ETV Bharat / state

ನ್ಯಾಯಾಂಗದ ಬದಲು, ಪೊಲೀಸರಿಂದಲೇ ಶಿವಮೊಗ್ಗ ಕೊಲೆ ಪ್ರಕರಣದ ತನಿಖೆ : ಮಾಧುಸ್ವಾಮಿ ಸ್ಪಷ್ಟನೆ

author img

By

Published : Feb 22, 2022, 7:22 PM IST

ವಾಹನಗಳಿಗೆ ಬೆಂಕಿ, ಹಲವಾರು ಜನರಿಗೆ ಹಲ್ಲೆ, ಅಂಗಡಿ-ಮುಂಗಟ್ಟುಗಳ ಹಾನಿ, ಮನೆಗಳನ್ನು ದ್ವಂಸಗೊಳಿಸಲಾಗಿದೆ. ಶಿವಮೊಗ್ಗದಲ್ಲಿ ಈ ರೀತಿಯ ಘಟನೆ ಪ್ರಥಮ ಬಾರಿಗೆ ನಡೆದಿದೆ. ಸರ್ಕಾರ ಎಲ್ಲಿ ಹೋಗಿದೆ, ಗೃಹ ಸಚಿವರು ಎಲ್ಲಿ ಹೋಗಿದ್ದಾರೆ? ಹತ್ಯೆ ಪ್ರಕರಣದ ತನಿಖೆ ಆಗಬೇಕು, ನ್ಯಾಯಾಂಗ ತನಿಖೆ ಆಗಬೇಕು, ಘಟನೆ, ಘಟನೋತ್ತರ ಎರಡೂ ತನಿಖೆ ಆಗಬೇಕು. ನೊಂದವರ ಕುಟುಂಬಕ್ಕೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು..

J .C. Maadhuswami
ಮಾಧುಸ್ವಾಮಿ

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ಅವರೇ ತನಿಖೆ ನಡೆಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನಪರಿಷತ್​​ನಲ್ಲಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಶಿವಮೊಗ್ಗ ಘಟನೆ ಪ್ರಸ್ತಾಪಿಸಿದರು. ಶಾಂತವೇರಿ ಗೋಪಾಲಗೌಡರನ್ನು ಕೊಟ್ಟ ಭೂಮಿಯಲ್ಲಿ ಕೋಮು ದಳ್ಳುರಿ ಶುರುವಾಗಿದೆ. ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ನಡೆದಿದೆ. ಹರ್ಷ ಎನ್ನುವ ಯುವಕನ ಹತ್ಯೆ ಖಂಡನೀಯ.

ಆತನಿಗೆ ಈ ಹಿಂದೆಯೇ ಬೆದರಿಕೆ ಇತ್ತು, ಆತನಗೆ ಭೀತಿ ಇದ್ದಿದ್ದು ಪೊಲೀಸ್ ಇಲಾಖೆಗೆ ಗೊತ್ತಿತ್ತು. ಆದರೂ ರಕ್ಷಣೆ ನೀಡುವಲ್ಲಿ ಗೃಹ ಇಲಾಖೆ ಎಡವಿದೆ. ಕೂಡಲೇ ಈ ಬಗ್ಗೆ ತನಿಖೆಗೆ ಆದೇಶಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ವಾಹನಗಳಿಗೆ ಬೆಂಕಿ, ಹಲವಾರು ಜನರಿಗೆ ಹಲ್ಲೆ, ಅಂಗಡಿ-ಮುಂಗಟ್ಟುಗಳ ಹಾನಿ, ಮನೆಗಳನ್ನು ದ್ವಂಸಗೊಳಿಸಲಾಗಿದೆ. ಶಿವಮೊಗ್ಗದಲ್ಲಿ ಈ ರೀತಿಯ ಘಟನೆ ಪ್ರಥಮ ಬಾರಿಗೆ ನಡೆದಿದೆ. ಸರ್ಕಾರ ಎಲ್ಲಿ ಹೋಗಿದೆ, ಗೃಹ ಸಚಿವರು ಎಲ್ಲಿ ಹೋಗಿದ್ದಾರೆ? ಹತ್ಯೆ ಪ್ರಕರಣದ ತನಿಖೆ ಆಗಬೇಕು, ನ್ಯಾಯಾಂಗ ತನಿಖೆ ಆಗಬೇಕು, ಘಟನೆ, ಘಟನೋತ್ತರ ಎರಡೂ ತನಿಖೆ ಆಗಬೇಕು. ನೊಂದವರ ಕುಟುಂಬಕ್ಕೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಮಾರ್ಚ್ 4ಕ್ಕೆ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿರುವ ಸಿಎಂ ಬೊಮ್ಮಾಯಿ

ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಶಾಂತವಾಗಿದ್ದ ಶಿವಮೊಗ್ಗದಲ್ಲಿ ಅಶಾಂತಿ ಸೃಷ್ಟಿಸಲಾಗಿದೆ. ಶಿವಮೊಗ್ಗದವರ ಜೊತೆಗೆ ಬೆಂಗಳೂರಿನವರು ಸೇರಿ ಈ ಕೃತ್ಯ ಎಸಗಿದ್ದಾರೆ. ಹಿಂದೆಯೂ ಇಂತಹ ಘಟನೆ ಆಗಿತ್ತು. ಪರಿಷತ್ ಸದಸ್ಯ ಡಿ.ಎಸ್‌.ಅರುಣ್​​ಗೆ ಸಂದೇಶ ಬಂದಿದೆ, ಈಗ ಸತ್ತವರು ಯಾರೋ ಇರಬಹುದು, ಮುಂದೆ ನಿಮ್ಮ ಕುಟುಂಬ ಇರಬಹುದು ಎಂದಿದ್ದಾರೆ. ಪಿಎಫ್ಐನಂತಹ ಸಂಘಟನೆಗಳಿಂದ ಅಶಾಂತಿ ಸೃಷ್ಟಿಯಾಗಿದೆ.

