ETV Bharat / state

ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳ ಸ್ಥಿತಿಗತಿ ಏನು?

author img

By ETV Bharat Karnataka Team

Published : Jan 13, 2024, 7:42 AM IST

ಈವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತಂದ ಪಂಚ ಗ್ಯಾರಂಟಿಗಳಿಗೆ ಬಿಡುಗಡೆ ಮಾಡಿದ ಅನುದಾನ ಎಷ್ಟು ಎಂಬ ಮಾಹಿತಿ ಇಲ್ಲಿದೆ. ​

ಕಾಂಗ್ರೆಸ್ ಸರ್ಕಾರ
ಕಾಂಗ್ರೆಸ್ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ 8 ತಿಂಗಳ ಒಳಗೆ ತನ್ನ ಎಲ್ಲ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಶಿವಮೊಗ್ಗದಲ್ಲಿ ಇಂದು ತನ್ನ ಐದನೇ ಹಾಗೂ ಕೊನೆಯ ಗ್ಯಾರಂಟಿ ಯುವ ನಿಧಿಗೂ ಚಾಲನೆ ನೀಡುವ ಮೂಲಕ ಪಂಚ ಗ್ಯಾರಂಟಿಗಳೂ ಅನುಷ್ಠಾನವಾದಂತಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳ ಸ್ಥಿತಿಗತಿ ಏನಿದೆ ಎಂಬ ಸಮಗ್ರ ವರದಿ ಇಲ್ಲಿದೆ.

ಅಧಿಕಾರಕ್ಕೆ ಬಂದ ದಿನದಿಂದ ಕಾಂಗ್ರೆಸ್ ಸರ್ಕಾರಕ್ಕೆ ಪಂಚ ಗ್ಯಾರಂಟಿಗಳ ಅನುಷ್ಠಾ‌ನವೇ ಮೊದಲ ಆದ್ಯತೆಯಾಗಿತ್ತು. ಪಂಚ ಗ್ಯಾರಂಟಿಗಾಗಿ ಬೃಹತ್ ಹೊರೆ ಮಧ್ಯೆ ಬರದ ಬರೆಯ ಸಂಕಷ್ಟಕ್ಕೆ ಸಿಲುಕಿಸಿದೆ. ಆದರೂ ಗ್ಯಾರಂಟಿ ಯೋಜನೆ ಹಳಿ ತಪ್ಪದಂತೆ ಕಸರತ್ತು ನಡೆಸುತ್ತಿರುವ ಸಿದ್ದರಾಮಯ್ಯ ಹಣ ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ.

ನಾಲ್ಕು ಗ್ಯಾರಂಟಿಗಳಿಗೆ ಬಿಡುಗಡೆಯಾದ ಅನುದಾನ : ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಅನ್ನ ಭಾಗ್ಯ, ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮಿ, ಯುವನಿಧಿಗೆ ಯೋಜನೆಗಳನ್ನು ರಾಜ್ಯ ಸರ್ಕಾರ ಈಗಾಗಲೇ ಜಾರಿ ಮಾಡಿದೆ. 2023-24 ಸಾಲಿನಲ್ಲಿ ಬಜೆಟ್​ನಲ್ಲಿ ಸರ್ಕಾರ ಒಟ್ಟು ಹಂಚಿಕೆ ಮಾಡಿದ ಮೊತ್ತ 39,815 ಕೋಟಿ ರೂ‌. ಆಗಿದೆ. ಕೆಡಿಪಿ ಪ್ರಗತಿ ಅಂಕಿ - ಅಂಶದ ಪ್ರಕಾರ ಡಿಸೆಂಬರ್ ವರೆಗೆ ನಾಲ್ಕು ಗ್ಯಾರಂಟಿಗಳಿಗೆ ಒಟ್ಟು 18,252 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು ಒಟ್ಟು ನಾಲ್ಕು ಗ್ಯಾರಂಟಿಗಳಿಗೆ ಸುಮಾರು 16,535 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಲಾಗಿದೆ.

