ETV Bharat / state

ಚಿಕ್ಕಮಗಳೂರು ಜನ ಭಾವನಾತ್ಮಕ ವಿಚಾರ ಬಿಟ್ಟು, ಜೀವನದ ಬಗ್ಗೆ ಯೋಚಿಸುತ್ತಿದ್ದಾರೆ: ಡಿ ಕೆ ಶಿವಕುಮಾರ್​

author img

By

Published : Feb 19, 2023, 3:07 PM IST

Updated : Feb 19, 2023, 3:21 PM IST

ಡಿ ಕೆ ಶಿವಕುಮಾರ್​
ಡಿ ಕೆ ಶಿವಕುಮಾರ್​

ಕಾಂಗ್ರೆಸ್​ ಸೇರಿದ ಹೆಚ್​ ಡಿ ತಮ್ಮಯ್ಯ - ಕಾಫಿನಾಡಲ್ಲಿ ಬಿಜೆಪಿಗೆ ಆಘಾತ - ಚಿಕ್ಕಮಗಳೂರಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರು: ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಹೆಚ್ ಡಿ ತಮ್ಮಯ್ಯ ಹಾಗೂ ಅವರ ಅಸಂಖ್ಯ ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದ ಹೆಚ್. ಡಿ ತಮ್ಮಯ್ಯ ಬಿಜೆಪಿಯಲ್ಲಿ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದೆ ಎಂದರು. ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹೆಚ್. ಡಿ ತಮ್ಮಯ್ಯ ಅಂತಿಮವಾಗಿ ಕೈ ಹಿಡಿದಿದ್ದಾರೆ. ಚಿಕ್ಕಮಗಳೂರಿನಿಂದ ಕೈ ಅಭ್ಯರ್ಥಿಯಾಗಿ ಹೆಚ್. ಡಿ ತಮ್ಮಯ್ಯ ಅವರು ಸಿಟಿ ರವಿ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಬಿ ಎಲ್ ಶಂಕರ್ ಮಾತನಾಡಿ, ಚಿಕ್ಕಮಗಳೂರು ಬೇಧಿಸಲಾಗದ ಕೋಟೆ ಏನಲ್ಲ. ಪದೇ ಪದೆ ಅಭ್ಯರ್ಥಿ ಬದಲಾಯಿಸಿದ್ದಕ್ಕೆ ನಮಗೆ ಹಿಂದೆ ಸೋಲಾಗಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸಮಬಲದ ಹೋರಾಟ ಇದೆ ಈಗ.‌ ಚಿಕ್ಕಮಗಳೂರಲ್ಲಿ ತಮ್ಮಯ್ಯ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಗೆ ಮುನ್ನಡೆ ಆಗಲಿದೆ ಎಂದರು.

ರಾಜ್ಯಾದ್ಯಂತ ಡಿ ಕೆ ಶಿವಕುಮಾರ್ ಪ್ರವಾಸ: ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಕೆಶಿಯನ್ನು ಹಾಡಿ ಹೊಗಳಿದ ಬಿ. ಎಲ್ ಶಂಕರ್, ಕೆಪಿಸಿಸಿ ಅಧ್ಯಕ್ಷರ ಟಿಪಿ ನೋಡಿದ್ರೆ ಗೊತ್ತಾಗುತ್ತೆ. ಇವ್ರು ಎಷ್ಟು ಬ್ಯುಸಿ ಅಂತ. ಯಾವ ಕೆಪಿಸಿಸಿ ಅಧ್ಯಕ್ಷ ಕೂಡ ಇಷ್ಟೊಂದು ಓಡಾಟ ಮಾಡಿಲ್ಲ. ರಾಜ್ಯಾದ್ಯಂತ ಡಿ ಕೆ ಶಿವಕುಮಾರ್ ಪ್ರವಾಸ ಮಾಡ್ತಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್​​ನಲ್ಲಿ ಕೂಡ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಡಿಕೆಶಿ ಬಂದಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಡಿ ಕೆ ಶಿವಕುಮಾರ್ ಮಾತನಾಡಿ, ಕೆಲವು ಸಿಟ್ಟಿಂಗ್ ಎಂಎಲ್ಎ ಗಳು ಸಂಪರ್ಕದಲ್ಲಿದ್ದಾರೆ. ಆದರೆ ಅವರೆಲ್ಲರನ್ನೂ ಅಕಾಮಡೇಟ್​ ಮಾಡೋಕೆ ಆಗ್ತಿಲ್ಲ. ಗಾಳಿಯಲ್ಲಿ ಗುಂಡು ಹೊಡೆಯೋ ಮಾತು ಹೇಳೋಕೆ ಹೋಗಲ್ಲ. ಕೆಲವೊಂದಿಷ್ಟು ಜನ ಸಂಪರ್ಕದಲ್ಲಿದ್ದಾರೆ. ಯಾರು ಯಾರು ಅಂತ ಎಲ್ಲವನ್ನೂ ನಿಮ್ಮ ಮುಂದೆ ಹೇಳೋಕಾಗಲ್ಲ ಎಂದರು.

