ETV Bharat / state

ರೆಡ್ ಜೋನ್ ಬೆಂಗಳೂರಿನಲ್ಲಿ ನಾಳೆಯಿಂದ ಶಾಲಾ-ಕಾಲೇಜು ಬಂದ್.. ಉಳಿದ ಜಿಲ್ಲೆಗಳಲ್ಲಿ?

author img

By

Published : Jan 5, 2022, 4:58 PM IST

ನಾಳೆಯಿಂದ ಶಾಲಾ-ಕಾಲೇಜು ಬಂದ್
ನಾಳೆಯಿಂದ ಶಾಲಾ-ಕಾಲೇಜು ಬಂದ್

COVID scare: Schools and colleges bandh in Bengaluru: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ದುಪ್ಪಟ್ಟು ಏರಿಕೆಯಾದ ಪರಿಣಾಮ ನಾಳೆಯಿಂದ ಮುಂದಿನ 15 ದಿನಗಳ ಕಾಲ ಯುಕೆಜಿ, ಎಲ್ ಕೆಜಿ ಸೇರಿದಂತೆ 1ರಿಂದ 9 ನೇ ತರಗತಿಗಳು ಹಾಗೂ ಡಿಗ್ರಿ ಕಾಲೇಜುಗಳ ಭೌತಿಕ ತರಗತಿಗಳನ್ನು ನಿಷೇಧಿಸಲಾಗಿದೆ. ಬದಲಿಗೆ ಇವರಿಗೆ ಆನ್​ಲೈನ್ ತರಗತಿ ನಡೆಸಲು ಆದೇಶಿಸಲಾಗಿದೆ‌.

ಬೆಂಗಳೂರು : ರಾಜ್ಯದಲ್ಲಿ ಮೂರನೇ ಅಲೆಯ ತೀವ್ರತೆಗೆ ಬೆಚ್ಚಿಬಿದ್ದಿರುವ ಸರ್ಕಾರ, ಕೋವಿಡ್​​​ ಹೊಸ ಮಾರ್ಗಸೂಚಿ ಪ್ರಕಟಿಸಿದೆ‌. ಅದರಂತೆ ವಾಣಿಜ್ಯ ಚಟುವಟಿಕೆಗಳಿಗೆ 50:50 ಸೂತ್ರ ಜಾರಿ ಮಾಡಿ ನಿರ್ಬಂಧ ಹೇರಿದ್ದರೆ, ಇತ್ತ ರೆಡ್ ಜೋನ್ ಬೆಂಗಳೂರಿನಲ್ಲಿ ನಾಳೆಯಿಂದ(ಗುರುವಾರ) ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಆದರೆ ಬೇರೆ ಜಿಲ್ಲೆಗಳಲ್ಲಿ ಎಂದಿನಂತೆ ಶಾಲೆಗಳಲ್ಲಿ ಭೌತಿಕ ತರಗತಿಗಳು ನಡೆಯಲಿವೆ.

ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದುಪ್ಪಟ್ಟು ಏರಿಕೆಯಾದ ಪರಿಣಾಮ ನಾಳೆಯಿಂದ ಮುಂದಿನ 15 ದಿನಗಳ ಕಾಲ ಯುಕೆಜಿ, ಎಲ್ ಕೆಜಿ ಸೇರಿದಂತೆ 1ರಿಂದ 9 ನೇ ತರಗತಿಗಳು ಹಾಗೂ ಪದವಿ ಕಾಲೇಜುಗಳ ಭೌತಿಕ ತರಗತಿಗಳು ನಡೆಯುವುದಿಲ್ಲ. ಬದಲಿಗೆ ಇವರಿಗೆ ಎಲ್ಲ ಆನ್ ಲೈನ್ ತರಗತಿ ನಡೆಸಲು ಆದೇಶಿಸಲಾಗಿದೆ‌.

