ETV Bharat / state

ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ರಸಪ್ರಶ್ನೆ ಸ್ಪರ್ಧೆ: ಛತ್ತೀಸ್‌ಗಢಕ್ಕೆ ಮೊದಲ ಸ್ಥಾನ

author img

By ETV Bharat Karnataka Team

Published : Nov 30, 2023, 7:50 PM IST

ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ರಸಪ್ರಶ್ನೆ ಸ್ಪರ್ಧೆ
ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ರಸಪ್ರಶ್ನೆ ಸ್ಪರ್ಧೆ

ಬೆಂಗಳೂರು ಟೆಕ್ ಸಮಿಟ್​ನಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಛತ್ತೀಸ್​ಘಡ ರಾಜ್ಯ ಮೊದಲ ಸ್ಥಾನ ಪಡೆದು ಕೊಂಡಿದೆ.

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಟಿಸಿಎಸ್‌ ಸಹಯೋಗದಲ್ಲಿ ಬೆಂಗಳೂರು ಟೆಕ್‌ಸಮಿಟ್‌ನಲ್ಲಿ ಪ್ರತಿ ವರ್ಷ ನಡೆಯುವ ಗ್ರಾಮೀಣ ರಸಪ್ರಶ್ನೆ ಸ್ಪರ್ಧೆಯ ರಾಷ್ಟ್ರೀಯ ಅಂತಿಮ ಸುತ್ತಿಗೆ ದೇಶಾದ್ಯಂತ 8 ರಾಜ್ಯದ ವಿದ್ಯಾರ್ಥಿಗಳು ಆಯ್ಕೆಯಾಗಿ, ಛತ್ತೀಸ್‌ಗಢ ರಾಜ್ಯ ಮೊದಲ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರು ಟೆಕ್‌ ಸಮಿಟ್‌ನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರು
ಬೆಂಗಳೂರು ಟೆಕ್‌ ಸಮಿಟ್‌ನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರು

ಈಗಾಗಲೇ ದೇಶಾದ್ಯಂತ ಆಯ್ಕೆಯಾಗಿದ್ದ 24 ನೇ ಆವೃತ್ತಿಯ ಈ ಸ್ಪರ್ಧೆಯಲ್ಲಿ ದೇಶಾದ್ಯಂತ ಒಟ್ಟು 26 ರಾಜ್ಯ ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ 350 ಜಿಲ್ಲೆಗಳಿಂದ 5.5 ಲಕ್ಷಕ್ಕೂ ಹೆಚ್ಚು 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆನ್‌ಲೈನ್‌ ಮೂಲಕ ಪ್ರಾಥಮಿಕ ಸುತ್ತನ್ನು ನಡೆಸಲಾಗಿತ್ತು. ಈ ಪೈಕಿ ಕೇವಲ 8 ರಾಜ್ಯಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ರನ್ನರ್‌ಅಪ್‌ಗೆ 50 ಸಾವಿರ ರೂ ಬಹುಮಾನ ನೀಡಿರುವುದು
ರನ್ನರ್‌ಅಪ್‌ಗೆ 50 ಸಾವಿರ ರೂ ಬಹುಮಾನ ನೀಡಿರುವುದು

