ETV Bharat / state

ಗ್ರಾಮೀಣ ಭಾಗದ ಮಂದಿ ಕೆಲಸವಿಲ್ಲದೆ ಇರಬಾರದು: ಸಿಎಂ ಬಸವರಾಜ ಬೊಮ್ಮಾಯಿ

author img

By

Published : Mar 23, 2023, 5:16 PM IST

ಬಜೆಟ್​ನಲ್ಲಿ ಘೋಷಿಸಿದ್ದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ಸ್ತ್ರೀ-ಸಾಮರ್ಥ್ಯ ಯೋಜನೆಯ 2ನೇ ಕಂತಿನ ವಿಶೇಷ ಸಮುದಾಯ ಬಂಡವಾಳ ನಿಧಿಯ ಎಸ್.ಎಸ್.ಜಿ ಫಲಾನುಭವಿಗಳಿಗೆ ಹಂಚಿಕೆ, ಆಟೋ ಮತ್ತು ಟ್ಯಾಕ್ಸಿ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಹಾಗೂ ಕುರಿಗಾಹಿ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಕಂಠೀರವ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ಸಾರಿಗೆ, ಪಶುಸಂಗೋಪನೆ ಇಲಾಖೆಗಳ ವಿವಿಧ ಯೋಜನೆಗಳಿಗೆ ಅವರು ಚಾಲನೆ ನೀಡಿದರು.

ಕುರಿಗಾಹಿ ಯೋಜನೆಗೆ ಚಾಲನೆ: ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ‌ಘೋಷಿಸಿದ್ದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ ಇಂದು ಚಾಲನೆ ನೀಡಿದರು. 20 ಕುರಿ ಒಂದು ಮೇಕೆಯನ್ನು ಕೊಳ್ಳಲು ಪ್ರತಿಯೊಬ್ಬರಿಗೆ 1.31 ಲಕ್ಷ ರೂ. ನೀಡಿ, 20 ಸಾವಿರ ಕುರಿಗಾಹಿಗಳಿಗೆ ಯೋಜನೆ ತಲುಪಿಸುವ ಯೋಜನೆ ಇದಾಗಿದೆ.

ಇದೇ ವೇಳೆ ಮಾತನಾಡಿದ ಅವರು, ನೆಲೆಯಿಲ್ಲದ ಕುರಿಗಾಹಿಗಳಿಗೆ ಕಳೆದ ವರ್ಷ ಕುರಿ ದೊಡ್ಡಿ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಕುರಿ ಸತ್ತರೆ ಪರಿಹಾರ ನೀಡಲಾಗುತ್ತದೆ. ಇದೀಗ ಕುರಿಗಾಹಿ ಯೋಜನೆಯಡಿ ಕುರಿಗಾಹಿಗಳಿಗೆ 355 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ. ಕುರಿ ಉಣ್ಣೆ ಉತ್ಪಾದನೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಇದೆ. ಉತ್ಪಾದನೆಯನ್ನು ಮಾರುಕಟ್ಟೆಗೆ ಅಮೃತ್​ ಕುರಿಗಾಹಿ ಯೋಜನೆ ಜೋಡಿಸುತ್ತದೆ. ಪೂರ್ಣ ಪ್ರಮಾಣದ ವ್ಯಾಪಾರಕ್ಕೆ 20 ಸಾವಿರ ಕುರಿಗಾಹಿಗಳಿಗೆ ಯೋಜನೆ ತಲುಪಿದೆ. ಇನ್ನೂ 50 ಸಾವಿರ ಕುರಿಗಾಹಿಗಳಿಗೆ ಯೋಜನೆಯ ಫಲ ನೀಡಲಾಗುವುದು ಎಂದರು.

ಗ್ರಾಮೀಣ ಭಾಗದ ಯುವಕರಿಗೆ ಕೈತುಂಬ ಕೆಲಸ: ಗ್ರಾಮೀಣ ಭಾಗದ ಯುವಕರು ಕೆಲಸವಿಲ್ಲದೇ ಇರಬಾರದು. ಎಲ್ಲರಿಗೆ ವಿದ್ಯೆ, ಎಲ್ಲರ ಕೈಗಳಿಗೆ ಕೆಲಸ ಕೊಡಬೇಕು. ಅವರು ದುಡಿಮೆ ಮಾಡಿ ಉತ್ತಮ ಚಾರಿತ್ರ್ಯವಂತರಾಗಿತ್ತಾರೆ. ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಕ್ರಾಂತಿಕಾರಿ ಯೋಜನೆಯಾಗಿದೆ ಎಂದು ತಿಳಿಸಿದರು.