ಹಾಗಾಗಿ, ಸಮಾಜದಲ್ಲಿ ಶಾಂತಿ ಕದಡುವ ಶಕ್ತಿಯನ್ನು ಧಮನಿಸಬೇಕು, ಈ ಸಂಘಟನೆಗಳನ್ನು ನಿಷೇಧಿಸಬೇಕು. ಹರ್ಷನ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು. ಈಗ ಶಿವಮೊಗ್ಗ ನಿಯಂತ್ರಣದಲ್ಲಿದೆ. ಯಾರೂ ಕೂಡ ಪ್ರಚೋದನಾತ್ಮಕ ಹೇಳಿಕೆ ನೀಡದೆ ಶಾಂತಿ ಕಾಪಾಡಲು ಸರ್ಕಾರದ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಎಂಎಲ್​ಸಿ ಅರುಣ್​​ಗೆ ಬೆದರಿಕೆ : ಅವರಿಗೆ ಏನೂ ಆಗದಂತೆ ಎಚ್ಚರ ವಹಿಸಬೇಕು. ಪೊಲೀಸ್ ರಕ್ಷಣೆ ನೀಡಬೇಕು. ಪಿಎಫ್ಐ, ಎಸ್ಡಿಎಫ್ಐನಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬಳಿಕ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಘಟನೆಗೆ ಈಶ್ವರಪ್ಪ ಕಾರಣ ಎಂದು ದೂರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಸದಸ್ಯರೆಲ್ಲಾ ಧರಣಿ ನಡೆಸುತ್ತಿರುವಾಗ ಪ್ರತಿಪಕ್ಷ ನಾಯಕರ ಮಾತು ಯಾಕೆ? ಹಾಗಿದ್ದ ಮೇಲೆ ಎಲ್ಲ ಧರಣಿ ಬಿಟ್ಟು ಆಸನದಲ್ಲಿ ಕೂರಬಹುದಲ್ಲವಾ? ಎಂದು ಬಿಜೆಪಿ ಸದಸ್ಯರು ಕಾಂಗ್ರೆಸ್ ಕಾಲೆಳೆದರು. ಈ ವೇಳೆ, ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಇದನ್ನೂ ಓದಿ: ಕಾಂಗ್ರೆಸ್‌ ಸದಸ್ಯರ ಧರಣಿ ನಡುವೆ ಎರಡು ವಿಧೇಯಕ ಅಂಗೀಕಾರ : ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ

ನಂತರ ಸರ್ಕಾರದ ಪರವಾಗಿ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಎರಡು ವರ್ಷಗಳಿಂದ ಬೆದರಿಕೆ ಇತ್ತು ರಕ್ಷಣೆ ಕೊಡಬೇಕು ಎಂದು ಸದಸ್ಯರು ಹೇಳಿದ್ದಾರೆ. ಇದು ಕಷ್ಟ, ಘಟನೆ ನಡೆದಿದ್ದು ದುರ್ದೈವದ ಸಂಗತಿ.

ಆದರೆ, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿಂದೆ ಬಿದ್ದಿಲ್ಲ, ಖಂಡಿತ ಕ್ರಮ ಕೈಗೊಳ್ಳಲಿದ್ದೇವೆ. ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲಾಗಿದೆ. ನಿನ್ನೆ ರಾತ್ರಿಯಿಂದ ಅಹಿತಕರ ಘಟನೆ ನಡೆದಿಲ್ಲ. ಅಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ಕಾರ ಬದ್ದವಾಗಿದೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ, ನ್ಯಾಯಾಂಗ ತನಿಖೆಗೆ ಆಗ್ರಹಿಸಿದರು. ಆದರೆ, ಇದನ್ನು ತಳ್ಳಿ ಹಾಕಿದ ಮಾಧುಸ್ವಾಮಿ, ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿದೆ, ದೇಶದಲ್ಲೇ ಉತ್ತಮ ಹೆಸರು ಪಡೆದಿದೆ.

ಈ ಕೇಸ್​​ನಲ್ಲಿ ಕಾನೂನು ಕ್ರಮ ಜರುಗಿಸಲಿದ್ದೇವೆ. ನಮ್ಮ ಪೊಲೀಸರು ಸಮಗ್ರವಾಗಿ ತನಿಖೆ ಮಾಡಿ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದರು. ಸರ್ಕಾರದ ಉತ್ತರ ಖಂಡಿಸಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಸಭಾತ್ಯಾಗ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.