ವಿದ್ಯಾರ್ಥಿಗಳ ಸ್ಕಾಲರ್​ಶಿಪ್‍ ರದ್ದು ಮಾಡಿರುವ ನೀತಿ ಕೇಂದ್ರ ಸರ್ಕಾರದ ಹೊಣೆಗೇಡಿತನದ ನಿರ್ಧಾರ: ಸಿದ್ದರಾಮಯ್ಯ

author img

By

Published : Nov 30, 2022, 5:36 PM IST

Siddaramaiah

ಮೆಟ್ರಿಕ್‍ಪೂರ್ವ ವಿದ್ಯಾರ್ಥಿಗಳ ಸ್ಕಾಲರ್​ಶಿಪ್‍ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು: ಎಸ್‍ಸಿ/ಎಸ್‍ಟಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮೆಟ್ರಿಕ್‍ಪೂರ್ವ ವಿದ್ಯಾರ್ಥಿಗಳ ಸ್ಕಾಲರ್​ಶಿಪ್​ನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

'ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ತುಳಿದು ಆಳಬೇಕು ಎಂಬ ಬಿಜೆಪಿಯ ಅಜೆಂಡ ನಿಧಾನಕ್ಕೆ ಕಾರ್ಯಗತವಾಗುತ್ತಿದೆ. ನಾನು ಕಳೆದ ಕೆಲವು ವರ್ಷಗಳಿಂದ ಗಮನಿಸಿದಂತೆ ಮೋದಿಯವರ ಬಾಯಲ್ಲಿ ಹೇಳಿಸಿದ ಘೋಷಣೆಗಳಿಗೆ ವಿರುದ್ಧ ದಿಕ್ಕಿನಲ್ಲಿ ಸತ್ಯ ಹುದುಗಿರುತ್ತದೆ. ಬಿಜೆಪಿಯವರು ಸಬ್ ಕಾ ವಿಕಾಸ್ ಎಂದರೆ ಅದು ದಲಿತ, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರ ದಮನ ಎಂದು ಅರ್ಥ. ಬಹುಸಂಖ್ಯಾತರ ವಿನಾಶದ ಯೋಜನೆಗಳನ್ನು ರೂಪಿಸುವಾಗ ಸರ್ವರ ವಿಕಾಸ ಎಂದು ಸುಳ್ಳು ಹೇಳುತ್ತಾರೆ ಎಂದಿದ್ದಾರೆ.

ನಮ್ಮಲ್ಲಿ ಹೈಸ್ಕೂಲಿಗೆ ದಾಖಲಾಗುವವರ ಪ್ರಮಾಣ ಶೇ.75 ರಷ್ಟಿದೆ. ಅಂದರೆ ಶೇ.25 ರಷ್ಟು ಮಕ್ಕಳು ಶಾಲಾಶಿಕ್ಷಣದಿಂದ ಹೊರಗಿದ್ದಾರೆ ಎಂದರ್ಥ. ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ಶೂ, ಕೆನೆ ಭರಿತ ಹಾಲು, ಸೈಕಲ್ ಹೀಗೆ ವಿವಿಧ ಸೌಲಭ್ಯ ನೀಡಿ ಶಾಲೆಗೆ ಕರೆತಂದು ವಿದ್ಯಾಭ್ಯಾಸ ನೀಡಿ ದಮನಿತರ ಮಕ್ಕಳು ಉದ್ಧಾರವಾಗಲಿ ಎಂಬ ಉದ್ದೇಶದಿಂದ ಈ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು.

ಅಹಿಂದ ವಿರೋಧಿ ನೀತಿ: ಜೊತೆಯಲ್ಲಿ ಮಕ್ಕಳಿಗೆ ವಿದ್ಯಾರ್ಥಿ ವೇತನದ ವ್ಯವಸ್ಥೆಯೂ ಇತ್ತು. ಈ ವಿದ್ಯಾರ್ಥಿ ವೇತನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನಕ್ಕೆ ತಗುಲುವ ವೆಚ್ಚವನ್ನು ಶೇ. 75-25 ಪ್ರಮಾಣದಲ್ಲಿ ಹಂಚಿಕೊಳ್ಳುವುದು ಇಲ್ಲಿಯವರೆಗೂ ನಡೆದುಕೊಂಡು ಬಂದಿತ್ತು. ಆದರೆ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಈಗ ಏಕಾಏಕಿ ಒಂದರಿಂದ ಎಂಟನೇ ತರಗತಿವರೆಗಿನ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವುದು ದಲಿತ- ಆದಿವಾಸಿ- ಹಿಂದುಳಿದ- ಅಲ್ಪಸಂಖ್ಯಾತ ವಿರೋಧಿ ಸಂವಿಧಾನ ದ್ರೋಹಿ ಕೃತ್ಯವಾಗಿದೆ ಎಂದು ಹೇಳಿದ್ದಾರೆ.

ಪೋಷಕರ ಮೇಲೆ ಮಕ್ಕಳ ಅವಲಂಬನೆ: ಮೋದಿ ಸರ್ಕಾರ ಈ ಮಕ್ಕಳ ಶಿಕ್ಷಣದ ಮೇಲೆ ಪ್ರಹಾರ ನಡೆಸಲು ಹೊರಟಿದೆ. ಏಕಾಏಕಿ ವಿದ್ಯಾರ್ಥಿವೇತನ ನಿಲ್ಲಿಸುವುದರಿಂದ ಶಾಲೆಗಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತದೆ. ಪೋಷಕರ ಮೇಲೆ ಅವಲಂಬಿತರಾಗದೆ ವಿದ್ಯಾರ್ಥಿವೇತನದಿಂದ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಮಕ್ಕಳು ಈಗ ಪೋಷಕರ ಮೇಲೆ ಅವಲಂಬಿತರಾಗುವ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದೆ. ಈಗಾಗಲೇ ಮೋದಿ ಅವರ ಸರ್ಕಾರ ಪೆನ್ನು, ಪೆನ್ಸಿಲ್, ಬರವಣಿಗೆ ಪುಸ್ತಕ, ಡ್ರಾಯಿಂಗ್ ಶೀಟ್ ಸೇರಿ ಎಲ್ಲದರ ಮೇಲೂ ಜಿಎಸ್‍ಟಿ ವಿಧಿಸಿದೆ ಎಂದಿದ್ದಾರೆ.

