.ಪಿ.ಎಸ್ ಶಾಲೆಯ ಅಧಿಕೃತ ಇಮೇಲ್ ವಿಳಾಸ ಪಡೆದಿದ್ದ ವಿದ್ಯಾರ್ಥಿ, ತಮಾಷೆಗಾಗಿ ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ನೂರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವ ರಾಜಾಜಿನಗರದ ಎನ್​ಪಿಎಸ್ ಶಾಲೆಗೆ ಜನವರಿ 5 ರಂದು ರಾತ್ರಿ 8:30 ರ ಸುಮಾರಿಗೆ ಬಂದಿದ್ದ ಇಮೇಲ್​ನಲ್ಲಿ‌ 'ನನ್ನ ಬಳಿ ನಾಲ್ಕು ಜಿಲೇಟಿನ್ ಕಡ್ಡಿಗಳಿವೆ. ನಾಳೆ ಊಟದ ಸಮಯದಲ್ಲಿ ಬ್ಲಾಸ್ಟ್ ಮಾಡ್ತೀನಿ' ಎಂದು ಬರೆಯಲಾಗಿತ್ತು. ನಿನ್ನೆ ಬೆಳಗ್ಗೆ ಮೇಲ್ ಪರಿಶೀಲಿಸಿದ ಶಾಲಾ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವಾಗಿ ಕೂಡಲೇ ಶಾಲಾ ಮಕ್ಕಳನ್ನ ತರಗತಿಯಿಂದ ಹೊರಗೆ ಕಳುಹಿಸಿ ತುರ್ತು ರಜೆ ನೀಡಿತ್ತು. ನಂತರ ಈ ಬಗ್ಗೆ ಬಸವೇಶ್ವರ ನಗರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿತ್ತು. ಮಾಹಿತಿ ಬರುತ್ತಿದ್ದಂತೆ ಕಾರ್ಯಪ್ರವೃತರಾದ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸ್ಥಳಕ್ಕೆ ಬಂದು ಶಾಲೆ ಪೂರ್ತಿ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ಗೊತ್ತಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಐಪಿ ಅಡ್ರೆಸ್ ಆಧಾರದಲ್ಲಿ ತನಿಖೆ ಕೈಗೊಂಡಾಗ ಇದೊಂದು ಅಪ್ರಾಪ್ತ ಬಾಲಕನ ಕೆಲಸ ಎಂಬುದು ಪತ್ತೆಯಾಗಿದೆ. ವಿಚಾರಣೆ ವೇಳೆ ಬಾಲಕ 'ತಮಾಷೆಗಾಗಿ ಈ ರೀತಿ ಕೃತ್ಯ ಎಸಗಿರುವುದಾಗಿ' ಪೊಲೀಸರ ಮುಂದೆ ತಿಳಿಸಿದ್ದಾನೆ. ಬಾಲಕನನ್ನು ರಾಜ್ಯ ಬಾಲ ನ್ಯಾಯಮಂಡಳಿ ವಶಕ್ಕೆ ಒಪ್ಪಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಬಾಂಬ್ ಬೆದರಿಕೆ ಕರೆ: ನಿನ್ನೆ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿಯ ನಿವಾಸಿ ಸುನೀಲ್ ಬಂಧಿತ ಆರೋಪಿ. ಈತ ಕೆಲವು ತಿಂಗಳ ಹಿಂದೆ ಅಪರಾಧ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಜನವರಿ 3ರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್ 112 ಸಂಖ್ಯೆಗೆ ಕರೆ ಮಾಡಿ, ಬೆದರಿಕೆ ಹಾಕಿದ್ದಾನೆ. ಕೂಡಲೇ ಪೊಲೀಸರು ಬಾಂಬ್ ಪತ್ತೆ ದಳವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ಕೈಗೊಂಡಿದ್ದರು. ಎಲ್ಲೆಡೆ ಹುಡುಕಾಡಿದಾಗ ಬಾಂಬ್​ ಪತ್ತೆಯಾಗಿರಲಿಲ್ಲ. ಕೊನೆಗೆ ಇದೊಂದು ಹುಸಿ ಕರೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದರು.

ಇದನ್ನೂ ಓದಿ: ಶಾಲೆಗೆ ಬಾಂಬ್ ಬೆದರಿಕೆ ಇ ಮೇಲ್, ಜಿಲೆಟಿನ್ ಕಡ್ಡಿ ಹುಸಿ ಸಂದೇಶ: ಸುಳ್ಳು ಸುದ್ದಿ ಎಂದ ಡಿಸಿಪಿ

ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟ: ನವೆಂಬರ್ 19 ರ ಸಂಜೆ ಮಂಗಳೂರಿನ ನಾಗೂರಿಯಿಂದ ಪಂಪ್‌ವೆಲ್ ಕಡೆಗೆ ತೆರಳುತ್ತಿದ್ದ ರಿಕ್ಷದಲ್ಲಿ ಬಾಂಬ್​ ಸ್ಫೋಟಗೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾರೀಕ್ಅನ್ನು ​ಬಂಧಿಸಲಾಗಿದೆ. ಈ ಸ್ಫೋಟದಲ್ಲಿ ರಿಕ್ಷಾ ಚಾಲಕಕೆ ಪುರುಷೋತ್ತಮ (60) ಅವರಿಗೆ ಗಂಭೀರ ಗಾಯಗಳಾಗಿದ್ದವು.

ಇದನ್ನೂ ಓದಿ: ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ, ಕಿಡಿಗೇಡಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.