ETV Bharat / state

ರಾಜ್ಯಕ್ಕೆ ಡಬಲ್​ ಟ್ರಬಲ್: SDRFನಡಿ ಸರ್ಕಾರ ಬಿಡುಗಡೆ ಮಾಡಿದ ಅನುದಾನದ ಲೆಕ್ಕ ಹೀಗಿದೆ..

author img

By

Published : Oct 18, 2020, 8:36 PM IST

ಇತ್ತ ಈ ವರ್ಷದಲ್ಲಿ ಕೋವಿಡ್ ಅಟ್ಟಹಾಸದ ಮಧ್ಯೆ ಮೂರು ಬಾರಿ ಅಪ್ಪಳಿಸಿದ ಮಳೆಯಾರ್ಭಟ ರಾಜ್ಯವನ್ನು ಪ್ರಕೃತಿ ವಿಕೋಪದ ಕೂಪಕ್ಕೆ ತಳ್ಳಿದೆ. ಎಸ್‌ಡಿಆರ್‌ಎಫ್ ಅನುದಾನವನ್ನು ಅತಿವೃಷ್ಠಿ ಮತ್ತು ಕೋವಿಡ್ ನಿರ್ವಹಣೆಗೆ ಬಳಸಬೇಕಾದ ಅನಿವಾರ್ಯತೆ ಸರ್ಕಾರದ್ದಾಗಿದೆ. ಈ ಎರಡು ವಿಕೋಪಗಳ ನಿರ್ವಹಣೆಗೆ ಅನುದಾನ ಬಳಸುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ .

SDRF Release covid and flood relief
ಪ್ರಕೃತಿ ವಿಕೋಪ

ಬೆಂಗಳೂರು: ರಾಜ್ಯ ಕಳೆದ ವರ್ಷ ಹಾಗೂ ಈ ಬಾರಿ ವರುಣನ ಅಬ್ಬರಕ್ಕೆ ನಲುಗಿ ಹೋಗಿದೆ. ಅದರಲ್ಲೂ ಕೋವಿಡ್ ಮಧ್ಯೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಜ್ಯ ವಿಪತ್ತು ನಿರ್ವಹಣೆ ನಿಧಿಯಿಂದ ಅತಿವೃಷ್ಠಿ ಹಾಗು ಕೋವಿಡ್ ನಿರ್ವಹಣೆಗಾಗಿ ಹಣ ಹೊಂದಿಸುವುದರಲ್ಲೇ ಸರ್ಕಾರ ಸುಸ್ತಾಗಿದೆ. ಯಾವ ಜಿಲ್ಲೆಗಳಿಗೆ ಎಷ್ಟು ಹಣವನ್ನು ಸರ್ಕಾರ ಎಸ್‌ಡಿಆರ್‌ಎಫ್ ಮೂಲಕ ನೀಡಿದೆ ಎಂಬ ವರದಿ ಇಲ್ಲಿದೆ.

ಈ ಬಾರಿ ರಾಜ್ಯಕ್ಕೆ ಡಬಲ್ ಟ್ರಬಲ್‌‌

ಒಂದೆಡೆ ಬಿಟ್ಟುಬಿಡದೆ ಕಾಡುತ್ತಿರುವ ಅತಿವೃಷ್ಠಿ, ಪ್ರವಾಹ. ಇನ್ನೊಂದೆಡೆ, ಕೋವಿಡ್ -19 ಅಟ್ಟಹಾಸ. ಈ ಎರಡು ಭೀಕರ ಪ್ರಕೃತಿ ವಿಕೋಪಗಳನ್ನು ಸಂಭಾಳಿಸುವಲ್ಲಿ ಸರ್ಕಾರ ಸುಸ್ತಾಗಿ ಹೋಗಿದೆ. ಸೀಮಿತ ಹಣದಿಂದ ಈ ಎರಡು ವಿಕೋಪವನ್ನು ನಿರ್ವಹಿಸುವುದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. 2019ರ ಅವಧಿಯಲ್ಲಿ ಸಂಭವಿಸಿದ್ದ ಭೀಕರ ಅತಿವೃಷ್ಠಿಗೆ ಯಡಿಯೂರಪ್ಪ ಸರ್ಕಾರ ಕೇಂದ್ರ ಸರ್ಕಾರದ ಬಳಿ ಸುಮಾರು 35,160.81 ಕೋಟಿ ರೂ. ಪರಿಹಾರದ ಮನವಿ ಸಲ್ಲಿಸಿತ್ತು. ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 3891.80 ಕೋಟಿ ರೂ. ಅನುದಾನ ಕೇಳಿತ್ತು. ಆದರೆ, ಕೇಂದ್ರ ಸರ್ಕಾರ ಎನ್ ಡಿಆರ್ ಎಫ್ ಮೂಲಕ ಬಿಡುಗಡೆ ಮಾಡಿರುವ ಪರಿಹಾರ ಮೊತ್ತ ಕೇವಲ 1,869 ಕೋಟಿ ರೂ ಮಾತ್ರ.

