ETV Bharat / state

ಸುಧಾಕರ್ ಹೇಳಿಕೆಗೆ ಪ್ರತಿಪಕ್ಷ, ಆಡಳಿತ ಪಕ್ಷ ಸದಸ್ಯರ ವಿರೋಧ; ವಿಧಾನಸಭೆ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

author img

By

Published : Mar 24, 2021, 6:00 PM IST

ಮಾರ್ಚ್ ಅಂತ್ಯದವರೆಗೆ ನಿಗದಿಯಾಗಿದ್ದ ಬಜೆಟ್ ಅಧಿವೇಶನ, ಸಿಡಿ ಗಲಾಟೆಗೆ 13 ದಿನಗಳಿಗೆ ಮೊಟಕುಗೊಂಡಿತು. ಇನ್ನೊಂದೆಡೆ, ಇವತ್ತು ಸಚಿವ ಸುಧಾಕರ್ ಹೇಳಿಕೆಯ ಕಿಚ್ಚು ಇಂದಿನ ವಿಧಾನಸಭೆ ಕಲಾಪವನ್ನು ಆಪೋಶನಗೊಳಿಸಿತು.

ruling-party-members-outrage-against-sudhakars-statement-in-assembly
ವಿಧಾನಸಭೆ

ಬೆಂಗಳೂರು: ಭೋಜನ ವಿರಾಮದ ಬಳಿಕ ಪುನರಾರಂಭವಾದ ವಿಧಾನಸಭೆ ಕಲಾಪದಲ್ಲಿ ಸಚಿವ ಸುಧಾಕರ್ ಹೇಳಿಕೆ ಸದ್ದು‌ ಮಾಡಿತು. ಪ್ರತಿಪಕ್ಷಗಳು ಮಾತ್ರವಲ್ಲ, ಆಡಳಿತ ಪಕ್ಷದ ಸದಸ್ಯರೂ ಸಚಿವರ‌ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.

ನಾವು ವ್ಯಭಿಚಾರಿಗಳಾ? ವ್ಯಭಿಚಾರಿಗಳ ಸರ್ಕಾರವಾ?- ಸಿದ್ದರಾಮಯ್ಯ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸುಧಾಕರ್ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಅವರು ಹತಾಶೆಯಿಂದ ಹೇಳಿದ್ದಾರೋ, ದುರುದ್ದೇಶದಿಂದ ಹೇಳಿದ್ದರೋ ಗೊತ್ತಿಲ್ಲ. ಆದರೆ, ಅವರು ಎಲ್ಲರ ಹೆಸರು ಸೇರಿಸಿದ್ದಾರೆ. ಇದರಿಂದ ನಮ್ಮ ಹಕ್ಕುಚ್ಯುತಿಯಾಗಿದೆ. ಹೀಗಾಗಿ, 225 ಶಾಸಕರ‌ ಮೇಲೆ ತನಿಖೆ ಆಗಬೇಕು. ನಾವು ವ್ಯಭಿಚಾರಿಗಳಾ? ವ್ಯಭಿಚಾರಿಗಳ ಸರ್ಕಾರವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ದೇಶಪಾಂಡೆ, ಇದರಲ್ಲಿ ನಾನು‌ ನೀವು ಎಲ್ಲರೂ ಬಂದಿದ್ದೇವೆ. ಇಷ್ಟು ವರ್ಷ ನಾವು ಈ ತರದ ಹೇಳಿಕೆ ಕೊಟ್ಟಿಲ್ಲ. ಇದರಲ್ಲಿ ಮಹಿಳಾ ಶಾಸಕರಿದ್ದಾರೆ. ಈ ಬಗ್ಗೆ ಸಿಎಂ ಸಚಿವರಿಗೆ ಹೇಳಿ ಕ್ಷಮಾಪಣೆ ಕೇಳಿಸಿ. ಇದರಿಂದ ನನಗೆ ಬಹಳ ನೋವಾಗಿದೆ. ಈ ಬಗ್ಗೆ ತನಿಖೆ ಮಾಡಿ ಎಂದು ಆಗ್ರಹಿಸಿದರು.

ಜೆಡಿಎಸ್ ಸದಸ್ಯರೂ ಸುಧಾಕರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಅವರೊಬ್ಬ ಬೇಜವಾಬ್ದಾರಿ ಸಚಿವರು. ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಸದನದ ಬಾವಿಗಿಳಿದು ಜೆಡಿಎಸ್ ಶಾಸಕರು ಧರಣಿ ನಡೆಸಿದರು.