ಚುನಾವಣೆ ಸಂದರ್ಭದಲ್ಲಿ ಬದಲಾವಣೆ ಗಾಳಿ ಹೇಗೆ ಬೀಸುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇನೆ. ಬಿಜೆಪಿ ರಾಷ್ಟ್ರೀಯ ನಾಯಕರು, ಗೃಹ ಸಚಿವರು, ಪಕ್ಷದ ರಾಜ್ಯಾಧ್ಯಕ್ಷರು ರಾಜ್ಯದ ತಳ ಮಟ್ಟಕ್ಕೆ ಹೋಗಿ ಜನರ ಗಮನ ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಅಲ್ಲಿಗೆ ಬಿಜೆಪಿ ಪಕ್ಷ ಎಷ್ಟು ದುರ್ಬಲವಾಗಿದೆ ಎಂಬ ಅರಿವಾಗುತ್ತದೆ. ಬಿಜೆಪಿ ಪ್ರಣಾಳಿಕೆ ಬಂದಿದೆ. ಐದು ವರ್ಷದ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಲ್ಲಿ ಎಷ್ಟನ್ನು ಈಡೇರಿಸಿದ್ದೀರಿ ಎಂದು ಕೇಳಿದರೆ ಉತ್ತರಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಡಿಕೆಶಿ ಹರಿಹಾಯ್ದರು.

ಜನ ಬದಲಾಗುತ್ತಿದ್ದಾರೆ: ಅಧಿಕಾರ ಮೂರು ವರ್ಷ ಇದ್ದಾಗಲೇ ನಿಮ್ಮ ಪ್ರಣಾಳಿಕೆ ಈಡೇರಿಸಿಲ್ಲ. ಹೀಗಿರುವಾಗ ನಿಮ್ಮ ಸರ್ಕಾರ ಹೋದ ಬಳಿಕ ಏಕೆ ಬಜೆಟ್ ಮಂಡಿಸಿದ್ದೀರಿ. ಸರ್ಕಾರ ನಮಗೆ ಹೂವಿಟ್ಟಿದೆ. ಇದರಿಂದ ನಾವು ಚೆಂಡು ಹೂ ಕಿವಿ ಮೇಲೆ ಇಟ್ಟುಕೊಂಡು ಹೋಗಿದ್ದೇವೆ. ಜನ ಬದಲಾಗುತ್ತಿದ್ದಾರೆ. ಬೂತ್ ಮಟ್ಟದ ನಾಯಕರಿಂದಲೇ ನಾವೆಲ್ಲಾ ರಾಷ್ಟ್ರೀಯ ನಾಯಕರಾಗಿದ್ದೇವೆ. ಕೆಲಸ ಮಾಡುವ ನಾಯಕರು ಕಾಂಗ್ರೆಸ್​ಗೆ ಬೆಂಬಲಿಸಿ ಬರುತ್ತಿದ್ದಾರೆ. ನಾವು ಕಷ್ಟಕಾಲದಲ್ಲಿ ಇದ್ದೇವೆ. ಇಂದು ತಮ್ಮಯ್ಯ ಸೇರುತ್ತಿರುವುದು ಚಿಕ್ಕಮಗಳೂರಿಗೆ ಶುಭ ಕಾಲವಾಗಿದೆ. ಇದುವರೆಗೂ ದತ್ತಪೀಠ ಹಾಗೂ ಭಾವನಾತ್ಮಕ ವಿಚಾರದಲ್ಲಿ ರಾಜಕೀಯ ನಡೆಯುತ್ತಿತ್ತು. ಈಗಿನ ಜನ ಹಾಗೂ ಅಲ್ಲಿನ ಮುಖಂಡರು ಜೀವನ ಏನು ಎಂದು ಕೇಳುತ್ತಿದ್ದಾರೆ. ಇಲ್ಲಿಗೆ ಹೂಡಿಕೆಗೆ ಯಾರೂ ಬರುತ್ತಿಲ್ಲ. ಅಶಾಂತಿ ಮೂಡುತ್ತಿದೆ. ಶಾಂತಿಯುತ ಶಿವಮೊಗ್ಗ ಬೇಕೆಂದು ಬಯಸುತ್ತಿದ್ದಾರೆ. ಶಾಂತಿ, ಸುವ್ಯವಸ್ಥೆ ಬೇಕಿದೆ. ಇಂದು ಯುವಕರು ಮುಂದೆ ಬರುತ್ತಿಲ್ಲ. ರೈತರು, ಯುವಕರಿಗೆ ಅನುಕೂಲ ಆಗುತ್ತಿಲ್ಲ. ಧೈರ್ಯದಿಂದ ಮತ ಕೇಳುವ ಶಕ್ತಿ ಬಿಜೆಪಿಗೆ ಇಲ್ಲ. ಕಾಂಗ್ರೆಸ್​ಗೆ ಇತಿಹಾಸವಿದೆ. ಇಲ್ಲಿ ಬದುಕಿನ ಬಗ್ಗೆ ಯೋಚಿಸುತ್ತಿದ್ದೇವೆ. ಅರಿವು, ತಿಳುವಳಿಕೆ ಚಿಕ್ಕಮಗಳೂರಿನವರಿಗೆ ಇದೆ ಎಂಬ ಆಶಯದೊಂದಿಗೆ ತಮ್ಮಯ್ಯನವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ ಎಂದು ಡಿಕೆಶಿ ಹೇಳಿದರು.

ನಾಳೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೊಂದು ಸೇರ್ಪಡೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ಮಾಜಿ ಶಾಸಕ ಕಿರಣ್ ಕುಮಾರ್ ಹಾಗೂ ಜೆಡಿಎಸ್ ಮಾಜಿ ಶಾಸಕ ಸಂದೇಶ್ ನಾಗರಾಜ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ವಿಧಾನ ಪರಿಷತ್ ಮರು ಆಯ್ಕೆ ಬಯಸಿದ್ದ ಸಂದೇಶ್ ನಾಗರಾಜ್ ಪಕ್ಷ ಕಡೆಗಣಿಸಿದ ಹಿನ್ನೆಲೆ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದರು.

ಇಂದು ಹೆಚ್ ಡಿ ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಅನುಪಸ್ಥಿತರಾಗಿದ್ದ ಸಿದ್ದರಾಮಯ್ಯ ನಾಳೆ ಸೇರ್ಪಡೆ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. ಆದರೆ ಟಿ ನರಸೀಪುರ ಹಾಗೂ ವರುಣದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆ ಡಿ ಕೆ ಶಿವಕುಮಾರ್ ಅನುಪಸ್ಥಿತರಾಗಲಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಡಾ ಬಿ ಎಲ್ ಶಂಕರ್, ಪ್ರಧಾನ ಕಾರ್ಯದರ್ಶಿಗಳು, ಮಾಜಿ ಮೇಯರ್​ಗಳಾದ ರಾಮಚಂದ್ರಪ್ಪ, ಜೆ. ಹುಚ್ಚಯ್ಯ, ಚಿಕ್ಕಮಗಳೂರು ಮುಖಂಡರಾದ ಮಂಜೇಗೌಡ, ಹನೀಫ್, ನಯಾಜ್ ಮತ್ತಿತರರು ಉಪಸ್ಥಿತರಿದ್ದರು.

ಓದಿ: ನಿತೀಶ್​ ಕುಮಾರ್​ ಬಣ್ಣ ಬದಲಾಯಿಸುವ ವ್ಯಕ್ತಿ: ಸಿಎಂ ಬೊಮ್ಮಾಯಿ

Last Updated :Feb 19, 2023, 3:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.