ETV Bharat / state

ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಸೋಮಣ್ಣ, ಯತ್ನಾಳ್, ಸೋಮಶೇಖರ್ ಗೈರು

author img

By ETV Bharat Karnataka Team

Published : Nov 15, 2023, 3:20 PM IST

ಬಿಜೆಪಿಯ ನೂತನ ಸಾರಥಿ ಬಿ ವೈ ವಿಜಯೇಂದ್ರ ಅವರ ಪದಗ್ರಹಣ ಸಮಾರಂಭಕ್ಕೆ ಶಾಸಕರಾದ ಬಸನಗೌಡ ಪಾಟೀಲ್, ಅರವಿಂದ ಬೆಲ್ಲದ್, ಸೋಮಶೇಖರ್​ ಗೈರಾಗಿದ್ದರು.

Etv Bharatsomanna-and-yatnal-somashekhar-absent-to-vijayendra-swearing-ceremony
ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮ: ಸೋಮಣ್ಣ, ಯತ್ನಾಳ್, ಸೋಮಶೇಖರ್ ಗೈರು

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯಾಧ್ಯಕ್ಷ ಸ್ಥಾನ ವಂಚಿತರು ಮತ್ತು ಯಡಿಯೂರಪ್ಪ ಕುಟುಂಬದ ವಿರುದ್ಧ ಅಸಮಾಧಾನಗೊಂಡವರು ಹಾಗೂ ಪಕ್ಷ ತೊರೆಯಲು ಸಿದ್ಧರಾಗಿರುವವರು ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಿಂದ ದೂರ ಉಳಿದಿದ್ದಾರೆ. ಮತ್ತೊಂದೆಡೆ ಬಿಎಸ್​ವೈ ಬೆಂಬಲಿಗರು, ಪಕ್ಷ ನಿಷ್ಠರು ಪದಗ್ರಹಣ ಸಮಾರಂಭದಲ್ಲಿ ಹಾಜರಾಗಿ ಬೆಂಬಲ ಸೂಚಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಿಂದ ಕೆಲ ನಾಯಕರು ದೂರ ಉಳಿದು ಅತೃಪ್ತಿ ಹೊರಹಾಕಿದ್ದಾರೆ. ಇತ್ತೀಚಿನ ಎರಡು ಮೂರು ವರ್ಷದಿಂದ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿಕೊಂಡು ಬಂದಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ಧಾರವಾಡ ಶಾಸಕ ಅರವಿಂದ ಬೆಲ್ಲದ್ ನಿರೀಕ್ಷೆಯಂತೆ ಗೈರಾದರೆ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಿರಿಯ ನಾಯಕ ವಿ. ಸೋಮಣ್ಣ ಕಾರ್ಯಕ್ರಮದಿಂದ ದೂರ ಉಳಿದು ಬಹಿರಂಗವಾಗಿ ಅಸಮಾಧಾನ ತೋರ್ಪಡಿಸಿದ್ದಾರೆ.

ಇನ್ನು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಕ್ಷೇತ್ರದಲ್ಲಿಯೇ ಇದ್ದರೂ ಬಿಜೆಪಿ ಕಚೇರಿಯತ್ತ ಸುಳಿಯದೆ ಬಿಜೆಪಿ ತೊರೆಯುವ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. ಇದರ ನಡುವೆ ಸಂಘದ ನಿಷ್ಠಾವಂತರಾದ ಅರವಿಂದ ಲಿಂಬಾವಳಿ ಕೂಡ ಗೈರಾಗಿ ಅಚ್ಚರಿ ಮೂಡಿಸಿದ್ದಾರೆ. ಸಿ ಟಿ ರವಿ ಮೊದಲೇ ಗೈರಾಗುವ ಮಾಹಿತಿ ನೀಡಿ ನೂತನ ಅಧ್ಯಕ್ಷರ ಭೇಟಿ ಮಾಡಿ ಶುಭ ಕೋರಿದ್ದರು.

ಇನ್ನುಳಿದಂತೆ ಮಾಜಿ ಸಿಎಂಗಳಾದ ಯಡಿಯೂರಪ್ಪ, ಡಿವಿ ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್.ಅಶೋಕ್, ಡಾ. ಅಶ್ವತ್ಥನಾರಾಯಣ್, ಹಿರಿಯ ನಾಯಕ ರಾಮಚಂದ್ರೇಗೌಡ, ಮಾಜಿ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು ಆಗಮಿಸಿದ್ದರು. ಪಂಚರಾಜ್ಯಗಳ ಚುನಾವಣಾ ಜವಾಬ್ದಾರಿ ಕಾರಣಕ್ಕೆ ಕೇಂದ್ರ ಸಚಿವರು ಆಗಮಿಸಿರಲಿಲ್ಲ.

ಇದನ್ನೂ ಓದಿ: ಲೋಕಸಭೆ ಮಾತ್ರವಲ್ಲ, ಎಲ್ಲಾ ಚುನಾವಣೆಗಳನ್ನು ಗೆಲ್ಲುವುದೇ ಗುರಿ: ಬಿ ವೈ ವಿಜಯೇಂದ್ರ

ಬಿಜೆಪಿ ಕಚೇರಿಯಲ್ಲಿ ಹೋಮ, ಹವನ: ಪದಗ್ರಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಹೋಮ-ಹವನಾದಿ ಧಾರ್ಮಿಕ ಕ್ರಿಯೆಗಳು ಜರುಗಿದವು. ಕಳೆದ ರಾತ್ರಿ ಗಣಪತಿ ಹೋಮ ನೆರವೇರಿಸಿದ ಅರ್ಚಕರು ಇಂದು ಬೆಳಗ್ಗೆ ದುರ್ಗಾ ಹೋಮ ನಡೆಸಿದರು. ಬಳಿಕ ಪೂರ್ಣಹುತಿಯಾಯಿತು. ನಿಯೋಜಿತ ಅಧ್ಯಕ್ಷರ ಜೊತೆಗೆ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಚೇರಿ ಮುಂಭಾಗದಲ್ಲಿ ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿದ್ದು, ಹೊರಭಾಗದಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಸಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.