ಇತ್ತ ಈ ವರ್ಷದಲ್ಲಿ ಕೋವಿಡ್ ಅಟ್ಟಹಾಸದ ಮಧ್ಯೆ ಮೂರು ಬಾರಿ ಅಪ್ಪಳಿಸಿದ ಮಳೆಯಾರ್ಭಟ ರಾಜ್ಯವನ್ನು ಪ್ರಕೃತಿ ವಿಕೋಪದ ಕೂಪಕ್ಕೆ ತಳ್ಳಿದೆ. ಎಸ್ ಡಿಆರ್ ಎಫ್ ಅನುದಾನವನ್ನು ಅತಿವೃಷ್ಟಿ ಮತ್ತು ಕೋವಿಡ್ ನಿರ್ವಹಣೆಗೆ ಬಳಸಬೇಕಾದ ಅನಿವಾರ್ಯತೆ ಸರ್ಕಾರದ್ದಾಗಿದೆ. ಈ ಎರಡು ವಿಕೋಪಗಳ ನಿರ್ವಹಣೆಗೆ ಅನುದಾನ ಬಳಸುವುದು ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ . ಎಸ್ ಡಿಆರ್ ಎಫ್ ಅನುದಾನವನ್ನು ಈ ವರ್ಷ ಸರ್ಕಾರ ಬಹುಪಾಲು ಕೋವಿಡ್ ನಿರ್ವಹಣೆಗೆ ವಿನಿಯೋಗಿಸಿದೆ. ಅತಿವೃಷ್ಟಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಈ ವರ್ಷ ಆಗಸ್ಟ್ ವರೆಗೆ ಬಿಡುಗಡೆ ಮಾಡಿದ್ದು ಕೇವಲ 50 ಕೋಟಿ ರೂ ಮಾತ್ರ.

SDRF Release covid and flood relief
2020-21 ಅತಿವೃಷ್ಟಿ ಮಧ್ಯೆ ಕೋವಿಡ್ ಗಾಗಿ ಪರಿಹಾರ ಬಿಡುಗಡೆ

2019-20ರ ಅತಿವೃಷ್ಟಿಗೆ ಜಿಲ್ಲಾವಾರು ಬಿಡುಗಡೆ:

2019-20ರ ಅತಿವೃಷ್ಟಿಗೆ ಸರ್ಕಾರ ಎಸ್ ಡಿಆರ್ ಎಫ್ ನಡಿ 1736.42 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಕೇಂದ್ರದಿಂದ ಎನ್ ಡಿಆರ್ ಎಫ್ ನ ಇನ್ ಪುಟ್ ಸಬ್ಸಿಡಿ ರೂಪದಲ್ಲಿ 3078.88 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು.

ಅದರಂತೆ ಎಸ್​ಡಿಆರ್​ಫ್​ ನಡಿ ಪ್ರವಾಹ ಪರಿಹಾರವಾಗಿ ಬೆಂ.ಗ್ರಾಮಾಂತರಕ್ಕೆ 10 ಕೋಟಿ, ಬಾಗಲಕೋಟೆಗೆ 190.40 ಕೋಟಿ, ಬೆಳಗಾವಿಗೆ 717.72 ಕೋಟಿ, ಬಳ್ಳಾರಿಗೆ 15 ಕೋಟಿ, ವಿಜಯಪುರ 13.76 ಕೋಟಿ, ಬೀದರ್ 8.50 ಕೋಟಿ, ಚಾಮರಾಜನಗರ 6.54 ಕೋಟಿ, ಚಿಕ್ಕಮಗಳೂರಿಗೆ 43.33 ಕೋಟಿ, ಚಿತ್ರದುರ್ಗ 13.31 ಕೋಟಿ, ಚಿಕ್ಕಬಳ್ಳಾಪುರಗೆ 10 ಕೋಟಿ, ದ.ಕನ್ನಡ 46.71 ಕೋಟಿ, ದಾವಣಗೆರೆ 9 ಕೋಟಿ, ಧಾರವಾಡ 10.20 ಕೋಟಿ, ಗದಗ 4.78 ಕೋಟಿ, ಕಲ್ಬುರ್ಗಿ 17.50 ಕೋಟಿ, ಹಾಸನ 38.74 ಕೋಟಿ, ಹಾವೇರಿ 178 ಕೋಟಿ, ಕೊಡಗು 22.87 ಕೋಟಿ, ಕೊಪ್ಪಳ 5 ಕೋಟಿ, ಕೋಲಾರ 10 ಕೋಟಿ, ಮೈಸೂರು 63.38 ಕೋಟಿ, ರಾಯಚೂರು 12.11 ಕೋಟಿ, ರಾಮನಗರ 5 ಕೋಟಿ, ಶಿವಮೊಗ್ಗ 25.15 ಕೋಟಿ, ತುಮಕೂರು 5 ಕೋಟಿ, ಉಡುಪಿ 27.67 ಕೋಟಿ, ಉ.ಕನ್ನಡ 45.55 ಕೋಟಿ, ಯಾದಗಿರಿ 10.28 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

