ETV Bharat / state

ಒಳ ಮೀಸಲಾತಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸಿಗೆ ತೀರ್ಮಾನ

author img

By ETV Bharat Karnataka Team

Published : Jan 18, 2024, 5:05 PM IST

ವಿಧಾನಸೌಧ
ವಿಧಾನಸೌಧ

ಒಳ ಮೀಸಲಾತಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರು : ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಂವಿಧಾನದ 341ನೇ ವಿಧಿಗೆ ಮೂರನೇ ಖಂಡವನ್ನು ಸೇರಿಸುವ ಮೂಲಕ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಅನುಷ್ಠಾನಕ್ಕೆ ತರುವಂತೆ ಶಿಫಾರಸು ಮಾಡಲು ತೀರ್ಮಾನಿಸಿದೆ. ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ. ಕೇಂದ್ರ ಸರ್ಕಾರವು ಸಂವಿಧಾನದ 341ನೇ ವಿಧಿಗೆ ಹೊಸದಾಗಿ ಖಂಡ (3)ನ್ನು ಸೇರಿಸಿದರೆ ಮಾತ್ರ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಒಳ ಮೀಸಲಾತಿ ಕೇಂದ್ರದ ಅಧಿಕಾರ ವ್ಯಾಪ್ತಿಯಲ್ಲಿದೆ ಎಂದು ಕೇಂದ್ರದ ಹೆಗಲಿಗೆ ಹಾಕಲು ನಿರ್ಧರಿಸಿದೆ.

ಸಂಪುಟ ಸಭೆಯ ಬಳಿಕ ಮಾತನಾಡಿದ ಸಚಿವ ಹೆಚ್ ಸಿ‌ ಮಹದೇವಪ್ಪ, ಪರಿಶಿಷ್ಟ ಜಾತಿಗಳಿಗೆ ಸಂವಿಧಾನದ ವಿಧಿ 15 ಮತ್ತು 16ರಂತೆ ಮೀಸಲಾತಿ ಮತ್ತು ಇತರ ಸೌಲಭ್ಯ ನೀಡಲಾಗಿದೆ. ಈ ಪಟ್ಟಿಯಲ್ಲಿರುವ ಎಲ್ಲರಿಗೂ ಮೀಸಲಾತಿ ಮತ್ತು ಸೌಲಭ್ಯಗಳಲ್ಲಿ ಸಮಾನ ಅವಕಾಶ ಕಲ್ಪಿಸಲು ಜನಸಂಖ್ಯೆ ಆಧಾರದಲ್ಲಿ ವರ್ಗೀಕರಣ ಮಾಡುವುದು ಸೂಕ್ತ. ಆದ್ದರಿಂದ, ಸಂವಿಧಾನದ ವಿಧಿ 341ಕ್ಕೆ ಹೊಸದಾಗಿ ಖಂಡ 3 ಅನ್ನು ಸೇರ್ಪಡೆ ಮಾಡಬೇಕಿದೆ ಎಂದು ವಿವರಿಸಿದರು.

ಎರಡು ದಶಕಗಳಿಂದ ದಲಿತರ ಒಳಪಂಗಡಗಳಿಗೆ ಅನ್ಯಾಯವಾಗಿದೆ ಎಂದು ಒಳಮೀಸಲಾತಿಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ನ್ಯಾ. ಸದಾಶಿವ ಆಯೋಗ ಸಮಿತಿ ರಚನೆ ಮಾಡಲಾಗಿತ್ತು. ಈ ಮುಂಚೆ ಚಿತ್ರದುರ್ಗದ ಕಾಂಗ್ರೆಸ್ ಸಮಾವೇಶದಲ್ಲಿ ಅವಕಾಶ ಕೊಟ್ಟರೆ ಸದಾಶಿವ ಆಯೋಗ ವರದಿಯನ್ನು ಮಂಡನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದೆವು. ಆದರೆ ತರಾತುರಿಯಲ್ಲಿ ಹಿಂದಿನ ಸರ್ಕಾರ ಸಂಪುಟ ಉಪಸಮಿತಿ ರಚಿಸಿ ಬಳಿಕ ಅದರ ವರದಿ ಆಧಾರದಲ್ಲಿ ಒಳಮೀಸಲಾತಿ ಬಗ್ಗೆ ಸಂಪುಟ ಸಭೆ ತೀರ್ಮಾನ ಮಾಡಿತ್ತು. ಈ ವೇಳೆ ಸಚಿವ ಸಂಪುಟ ಸಭೆಯಲ್ಲಿ ಸದಾಶಿವ ಆಯೋಗ ಸಮಿತಿ ಅಪ್ರಸ್ತುತ ಎಂದು ಹೇಳಿತ್ತು ಎಂದು ತಿಳಿಸಿದರು.

ಭೋವಿ, ಮತ್ತು ಬಂಜಾರ, ಕೊರಮ, ಕೊರಚ ಜಾತಿಗಳು ಹಾಗೂ ಅದರ ಪರ್ಯಾಯ ಜಾತಿಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದು, ಅದನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಹಾಗೂ ಸೇರಿದ ಪಟ್ಟಿಯಲ್ಲಿ ರಾಜ್ಯಕ್ಕೆ ಪರಿಶಿಷ್ಟ ಜಾತಿಗಳನ್ನು ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರ ಎಸ್ಸಿ ಮೀಸಲಾತಿಯನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿತ್ತು. ಜನಸಂಖ್ಯೆಗೆ ಅನುಗುಣವಾಗಿ ಗುಂಪು ಒಂದರಲ್ಲಿ ಆದಿಜಾಂಬವ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ, ಗುಂಪು 2 ರಲ್ಲಿ ಆದಿ ಕರ್ನಾಟಕ ಸಮುದಾಯಕ್ಕೆ ಶೇ 5.5ರಷ್ಟು ಮೀಸಲಾತಿ, ಗುಂಪು 3ರಲ್ಲಿ ಬಂಜಾರ, ಭೋವಿ, ಕೊರಚರಿಗೆ ಶೇ 4.5ರಷ್ಟು ಮೀಸಲಾತಿ, ಗುಂಪು 4ರಲ್ಲಿರುವ ಮತ್ತಿತರರಿಗೆ ಶೇ.1ರಷ್ಟು ಮೀಸಲಾತಿ ನೀಡಲು ನಿರ್ಧಾರ ಕೈಗೊಂಡಿತ್ತು.

ಇದನ್ನೂ ಓದಿ : ಎದೆಗಾರಿಕೆ ಇದ್ದರೆ ವಿಶೇಷ ಅಧಿವೇಶನ‌ ಕರೆದು ಒಳ ಮೀಸಲಾತಿ ಜಾರಿ ಮಾಡಿ: ಕೇಂದ್ರ ಸಚಿವ ನಾರಾಯಣಸ್ವಾಮಿ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.