ETV Bharat / state

ಬೆಳಗಾವಿಗೂ ಬರ್ತಾರೆ ಪ್ರಧಾನಿ ಮೋದಿ.. ರಾಜ್ಯಾದ್ಯಂತ ಬಿಜೆಪಿ ಪ್ರಗತಿ ರಥ ಯಾತ್ರೆ

author img

By

Published : Feb 21, 2023, 5:12 PM IST

Updated : Feb 21, 2023, 6:16 PM IST

ಪ್ರಗತಿ ರಥದ ಸಂಚಾಲಕ ಎಸ್ ವಿ ರಾಘವೇಂದ್ರ
ಪ್ರಗತಿ ರಥದ ಸಂಚಾಲಕ ಎಸ್ ವಿ ರಾಘವೇಂದ್ರ

ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿಯೂ ಪ್ರಗತಿ ರಥಯಾತ್ರೆ ಸಂಚರಿಸಲಿದೆ ಎಂದು ಪ್ರಗತಿ ರಥದ ಸಂಚಾಲಕ ಎಸ್ ವಿ ರಾಘವೇಂದ್ರ ಹೇಳಿದ್ದಾರೆ.

ಬೆಂಗಳೂರು : ಫೆಬ್ರವರಿ 27ರಂದು ಮಧ್ಯಾಹ್ನ ಪ್ರಧಾನಿ ಮೋದಿ ಬೆಳಗಾವಿಗೆ ಬರಲಿದ್ದು, ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 190 ಕೋಟಿ ವೆಚ್ಚದಲ್ಲಿ ಬೆಳಗಾವಿ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸಲಾಗಿದೆ. ಹೊಸ ರೈಲ್ವೆ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. 1,809 ಕೋಟಿ ಅನುದಾನ ಬೆಳಗಾವಿ ಜಿಲ್ಲೆಗೆ ಮೀಸಲಿಡಲಾಗಿದೆ. ಹರ್ ಘರ್ ಜಲ್, ಹರ್ ಘರ್ ನಲ್ ಉದ್ಘಾಟನೆ ಮಾಡಲಿದ್ದಾರೆ.

927ಕೋಟಿ ವೆಚ್ಚಮಾಡಿ ಲೋಂಡಾದಿಂದ ಬೆಳಗಾವಿವರೆಗೆ ಡಬ್ಲಿಂಗ್ ರೈಲ್ವೇ ಲೈನ್ ಮಾಡಲಾಗಿದ್ದು, ಅದನ್ನೂ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಸಚಿವರು ಇಎಸ್ಐಸಿ ಸಭೆಯಲ್ಲಿ ಬೆಳಗಾವಿಗೆ 100 ಹಾಸಿಗೆಯ ಆಸ್ಪತ್ರೆ ಘೋಷಣೆ ಮಾಡಿದ್ದಾರೆ. ಮೋದಿ ರಾಜ್ಯಕ್ಕೆ ಬರುವ ಮೊದಲು ಘೋಷಣೆ ಮಾಡಿದ್ದಾರೆ ಎಂದು ಈರಣ್ಣ ಕಡಾಡಿ ಮಾಹಿತಿ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಿವೆ. ರೈತರಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಬಜೆಟ್​​ನಲ್ಲಿ ರೂಪಿಸಲಾಗಿದೆ. ಬೆಳಗಾವಿಗೆ ಇಎಸ್ಐ ಆಸ್ಪತ್ರೆ ಕೊಡುಗೆ ನೀಡಿದ್ದು, ರೈತರ ಆದಾಯ ಹೆಚ್ಚಿಸಲು ಕೃಷಿ ಕ್ಷೇತ್ರ ಬೆಳೆಸಲು ಒತ್ತು ನೀಡಿದ್ದಾರೆ. ಕೃಷಿ ಕ್ಷೇತ್ರಕ್ಕೂ ಡಿಜಿಟಲ್ ತಂತ್ರಜ್ಞಾನ ಅಳವಡಿಸಲು ನಿರ್ಧಾರ ಮಾಡಿದ್ದಾರೆ. ಆಧುನಿಕ ದಿನದಲ್ಲಿ ಜಮೀನು ಹೆಚ್ಚಾಗಲ್ಲ, ಕಡಿಮೆ ಆಗುತ್ತಿದೆ.

ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ತೆಗೆಯಲು ಡಿಜಿಟಲ್ ತಂತ್ರಜ್ಞಾನ ಬಳಸಿಕೊಳ್ಳುವುದು ಉತ್ತಮ. ಉಳುಮೆ ವೆಚ್ಚ ಕಡಿಮೆ ಮಾಡಿಕೊಳ್ಳುವುದು. ಡ್ರೋನ್ ತಂತ್ರಜ್ಞಾನ, ಬೆಳೆ ಅಂದಾಜಿಗೆ ಹೆಚ್ಚು ಒತ್ತು ನೀಡಲಾಗಿದೆ. 167 ಕಿಸಾನ್ ಟ್ರೈನ್ ಮುಖಾಂತರ ಬೆಳೆಯನ್ನ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ಬಡವರ ಆಹಾರವನ್ನ, ಸಿರಿ ಅನ್ನ ಹೆಸರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನ ಕೊಡಿಸೋ ಕೆಲಸ ಆಗುತ್ತಿದೆ. ಮಿಲೆಟ್ಸ್​​​​ಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.

224 ಕ್ಷೇತ್ರಗಳಲ್ಲಿಯೂ ಪ್ರಗತಿ ರಥಯಾತ್ರೆ: ಬಿಜೆಪಿ ಸರ್ಕಾರದ ಸಾಧನೆಗಳನ್ನ ಮನೆ ಮನೆಗೆ ತಲುಪಿಸಲು ಪ್ರಗತಿ ರಥ ಯಾತ್ರೆಯ ಆಯೋಜನೆ ಮಾಡಿದ್ದು, ಇದಕ್ಕಾಗಿ 135 ಎಲ್ಇಡಿ ರಥಗಳ ತಯಾರಿ ಮಾಡಲಾಗಿದೆ. ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿಯೂ ಪ್ರಗತಿ ರಥಯಾತ್ರೆ ಸಂಚರಿಸಲಿದೆ ಎಂದು ಪ್ರಗತಿ ರಥದ ಸಂಚಾಲಕ ಎಸ್ ವಿ ರಾಘವೇಂದ್ರ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಸಾಧನೆಗಳನ್ನ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ. 135 ಎಲ್ಇಡಿ ರಥಗಳ ತಯಾರಿ ಮಾಡಲಾಗಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಲೈವ್ ಸ್ಟ್ರೀಮ್ ಅಳವಡಿಸಲಾಗಿದೆ ಎಂದರು.

ಪ್ರಧಾನಿ ಸೇರಿದಂತೆ ಎಲ್ಲ ಕಾರ್ಯಕ್ರಮ ಲೈವ್ ಕೊಡಬಹುದು. ಜಿಪಿಎಸ್ ಅಳವಡಿಕೆ ಮೂಲಕ ಮಾನಿಟರಿಂಗ್ ಮಾಡಲಾಗುವುದು. ಪ್ರತಿ ಗ್ರಾಮಕ್ಕೆ ಹೋಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲಹಾ ಪೆಟ್ಟಿಗೆ ಇಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಂದ 10 ಸಾವಿರ ಸಲಹೆ ಕೇಳಲು ನಿರ್ಧಾರ ಮಾಡಲಾಗಿದೆ. ಕ್ಯೂ ಆರ್ ಕೋಡ್ ಅಳವಡಿಸುವ ಮೂಲಕ ಅದರಿಂದಲೂ ಸಲಹೆ ನೀಡಬಹುದು. ಸಲಹಾ ಪತ್ರಗಳನ್ನ ತಂದು ಕೇಂದ್ರ ಕಚೇರಿಯಲ್ಲಿ ಮಾನಿಟರಿಂಗ್ ಮಾಡಲಾಗುವುದು ಎಂದು ರಾಘವೇಂದ್ರ ಮಾಹಿತಿ ನೀಡಿದರು.

