ETV Bharat / state

ಪಿಎಸ್​ಐ ನೇಮಕಾತಿ ಹಗರಣ: ಸಿಐಡಿ ಸಲ್ಲಿಸಿದ ಚಾರ್ಜ್ ಶೀಟ್​ನಲ್ಲಿ ಏನಿದೆ?

author img

By

Published : Feb 3, 2023, 9:13 AM IST

Representative image
ಪ್ರಾತಿನಿಧಿಕ ಚಿತ್ರ

ಪಿಎಸ್ಐ ಅಕ್ರಮ ಪ್ರಕರಣ. 8 ಮಂದಿ ಆರೋಪಿಗಳ ವಿರುದ್ಧ 1300 ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ.

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಪಿಎಸ್ಐ ಪರೀಕ್ಷಾ ಅಕ್ರಮ ನೇಮಕಾತಿ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಅಪರಾಧ ತನಿಖಾ ಇಲಾಖೆ(ಸಿಐಡಿ) ಪೊಲೀಸರು ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪಿಎಸ್ಐ ಆಕ್ಷಾಂಕಿ ಕುಶಾಲ್ ಕುಮಾರ್, ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳ ವಿರುದ್ಧ 1300ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

1300 ಪುಟಗಳ ಚಾರ್ಜ್ ಶೀಟ್: ಪಿಎಸ್ಐ ಅಕ್ರಮ ಹಿನ್ನೆಲೆ ನಗರದ 5 ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಸದ್ಯ ಹಲಸೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿಯಾಗಿರುವ ಪಿಎಸ್ಐ ಅಭ್ಯರ್ಥಿ ಕುಶಾಲ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. 1300 ಪುಟಗಳ ಚಾರ್ಜ್ ಶೀಟ್​ನಲ್ಲಿ 8 ಮಂದಿ ಆರೋಪಿಗಳ ಹೆಸರು ಉಲ್ಲೇಖಿಸಿದೆ. 37 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಪ್ರಕರಣದ ಮೊದಲ ಆರೋಪಿ ಕುಶಾಲ್ ಕುಮಾರ್, ಮದ್ಯವರ್ತಿ ದರ್ಶನ್ ಗೌಡ, ಮೈಸೂರಿನ ರಿಸರ್ವ್ ಪೊಲೀಸ್ ಇನ್ಸ್​ಪೆಕ್ಟರ್ (ಆರ್​ಪಿಐ) ಮಧು, ನೇಮಕಾತಿ ವಿಭಾಗದ ಸಿಬ್ಬಂದಿ ಹರ್ಷ, ಶ್ರೀಧರ್, ಶ್ರೀನಿವಾಸ್, ಡಿವೈಎಸ್​ಪಿ ಶಾಂತಕುಮಾರ್ ಹಾಗೂ 8ನೇ ಆರೋಪಿಯಾಗಿ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಇದನ್ನೂ ಓದಿ: ಪಿಎಸ್​ಐ ನೇಮಕಾತಿ ಹಗರಣ.. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ

ಪಿಎಸ್ಐ ಅಭ್ಯರ್ಥಿ ಕುಶಾಲ್ ವಿರುದ್ಧ ಚಾರ್ಜ್ ಶೀಟ್: ಹೈಗ್ರೌಂಡ್ಸ್ ಠಾಣೆಯಲ್ಲಿ ಸುಮಾರು 3065 ಪುಟಗಳ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು. ನಂತರ ಹೆಚ್ಚುವರಿಯಾಗಿ 1406 ಪುಟಗಳ ಚಾರ್ಜ್ ಶೀಟ್​ನಲ್ಲಿ‌ ಎಡಿಜಿಪಿ ಅವರ ಪಾತ್ರದ ಬಗ್ಗೆ ಉಲ್ಲೇಖಿಸಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲಾಗಿತ್ತು. ಪೂರ್ಣ ಪ್ರಮಾಣದ ಚಾರ್ಜ್ ಶೀಟ್​​​​ ಅನ್ನು ಸಿಐಡಿ ಇನ್ನಷ್ಟೇ ಸಲ್ಲಿಸಬೇಕಿದೆ.

ನಂತರ ಕಲಾಸಿಪಾಳ್ಯ ಠಾಣೆ ಹೆಡ್ ಕಾನ್ಸ್​ಟೇಬಲ್ ಹರೀಶ್ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿಯೂ ಕಳೆದ ವರ್ಷವೇ ಚಾರ್ಜ್ ಶೀಟ್ ಸಲ್ಲಿಸಿದ್ದ ಸಿಐಡಿ ಇದೀಗ ಹಲಸೂರು ಠಾಣೆಯಲ್ಲಿ ಪಿಎಸ್​ಐ ಅಭ್ಯರ್ಥಿ ಕುಶಾಲ್ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧ ದೋಷಾರೋಪಪಟ್ಟಿ ಸಲ್ಲಿಸಿದಂತಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಯಲಹಂಕ ನ್ಯೂಟೌನ್ ಹಾಗೂ ಕೋರಮಂಗಲದಲ್ಲಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪಿಎಸ್​ಐ ಅಭ್ಯರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ತನಿಖಾಧಿಕಾರಿಗಳು ಅಂತಿಮ ಹಂತದ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪಿಎಸ್ಐ ನೇಮಕ ಅಕ್ರಮ: ಬಂಧಿತ ಅಮೃತ್ ಪಾಲ್ ಆಪ್ತರ ಮನೆಗಳ ಮೇಲೆ ಸಿಐಡಿ ದಾಳಿ!