ಒಂದು ಕಡೆ ಕೇಂದ್ರ ಸರ್ಕಾರ ಕೇವಲ ಶೇ.3 ರಷ್ಟು ಜನಸಂಖ್ಯೆ ಹೊಂದಿರುವ ಜಾತಿ ಸಮುದಾಯದ ಮಂದಿಯ ವಾರ್ಷಿಕ ಆದಾಯ 8 ಲಕ್ಷ ರೂ ಇದ್ದರೂ ಅವರನ್ನು ಆರ್ಥಿಕವಾಗಿ ಹಿಂದುಳಿದವರು ಎಂದು ತೀರ್ಮಾನಿಸಿ ಶೇ.10 ರಷ್ಟು ಮೀಸಲಾತಿ ಕೊಡಲು ಸಂಭ್ರಮಿಸುತ್ತಿದೆ. ಮತ್ತೊಂದೆಡೆ ವಾರ್ಷಿಕ 2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಶೇ.95 ರಷ್ಟು ಜನಸಂಖ್ಯೆ ಇರುವ ಜನ ಸಮುದಾಯದ ಬಡ ಮಕ್ಕಳ ವಿದ್ಯಾರ್ಥಿವೇತನವನ್ನು ನಿಲ್ಲಿಸಿಬಿಟ್ಟಿದೆ. ಆದರೆ, ಈ ದೇಶದ ಶೇ.50ರಷ್ಟಿರುವ ರೈತ ಕುಟುಂಬಗಳ ಸರಾಸರಿ ಆದಾಯ ವಾರ್ಷಿಕವಾಗಿ 1 ಲಕ್ಷ ರೂಗಳಿಗಿಂತ ಕಡಿಮೆ ಎಂದು ಮೋದಿ ಸರ್ಕಾರದ ದಾಖಲೆಗಳೇ ಹೇಳುತ್ತವೆ ಎಂದಿದ್ದಾರೆ.

ಮೇಲ್ವರ್ಗ ಧೋರಣೆ ಖಂಡನೀಯ: ಇನ್ನು, ಕೂಲಿ ಕಾರ್ಮಿಕ ಸಮುದಾಯದ ಆದಾಯ ಕೇಳುವುದೇ ಬೇಡ. ಹೀಗಿದ್ದರೂ ವಾರ್ಷಿಕ 8 ಲಕ್ಷ ಆದಾಯ ಇರುವ ಶೇ.3 ಜನಸಂಖ್ಯೆಯ ಮಂದಿ ಮಾತ್ರ ಮೋದಿ ಮತ್ತು ಬಿಜೆಪಿಗರ ಕಣ್ಣಿಗೆ ಬಡವರಾಗಿ ಕಾಣುತ್ತಿದ್ದಾರೆ. ಸಾಲದ್ದಕ್ಕೆ ಇ.ಡಬ್ಲ್ಯು.ಎಸ್ ಕೋಟಾದ ಮಕ್ಕಳಿಗೆ ಮಾತ್ರ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಂಪನಿಗಳು ಸೇರಿದಂತೆ ಹಲವು ಖಾಸಗಿ ಕಂಪನಿಗಳು ಸಿಎಸ್‍ಆರ್ ನಿಧಿಯಡಿ ಹತ್ತಾರು ಕೋಟಿ ದೇಣಿಗೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೀಗಾಗಿ ಬಿಜೆಪಿಗೆ ಕೇವಲ ಶೇ.3 ರಷ್ಟು ಜನಸಂಖ್ಯೆ ಇರುವ ಜನರ ಬಗ್ಗೆ ಮಾತ್ರ ಕಾಳಜಿ ಎಂದು ಮೇಲ್ವರ್ಗದ ಧೋರಣೆ ಬಗ್ಗೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮೋದಿಯವರ ಸರ್ಕಾರ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸದೆ ಅದನ್ನು ಇನ್ನಷ್ಟು ಹೆಚ್ಚಿಸಬೇಕು. ಮೋದಿ ಸರ್ಕಾರದ ಈ ದಲಿತ ವಿರೋಧಿ ನಿಲುವನ್ನು ರಾಜ್ಯ ಸರ್ಕಾರ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರುಗಳು, ಮುಖ್ಯವಾಗಿ ಕೇಂದ್ರದ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿಯವರು ದಿಟ್ಟವಾದ ಧ್ವನಿ ಎತ್ತಿ ವಿದ್ಯಾರ್ಥಿ ವಿರೋಧಿ ನಿಲುವು ತೆಗೆದುಕೊಳ್ಳವುದಿಲ್ಲ ಎಂದು ಘೋಷಿಸಬೇಕು. ಲೋಕಸಭಾ ಸದಸ್ಯರು ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಶಿಕ್ಷಕರನ್ನು ಬೋಧಕೇತರ ಕರ್ತವ್ಯಕ್ಕೆ ನಿಯೋಜಿಸುವಂತಿಲ್ಲ: ಆಂಧ್ರಪ್ರದೇಶ ಸರ್ಕಾರ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.