ಫೆಬ್ರವರಿ 24ರಂದು ಬಿಟಿಎಂ ಲೇಔಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಗತಿ ರಥ ಯಾತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಬಿಟಿಎಂನ ವಿವೇಕಾನಂದ ಆಟದ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಒಂದು ರಥ ಒಂದು ಕ್ಷೇತ್ರದಲ್ಲಿ 15 ದಿನ ಸಂಚರಿಸಬೇಕು. ಮಲೆನಾಡಿನಲ್ಲಿ ವಿಸ್ತಾರ ಹೆಚ್ಚಾಗಿರುವುದರಿಂದ ಹೆಚ್ಚು ದಿನ ನೀಡಲಾಗುವುದು ಎಂದು ರಾಘವೇಂದ್ರ ಹೇಳಿದರು.

ಒಂದು ವಿಧಾನಸಭೆ ಕ್ಷೇತ್ರದಲ್ಲಿ ಕನಿಷ್ಠ 10 ಸಾವಿರ ಜನರಿಂದ ಸಲಹೆಗಳನ್ನು ನಿರೀಕ್ಷೆ ಮಾಡಿದ್ದೇವೆ. ಪಕ್ಷ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲಹೆ ಕೊಡಬಹುದು. ಪ್ರತಿಯೊಬ್ಬ ನಾಗರಿಕರು ಸಲಹೆಗಳನ್ನು ಕೊಡಬಹುದು. 34. 83 ಲಕ್ಷ ಮನೆಗೆ ಜಲ ಜೀವನ್ ಪಡೆದಿರುವುದು ಕಳಸಾ ಬಂಡೂರಿ ಯೋಜನೆ ಬಗ್ಗೆ, ಸರ್ಕಾರದ ಸಹಕಾರದ ಬಗ್ಗೆ, ವಂದೇ ಭಾರತ್ ರೈಲಿನ ಯೋಜನೆ ಬಗ್ಗೆ ಈ ಪ್ರಗತಿ ರಥದಲ್ಲಿ ತಿಳಿಸಲಾಗುತ್ತದೆ.

ಯುಪಿ ಸರ್ಕಾರಕ್ಕಿಂತ ಹೆಚ್ಚು ರೈಲ್ವೆ ಯೋಜನೆಗೆ ಬಿಜೆಪಿ ಕೇಂದ್ರ ಸರ್ಕಾರ ಕೊಟ್ಟಿದೆ. ಹಾಗೆಯೇ ಮುಂದಿನ ಯೋಜನೆ ಬಗ್ಗೆಯೂ ತಿಳಿಸಲಾಗುತ್ತದೆ ಎಂಟು ವಿಮಾನ ನಿಲ್ದಾಣ ಆಗಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ನಿರೀಕ್ಷೆ ಇಟ್ಟಂತೆ ಸರ್ಕಾರ ಕೊಟ್ಟಂತಹ ಕೊಡುಗೆ ಬಗ್ಗೆ ಈ ರಥದಲ್ಲಿ ವಿತರಿಸಲಾಗುತ್ತದೆ ಎಂದು ಹೇಳಿದರು.

ಓದಿ : ಬಿಜೆಪಿ ಸರ್ಕಾರದ ಭ್ರಷ್ಟಚಾರದಿಂದ ಜನ ನೊಂದಿದ್ದಾರೆ: ಡಿ. ಕೆ ಶಿವಕುಮಾರ್​

Last Updated :Feb 21, 2023, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.