ಬೆಂಗಳೂರು ಟೆಕ್‌ಸಮಿಟ್‌ನಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಛತ್ತೀಸ್‌ಗಢದ ಭಿಲಾಯ್ ಜಿಲ್ಲೆಯ ಬಿಎಸ್‌ಪಿ ಸೀನಿಯರ್‌ ಸೆಕೆಂಡರಿ ಸ್ಕೂಲ್‌ ವಿದ್ಯಾರ್ಥಿಯಾದ ಉದಿತ್ ಪ್ರತಾಪ್ ಸಿಂಗ್ ವಿಜೇತರಾಗಿದ್ದು, ಗೋವಾದ ಬಿಚೋಲಿಮ್‌ ಜಿಲ್ಲೆಯ ಡಾ. ಕೆ. ಬಿ ಹೆಡ್ಗೆವಾರ್‌ ವಿದ್ಯಾಮಂದಿರದ ಶಾಲೆಯ ವಿಘ್ನೇಶ್ ನೌಸೋ ಶೆಟ್ಯೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಜೇತರಿಗೆ 1 ಲಕ್ಷ ರೂ. ರನ್ನರ್‌ ಅಪ್‌ಗೆ 50 ಸಾವಿರ ರೂ. ಹಾಗೂ ಉಳಿದ ಅಂತಿಮ ಸುತ್ತಿನ ಸ್ಪರ್ಧಿಗಳಿಗೆ ತಲಾ 10 ಸಾವಿರ ರೂ. TCS ಶಿಕ್ಷಣ ವಿದ್ಯಾರ್ಥಿವೇತನ ನೀಡಿದೆ.

ಐಟಿ - ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ, ಟಿಸಿಎಸ್ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆಯ ಕಾರ್ಯದರ್ಶಿ ಡಾ ಎಕ್‌ರೂಪ್‌ ಕೌರ್, ವಿಜ್ಞಾನ ಮತ್ತು ತಂತ್ರಜ್ಞಾನದ ಎಲೆಕ್ಟ್ರಾನಿಕ್ಸ್ ಐಟಿ ವಿಭಾಗದ ನಿರ್ದೇಶಕ ಎಚ್‌. ವಿ ದರ್ಶನ್‌ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ರಸಪ್ರಶ್ನೆ ಸ್ಪರ್ಧೆ
ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ರಸಪ್ರಶ್ನೆ ಸ್ಪರ್ಧೆ

ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಗ್ರಾಮೀಣ ಹಿನ್ನೆಲೆಯುಳ್ಳ ಮಕ್ಕಳ ಕುತೂಹಲವನ್ನು ಪೋಷಿಸುವ ಮೂಲಕ ಹೆಚ್ಚಿನದನ್ನು ಕಲಿಯಲು ಪ್ರೇರೇಪಿಸುವುದು ಗ್ರಾಮೀಣ ಐಟಿ ರಸಪ್ರಶ್ನೆಯ ಮೂಲ ಉದ್ದೇಶವಾಗಿದೆ. ಶಾಲೆಯಲ್ಲಿ ಉತ್ತಮ ಅಂಕ ಗಳಿಸುವ ಜೊತೆಗೆ, ರಸಪ್ರಶ್ನೆಗಳಲ್ಲಿ ಭಾಗವಹಿಸುವ ಮೂಲಕ ಅವರ ಸಾಮಾನ್ಯ ಜ್ಞಾನ ಹಾಗೂ ಪ್ರಶ್ನೆಗಳಿಗೆ ಉತ್ತರ ಪಡೆಯುವ ಕುತೂಹಲವನ್ನು ಜೀವಂತವಾಗಿಡುವ ಪ್ರಯತ್ನ ನಮ್ಮದು ಎಂದರು.

ಈ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆಯನ್ನು ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಟಿಸಿಎಸ್ ಸಹಯೋಗದಲ್ಲಿ 2000ನೇ ಇಸವಿಯಿಂದ ಆಯೋಜಿಸುತ್ತಾ ಬರಲಾಗಿದೆ. ಪ್ರತಿ ವರ್ಷ ಪ್ರತಿಭಾನ್ವಿತ ಮಕ್ಕಳನ್ನು ಈ ಮೂಲಕ ಹೊರತರಲಾಗುತ್ತಿದೆ ಎಂದು ಹೇಳಿದರು.

