ETV Bharat / state

ದೇಶಿಯ ಅಡಿಕೆ ಮೇಲಿನ ಜಿಎಸ್‌ಟಿ ರದ್ದುಗೊಳಿಸಿ, ಆಮದು ಅಡಿಕೆ ಮೇಲೆ ಅಬಕಾರಿ ಸುಂಕ ಹೆಚ್ಚಿಸಿ: ಸಿದ್ದರಾಮಯ್ಯ ಒತ್ತಾಯ

author img

By

Published : Aug 20, 2022, 10:22 PM IST

ವಿದೇಶದಿಂದ ಬರುವ ಆಮದು ಅಡಿಕೆ ಮೇಲೆ ಅಬಕಾರಿ ಸುಂಕ ಕಡಿಮೆ ಮಾಡಿ, ನಮ್ಮ ದೇಶದ ಅಡಿಕೆಯ ಮೇಲೆ ಜಿಎಸ್‌ಟಿ ಹೆಚ್ಚಳ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶಕ್ಕೆ ಮಾರಿ, ನೆರೆ ದೇಶಕ್ಕೆ ಉಪಕಾರಿಯಂತಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

KN_BNG_05_SIDDU_PRESS_NOTE_SCRIPT_7208077
ಸಿದ್ದರಾಮಯ್ಯ

ಬೆಂಗಳೂರು: ವಿದೇಶಿ ಅಡಿಕೆಯ ಆಮದಿನ ಮೇಲಿನ ಅಬಕಾರಿ ಸುಂಕವನ್ನು ಶೇ110 ರಷ್ಟು ಕಡಿಮೆ ಮಾಡಿ, ನಮ್ಮ ರೈತರು ಬೆಳೆಯುವ ಅಡಿಕೆ ಮೇಲಿನ ಜಿಎಸ್‌ಟಿ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮಲೆನಾಡು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದಾಗ ಮಲೆನಾಡಿನ ರೈತರು ಮತ್ತು ಅಡಿಕೆ ಬೆಳೆಗಾರರು ತಮ್ಮನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರೂ ಯಾವುದೇ ಪ್ರಯೋಜನವಾಗುವ ಬದಲಿಗೆ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಅಡಿಕೆ ಬೆಳೆಗೆ ಕೊಳೆ ರೋಗ, ಹಳದಿ ಎಲೆ, ಚುಕ್ಕೆ ರೋಗವೂ ಕಾಡುತ್ತಿದೆ. ಸಾಲದ್ದಕ್ಕೆ ವಿಪರೀತ ಮಳೆ ಹಾಗೂ ಮಂಗಗಳ ಹಾವಳಿಯಿಂದ ಅಡಿಕೆ ಗೊನೆಗಳು ನೆಲೆಕಚ್ಚುತ್ತಲೇ ಇವೆ. ಇವೆಲ್ಲದರಿಂದ ಸಣ್ಣ ಪುಟ್ಟ ಅಡಿಕೆ ಬೆಳೆಗಾರರು ಬೀದಿಗೆ ಬೀಳುವಂತಾಗಿ, ಮಧ್ಯಮ ಮಟ್ಟದ ಬೆಳೆಗಾರರ ಆದಾಯ ಅಷ್ಟಕಷ್ಟೆ ಎನ್ನುವಂತಾಗಿದೆ.