2020-21 ಅತಿವೃಷ್ಟಿ ಮಧ್ಯೆ ಕೋವಿಡ್ ಗಾಗಿ ಬಿಡುಗಡೆ:

2020-21ನೇ ಸಾಲಿನಲ್ಲಿ ರಾಜ್ಯ ಮುಂಗಾರಿನ‌ ಮುನಿಸು ಎದುರಿಸಬೇಕಾಯಿತು. ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ಸುರಿದ ಭಾರೀ ಮಳೆಗೆ ರಾಜ್ಯ 15,108 ಕೋಟಿ ರೂ. ನೆರೆ ಹಾನಿ ಅನುಭವಿಸಿದೆ. ಎಸ್ ಡಿಆರ್ ಎಫ್ ನಿಯಮದ ಅನುಸಾರ ರಾಜ್ಯ ಸರ್ಕಾರ 1306 ಕೋಟಿ ರೂ. ಪರಿಹಾರ ಕೋರಿದೆ. ಅಕ್ಟೋಬರ್ ನಲ್ಲಿ ಸುರಿದ ಮಳೆಯ ಹಾನಿ ಪ್ರಮಾಣವನ್ನು ಇನ್ನೂ ಅವಲೋಕಿಸಲಾಗುತ್ತಿದೆ.

ಎಸ್​ಡಿಆರ್​ಎಫ್​ ನಡಿ ನೆರೆ ಹಾಗೂ ಕೊರೊನಾ ನಿರ್ವಹಣೆಗಾಗಿ 325.44 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಪೈಕಿ ಕೋವಿಡ್ ಗಾಗಿ 275.48 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ನೆರೆ ಪರಿಹಾರಕ್ಕಾಗಿ ಬಿಡುಗಡೆ ಮಾಡಿದ್ದು ಕೇವಲ 50 ಕೋಟಿ ರೂ. ಮಾತ್ರ. ಚಾಮರಾಜನಗರ, ಚಿಕ್ಕಮಗಳೂರು, ದ.ಕನ್ನಡ, ಧಾರವಾಡ, ಹಾಸನ, ಹಾವೇರಿ, ಕೊಡಗು, ಮೈಸೂರು, ಶಿವಮೊಗ್ಗ, ಉ.ಕನ್ನಡಕ್ಕೆ ತಲಾ 5 ಕೋಟಿ ರೂ.ನಂತೆ ಪ್ರವಾಹ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ.

ಕೋವಿಡ್ ನಿರ್ವಹಣೆಗಾಗಿ ಎಸ್‌ಡಿಆರ್ ಎಫ್ ನಡಿ ಬೆಂ.ನಗರ 40 ಕೋಟಿ ರೂ, ಬೆಂ.ಗ್ರಾಮಾಂತರಕ್ಕೆ 7.65 ಕೋಟಿ, ಬಾಗಲಕೋಟೆಗೆ 6.60 ಕೋಟಿ, ಬೆಳಗಾವಿಗೆ 16.58 ಕೋಟಿ, ಬಳ್ಳಾರಿಗೆ 4.50 ಕೋಟಿ, ವಿಜಯಪುರ 9 ಕೋಟಿ, ಬೀದರ್ 5 ಕೋಟಿ, ಚಾಮರಾಜನಗರ 6.34 ಕೋಟಿ, ಚಿಕ್ಕಮಗಳೂರಿಗೆ 6.42 ಕೋಟಿ, ಚಿತ್ರದುರ್ಗ 4.10 ಕೋಟಿ, ಚಿಕ್ಕಬಳ್ಳಾಪುರಗೆ 6 ಕೋಟಿ, ದ.ಕನ್ನಡ 12.90 ಕೋಟಿ, ದಾವಣಗೆರೆ 25.66 ಕೋಟಿ, ಧಾರವಾಡ 125.52 ಕೋಟಿ, ಗದಗ 56.82 ಕೋಟಿ, ಕಲ್ಬುರ್ಗಿ 5 ಕೋಟಿ, ಹಾಸನ 5.50 ಕೋಟಿ, ಹಾವೇರಿ 8.10 ಕೋಟಿ, ಕೊಡಗು 10.21 ಕೋಟಿ, ಕೊಪ್ಪಳ 4.60 ಕೋಟಿ, ಕೋಲಾರ 3.65 ಕೋಟಿ, ಮಂಡ್ಯ 3.25 ಕೋಟಿ, ಮೈಸೂರು 12 ಕೋಟಿ, ರಾಯಚೂರು 7.85 ಕೋಟಿ, ರಾಮನಗರ 6.42 ಕೋಟಿ, ಶಿವಮೊಗ್ಗ 8 ಕೋಟಿ, ತುಮಕೂರು 10 ಕೋಟಿ, ಉಡುಪಿ 7.28 ಕೋಟಿ, ಉ.ಕನ್ನಡ 10 ಕೋಟಿ, ಯಾದಗಿರಿ 8.55 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.