ದುಡಿಮೆಗೆ ಯಾವ ನಾಡಿನಲ್ಲಿ, ದೇಶದಲ್ಲಿ ಗೌರವ ಇದೆ. ಆ ದೇಶ ಮತ್ತು ನಾಡಿನಲ್ಲಿ ಎಂದಿಗೂ ಬಡತನ ಇರುವುದಿಲ್ಲ. ಗ್ರಾಮೀಣ ಭಾಗದಲ್ಲಿನ ಜನರು ಎಲ್ಲರಿಗೂ ಕೆಲಸ ಕೊಡಬೇಕು. ಸ್ವಾಮಿ ವಿವೇಕಾನಂದರು ಶಕ್ತಿ ನಿಮ್ಮ ಒಳಗಡೆ ಇದೆ.‌ ನೀವು ಏನು ಬೇಕಾದರೂ ಮಾಡಬಲ್ಲಿರಿ ಎಂದಿದ್ದಾರೆ. ದುಡಿಮೆಗೆ ಪ್ರೋತ್ಸಾಹ ನೀಡಲು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ 12 ಸಾವಿರ ಯುವ ಸಂಘಗಳನ್ನು ರಚಿಸಿ ಅವರಿಗೆ ತರಬೇತಿ, ಉತ್ಪಾದನೆ, ಮಾರುಕಟ್ಟೆ, ಬ್ಯಾಂಕ್ ಸಹಾಯ ನೀಡಿ ಸ್ವಯಂ ಉದ್ಯೋಗಿಗಳಿಗೆ ನೆರವು ನೀಡಲಾಗುತ್ತಿದೆ. ನಮ್ಮ ಯುವಕರು ಕೈ ಚಾಚಬಾರದು ಅವರು ಕೊಡುವ ಕೈಯಾಗಬೇಕು. ಈ ರೀತಿಯ ಯೋಜನೆ ರಾಜ್ಯದಲ್ಲಿ ಈವರೆಗೆ ಇರಲಿಲ್ಲ. ಗ್ರಾಮೀಣ ಭಾಗದ ಯುವಕರು ನಿರುದ್ಯೋಗಗಳಾಗಿದ್ದು ಅಲ್ಲಿಯೇ ಸಂಘ ರಚಿಸಿ ಉತ್ಪಾದನೆ ಮಾಡಿದರೆ, ಅವರು ಈ ನಾಡು ಕಟ್ಟಲು ಮುಂದಾಗುತ್ತಾರೆ ಎಂದು ಸಿಎಂ ವಿವರಿಸಿದರು.

ಸ್ತ್ರೀ ಸಾಮರ್ಥ್ಯ ಯೋಜನೆಗೆ ಚಾಲನೆ: ಇದೇ ವೇಳೆ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಫಲಾನುಭವಿಗಳಿಗೆ ಸಿಎಂ ಬೊಮ್ಮಾಯಿ ಚೆಕ್ ವಿತರಣೆ ಮಾಡಿದರು. ಸ್ತ್ರೀ -ಸಾಮರ್ಥ್ಯ ಯೋಜನೆಯ 2ನೇ ಕಂತಿನ ವಿಶೇಷ ಸಮುದಾಯ ಬಂಡವಾಳ ನಿಧಿಯ ಎಸ್.ಎಸ್.ಜಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದರು.

ಮಹಿಳೆಯರ ಸಾಮರ್ಥ್ಯಕ್ಕೆ ಬೆಂಬಲ‌ ಕೊಡುವ ಕೆಲಸ ನಮ್ಮ ಸರ್ಕಾರ‌ ಮಾಡಿದೆ. ಸ್ತ್ರೀ ಶಕ್ತಿ ಯೋಜನೆ ಮೂಲಕ ದುಡಿಯುವ ಮಹಿಳೆಗೆ 1,000 ರೂ. ನೀಡಲಾಗುತ್ತದೆ. ಇದು ಹುಸಿ ಭರವಸೆಯಲ್ಲ. ಮಾಸಿಕ ಮಹಿಳೆಯರ ಖಾತೆಗೆ 1,000 ರೂ. ಸಹಾಯಧನ ಪಾವತಿಸಲಾಗುತ್ತದೆ. ಮಹಿಳೆಯರ ಸಾಮರ್ಥ್ಯ ರಾಜ್ಯಕ್ಕೆ ಉಪಯೋಗ ಆಗಬೇಕು ಎಂದು ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ.

