ETV Bharat / state

ನನ್ನ ನಾಮಪತ್ರ ತಿರಸ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ: ಡಿಕೆ ಶಿವಕುಮಾರ್​

author img

By

Published : Apr 21, 2023, 1:04 PM IST

Updated : Apr 21, 2023, 1:49 PM IST

ತಾವು ಸಲ್ಲಿಸಿರುವ ಅಫಿಡವಿಟ್​ ಭಾರೀ ಸಂಖ್ಯೆಯಲ್ಲಿ ಡೌನ್​ಲೋಡ್​ ಮಾಡಲಾಗುತ್ತಿದೆ ಎಂದು ಡಿ ಕೆ ಶಿವಕುಮಾರ್​ ಆರೋಪಿಸಿದ್ದಾರೆ.

D K Shivakumar talked in Pressmeet
ಡಿ ಕೆ ಶಿವಕುಮಾರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಡಿ ಕೆ ಶಿವಕುಮಾರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ನನ್ನ ನಾಮಪತ್ರ ತಿರಸ್ಕರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದ್ದು, ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಅಫಿಡವಿಟ್ ಭಾರಿ ಪ್ರಮಾಣದಲ್ಲಿ ಡೌನ್‌ಲೋಡ್ ಮಾಡಿರುವುದು ಏಕೆ? ಬಿಜೆಪಿಯವರೇ ನನ್ನ ಅಫಿಡವಿಟ್ ಅನ್ನು ಡೌನ್‌ಲೋಡ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ನನ್ನ ಅಫಿಡವಿಟ್ ಯಾರು ನೋಡ್ತಾರೆ ಎಂಬ ಮಾಹಿತಿ ಸಿಗುತ್ತದೆ. ನನ್ನ ಅಫಿಡವಿಟ್ ಸಾಕಷ್ಟು ಡೌನ್​ಲೋಡ್ ಮಾಡಿದ್ದಾರೆ. ಕಳೆದ ಬಾರಿಯೂ ಷಡ್ಯಂತ್ರ ಮಾಡಿದ್ದರು.‌ ನಾನು ಸ್ಪರ್ಧಿಸಬಾರದು ಎಂದು ಹುನ್ನಾರ ನಡೆಸಿದ್ದರು ಎಂದು ಆರೋಪಿಸಿದರು.

ಕಳೆದ 15 ವರ್ಷದಿಂದ ನಾನು ಒಂದು ಮನೆ ಬಿಟ್ಟು ಬೇರೆ ಆಸ್ತಿ ಮಾಡಿಲ್ಲ. ನನಗೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರು ಷಡ್ಯಂತ್ರ ಮಾಡುತ್ತಿದ್ದಾರೆ. ನಾವು ಮಾಡಿದ ಮೇಕೆದಾಟು ಪಾದಯಾತ್ರೆ, ಭಾರತ್ ಜೋಡೋ ತಡೆಯಲು ಆಗಿಲ್ಲ. ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟವನ್ನು ತಡೆಯಲು ಆಗಿಲ್ಲ. ನಮ್ಮ ಭರವಸೆ ಕಾರ್ಡ್ ತಡೆಯಲು ಆಗಿಲ್ಲ. ಡಿಕೆಶಿ ಇದ್ದರೆ ಮಾತ್ರ ಇದು ನಡೆಯುತ್ತಿದೆ ಎಂದು ನನ್ನ ವಿರುದ್ಧ ಗುರಿ ಇಟ್ಟಿದ್ದಾರೆ.

ನನ್ನ ವಿರುದ್ಧ ಸಿಬಿಐ ತನಿಖೆಗೆ ಸರ್ಕಾರ ಅನುಮತಿ ನೀಡಲಾಗಿದೆ. ಇದು ಸಿಬಿಐಗೆ ಕೊಡುವ ಕೇಸ್ ಅಲ್ಲ. ಯಾರಿಗೂ ಈ ರೀತಿ ಅನುಮತಿ ನೀಡಿಲ್ಲ. ಒತ್ತಡ ಹೇರಿ ಈ ರೀತಿ ಮಾಡಿದ್ದಾರೆ. ನಮ್ಮನ್ನು ರಾಜಕೀಯ ಸೀನ್​ನಿಂದ ತೆಗೆಯಬೇಕು ಎಂಬ ಹುನ್ನಾರ ನಡೆಯುತ್ತಿದೆ‌. ರಾಹುಲ್ ಗಾಂಧಿ, ಸೋನಿಯಾ ಗಾಂಧಿಯನ್ನೇ ಬಿಟ್ಟಿಲ್ಲ, ನನ್ನನ್ನು ಬಿಡುತ್ತಾರಾ? ಅಧಿಕಾರ ದುರುಪಯೋಗ ಆಗುತ್ತಿದೆ. ಷಡ್ಯಂತ್ರ ಇದೆ, ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಒಂದೇ ದಿನ ಆಚೆ ಹಾಕಿದರೆ ಏನು ಮಾಡುವುದು?: 10 ಚುನಾವಣೆ ಎದುರಿಸಿದವರಿಗೆ ಭಯ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದೇ ದಿನ ತೆಗೆದು ಆಚೆ ಹಾಕಿದರೆ ಏನು ಮಾಡುವುದು? ನೋ ಗೂ ನಾಟ್ ಗೂ ವ್ಯತ್ಯಾಸ ಇದೆ.‌ ಅಡ್ಮಿಟ್, ಡಿಸ್ಮಿಸ್ ಅಂತ ಬರೆಯುತ್ತಾರೆ. ಎಗ್ರೀ, ಡಿಸ್​ಎಗ್ರಿ ಅಂತ ಬರೆಯುತ್ತಾರೆ. ಅಧಿಕಾರಿಗಳನ್ನು ದುರುಪಯೋಗ ಮಾಡಲಾಗುತ್ತದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸಮುದ್ರಕ್ಕೆ ಎಲ್ಲ ನೀರು ಬರಬೇಕು: ಲಿಂಗಾಯತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿ, ಹರಿಯುವ ನೀರನ್ನು ತಡೆಯಲು ಸಾಧ್ಯವಿಲ್ಲ. ಡ್ಯಾಂ ಒಡೆದಾಗ ನೀರನ್ನು ಯಾರೂ ನಿಲ್ಲಿಸಲು ಆಗಲ್ಲ. ಅದನ್ನು ಹೊಸದಾಗಿ ಕಟ್ಟಬೇಕು ಎಂದು ಸೂಚ್ಯವಾಗಿ ವಾಗ್ದಾಳಿ ನಡೆಸಿದರು. ಕಲ್ಲುಗಳು ಈಚೆ ಬಂದಿವೆ. ಈಗ ಸಣ್ಣ ಸಣ್ಣ ಹೊಳೆಗಳಾಗಿ ಕಾಂಗ್ರೆಸ್​ಗೆ ಸೇರುತ್ತಿದ್ದಾರೆ. ಕಾಂಗ್ರೆಸ್ ಸಮುದ್ರಕ್ಕೆ ಎಲ್ಲ ನೀರು ಬರಬೇಕು ಎಂದು ಟಾಂಗ್ ನೀಡಿದರು. ಬಂಧ‌ನದ ಭೀತಿ‌ ಇದಿಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಏನು ಬೇಕಾದರು ಮಾಡಲಿ. ಕಲ್ಲು ಬಂಡೆ ಎಂದು ಕರೆದಿದ್ದೀರಿ. ಅದು ಪ್ರಕೃತಿ. ಕಲ್ಲು ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ತಿಳಿಸಿದರು.