ಬಿಜೆಪಿ ಶಾಸಕರಾದ ರಾಜೂಗೌಡ, ಎಸ್.ಆರ್​ ವಿಶ್ವನಾಥ್ ಸೇರಿದಂತೆ‌ ಕೆಲ ಬಿಜೆಪಿ ಶಾಸಕರು ಸುಧಾಕರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು. ಸುಧಾಕರ್ ಹೇಳಿಕೆಗೆ ನಾವೂ ವಿರೋಧಿಸುತ್ತೇವೆ. ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸದನಕ್ಕೂ ಸಚಿವರ ಹೇಳಿಕೆಗೂ ಸಂಬಂಧವಿಲ್ಲ- ಬೊಮ್ಮಾಯಿ

ಇದೇ ವೇಳೆ ಮಾತನಾಡಿದ ಸಚಿವ ಬಸವರಾಜ್ ಬೊಮ್ಮಾಯಿ, ಸುಧಾಕರ್ ಹೇಳಿಕೆ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದನದ ಹೊರಗಡೆ ಹೇಳಿಕೆ ಕೊಟ್ಟಿದ್ದಾರೆ. ಸದನಕ್ಕೂ ಅದಕ್ಕೂ ಸಂಬಂಧ ಇಲ್ಲ. ಸದನದ ಹೊರಗಡೆ ಕ್ಷಮಾಪಣೆ ಕೇಳಬಹುದು ಎಂದು ಸಮಜಾಯಿಶಿ ನೀಡಿದರು.

ಸದನದ ಬಗ್ಗೆ ಹಗುರ ಮಾತು ಬೇಡ- ಸ್ಪೀಕರ್‌

ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸದನದ ಸದಸ್ಯರ ಬಗ್ಗೆ ಯಾವುದೇ ಸಂಶಯ ಬರುವ ನಿಟ್ಟಿನಲ್ಲಿ ಯಾರೂ ಭಾವನೆ ವ್ಯಕ್ತಪಡಿಸಬಾರದು. ಯಾವುದೋ ಆಕ್ರೋಶ, ಆವೇಶದಲ್ಲಿ ಸದನದ ಬಗ್ಗೆ ಹಗುರವಾಗಿ‌ ಮಾತನಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಿಮಗೆ ಎಲ್ಲರಿಗೂ ಆದ ನೋವಿಗೆ ನಾನೂ ಜವಾಬ್ದಾರ. ಏಕೆಂದರೆ ಇದರಲ್ಲಿ ನಾನು ಕೂಡಾ ಸೇರಿಕೊಂಡಿದ್ದೇನೆ. ನಿಮ್ಮ ಹಕ್ಕನ್ನು ಎತ್ತಿ ಹಿಡಿಯುವುದು ನನ್ನ ಜವಾಬ್ದಾರಿ. ಯಾರೂ ಸದನ, ಸದಸ್ಯರ ಬಗ್ಗೆ ಹಗುರವಾಗಿ, ಅಗೌರವವಾಗಿ ಮಾತನಾಡಕೂಡದು ಎಂದರು.

ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಬಿಗ್‌ ಶಾಕ್.. ಈ ನಿಗದಿಗಿಂತ ಹೆಚ್ಚು 'ಲಿಕ್ಕರ್' ಖರೀದಿಸಿದ್ರೆ 3 ವರ್ಷ ಜೈಲು,10 ಪಟ್ಟು ದಂಡ

ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ನಂತರ ಸದನವನ್ನು ಸ್ಪೀಕರ್ ಅನಿರ್ದಿಷ್ಟಾವಧಿಗೆ ಮುಂದೂಡಿದರು. ಮಾರ್ಚ್ ಅಂತ್ಯದವರೆಗೆ ನಿಗದಿಯಾಗಿದ್ದ ಬಜೆಟ್ ಅಧಿವೇಶನ ಸಿಡಿ ಗಲಾಟೆಗೆ 13 ದಿನಗಳಿಗೆ ಮೊಟಕುಗೊಂಡಿತು. ಸಿಡಿ ಗಲಾಟೆ‌ ಮತ್ತು ಸುಧಾಕರ್ ಹೇಳಿಕೆಯ ಕಿಚ್ಚು ಇಂದಿನ ವಿಧಾನಸಭೆ ಕಲಾಪವನ್ನು ಆಪೋಶನಗೊಳಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.