ಈಗಾಗಲೇ ಮೊದಲ ಕಂತು 50 ಸಾವಿರ ರೂ.ಗಳನ್ನು 10 ಸಾವಿರ ಸಂಘಕ್ಕೆ ನೀಡಿದ್ದು, ಎರಡನೇ ಕಂತಿನಲ್ಲಿ 50 ಸಾವಿರ ರೂ. ದೊರೆಯಲಿದೆ. 20 ಸಾವಿರ ಸಂಘಗಳಿಗೆ ನೇರವಾಗಿ ಅವರ ಖಾತೆಗಳಿಗೆ ಜಮಾ ಆಗಿದೆ. ಅವರಿಗೂ ತರಬೇತಿ ನೀಡಿ ಉತ್ಪಾದನೆಗೆ ಪೂರಕವಾಗಿ ನೆರವು ನೀಡಲಾಗುತ್ತಿದೆ ಎಂದರು.

ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ : ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿ ಮಾತನಾಡಿದ ಅವರು, ಆಟೋ ಚಾಲಕ ಬಾಂಧವರು ಹಗಲಿರುಳು ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ 2.5 ಲಕ್ಷ ಆಟೋ ಚಾಲಕರಿದ್ದಾರೆ. ಅವರಿಗೆ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾನಿಧಿ ಯೋಜನೆ‌ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಸುಮಾರು 2.50 ಲಕ್ಷ ಆಟೋ ಚಾಲಕರು ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 15 ಸಾವಿರ ಅರ್ಹ ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ವಿಸ್ತರಿಸಲಾಗಿದೆ. ಶಾಲಾ/ ಕಾಲೇಜು ಪ್ರವೇಶ ಪ್ರಮಾಣ ಪತ್ರ ನೀಡುವವರಿಗೆ 2,500 ರೂ.ಗಳಿಂದ 11 ಸಾವಿರ ರೂ.ಗಳ ವರೆಗೆ ನೀಡಲಾಗುವುದು ಎಂದರು. ದುಡಿಮೆ ಕುಟುಂಬಕ್ಕೆ ಅನುಕೂಲ ತಂದುಕೊಡಬೇಕು. ದುಡಿಯುವ ವರ್ಗದ ಪರವಾಗಿ ನಮ್ಮ ಹೃದಯ ಮಿಡಿಯುತ್ತದೆ. ಅದಕ್ಕಾಗಿ ಈ ಯೋಜನೆ ಜಾರಿಗೆ ತಂದಿದ್ದೇವೆ. ಆಟೋ ಚಾಲಕನ ಮಗಳೂ ಕೂಡ ವಿದ್ಯೆ ಕಲಿತು ಐಎಎಸ್/ ಐಪಿಎಸ್ ಅಧಿಕಾರಿಗಳಾಗಬೇಕು ಎಂದರು.

ವರ್ಷದ ಹಿಂದೆ ಕಂಡ ಕನಸು ನನಸು: ಒಂದು ವರ್ಷದ ಹಿಂದೆ ಕಂಡ ಕನಸು ನನಸಾಗಿದೆ. ವಿದ್ಯಾನಿಧಿಯಿಂದ 11 ಲಕ್ಷ ರೈತರ ಮಕ್ಕಳಿಗೆ, ಮೀನುಗಾರರು, ನೇಕಾರರ ಮಕ್ಕಳಿಗೆ ಅನುಕೂಲ ಆಗಿದೆ. ದುಡಿಯುವ ವರ್ಗಗಳಿಗೆ ಪ್ರತಿಯೊಬ್ಬರಿಗೆ 50 ಸಾವಿರ ರೂ. ನೀಡಿ ಅವರ ಉದ್ಯೋಗಕ್ಕೆ ಅನುಕೂಲ ಮಾಡುವ ಕಾಯಕ ಯೋಜನೆ ಜಾರಿಯಲ್ಲಿದೆ. ನಾಡು ಕಟ್ಟಲು ದುಡಿಯುವ ವರ್ಗದಿಂದ ಮಾತ್ರ ಸಾಧ್ಯ ಎಂದರು.

ಅಭಿವೃದ್ಧಿಯ ಪಯಣ ಮುಂದುವರೆಯಲಿ. ಜನರ ಆಶೀರ್ವಾದ ಬೆಂಬಲದಿಂದ ನಾನು ಈ ಹುದ್ದೆಯಲ್ಲಿದ್ದು, ಜನರ ಆಶೀರ್ವಾದದಿಂದ ಸ್ವಾಭಿಮಾನಿ ಕರ್ನಾಟಕ ಕಟ್ಟಲು ಸಂಪೂರ್ಣ ಶಕ್ತಿಯನ್ನು ಬಳಕೆ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ : 'ನಾನು ಮತ್ತೆ ಸಿಎಂ ಆಗಿ ಕ್ಷೇತ್ರಕ್ಕೆ ಬರುತ್ತೇನೆ': ಮುಧೋಳದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.