ಬೆಂಗಳೂರಿನಲ್ಲಿ ನಾಳೆಯಿಂದ ಶಾಲಾ-ಕಾಲೇಜು ಬಂದ್

ಎಸ್ಎಸ್ಎಲ್​​ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಈ ರಿಲೀಫ್ ನೀಡಿಲ್ಲ. ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಈ ಮಕ್ಕಳಿಗೆ ಭೌತಿಕ ತರಗತಿ ನಡೆಸುವುದು ಅನಿವಾರ್ಯ. ಹೀಗಾಗಿ ಬೆಂಗಳೂರಿನಲ್ಲಿ 10 ರಿಂದ ದ್ವಿತೀಯ ಪಿಯುಸಿ ತರಗತಿಗಳು ಎಂದಿನಂತೆ ಸೋಮವಾರದಿಂದ ಶುಕ್ರವಾರದವರೆಗೆ ನಡೆಯಲಿವೆ. ಇದರೊಂದಿಗೆ ಮೆಡಿಕಲ್, ಪ್ಯಾರಾ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳಿಗೂ ಯಾವುದೇ ನಿರ್ಬಂಧ ಹೇರಿಲ್ಲ.

ಉಳಿದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಗಳು ನಡೆಯಲಿವೆ. ವಿಕೆಂಡ್ ಕರ್ಫ್ಯೂ ಹೊರತುಪಡಿಸಿ, ಉಳಿದಂತೆ ಎಲ್ಲ ದಿನಗಳಲ್ಲೂ ಕೋವಿಡ್ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಿ ತರಗತಿಯನ್ನು ನಡೆಸಬಹುದಾಗಿದೆ.‌

ಮಕ್ಕಳ ಶಿಕ್ಷಣ ಕುಂಠಿತ ಆಗದಂತೆ ಎಚ್ಚರವಹಿಸಿ:

ಸಾಂಕ್ರಾಮಿಕ ರೋಗದಿಂದ ಜನರನ್ನು ರಕ್ಷಿಸುವುದರ ಜೊತೆಗೆ ಮಕ್ಕಳ ಶಿಕ್ಷಣ ಕುಂಠಿತ ಆಗದಂತೆ ಎಚ್ಚರ ವಹಿಸಲು ಖಾಸಗಿ ಶಾಲೆಗಳ ಸಂಘಟನೆಗಳು ಆಗ್ರಹಿಸಿವೆ. ಮಂಗಳವಾರ ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಬೆಂಗಳೂರು ನಗರಕ್ಕೆ ಸೀಮಿತವಾಗಿ ಮುಂದಿನ 15 ದಿನಗಳಿಗೆ 1-9 ನೇ ತರಗತಿ ಹಾಗೂ ಪದವಿ ಕಾಲೇಜುಗಳ ಭೌತಿಕ ತರಗತಿ ಬಂದ್ ಮಾಡಬೇಕು ಎಂದು ನಿರ್ಣಯ ತೆಗೆದುಕೊಂಡಿದೆ. ಹಾಗೇ ಗ್ರಾಮೀಣ ಭಾಗಗಳಿಗೆ ಶಾಲೆ ನಡೆಸಿ ಎಂದಿರುವುದನ್ನು ಸ್ವಾಗತಿಸುತ್ತೇವೆ ಅಂತ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಆದರೆ ಬೆಂಗಳೂರು ವಿದ್ಯಾರ್ಥಿಗಳ ಸಂಬಂಧ ಆತಂಕ ಇದ್ದು, ಕಳೆದ ಎರಡು ವರ್ಷಗಳಲ್ಲಿ 6ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಕೇವಲ 7 ತಿಂಗಳು ಮಾತ್ರ ಭೌತಿಕ ತರಗತಿಗಳು ನಡೆದಿವೆ. ಉಳಿದ 17 ತಿಂಗಳು ಶಾಲಾ ಶಿಕ್ಷಣ ದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಲ್ಲಿ ಕಲಿಕೆ ಮರೀಚಿಕೆ ಆಗಿ ಅವರ ಮುಂದಿನ ಭವಿಷ್ಯ ಶೂನ್ಯ ಆಗುವ ಎಲ್ಲಾ ಮುನ್ಸೂಚನೆಗಳು ಗೋಚರಿಸುತ್ತಿವೆ ಅಂತ ಲೋಕೇಶ್ ತಾಳಿಕಟ್ಟೆ ಆತಂಕ ವ್ಯಕ್ತಪಡಿಸಿದ್ದಾರೆ.