ವಿಜೇತರಿಗೆ 1 ಲಕ್ಷ ರೂ ಬಹುಮಾನ ವಿತರಣೆ
ವಿಜೇತರಿಗೆ 1 ಲಕ್ಷ ರೂ ಬಹುಮಾನ ವಿತರಣೆ

ಕ್ವಿಜ್‌ನ ಉದ್ದೇಶವು ಭಾರತದಾದ್ಯಂತ ಸಣ್ಣ ಪಟ್ಟಣಗಳು ​​ಮತ್ತು ಜಿಲ್ಲೆಗಳ ವಿದ್ಯಾರ್ಥಿಗಳಲ್ಲಿ ಐಟಿ ಜಾಗೃತಿಯನ್ನು ಹೆಚ್ಚಿಸುವುದು, ಜಾಗತಿಕ ತಂತ್ರಜ್ಞಾನದ ಬೆಳವಣಿಗೆಗಳೊಂದಿಗೆ ಅವುಗಳನ್ನು ನವೀಕೃತವಾಗಿರಿಸುವುದು. ಈ ಕಾರ್ಯಕ್ರಮವು ಇಲ್ಲಿಯವರೆಗೆ 21 ಮಿಲಿಯನ್ ವಿದ್ಯಾರ್ಥಿಗಳನ್ನು ತಲುಪಿದೆ. ಅಷ್ಟೇ ಅಲ್ಲದೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಿಂದ ಭಾರತದ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೊದಲ ಐಟಿ ರಸಪ್ರಶ್ನೆ ಎಂದು ಗುರುತಿಸಲ್ಪಟ್ಟಿದೆ.

ರಾಷ್ಟ್ರೀಯ ಅಂತಿಮ ಸುತ್ತಿಗೆ ಅರ್ಹತೆ ಪಡೆದ ಎಂಟು ಪ್ರಾದೇಶಿಕ ಅಂತಿಮ ಸುತ್ತಿನ ಸ್ಪರ್ಧಿಗಳು:
ಹರ್ಷಿತ್ ರೈಕ್ವಾರ್: ಸಿಎಂ ರೈಸ್ ಸ್ಕೂಲ್, ವಿದಿಶಾ, ಮಧ್ಯಪ್ರದೇಶ.
ಗರ್ವಿಟ್ ಸ್ವಾಮಿ: ಸ್ವಾಮಿ ವಿವೇಕಾನಂದ ಸರ್ಕಾರಿ ಮಾದರಿ ಶಾಲೆ, ಗಂಗಾನಗರ, ರಾಜಸ್ಥಾನ
ದಿವ್ಯಾ ಮಿಶ್ರಾ: ಮಾಲ್ತಿ ದೇವಿ ಮೆಮೋರಿಯಲ್ ಪಬ್ಲಿಕ್ ಸ್ಕೂಲ್, ಕನೌಜ್, ಉತ್ತರ ಪ್ರದೇಶ
ಶಿವಂ ಎಂ ಠಾಕರೆ: ಸೇಂಟ್ ಜಾನ್ಸ್ ಹೈಸ್ಕೂಲ್, ವಾರ್ಧಾ, ಮಹಾರಾಷ್ಟ್ರ.
ಅಮೃತ್ ಉಪ್ಪಾರ್: ಫೋರ್ಬ್ಸ್ ಅಕಾಡೆಮಿ, ಗೋಕಾಕ್​, ಕರ್ನಾಟಕ.
ಉದಿತ್‌ ಪ್ರತಾಪ್ ಸಿಂಗ್: ಬಿಎಸ್‌ಪಿ ಹಿರಿಯ ಮಾಧ್ಯಮಿಕ ಶಾಲೆ, ಭಿಲಾಯ್, ಛತ್ತೀಸ್‌ಗಢ.
ಪಂಥ್ ಮಾಲವ್ ಭಾಯಿ ಪಟೇಲ್: ಆನಂದಾಲಯ ಶಾಲೆ, ಆನಂದ್, ಗುಜರಾತ್.
ವಿಘ್ನೇಶ್ ನೌಸೋ ಶೆಟ್ಟಿ: ಡಾ. ಕೆ. ಬಿ ಹೆಡ್ಗೆವಾರ್ ವಿದ್ಯಾಮಂದಿರ, ಬಿಚೋಲಿಮ್, ಗೋವಾ

ಇದನ್ನೂ ಓದಿ: ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ:200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.