ETV Bharat / state

ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಬಿಜೆಪಿ ಪ್ಲಾನ್

author img

By

Published : Mar 18, 2023, 8:01 PM IST

ಮಾರ್ಚ್​ 25 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೋದಿ ರೋಡ್ ​ಶೋ ನಡೆಸುವ ಸಾಧ್ಯತೆ ಇದೆ.

pm-narendra-modi-to-hold-road-show-in-bengaluru
ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಬಿಜೆಪಿ ಪ್ಲಾನ್

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅಲೆ ಮೂಡಿಸಲು ಮುಂದಾಗಿದೆ. ಮೋದಿಯವರ ನಾಲ್ಕನೇ ಮಹಾ ರೋಡ್ ಶೋಗೆ ಸ್ಥಳ, ಮುಹೂರ್ತ ನಿಗದಿ ಮಾಡಲಾಗಿದೆ. ಪ್ರಧಾನಿ ಅವರ ಮುಂದಿನ ರೋಡ್ ಶೋ ಮಾರ್ಚ್​​​ 25 ರಂದು ಬೆಂಗಳೂರಿನಲ್ಲಿ ನಿಗದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮಹಾದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ವೈಟ್‌ಫೀಲ್ಡ್​​ನಿಂದ ಕೆ.ಆರ್. ಪುರ ಮೆಟ್ರೋ ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ವೇಳೆ 1.5 ಕಿ.ಮೀ ತನಕ ರೋಡ್ ಶೋ ನಡೆಸಲಿದ್ದಾರೆ. ವೈಟ್‌ಫೀಲ್ಡ್​​ನಲ್ಲಿ ಮೋದಿ ರೋಡ್ ಶೋಗೆ ಬಿಜೆಪಿ ಈಗಾಗಲೇ ಪ್ಲಾನ್ ರೂಪಿಸಿದೆ. ಮಹದೇವಪುರ ಕ್ಷೇತ್ರದ ಸತ್ಯಸಾಯಿ ಆಶ್ರಮದಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಿಜೆಪಿಯ ಜನವಿರೋಧಿ ಆಡಳಿತದಿಂದ ಬೇಸತ್ತು "ಕೈ" ಹಿಡಿದಿದ್ದೇನೆ: ಮೋಹನ್ ಲಿಂಬಿಕಾಯಿ

ಮೋದಿ ಮೆಟ್ರೋ ಸಂಚಾರ: ಮಾರ್ಚ್​ 25 ರಂದು ವೈಟ್‌ಫೀಲ್ಡ್​​ನಿಂದ ಕೆ.ಆರ್.ಪುರ ಮೆಟ್ರೋ ಮಾರ್ಗ ಲೋಕಾರ್ಪಣೆ ಮಾಡಲಿದ್ದಾರೆ. ಮೆಟ್ರೋ ಸ್ಟೇಷನ್ ಉದ್ಘಾಟಿಸಿದ ಬಳಿಕ ಕೆ.ಆರ್.ಪುರ ಮೆಟ್ರೋ ಸ್ಟೇಷನ್​ವರೆಗೂ ಮೆಟ್ರೋದಲ್ಲೇ ಪ್ರಯಾಣಿಕರ ಜೊತೆ ಸಂಚರಿಸಲಿದ್ದಾರೆ ಎನ್ನಲಾಗಿದೆ.

ರೋಡ್ ಶೋಗೆ ಭರ್ಜರಿ ತಯಾರಿ: ರಾಜ್ಯದ ನಾಲ್ಕು ಕಡೆಯಿಂದಲೂ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಮಾರ್ಚ್​​ 25ರಂದು ದಾವಣಗೆರೆಯಲ್ಲಿ ಸಂಗಮಿಸಲಿದೆ. ಈ ಸಂಬಂಧ ಅಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಈ ರೋಡ್ ಶೋದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ನಾವು ಸಮಾವೇಶ ಮಾಡುವುದಿಲ್ಲ: ಕಟೀಲ್ ವ್ಯಂಗ್ಯ

ಈಗಾಗಲೇ ರಾಜ್ಯದಲ್ಲಿ ನಡೆದಿರುವ ಮೋದಿ ರೋಡ್ ಶೋಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೋದಿ ರೋಡ್ ಶೋಗೆ ಸ್ವಾಗತ ‌ನೀಡುತ್ತಿದ್ದಾರೆ. ಈಗಾಗಲೇ ಮಂಡ್ಯ, ಬೆಳಗಾವಿ, ಹುಬ್ಬಳಿಯಲ್ಲಿ ಮೋದಿ ರೋಡ್ ಶೋ ನಡೆಸಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇದೇ ‌ನಿಟ್ಟಿನಲ್ಲಿ ಬೆಂಗಳೂರಲ್ಲಿ ಮತ್ತೊಂದು ರೋಡ್ ಶೋ ಮಾಡುವ ಮೂಲಕ ಬಿಜೆಪಿ ಅಲೆ ಸೃಷ್ಟಿಸಲು ಕಮಲ‌ ಪಡೆ ಮುಂದಾಗಿದೆ. ಮಾರ್ಚ್​​​​​​​ 25ರಂದು ಸಂಜೆ ಈ ರೋಡ್ ಶೋ ನಡೆಸಲು ಯೋಜಿಸಲಾಗಿದೆ.

ಇತ್ತೀಚೆಗೆ ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ, ಧಾರವಾಡದಲ್ಲಿ ರಾಜ್ಯದ ಮೊದಲ ಐಐಟಿ ಕ್ಯಾಂಪಸ್ ಉದ್ಘಾಟನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆಗೆಂದು ಪ್ರಧಾನಿ ರಾಜ್ಯಕ್ಕೆ ಆಗಮಿಸಿದ್ದರು. ಎಕ್ಸ್​ಪ್ರೆಸ್​ ವೇ ಲೋಕಾರ್ಪಣೆಗೂ ಮುನ್ನ ಮಂಡ್ಯದಲ್ಲಿ ಮೋದಿ ಭರ್ಜರಿ ರೋಡ್​ ಶೋ ನಡೆಸಿದ್ದರು. ಈ ವೇಳೆ ಮೋದಿ ಮೇಲೆ ಜನತೆ ಹೂವಿನ ಸುರಿಮಳೆಗೈದಿದ್ದರು. ಮಂಡ್ಯದ ಪಿಇಎಸ್​ ಕಾಲೇಜು ಬಳಿಯಿಂದ ಐಬಿ ವೃತ್ತದವರೆಗೆ 2 ಕಿಲೋಮೀಟರ್ ರೋಡ್ ಶೋ ನಡೆದಿತ್ತು.

ಇದನ್ನೂ ಓದಿ: ಸಕ್ಕರೆ ನಾಡಲ್ಲಿ ಮೋದಿಗೆ ಅಕ್ಕರೆಯ ಸ್ವಾಗತ: ಭರ್ಜರಿ ರೋಡ್​​ ಶೋ, ಹೂವಿನ ಸುರಿಮಳೆ!- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.