ಪಕ್ಷ ಸೇರ್ಪಡೆ: ಮಾಜಿ‌ ಮೇಯರ್ ಶಾಂತಕುಮಾರಿ, ಮಾಜಿ ಶಾಸಕ ಗಂಗಹನುಮಯ್ಯ, ಲಗ್ಗೆರೆ ನಾರಾಯಣಸ್ವಾಮಿ ಸೇರಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಸಂಸದ ಡಿ ಕೆ ಸುರೇಶ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು‌.

ಇದೇ ವೇಳೆ ಮಾತನಾಡಿದ ಡಿಕೆಶಿ, ಬಿಜೆಪಿ ಸರ್ಕಾರ ಜನರ‌ ಮುಂದೆ ವಿಶ್ವಾಸ ಕಳೆದುಕೊಂಡಿದೆ. ಬದಲಾವಣೆಗೆ ಶಕ್ತಿ ನೀಡುವ, ನಾಂದಿ ಹಾಡುವ ದಿನ. ದೇಶದ ಪ್ರಜಾಪ್ರಭುತ್ವ ಉಳಿಸಲು ದ. ಕರ್ನಾಟಕದ ಬಾಗಿಲು ತೆರೆಯುವ ದಿನ ಬರುತ್ತಿದೆ. ಬಿಜೆಪಿಯ ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಬಿಜೆಪಿಯ ನಾಯಕರುಗಳಿಗೆ, ಕಾರ್ಯಕರ್ತರುಗಳಿಗೆ, ಜೆಡಿಎಸ್ ಕಾರ್ಯಕರ್ತರಿಗೆ ಈ ಅವಕಾಶ ಬಳಸಿ ಎಂದು ಕರೆ ನೀಡುತ್ತೇನೆ. ಬದಲಾವಣೆ ಬರುತ್ತಿದೆ. ಸಮಯ ಒಂದೇ ಎಲ್ಲರಿಗೂ ಒಂದೇ ರೀತಿ ಇರಲ್ಲ. ಬೇರೆ ಪಕ್ಷದ ಕಾರ್ಯಕರ್ತರನ್ನು ಮುಕ್ತ ಕಂಠದಿಂದ ಸ್ವಾಗತ ಮಾಡಲು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

ಇದೇ ವೇಳೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಪಕ್ಷಕ್ಕೆ ಸೇರುವ ಪರ್ವ ಆರಂಭವಾಗಿ ಬಹಳ ದಿನವಾಗಿದೆ. ಬಿಜೆಪಿಯಲ್ಲಿ 35 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತರಾಗಿ ಮಾಜಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಸವದಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮಿತ ಭಾಷಿ ಶೆಟ್ಟರ್ ಹತ್ತಾರು ವರ್ಷಗಳ ಬಳಿಕ ಕಾಂಗ್ರೆಸ್​ಗೆ ಬಂದಿದ್ದಾರೆ ಅಂದರೆ ಬಿಜೆಪಿಯಲ್ಲಿ ಆಂತರಿಕ ಜಗಳ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಬಿಜೆಪಿ ಭ್ರಷ್ಟ ಸರ್ಕಾರ, ಇನ್ನೇನು ಮನೆಗೆ ಹೋಗುತ್ತದೆ. ಎಲ್ಲರನ್ನೂ ಒಳಗೊಂಡ ಕಾಂಗ್ರೆಸ್ ಸರ್ಕಾರ ಬರಲಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಕಡೆ ಎಲ್ಲರೂ ಬರುತ್ತಿದ್ದಾರೆ‌. ಕಾಂಗ್ರೆಸ್ ‌ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾಂವಿ ಕ್ಷೇತ್ರದಲ್ಲಿ 36 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Last Updated : Apr 21, 2023, 1:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.