ETV Bharat / state

ಪ್ರಧಾನಮಂತ್ರಿ ಕಾರ್ಯಾಲಯದ ಸಹಕಾರವನ್ನು ಎಂದಿಗೂ ಮರೆಯಲಾರೆ: ಚಿತ್ರ ಕಲಾವಿದ ಸ್ಟೀವನ್ ಹ್ಯಾರಿಸ್

author img

By

Published : Aug 29, 2021, 7:45 AM IST

Steven Harris
ಸ್ಟೀವನ್ ಹ್ಯಾರಿಸ್

ಪ್ರಧಾನಮಂತ್ರಿ ಕಚೇರಿ ದಕ್ಷತೆಯಿಂದ, ಅಂತಃಕರಣದಿಂದ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದು ನನಗೆ ಹಮ್ಮೆ ಉಂಟಾಯಿತು. ಪ್ರಧಾನಮಂತ್ರಿ ಕಾರ್ಯಾಲಯದ ಈ ಸಹಕಾರವನ್ನು ಎಂದಿಗೂ ಮರೆಯಲಾರೆ ಎಂದು ಬೆಂಗಳೂರಿನ ವಿದ್ಯಾರ್ಥಿ ಸ್ಟೀವನ್ ಹ್ಯಾರಿಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ನರೇಂದ್ರ ಮೋದಿ ಅವರ ವರ್ಣಚಿತ್ರಗಳನ್ನು ರಚಿಸಿ ಮೆಚ್ಚುಗೆಗೆ ಪಾತ್ರವಾಗಿರುವ ಬೆಂಗಳೂರಿನ ವಿದ್ಯಾರ್ಥಿ ಸ್ಟೀವನ್ ಹ್ಯಾರಿಸ್, ಪ್ರಧಾನಮಂತ್ರಿ ಕಾರ್ಯಾಲಯದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಕಚೇರಿಯಿಂದ ಬಂದಿರುವ ಮೆಚ್ಚುಗೆ ಪತ್ರ ಪ್ರದರ್ಶಿಸಿದ ಚಿತ್ರ ಕಲಾವಿದ ಸ್ವೀವನ್ ಹ್ಯಾರಿಸ್

20 ವರ್ಷದ ಸ್ವೀವನ್‌ ಹ್ಯಾರಿಸ್‌ ಕಳೆದ 15 ವರ್ಷಗಳಿಂದ ಚಿತ್ರಗಳನ್ನು ರಚಿಸುತ್ತಿದ್ದಾರೆ. ಮೋದಿಯವರ ಎರಡು ಭಾವಚಿತ್ರಗಳನ್ನು ಪ್ರಧಾನಿ ಅವರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಯುವಜನರ ಆಸಕ್ತಿ ಮತ್ತು ಪ್ರತಿಭೆಯನ್ನು ನೋಡುವುದು ತುಂಬಾ ಸಂತೋಷವಾಗುವ ವಿಷಯ ಎಂದು ಶ್ಲಾಘಿಸಿದ್ದರು.

ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ವೀವನ್ ಹ್ಯಾರಿಸ್, ಕಳೆದ ಮಾರ್ಚ್‌ನಲ್ಲಿ ಪ್ರಧಾನಮಂತ್ರಿ ಕಚೇರಿಗೆ ಎರಡು ವರ್ಣ ಚಿತ್ರಗಳನ್ನು ರಚಿಸಿ ರವಾನಿಸಿದ್ದೆ. ಆದರೆ ಇವುಗಳನ್ನು ಸಾಗಿಸುವಾಗ ಫೋಟೋ ಪ್ರೇಮ್​ನ ಗಾಜುಗಳು ಒಡೆದ ಪರಿಣಾಮ ಪ್ರಧಾನಮಂತ್ರಿ ಕಚೇರಿಯ ಭದ್ರತಾ ವಿಭಾಗ ವರ್ಣಚಿತ್ರಗಳನ್ನು ಸ್ವೀಕರಿಸಲಿಲ್ಲ. ಈ ಮಾಹಿತಿ ಪ್ರಧಾನಮಂತ್ರಿ ಕಚೇರಿಯಿಂದ ತಮಗೆ ದೊರೆತ ನಂತರ ಸಹಜವಾಗಿಯೇ ಬೇಸರವಾಯಿತು. ಆದರೆ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಿರಾಸೆ ಹೆಚ್ಚು ದಿನ ಇರಲಿಲ್ಲ. ನಂತರ ಪ್ರಧಾನಮಂತ್ರಿ ಕಚೇರಿಯಿಂದ ಮತ್ತೆ ಜೂನ್ ತಿಂಗಳಿನಲ್ಲಿನಲ್ಲಿ ಕರೆ ಮಾಡಿ, ನಿಮ್ಮ ವರ್ಣ ಚಿತ್ರಗಳನ್ನು ಮತ್ತೆ ಕಳುಹಿಸಿಕೊಡಿ. ಆದರೆ ಈ ಬಾರಿ ಸುರಕ್ಷಿತವಾಗಿ ತಲುಪಿಸುವ ವ್ಯವಸ್ಥೆ ಮಾಡಿ ಎಂದು ಹೇಳಿದ್ದರು. ಇದನ್ನು ಕೇಳಿ ನನಗೆ ಅಚ್ಚರಿ ಆಯಿತು ಎಂದರು.

