ETV Bharat / state

ಯಾರ ಡ್ಯಾಂನಲ್ಲಿ ಎಷ್ಟು ನೀರಿದೆ ಎಂದು ಫಲಿತಾಂಶದ ದಿನವೇ ಗೊತ್ತಾಗಲಿದೆ: ಡಿಕೆ ಶಿವಕುಮಾರ್​ಗೆ ಸಿಎಂ ತಿರುಗೇಟು

author img

By

Published : Apr 21, 2023, 7:52 PM IST

ಲಿಂಗಾಯತ ಸಮುದಾಯ ಒಡೆದು ಬಿಜೆಪಿಯಿಂದ ದೂರ ಸರಿದಿದೆ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಈಗ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

D K Shivakumar and CM Bommai
ಡಿಕೆ ಶಿವಕುಮಾರ್​ ಹಾಗೂ ಸಿಎಂ ಬೊಮ್ಮಾಯಿ

ಬೆಂಗಳೂರು: ವೀರಶೈವ ಲಿಂಗಾಯತ ವಿರೋಧಿ ಬಿಜೆಪಿ ಎನ್ನುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಟಾಪಟಿ ಮುಂದುವರಿದಿದೆ. "ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ದಿನ ಯಾರ ಯಾರ ಡ್ಯಾಂನಲ್ಲಿ ಎಷ್ಟು ನೀರು ನಿಂತಿದೆ ಎನ್ನುವುದು ಗೊತ್ತಾಗಲಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​​ಗೆ ತಿರುಗೇಟು ನೀಡಿದ್ದಾರೆ. ಲಿಂಗಾಯತ ಸಮುದಾಯ ಒಡೆದು ಬಿಜೆಪಿಯಿಂದ ದೂರ ಸರಿದಿದೆ. ಒಡೆದ ಡ್ಯಾಂನಲ್ಲಿ ನೀರು ನಿಲ್ಲಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಮಲ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಲಿಂಗಾಯತ ಡ್ಯಾಂ ಎಷ್ಟು ಗಟ್ಟಿ ಇದೆ ಎಂಬುದರ ಅರಿವು ನಿಮಗಿಲ್ಲ ಎಂದ ಸಿಎಂ: ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರೇ ಲಿಂಗಾಯತ ಡ್ಯಾಮಿನ ಬಗ್ಗೆ ಮಾತನಾಡಿದ್ದೀರಿ. ಇದು ಎಷ್ಟು ಗಟ್ಟಿ ಇದೆ ಎಂಬ ಅರಿವು ನಿಮಗಿಲ್ಲ. ನೀವು ಅದನ್ನು ಒಡೆಯುವ ಭ್ರಮೆಯಲ್ಲಿದ್ದೀರಿ. 2018 ರಲ್ಲಿ ನಿಮ್ಮ ಸರ್ಕಾರ ಇದ್ದು ಇದನ್ನು ಒಡೆಯಲು ಸಾಧ್ಯವಾಗಿಲ್ಲ. ಈಗೇನು ಮಾಡಲು ಸಾಧ್ಯ. ಮೊದಲು ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ, ನಿಮ್ಮ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಮೇ 13ಕ್ಕೆ ಯಾರ್ಯಾರ ಡ್ಯಾಮ್​ನಲ್ಲಿ ಎಷ್ಟು ನೀರಿದೆ ಅಂತ ಗೊತ್ತಾಗುತ್ತದೆ. ನಿಮ್ಮ ಹೇಳಿಕೆಯಿಂದ ಲಿಂಗಾಯತ ಸಮುದಾಯವನ್ನು ಒಡೆಯುವ ಮತ್ತೊಂದು ಹುನ್ನಾರ ಬಯಲಾಗಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್​ಗೆ ಸಿಎಂ ಟಾಂಗ್ ನೀಡಿದ್ದಾರೆ.

ಇದನ್ನು ಓದಿ:ಚಿತ್ತಾಪುರ ಕ್ಷೇತ್ರ: ನಾಮಪತ್ರ ಸಲ್ಲಿಸಿದ ಪ್ರಿಯಾಂಕ್ ಖರ್ಗೆ, ಮಣಿಕಂಠ ರಾಠೋಡ್ ಜೊತೆಗೆ ಪತ್ನಿಯಿಂದಲೂ ನಾಮಪತ್ರ ಸಲ್ಲಿಕೆ

ಡಿ ಕೆ ಶಿವಕುಮಾರ್ ಅವರಿಂದ ವ್ಯರ್ಥ ಪ್ರಯತ್ನ: ನಮ್ಮ ನಾಡಿನಲ್ಲಿ ಲಿಂಗಾಯತರ ಡ್ಯಾಮ್​​​ ಅನ್ನು ಒಡೆಯುವ ನಿಮ್ಮ ಹಗಲು ಕನಸು ಯಾವತ್ತೂ ನನಸಾಗುವುದಿಲ್ಲ. ಹಿಂದೆ ನಿಮ್ಮ ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ ಲಿಂಗಾಯತ ಸಮಾಜವನ್ನು ಒಡೆದು ಆಳುವ ಕುತಂತ್ರಕ್ಕೆ ಕೈ ಹಾಕಿ ಚುನಾವಣೆಯಲ್ಲಿ ಕಾಂಗ್ರೆಸ್ ಅಣೆಕಟ್ಟೆಯೇ ಒಡೆದು ಹೋಗಿ ಒಣಗಿತ್ತು ಎಂಬುದನ್ನು ಜನ ಇನ್ನೂ ಮರೆತಿಲ್ಲ. ಕಾಂಗ್ರೆಸ್ಸಿನಿಂದ ಮುಂದೆ ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಹೇಳುವ ತಾಕತ್ತು ನಿಮಗಿದೆಯೇ ? ಈ ಹಿಂದೆ ಹಿರಿಯ ಮುತ್ಸದ್ದಿ ಶ್ರೀ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೇಗೆ ಹೀನಾಯವಾಗಿ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನೀವು ಏನೇ ಮಾಡಿದರೂ ಲಿಂಗಾಯತರ ಅಣೆಕಟ್ಟೆ ಸದಾ ಬಿಜೆಪಿ ಪರ ಸಮೃದ್ಧ ಅಲೆಗಳಿಂದ ತುಂಬಿರುತ್ತದೆ. ಈ ಅಣೆಕಟ್ಟೆಗೆ ಕೈ ಹಾಕುವ ನಿಮ್ಮ ವ್ಯರ್ಥ ಪ್ರಯತ್ನ ಯಾವತ್ತೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ನೀವು ಮರೆಯಬೇಡಿ ಎಂದು ಸಚಿವ ಸಿ ಸಿ ಪಾಟೀಲ್ ಸಹ ಕಾಂಗ್ರೆಸ್​ ನಾಯಕ ಡಿಕೆಶಿ ಮಾತಿಗೆ ಸಖತ್​​ ಆಗೇ ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ನನ್ನ ನಾಮಪತ್ರ ತಿರಸ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ: ಡಿಕೆ ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.