ETV Bharat / state

ಹೊರ ರಾಜ್ಯದಿಂದ ಖರೀದಿಸಿಯಾದರೂ ಬೇಸಿಗೆಯಲ್ಲಿ ವಿದ್ಯುತ್‌ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ: ರೈತರಿಗೆ ಸಿಎಂ ಭರವಸೆ

author img

By

Published : Mar 8, 2023, 8:53 PM IST

precaution-to-prevent-electricity-problem-cm-assures-farmers
ಹೊರ ರಾಜ್ಯದಿಂದ ಖರೀದಿಸಿಯಾದರೂ ಬೇಸಿಗೆಯಲ್ಲಿ ವಿದ್ಯುತ್‌ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ: ರೈತರಿಗೆ ಸಿಎಂ ಭರವಸೆ

ರೈತರ ನಿಯೋಗದೊಂದಿಗೆ ಸಿಎಂ ಬೊಮ್ಮಾಯಿ ಸಭೆ ನಡೆಸಿ, ರೈತರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ, ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಸಮಾಲೋಚನೆ ನಡೆಸಿದರು.

ಬೆಂಗಳೂರು: ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕೃಷಿ ಪಂಪ್ ಸೆಂಟ್​ಗಳಿಗೆ ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಜೊತೆಗೆ ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ವಿದ್ಯುತ್‌ ಸಮಸ್ಯೆಯಾಗದಂತೆ ರಾಜ್ಯ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ರೈತರಿಗೆ ಭರವಸೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಭೆ ನಡೆಸಿದರು. ರೈತರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು, ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆಯೇ ಪ್ರಧಾನವಾಗಿ ಚರ್ಚೆಗೆ ಬಂತು, ಬಹುಪಾಲು ಬೆಳೆ ನಷ್ಟಕ್ಕೆ ವಿದ್ಯುತ್ ಕೈಕೊಡುವುದೇ ಕಾರಣ ಎಂದು ರೈತರ ನಿಯೋಗದ ಪ್ರತಿನಿಧಿಗಳು ಅವಲತ್ತುಕೊಂಡರು, ನಿರಂತರ ವಿದ್ಯುತ್ ಪೂರೈಕೆಯಾದರೆ ಮಾತ್ರ ಬೆಳೆ ಕೈಗೆ ಸಿಗಲಿದೆ ಇಲ್ಲದಿದ್ದರೆ ನಷ್ಟಕ್ಕೊಳಗಾಗಬೇಕಾಗಲಿದೆ, ಇನ್ನು ಬೇಸಿಗೆ ಬೇರೆ ಬಂತು ವಿದ್ಯುತ್ ಕೊರತೆಯೂ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರ ಅಹವಾಲು ಆಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿದ್ಯುತ್‌ ಕೊರತೆ ಉಂಟಾದಲ್ಲಿ ಹೊರ ರಾಜ್ಯಗಳಿಂದ ಪೂರೈಕೆ ಮಾಡುವ ಕುರಿತು ಸಹ ಚಿಂತನೆ ಮಾಡಲಾಗುತ್ತದೆ. ಅಲ್ಲದೇ ರೈತರ ಪಂಪ್‌ ಸೆಟ್​ಗಳಿಗೆ ನಿರಂತರ ಏಳು ತಾಸು 3 ಫೇಸ್‌ ವಿದ್ಯುತ್‌ ಪೂರೈಸುವ ಕುರಿತು ಅಧಿಕಾರಿಗಳಿಗೆ ಇಂದು ಸೂಚನೆ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ರಾಜ್ಯದ ವಿವಿಧೆಡೆ ಕೆಐಎಡಿಬಿಯು ಭೂಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಜಮೀನು ಕಳೆದುಕೊಂಡವರಿಗೆ ಅಲ್ಲಿ ಸ್ಥಾಪನೆಯಾಗುವ ಉದ್ಯಮಗಳಲ್ಲಿ ಉದ್ಯೋಗ ಕೊಡಿಸುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಮಂಡ್ಯದ ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು ನಿರ್ಧರಿಸಿ, ಚಾಲನೆಯನ್ನೂ ನೀಡಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇನ್ನಷ್ಟು ಸಶಕ್ತಗೊಳಿಸಲಾಗುವುದು ಎಂದು ಅವರು ನುಡಿದರು.

ಕಬ್ಬಿಗೆ ಎಸ್.ಎ.ಪಿ. ನೀಡುವ ಕುರಿತಂತೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಶ್ರೀ ವೀರ ಪುಲಿಕೇಶಿ ಸಹಕಾರಿ ಬ್ಯಾಂಕ್‌ ರೈತರಿಗೆ ಕಿರುಕುಳ ನೀಡುತ್ತಿರುವುದಾಗಿ ರೈತ ಮುಖಂಡರು ಮುಖ್ಯಮಂತ್ರಿಯವರ ಗಮನ ಸೆಳೆದರು. ಈ ಬ್ಯಾಂಕಿಗೆ ಕೂಡಲೇ ನೋಟೀಸ್​​ ನೀಡಲಾಗುವುದು ಎಂದು ತಿಳಿಸಿದರು.

ಈ ಸಭೆಯಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ, ಸಚಿವರಾದ ಗೋಪಾಲಯ್ಯ, ವಿ. ಸೋಮಣ್ಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ ಹಾಗೂ ಮತ್ತಿತರರು ಹಾಜರಿದ್ದರು.

ಸಿಎಂ ಪರಿಹಾರ ನಿಧಿಗೆ 15 ಕೋಟಿ ದೇಣಿಗೆ: ಕರ್ನಾಟಕ ರಾಜ್ಯ ಖನಿಜ ನಿಗಮದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 15 ಕೋಟಿ ರೂ.ಗಳ ಚೆಕ್​ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಹಸ್ತಾಂತರ ಮಾಡಲಾಯಿತು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್, ನಿಗಮದ ಅಧ್ಯಕ್ಷ ಎ.ಎಸ್.ಜಯರಾಂ, ವ್ಯವಸ್ಥಾಪಕ ನಿರ್ದೇಶಕ ರಾದ ವಿನೋತ್ ಪ್ರಿಯಾ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ನಾಳೆಯಿಂದ ಪಿಯು ಪರೀಕ್ಷೆ.. ಎಕ್ಸಾಂನಲ್ಲಿ ಅಕ್ರಮ ನಡೆಯದಂತೆ ಕ್ರಮ: ಸಚಿವ ಬಿ.ಸಿ.ನಾಗೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.