ತಂದೆಗೆ ಸುಳ್ಳು ಹೇಳಿ 20 ಲಕ್ಷ ಪಡೆದಿದ್ದ ಪಿಎಸ್ಐ ಅಭ್ಯರ್ಥಿ: ಪ್ರಕರಣದ ಪ್ರಮುಖ ಆರೋಪಿ ಕುಶಾಲ್ ಕುಮಾರ್ ಮಾಗಡಿ ಮೂಲದವನಾಗಿದ್ದು ಬಿಇ ವ್ಯಾಸಂಗ ಮಾಡಿದ್ದ. ಈತನ ತಂದೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, ಉತ್ತಮ ಹಿನ್ನೆಲೆ ಹೊಂದಿದವರಾಗಿದ್ದಾರೆ. ಮಧ್ಯವರ್ತಿ ದರ್ಶನ್ ಗೌಡ ಹಾಗೂ ಆರ್​ಪಿಐ ಮಧು ಸಂಪರ್ಕಕ್ಕೆ ಬಂದಿದ್ದ. ಪಿಎಸ್ಐ ಆಗಬೇಕಾದರೆ 40 ಲಕ್ಷ ಕೊಡಬೇಕೆಂದು ಕುಶಾಲ್​​ಗೆ ಡಿಮ್ಯಾಂಡ್ ಮಾಡಿದ್ದರು. ಮಾತುಕತೆ ನಡೆಸಿ ಒಪ್ಪಂದದಂತೆ ಪರೀಕ್ಷೆ ಮುನ್ನವೇ 20 ಲಕ್ಷ ನಗದು ಹಣವನ್ನ ಮದ್ಯವರ್ತಿಗಳಿಗೆ ಕೆಂಗೇರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಕುಶಾಲ್ ನೀಡಿದ್ದ.

ಚಾರ್ಜ್ ಶೀಟ್​ನಲ್ಲಿ ಏನಿದೆ?: 2020 ಅಕ್ಟೋಬರ್ 3ರಂದು ನಡೆದಿದ್ದ 545 ಮಂದಿ ಪಿಎಸ್ಐ ಪರೀಕ್ಷೆಯನ್ನ ಹಲಸೂರಿನ ಸೆಂಟ್ ಜಾನ್ಸ್ ಗರ್ಲ್ಸ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ. 11 ಪ್ರಶ್ನೆಗೆ ಉತ್ತರಿಸಿ 99 ಅಂಕ ಗಿಟ್ಟಿಸಿಕೊಂಡಿದ್ದ. ವ್ಯವಸ್ಥಿತ ಸಂಚಿನಂತೆ ಉತ್ತರ ಪತ್ರಿಕೆಯಲ್ಲಿ ಕೇವಲ 11 ಪ್ರಶ್ನೆಗಳಿಗೆ ಮಾತ್ರ ಕುಶಾಲ್ ಕುಮಾರ್ ಉತ್ತರ ಬರೆದು ಹೊರಬಂದಿದ್ದ. ಮದ್ಯವರ್ತಿಗಳ ನೆರವಿನಿಂದ ಪೊಲೀಸ್ ನೇಮಕಾತಿ ವಿಭಾಗದ ನೇಮಕಾತಿ ವಿಭಾಗದ ಸಿಬ್ಬಂದಿ ಶ್ರೀನಿವಾಸ್, ಶ್ರೀಧರ್ ನನ್ನ ಸಂಪರ್ಕಿಸಿದ್ದರು. ಅನುಮಾನ ಬರದಿರಲು ಪರೀಕ್ಷೆಯಲ್ಲಿ ಬರೆದಿದ್ದ ಡಾಟ್ ಪೆನ್, ಒಎಂಆರ್ ಶೀಟ್ ನಕಲು ಪ್ರತಿ ಹಾಗೂ ಕಾರ್ಬನ್‌ ಕಾಪಿಯನ್ನು ಜೋಪಾನವಾಗಿ ಎತ್ತಿಟ್ಟುಕೊಂಡಿದ್ದ ಆರೋಪಿ ಕುಶಾಲ್, ಶ್ರೀನಿವಾಸ್ ಗೆ ಕೊಟ್ಟಿದ್ದ.

ಇದರಂತೆ ಹಿರಿಯ ಅಧಿಕಾರಿಗಳ ನೆರವಿನಿಂದ ಶ್ರೀಧರ್ ಹಾಗೂ ಶ್ರೀನಿವಾಸ್ 2020ರ ಅಕ್ಟೋಬರ್ 7, 8 ಹಾಗೂ 16ರಂದು ಸಿಐಡಿ ಪ್ರಧಾನ ಕಚೇರಿಯಲ್ಲಿ ಬೆಳಗಿನ ಅವಧಿಯಲ್ಲಿ ಉತ್ತರ ಪತ್ರಿಕೆಯನ್ನ ಇಡಲಾಗಿದ್ದ ಸ್ಟ್ರಾಂಗ್ ರೂಂ ಪ್ರವೇಶಿಸಿದ್ದರು. ಕುಶಾಲ್ ಬಳಸಿದ್ದ ಡಾಟ್ ಪೆನ್ ಹಾಗೂ ಒಎಂಆರ್ ಶೀಟ್ ಹಾಗೂ ಕಾರ್ಬನ್ ಮೂಲಕವೇ ಉತ್ತರವನ್ನ ಬರೆದು 99 ಅಂಕ ಬರುವಂತೆ ಅಸಲಿ ಒಂಎಆರ್ ಶೀಟ್ ನಲ್ಲಿ ತಿದ್ದಿದ್ದರು ಎಂಬ ಅಂಶವನ್ನು ಚಾರ್ಜ್ ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಹಗರಣ: ಅಮೃತ್ ಪಾಲ್ ವಿರುದ್ಧ 1406 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.