ETV Bharat / state

ಮಹದಾಯಿ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟ ನಿಲುವು ಘೋಷಿಸಿ: ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ

author img

By

Published : Jan 12, 2023, 10:29 PM IST

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದು ಯುವಜನೋತ್ಸವ ಅಲ್ಲ, ಯುವ ವಿನಾಶೋತ್ಸವ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 163 ಯುವಕರು ಕೋಮು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. ಬಿಜೆಪಿಯು ಯುವಕರನ್ನ ರಾಜಕೀಯ ದೌರ್ಜನ್ಯಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

siddaramaiah-tweet-against-pm-narendra-modi
ಮಹದಾಯಿ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟ ನಿಲುವು ಘೋಷಿಸಿ: ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಪ್ರಧಾನಿ ರಾಜ್ಯ ಭೇಟಿ ಸಂದರ್ಭದಲ್ಲೇ ವಿವಿಧ ವಿಚಾರಗಳನ್ನು ಮುಂದಿಟ್ಟು ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರೇ, ಮಹದಾಯಿ ನದಿ ನೀರಿನ ಯೋಜನೆ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರದ ಸ್ಪಷ್ಟ ನಿಲುವನ್ನು ಘೋಷಿಸಬೇಕು. ಎರಡು ವರ್ಷ ಹತ್ತು ತಿಂಗಳವರೆಗೆ ಮುಚ್ಚಿಟ್ಟು ಈಗ ಅನುಮತಿ ನೀಡಿರುವುದು ನ್ಯಾಯದ ತೀರ್ಮಾನವೇ? ಅನ್ಯಾಯದ ಆಟವೇ? ಎಂದು ಪ್ರಶ್ನೆ ಮಾಡಿದ್ದಾರೆ.

Siddaramaiah tweet against pm Narendra modi
ಸಿದ್ದರಾಮಯ್ಯ ಟ್ವೀಟ್

ಗೋವಾ ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನೀರಾವರಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಡಿಪಿಆರ್​ಗೆ ನೀಡಿರುವ ಅನುಮತಿಯನ್ನು ಹಿಂದೆಗೆದುಕೊಳ್ಳಲು ಮನವಿ ಮಾಡಿದೆ. ಗೃಹಸಚಿವ ಅಮಿತ್ ಶಾ ಅವರು ಆಶಾದಾಯಕ ಭರವಸೆ ನೀಡಿದ್ದಾರಂತೆ, ಏನಿದು ಡಬಲ್ ಗೇಮ್? ಎಂದು ಪ್ರಶ್ನಿಸಿದ್ದಾರೆ.

Siddaramaiah tweet against pm Narendra modi
ಸಿದ್ದರಾಮಯ್ಯ ಟ್ವೀಟ್

ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥಕ್ಕಾಗಿ ಗೋವಾ ಮುಖ್ಯಮಂತ್ರಿಗಳು ಪ್ರಾಧಿಕಾರ ರಚಿಸಲು ಕೇಳಿಕೊಂಡಿದ್ದಾರಂತೆ. ಇದು ವಿಳಂಬ ನೀತಿಯ ಕಾರ್ಯತಂತ್ರ. ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಡಿಪಿಆರ್ ಗೆ ನೀಡಿರುವ ಅನುಮತಿಯನ್ನು ವಾಪಸು ಪಡೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಬೆಳವಣಿಗೆಯನ್ನು ಗಮನಿಸಿದ್ದಾರೆಂದು ನಂಬಿದ್ದೇನೆ. ಈ ರಾಜಕೀಯ ಜಿದ್ದಾಜಿದ್ದಿಯಲ್ಲಿ ಬಲಶಾಲಿಯಾಗಿದ್ದವರೇ ಗೆಲ್ಲುವುದು ರಾಜನೀತಿ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಮತ್ತು ರಾಜ್ಯದ 25 ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Siddaramaiah tweet against pm Narendra modi
ಸಿದ್ದರಾಮಯ್ಯ ಟ್ವೀಟ್

ಇದನ್ನೂ ಓದಿ: ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ: ಕಾರು ಇಳಿದು ಕಾಲ್ನಡಿಗೆ ಮೂಲಕ ಜನರತ್ತ ಕೈ ಬೀಸಿ ನಡೆದ ಮೋದಿ

ಯುವ ವಿನಾಶೋತ್ಸವ: ಇಂದು ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ಸಂದರ್ಭದಲ್ಲಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪ ಮಾಡಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಯುವಜನೋತ್ಸವ ಅಲ್ಲ, ಯುವ ವಿನಾಶೋತ್ಸವ ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 163 ಯುವಕರು ಕೋಮುಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಮೂಲಕ ಯುವಕರನ್ನ ರಾಜಕೀಯ ದೌರ್ಜನ್ಯಕ್ಕಾಗಿ ಬಿಜೆಪಿ ಬಳಸಿಕೊಂಡಿದೆ. ಪಿಎಸ್ಐ ಹಗರಣದಲ್ಲಿ 1.29 ಲಕ್ಷ ಯುವಕರ ಭವಿಷ್ಯವನ್ನು ಸರ್ಕಾರ ಬಲಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ನಿರುದ್ಯೋಗದಿಂದ ಬೇಸತ್ತು 1129 ಮಂದಿ ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಮೂರು ವರ್ಷದ ಬಜೆಟ್​ನಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡಿಲ್ಲ. 1.62 ಲಕ್ಷ ಮಂದಿ ವಿದ್ಯಾರ್ಥಿಗಳು ಶಾಲೆಯನ್ನು ತೊರೆದಿದ್ದಾರೆ. 2020-21 ಹಾಗೂ 2021-22ನೇ ಸಾಲಿನಲ್ಲಿ 1966 ಶಾಲೆಗಳನ್ನು ಮುಚ್ಚಲಾಗಿದೆ. ಇಂದಿನ ಸರ್ಕಾರ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಹಲವು ಯೋಜನೆಗಳನ್ನು ನಿಲ್ಲಿಸಲಾಗಿದೆ. ಪರಿಷ್ಕೃತ ಪಠ್ಯಪುಸ್ತಕ ಅರ್ಧದಷ್ಟು ವಿದ್ಯಾರ್ಥಿಗಳನ್ನೂ ತಲುಪಿಲ್ಲ ಎಂದು ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ 25 ಲಕ್ಷ ಮಂದಿ ನಿರುದ್ಯೋಗಿಗಳು ಇದ್ದು 2.52 ಲಕ್ಷ ಹುದ್ದೆಗಳು ಭರ್ತಿಯಾಗದೆ ಹಾಗೆಯೇ ಉಳಿದಿವೆ. ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿ 83,000 ಉದ್ಯೋಗ ನಷ್ಟವಾಗಿದೆ ಎಂಬುದು ಸೇರಿದಂತೆ ಹಲವು ವಿಚಾರಗಳನ್ನು ಗಮನ ಸೆಳೆದಿರುವ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದಿಂದ ಯುವಕರಿಗೆ ಅನ್ಯಾಯವಾಗುವ ಜೊತೆಗೆ ಉದ್ಯೋಗವೂ ಸಿಗುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆ: ಯುವ ಶಕ್ತಿ ಬಗ್ಗೆ ಪ್ರಧಾನಿ ಮೋದಿ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.