ಇದನ್ನೂ ಓದಿ: ಬೆಂಗಳೂರಿನ ಯುವ ಚಿತ್ರಕಲಾವಿದನ ಅದ್ಭುತ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ

ಪ್ರಧಾನಮಂತ್ರಿ ಕಚೇರಿ ಇಷ್ಟೊಂದು ದಕ್ಷತೆಯಿಂದ, ಅಂತಃಕರಣದಿಂದ ಕೆಲಸ ಮಾಡುತ್ತದೆ ಎಂಬುದು ತಿಳಿದು ಹಮ್ಮೆ ಉಂಟಾಯಿತು. ನನಗೆ ಮತ್ತೊಮ್ಮೆ ವರ್ಣ ಚಿತ್ರಗಳನ್ನು ಕಳುಹಿಸಿಕೊಡಿ ಎಂದು ಹೇಳಿದ ನಂತರ ಮತ್ತೆ ಕೆಲಸ ಆರಂಭಿಸಿ ಜೂನ್​ನಲ್ಲಿ ಅತ್ಯಂತ ಎಚ್ಚರಿಕೆಯಿಂದ ವರ್ಣ ಚಿತ್ರಗಳನ್ನು ಕಳುಹಿಸಿದೆ. ಆದರೆ ಈ ಬಾರಿ ಪ್ರಧಾನಮಂತ್ರಿಯವರ ಚಿತ್ರಕ್ಕೆ ಗಾಜಿನ ಚೌಕಟ್ಟು ನಿರ್ಮಿಸಲಿಲ್ಲ. ಪ್ಯಾಕ್ ಮಾಡುವಾಗಲೂ ಎಚ್ಚರಿಕೆ ವಹಿಸಿದೆ. ನಂತರ ಜುಲೈ 31 ರಂದು ಪ್ರಧಾನಮಂತ್ರಿ ಕಚೇರಿಯಿಂದ ಮೆಚ್ಚುಗೆ ಪತ್ರ ಬಂತು. ಪತ್ರದಲ್ಲಿ ಪ್ರಧಾನಿಗಳು ನನ್ನ ಬಗ್ಗೆ ಪ್ರಸ್ತಾಪ ಮಾಡಿರುವ ವಿಚಾರಗಳು ನನಗೆ ಹೆಮ್ಮೆ ಉಂಟು ಮಾಡಿವೆ. ಒಬ್ಬ ವಿದ್ಯಾರ್ಥಿಗೆ ಇದಕ್ಕಿಂತ ಹೆಚ್ಚಿನ ಸಂತಸ ಮತ್ತೇನಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಮೋದಿ ಪತ್ರ ಬಂದ ನಂತರ ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ನನಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಕಲೆಯನ್ನು ಸರ್.ಎಂ. ವಿಶ್ವೇಶ್ವರಯ್ಯ ಕುಟುಂಬದ ಶೇಷಾದ್ರಿ ಮೋಕ್ಷಗುಂಡಂ ಅವರಿಂದ ಕಲಿಯುತ್ತಿದ್ದೇನೆ. ವರ್ಣ ಚಿತ್ರಕಲೆಯಲ್ಲಿ ಸುಮಾರು 100 ಹಾಗೂ ಇತರೆ ಕ್ಷೇತ್ರಗಳಲ್ಲಿ 50ಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ. ಎಲ್ಲಕ್ಕಿಂತ ಪ್ರಧಾನಮಂತ್ರಿ ಮೋದಿ ಪತ್ರ ಅತ್ಯಂತ ಅಮೂಲ್ಯ. ಪ್ರಧಾನಮಂತ್ರಿಯವರ ಕಾರ್ಯವೈಖರಿ ತಮ್ಮ ಮೇಲೆ ಪ್ರೇರಣೆ ಉಂಟು ಮಾಡಿದೆ ಎಂದು ಸ್ಟೀವನ್ ಹ್ಯಾರಿಸ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.