ಶಕ್ತಿ ಯೋಜನೆಗೆ ಅನುದಾನ ಬಿಡುಗಡೆ ಎಷ್ಟು? : ಶಕ್ತಿ ಯೋಜನೆಗೆ ಸರ್ಕಾರ 2023-24 ಸಾಲಿನಲ್ಲಿ ಒಟ್ಟು 2,800 ಅನುದಾನ ಹಂಚಿಕೆ ಮಾಡಿದೆ. ಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಆರಂಭವಾಗಿದೆ. ಡಿಸೆಂಬರ್​​ ವರೆಗೆ ಶಕ್ತಿ ಯೋಜನೆಯಡಿ ಸುಮಾರು 130 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಟಿಕೆಟ್ ವೆಚ್ಚ ಸುಮಾರು 3,000 ಕೋಟಿ ರೂ. ತಲುಪಿದೆ. ಕೆಡಿಪಿ ಪ್ರಗತಿ ಅಂಕಿ - ಅಂಶದ ಪ್ರಕಾರ ಡಿಸೆಂಬರ್ ವರೆಗೆ ಶಕ್ತಿ ಯೋಜನೆಗಾಗಿ 1,669.72 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಡಿಸೆಂಬರ್ ವರೆಗೆ ಒಟ್ಟು 1,669.45 ಕೋಟಿ ರೂ. ಮಾತ್ರ ವೆಚ್ಚ ಮಾಡಲಾಗಿದೆ.

ಅನ್ನಭಾಗ್ಯಕ್ಕೆ ಹಣ ಬಿಡುಗಡೆ ಏನು? : ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊರತೆ ಹಿನ್ನೆಲೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಕೆ.ಜಿ. ಅಕ್ಕಿ ಬದಲು ನಗದು ನೀಡುವ ವ್ಯವಸ್ಥೆಯನ್ನು ಮುಂದುವರಿಸಿದೆ. ರಾಜ್ಯದ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರದಾರರಿಗೆ ಅಕ್ಕಿ ಕೊರತೆ ಎದುರಾದ ಕಾರಣ ಸರ್ಕಾರ ಜುಲೈ 10 ರಿಂದ ಫಲಾನುಭವಿಗಳ ಖಾತೆಗೆ ಅಕ್ಕಿ ಬದಲು ನಗದು ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಪ್ರತಿ ಕೆ.ಜಿಗೆ ರೂ.34 ರೂ.ನಂತೆ ಮಾಸಿಕ 170 ರೂ.‌ ನಗದನ್ನು ಪಡಿತರ ಫಲಾನುಭವಿಯ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ DBT ಮೂಲಕ ವರ್ಗಾಯಿಸಲಾಗುತ್ತಿದೆ.

ರಾಜ್ಯದಲ್ಲಿ 10,89,990 ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರಿದ್ದರೆ, 1,17,26,296 ಆದ್ಯತಾ ಪಡಿತರ ಚೀಟಿದಾರರಿದ್ದಾರೆ. ಒಟ್ಟು 4.42 ಕೋಟಿ ಕುಟುಂಬ ಸದಸ್ಯರು ಇದರ ಫಲಾನುಭವಿಗಳಾಗಿದ್ದಾರೆ. ಅನ್ನಭಾಗ್ಯಕ್ಕೆ ರಾಜ್ಯ ಸರ್ಕಾರ ಒಟ್ಟು 10,265 ಕೋಟಿ ರೂ. ಹಂಚಿಕೆ ಮಾಡಿದೆ. ಈ ಪೈಕಿ ಡಿಸೆಂಬರ್ ವರೆಗೆ 4,071 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅನ್ನಭಾಗ್ಯ ಯೋಜನೆಯಡಿ ಡಿಸೆಂಬರ್ ವರೆಗೆ 3,998.54 ಕೋಟಿ ರೂ. ವೆಚ್ಚವಾಗಿದೆ ಎಂದು ಕೆಡಿಪಿ ಪ್ರಗತಿ ಅಂಕಿ - ಅಂಶದಲ್ಲಿ ತೋರಿಸಲಾಗಿದೆ. ಮಾಸಿಕ ಸುಮಾರು 600-655 ಕೋಟಿ ರೂ. ವರೆಗೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