1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಎರಡು ವರ್ಷಗಳಲ್ಲಿ ಕೇವಲ 40 ದಿನ ಮಾತ್ರ ಭೌತಿಕ ತರಗತಿಗಳಿಗೆ ಅವಕಾಶ ನೀಡಿರುವ ಕಾರಣ ಅವರ ಮೂಲ ಕಲಿಕೆಯೇ ನಾಶವಾಗಿದೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಒಟ್ಟಾರೆ 1 ಕೋಟಿಗೂ ಹೆಚ್ಚು ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದರ ಮೂಲಕ ಸಾಮಾಜಿಕವಾಗಿ ಅನೇಕ ಸಮಸ್ಯೆಗಳ ಹುಟ್ಟಿಗೆ ಕಾರಣ ಆಗುವ ಸಾಧ್ಯತೆಯಿದೆ. ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಕ್ಕಳ ಮಾರಾಟ ಮತ್ತು ದುರ್ಬಳಕೆ ಹಾಗೂ ದುಶ್ಚಟಗಳಿಗೆ ಮಕ್ಕಳು ಬಲಿಯಾಗುತ್ತಾರೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 50 ಲಕ್ಷ ಮಕ್ಕಳು ಹಾಗು ಗ್ರಾಮೀಣ ಭಾಗದ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿರುವ ಕೂಲಿಕಾರ್ಮಿಕರ ಮಕ್ಕಳು ಸೇರಿ ಸುಮಾರು 65 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಆನ್​ಲೈನ್ ಶಿಕ್ಷಣ ಪಡೆಯುವ ಯಾವುದೇ ಪರಿಕರವಾಗಲಿ ಅಥವಾ ವ್ಯವಸ್ಥೆ ಆಗಲಿ ಇಲ್ಲದೆ ಇರುವುದು ದುರದೃಷ್ಟಕರ. ಹೀಗಾಗಿ, ಇಂತಹ ಮಕ್ಕಳಿಗೆ ಟ್ಯಾಬ್ ಅಥವಾ ಲ್ಯಾಪ್​​ಟಾಪ್​​ನ್ನು ಸರ್ಕಾರದಿಂದಲೇ ನೀಡುವ ಮೂಲಕ ಅವರ ನೆರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ.‌

ತಜ್ಞರ ಜೊತೆಗಿನ ಚರ್ಚೆಯ ಬಳಿಕ ನಿರ್ಧರಿಸಿ ಎಲ್ಲಾ ಶಾಲೆಗಳು ಕಠಿಣ SOP ಯನ್ನು ಪಾಲಿಸಿ ತರಗತಿಗಳು ನಡೆಯಲು ಅವಕಾಶ ಮಾಡಿ ಕೊಡಿ ಅಂತಲು ಮನವಿ ಮಾಡಿದ್ದಾರೆ. ಯಾವ ಶಾಲೆಯಲ್ಲಿ ರೋಗ ಲಕ್ಷಣ ಕಾಣಿಸಿ ಕೊಳ್ಳುತ್ತದೆಯೋ ಆ ಶಾಲೆಗೆ ಮಾತ್ರ ರಜೆ ಘೋಷಿಸಿ, ಸಾಧ್ಯವಾದರೆ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲು ಕ್ರಮವಹಿಸಿ ಅಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.