ಇಷ್ಟೆಲ್ಲಾ ಸಂಕಟಗಳ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರ್ಕಾರ ನಮ್ಮ ಅಡಿಕೆಯ ಮೇಲೆ ಜಿಎಸ್‌ಟಿ ಹೆಚ್ಚಿಸುತ್ತಾ, ವಿದೇಶದಿಂದ ಬರುವ ಆಮದು ಅಡಿಕೆ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುತ್ತಿದೆ. “ದೇಶಕ್ಕೆ ಮಾರಿ ನೆರೆ ದೇಶಕ್ಕೆ ಉಪಕಾರಿ” ಯಂತಾಗುತ್ತಿರುವ ಕೇಂದ್ರ ಸರ್ಕಾರದ ನೀತಿಗಳು ಯಾವ ದುಡಿಯುವ ವರ್ಗಗಳು ಮತ್ತು ರೈತರನ್ನೂ ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಈಗ ಕೇಂದ್ರ ಸರ್ಕಾರದ ಕೆಟ್ಟ ದೃಷ್ಟಿ ಅಡಿಕೆ ಬೆಳೆಗಾರರ ಮೇಲೆ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅಡಿಕೆಯ ಕನಿಷ್ಠ ಆಮದು ದರ 110ರೂ ಇದ್ದಾಗ ಕ್ವಿಂಟಾಲ್ ಅಡಿಕೆ ಬೆಲೆ ಸರಾಸರಿ 75 ಸಾವಿರ ರೂಪಾಯಿ ಇತ್ತು. ಈಗ ಕನಿಷ್ಠ ಆಮದು ದರ 251 ಇದೆ. ಆದರೂ ಅಡಿಕೆ ಬೆಲೆ ಕ್ವಿಂಟಾಲ್‌ಗೆ 50 ಸಾವಿರಕ್ಕೆ ಕುಸಿದಿದೆ. ಇದಕ್ಕೆ ಕಾರಣ ವ್ಯಾಪಕ ಅಡಿಕೆ ಕಳ್ಳ ಸಾಗಣೆ, ಸರ್ಕಾರಿ ಒಡೆತನದ ಬಂದರುಗಳು ಅದಾನಿ ಮುಂತಾದ ಖಾಸಗಿ ಒಡೆತನಕ್ಕೆ ಹೋದ ಬಳಿಕ ಅಡಿಕೆ ಕಳ್ಳ ಸಾಗಣೆ ಹೆಚ್ಚಾಗಿ ಪ್ರತಿ ವರ್ಷ ಸರ್ಕಾರಕ್ಕೆ 15 ಸಾವಿರ ಕೋಟಿಯಷ್ಟು ತೆರಿಗೆ ನಷ್ಟವಾಗುತ್ತಿದೆ ಎನ್ನುವ ವರದಿಗಳಿವೆ.

2021ರ ಜೂನ್‌ನಲ್ಲಿ ಸಿಬಿಐ ದೇಶದ 19 ಗೋದಾಮುಗಳ ಮೇಲೆ ದಾಳಿ ನಡೆಸಿ ಅಡಿಕೆ ಕಳ್ಳಸಾಗಣೆಯನ್ನು ಪತ್ತೆಹಚ್ಚಿ ಕಾಳಸಂತೆಕೋರರನ್ನು ಬಂಧಿಸಿದ್ದರಿಂದ ಕುಸಿತ ಕಂಡಿದ್ದ ಅಡಿಕೆ ದರ ಏರಿಕೆಯಾಗಿತ್ತು. ಈಗ ಮತ್ತೆ ಕಳ್ಳಸಾಗಣೆ, ಕಾಳಸಂತೆ ಮಾರಾಟ ಹೆಚ್ಚಾಗಿ ಅಡಿಕೆ ದರ ಕುಸಿಯುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಮೇಲೆ ದಾಳಿ ನಡೆಸುತ್ತಿದೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ಕೊಳೆರೋಗದಿಂದ ಕಂಗಾಲಾದ, ಮತ್ತಿತರ ಸಮಸ್ಯೆಗಳಿಗೆ ಸಿಲುಕಿದ್ದ ಅಡಿಕೆ ಬೆಳೆಗಾರರಿಗೆ 40 ಕೋಟಿ ರೂಪಾಯಿ ಪರಿಹಾರ ನೀಡಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಂಗಿ ಕುಸ್ತಿಯಿಂದ ಒಳಗೊಳಗೆ ನಸುನಕ್ಕ ಮೂರನೇ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.