ಗೃಹ ಜ್ಯೋತಿಗೆ ಬಿಡುಗಡೆಯಾದ ಅನುದಾನ ಎಷ್ಟು? : 200 ಯುನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗಾಗಿ 2023-24 ಸಾಲಿನಲ್ಲಿ 9,000 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಜುಲೈ ತಿಂಗಳಿಂದ ಈ ಯೋಜನೆ ಅನುಷ್ಠಾನವಾಗಿದೆ. ಕಳೆದ ವರ್ಷದ ಸರಾಸರಿ ಆಧಾರದ ಮೇಲೆ ವಿದ್ಯುತ್ ಬಳಕೆಯ ಯುನಿಟ್ ಲೆಕ್ಕ ಹಾಕಲಾಗುತ್ತಿದೆ. ಗೃಹ ಜ್ಯೋತಿ ಯೋಜನೆಗೆ ಡಿಸೆಂಬರ್ ವರೆಗೆ 3,352.56 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ ವರೆಗೆ ಯೋಜನೆಯಡಿ ತೋರಿಸಿದ ವೆಚ್ಚ 3,352.56 ಕೋಟಿ ರೂ. ಆಗಿದೆ ಎಂದು ಕೆಡಿಪಿ ಪ್ರಗತಿ ಅಂಕಿ - ಅಂಶದಲ್ಲಿ ತಿಳಿಸಲಾಗಿದೆ.

ಗೃಹ ಲಕ್ಷ್ಮಿ ಯೋಜನೆಗೆ ಬಿಡುಗಡೆಯಾಗಿದ್ದೆಷ್ಟು? : ಇನ್ನು ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆಯ ಗೃಹ ಲಕ್ಷ್ಮೀ ಯೋಜನೆಗಾಗಿ ರಾಜ್ಯ ಸರ್ಕಾರ 2023-24 ಸಾಲಿನಲ್ಲಿ 17,500 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ಮಾಸಿಕ 2,000 ರೂ. ಜಮೆ ಮಾಡಲಾಗುತ್ತಿದೆ. ಆಗಸ್ಟ್ ತಿಂಗಳಿಂದ ಈ ಯೋಜನೆ ಜಾರಿಯಾಗಿದ್ದು, ಸುಮಾರು 1.28 ಕೋಟಿ ಯಜಮಾನಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಡಿಸೆಂಬರ್ ತಿಂಗಳ ವರೆಗೆ ಗೃಹ ಲಕ್ಷ್ಮಿ ಯೋಜನೆಗಾಗಿ ಒಟ್ಟು 9,158.75 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಯೋಜನೆಗಾಗಿ ಡಿಸೆಂಬರ್ ವರೆಗೆ ಆಗಿರುವ ವೆಚ್ಚ 7,514.42 ಕೋಟಿ ರೂ. ಆಗಿದೆ.

ಯುವನಿಧಿ ಯೋಜನೆ : ಶುಕ್ರವಾರದಿಂದ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದ ಪದವೀಧರ ಪ್ರತಿ ತಿಂಗಳು ರೂ.3,000, ಡಿಪ್ಲೋಮಾ ಹೊಂದಿದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1,500 ರಂತೆ ನಿರುದ್ಯೋಗ ಭತ್ಯೆ ನೀಡುವ "ಯುವ ನಿಧಿ ಯೋಜನೆ" ಯನ್ನು ಶಿವಮೊಗ್ಗದಲ್ಲಿ ಜಾರಿಗೊಳಿಸಲಾಗಿದೆ. ಎರಡು ವರ್ಷಗಳ ವರೆಗೆ ಈ ಯೋಜನೆಯಡಿ ನಿರುದ್ಯೋಗ ಭತ್ಯ ನೀಡಲಾಗುತ್ತದೆ. ಈವರೆಗೆ ಯುವನಿಧಿ ಯೋಜನೆಯಡಿ ಸುಮಾರು 70 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 2023-24 ವರ್ಷದಲ್ಲಿ ಯುನಿಧಿಗೆ 250 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ : ಯುವನಿಧಿ ಯೋಜನೆಗೆ ಅದ್ಧೂರಿ ಚಾಲನೆ: ಫಲಾನುಭವಿಗಳ ಖಾತೆಗೆ ಹಣ ಜಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.