ETV Bharat / state

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ; ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಬಂಧನ

author img

By

Published : Aug 15, 2023, 2:26 PM IST

Updated : Aug 15, 2023, 2:46 PM IST

ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.

sexually assaulting minor girl
sexually assaulting minor girl

ಬೆಂಗಳೂರು: 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ 74 ವರ್ಷದ ನಿವೃತ್ತ ಸಬ್ ಇನ್ಸ್‌ಪೆಕ್ಟರ್​ ಅವರನ್ನು ಶಿವಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಆರೋಪಿಯು ಶಿವಾಜಿನಗರ ವ್ಯಾಪ್ತಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದು, ಅದೇ ಕಟ್ಟಡದ ಒಂದು ಭಾಗದಲ್ಲಿ ಬಾಲಕಿಯ ಕುಟುಂಬ ವಾಸವಿತ್ತು. ಭಾನುವಾರ ಆರೋಪಿಯು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಆಕೆ ನೋವಿನಿಂದ ಬಳಲುತ್ತಿದ್ದುದನ್ನು ಕುಟುಂಬದವರು ಗಮನಿಸಿದಾಗ ಆರೋಪಿಯ ಕೃತ್ಯ ಬಯಲಾಗಿದೆ‌.

ತಕ್ಷಣ ನೊಂದ ಬಾಲಕಿಯ ಕುಟುಂಬಸ್ಥರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಬಾಲಕಿಯ ಕಡೆಯವರು, ಅಕ್ಕಪಕ್ಕದ ನಿವಾಸಿಗಳು ಆರೋಪಿಯ ಮನೆ ಮುಂದೆ ಜಮಾಯಿಸಿದ್ದು, ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಶಿವಾಜಿನಗರ ಠಾಣಾ ಪೊಲೀಸರು ಪೋಕ್ಸೋ ಪ್ರಕರಣದಡಿ ಆರೋಪಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Pregnant Raped: ಹೆರಿಗೆಗೆ ಬಂದ ಏಳು ತಿಂಗಳ ಗರ್ಭಿಣಿ ಸಹೋದರಿ ಮೇಲೆ ಇಬ್ಬರು ಸಹೋದರರಿಂದ ಅತ್ಯಾಚಾರ

ಪ್ರತ್ಯೇಕ ಪ್ರಕರಣ- ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ - ಮೂರು ವರ್ಷ ಶಿಕ್ಷೆ: ಇತ್ತೀಚೆಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2015ರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಆಕೆಯಿಂದ ಚಿನ್ನಾಭರಣ ಪಡೆದ ಪ್ರಕರಣದ ಅಪರಾಧಿಗೆ ಸಂಬಂಧಿಸಿದಂತೆ ಮೂರು ವರ್ಷ ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ. ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಜಪ್ಪಿನಮೊಗರು ಕಜೆಕಾರ್ ನಿವಾಸಿ ರೋಶನ್ ಡಿಸೋಜ ಆಲಿಯಾಸ್ ರೋಶನ್ ಫರ್ನಾಂಡಿಸ್ (31) ಶಿಕ್ಷೆಗೊಳಗಾದ ವ್ಯಕ್ತಿ.

2015ರ ನವೆಂಬರ್​ 16ರಂದು ಬೆಳಗ್ಗೆ ನಗರದ ಕಾಲೇಜಿನ ಪಿಯು ವಿದ್ಯಾರ್ಥಿನಿ ಬಸ್‌ನಿಂದ ಇಳಿದು ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿ ರೋಶನ್ ಮಾತಿನ ಮೋಡಿಯಿಂದ ವಿಶ್ವಾಸ ಗಳಿಸಿ, ಅನಂತರ ಬಾಲಕಿಯನ್ನು ಮಂಗಳೂರಿನ ಹೋಟೆಲ್, ಮಾಲ್‌ಗಳಿಗೆ ಕರೆದುಕೊಂಡು ಹೋಗಿದ್ದ.

ಬಾಲಕಿಯ ವಿಶ್ವಾಸ ಗಳಿಸುತ್ತಿದ್ದಂತೆ ಆರೋಪಿ ರೋಶನ್ ತನಗೆ ತುರ್ತಾಗಿ ಹಣದ ಆವಶ್ಯಕತೆ ಇದೆ ಎಂದು ನಂಬಿಸಿ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. ಅಲ್ಲದೇ ಆರೋಪಿ 2016ರ ಮಾರ್ಚ್​ 30 ರಂದು ಬೆಳಗ್ಗೆ 11.30ಕ್ಕೆ ಕದ್ರಿಪಾರ್ಕ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಅಂದು ಬಾಲಕಿ ಮನೆಗೆ ತಲುಪುವಾಗ ತಡವಾಗಿದ್ದು, ಆ ಬಗ್ಗೆ ಮನೆಯವರು ಪ್ರಶ್ನಿಸಿದ್ದರು. ಆಗ ಬಾಲಕಿ ನಡೆದಿರುವ ವಿಚಾರಗಳನ್ನು ತಿಳಿಸಿದ್ದಳು. ಮನೆಯವರು ಆರೋಪಿ ಬಗ್ಗೆ ವಿಚಾರಿಸಿ ಬಳಿಕ ಪ್ರಕರಣ ದಾಖಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಪೋಕ್ಸೋ ಕಾಯ್ದೆಯ ಕಲಂ 8 ರಂತೆ 3 ವರ್ಷ ಸಾದಾ ಸಜೆ, 5 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಾದಾ ಸಜೆ ಅನುಭವಿಸಬೇಕಿದೆ.

ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 3 ವರ್ಷ ಶಿಕ್ಷೆ

Last Updated : Aug 15, 2023, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.